Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಕನ್ನಡ ವಿಶ್ವವಿದ್ಯಾಲಯದ ಅನನ್ಯತೆಯನ್ನು ರಕ್ಷಿಸಬೇಕು

Monday, 13.11.2017, 3:00 AM       No Comments

ಅನೇಕ ವಿಶಿಷ್ಟ ಆಶಯಗಳು ಅಂತರ್ಗತವಾಗಿರುವ ಮತ್ತು ಭಿನ್ನ ಮಾದರಿಯ ಕನ್ನಡ ವಿಶ್ವವಿದ್ಯಾಲಯವನ್ನು, ಅದರ ಸ್ವರೂಪದ ಬಗೆಗೆ ಕಿಂಚಿತ್ತೂ ಅರಿವಿಲ್ಲದ ಅಧಿಕಾರಶಾಹಿ ಇತರ ಸಾಮಾನ್ಯ ವಿಶ್ವವಿದ್ಯಾಲಯಗಳ ಜತೆೆ ಒಂದಾಗಿ ಪರಿಭಾವಿಸಿ ತಿದ್ದುಪಡಿ ತರಲು ಹೊರಟಿರುವುದು ಸೂಕ್ತವಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ತಿಳಿವಳಿಕೆಯಿರುವ ಮುಖ್ಯಮಂತ್ರಿಗಳು ಈ ತಿದ್ದುಪಡಿಯಿಂದ ಕನ್ನಡ ವಿಶ್ವವಿದ್ಯಾಲಯವನ್ನು ಹೊರಗಿಡಬೇಕು. 

ಹಂಪಿಗೆ ಕನ್ನಡ ಪರಂಪರೆಯಲ್ಲಿ ವಿಶೇಷ ಮಹತ್ವದ ಸ್ಥಾನವಿದೆ. ಸಾವಿರಾರು ನೆನಪುಗಳನ್ನು ತುಂಬಿಕೊಂಡಿರುವ ಹಂಪಿಯ ನೆಲದಲ್ಲಿಯೇ ಒಂದು ಶಕ್ತಿಯಿದ್ದಂತಿದೆ. ಅದು ವಿದ್ಯಾರಣ್ಯರ ತಪೋಭೂಮಿ, ಸಾಯಣರ ಕರ್ಮಭೂಮಿ, ಹರಿಹರ ರಾಘವಾಂಕರ ಕಾವ್ಯಭೂಮಿ. ಇದರ ಮೊದಲ ಹೆಸರು ‘ವಿದ್ಯಾನಗರ’. ನಂತರ ಅಲ್ಲಿಯ ಪ್ರಭುತ್ವದ ವೈಭವದಿಂದಾಗಿ ‘ವಿಜಯನಗರ’ ಎಂದಾಯಿತು. ಹಾಗೆ ನೋಡಿದರೆ ಅದು ಆರಂಭದಲ್ಲಿ ವಿದ್ಯೆಯ ಕೇಂದ್ರವಾಗಿತ್ತು. ಕ್ರಮೇಣ ವಿಜೃಂಭಿಸಿದ ರಾಯವೈಭವದಿಂದಾಗಿ ಮಾದರಿ ಸಾಮ್ರಾಜ್ಯವೆಂದು ಪ್ರಸಿದ್ಧಿಯಾಗಿ ಪ್ರಭುತ್ವದ ಸುವರ್ಣಯುಗ ಎಂಬ ಖ್ಯಾತಿ ಪಡೆಯಿತು. ಪ್ರಭುತ್ವ ನಶ್ವರ, ವಿದ್ಯೆ ಶಾಶ್ವತ. ಪ್ರಭುತ್ವ ನಾಶವಾಗಿ ಇಂದು ಅದು ನಮಗೆ ಗತವೈಭವ. ಆದರೆ ಅಲ್ಲಿ ಈಗ ವಿದ್ಯೆಯ ಕೇಂದ್ರವಾದ ಕನ್ನಡ ವಿಶ್ವವಿದ್ಯಾಲಯ ತಲೆಯೆತ್ತಿದೆ. ವಿಜಯನಗರ ಮತ್ತೆ ‘ವಿದ್ಯಾನಗರ’ವಾಗಿದೆ. ಗತವೈಭವ ಈಗ ನಮ್ಮ ಕಾಲದ ಅಗತ್ಯವನ್ನು ಪೂರೈಸುವ ‘ವಿಶ್ವವಿದ್ಯಾಲಯ’ದ ರೂಪದಲ್ಲಿ ಮತ್ತೆ ಅಲ್ಲಿ ಕ್ರಿಯಾಶೀಲವಾಗಿದೆ.

ಕನಸುಗಾರ ಕಂಬಾರರು: ಕನ್ನಡ ವಿಶ್ವವಿದ್ಯಾಲಯದ ಭಾಗ್ಯ- ಅದರ ಮೊದಲ ಕುಲಪತಿಯಾಗಿ ನಮ್ಮ ಕಾಲದ ಶ್ರೇಷ್ಠ ಸೃಜನಶೀಲ ಪ್ರತಿಭೆಯಾದ ಕಂಬಾರರು ನೇಮಕವಾದರು. ಕನಸುಗಾರರಾದ ಕಂಬಾರರದು ದಾರ್ಶನಿಕ ಪ್ರತಿಭೆ. ಹೀಗಾಗಿಯೆ ಕನ್ನಡ ವಿವಿಗೆ ಅವರು ಭದ್ರಬುನಾದಿ ಹಾಕಿಕೊಟ್ಟರು. ಅವರ ಪ್ರಕಾರ- ‘ಕನ್ನಡ ವಿಶ್ವವಿದ್ಯಾಲಯ ವಿದ್ಯೆಯನ್ನು ಕಲಿಯಲು ಅನುವು ಮಾಡಿಕೊಡುವ ಸಂಸ್ಥೆಯೇ ಹೊರತು, ಅದು ವಿದ್ಯೆಯನ್ನು ಕಲಿಸುವ ಸಂಸ್ಥೆಯಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ ಇದು ವಿದ್ಯೆಯನ್ನು ನಿರ್ವಿುಸುವ ಸಂಸ್ಥೆ. ನಮ್ಮ ದೇಶದಲ್ಲಿ ಹಳೆಯ ಕಾಲದ ತಿಳಿವಳಿಕೆಯೊಂದಿದೆ. ಅಲ್ಲದೆ ಪಶ್ಚಿಮದಿಂದ ಹರಿದುಬರುತ್ತಿರುವ ಜ್ಞಾನಪ್ರವಾಹವೂ ಇದೆ. ಈ ಎರಡೂ ತಿಳಿವಳಿಕೆಗಳು ಒಂದಕ್ಕೊಂದು ಸಂಧಿಸಿ ಬೆಳಕನ್ನು ಉಂಟುಮಾಡಿವೆ, ಜತೆಗೆ ದಿಗ್ಭ ›ಮೆಯನ್ನೂ ತಂದಿವೆ. ಈ ತಿಳಿವಳಿಕೆಗಳ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ. ಇಂಥ ವಿನಿಯೋಗಕ್ಕಾಗಿ ಹೊಸ ಬಗೆಯ ಶಾಸ್ತ್ರವಿಧಾನಗಳು ನಮಗಿಂದು ಬೇಕಾಗಿವೆ. ಕನ್ನಡ ವಿಶ್ವವಿದ್ಯಾಲಯದ ಗುರಿಯೆಂದರೆ ಈ ಬಗೆಯ ಶಾಸ್ತ್ರವಿಧಾನಗಳ ನಿರ್ವಣ. ಶಾಸ್ತ್ರ-ಕಲೆ, ಅಭಿಜಾತ-ಜಾನಪದ, ಮಾರ್ಗ-ದೇಸಿ, ಸ್ವಕೀಯ-ಪರಕೀಯ, ಪೌರ್ವಾತ್ಯ-ಪಾಶ್ಚಾತ್ಯ ಈ ಬಗೆಯ ದ್ವಂದ್ವಗಳ ಸಾಮರಸ್ಯ ಮತ್ತು ಸಂಘರ್ಷಗಳ ಒಡಲಿನಲ್ಲಿ ಹುಟ್ಟಿ ಬರುವ ತಿಳಿವಳಿಕೆಯನ್ನು ಹಿಡಿದುಕೊಂಡು ಕನ್ನಡದಲ್ಲಿ ಅದಕ್ಕೆ ಅಭಿವ್ಯಕ್ತಿಯನ್ನು ಕೊಡಬೇಕಾಗಿದೆ’. ಒಟ್ಟಾರೆ ಕನ್ನಡದ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕೆಂಬ ಆಶಯದಿಂದ ಕನ್ನಡ ವಿವಿ ರೂಪ ತಳೆಯಿತು. ಹೀಗಾಗಿಯೇ ಕರ್ನಾಟಕ ಸರ್ಕಾರ ಇದು ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಎಂಬುದನ್ನು ಮನಗಂಡು 1991ರ ವಿಶೇಷ ಕಾಯ್ದೆಯ ಮೂಲಕ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು. ಕಳೆದ ಇಪ್ಪತ್ತೈದು ವರ್ಷಗಳಿಂದಲೂ ತನ್ನ ಮೂಲ ಆಶಯದಂತೆ ಅನೇಕ ಕುಲಪತಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತ ಬಂದಿರುವ ಕನ್ನಡ ವಿವಿ ಈಗ ‘ಬೆಳ್ಳಿಹಬ್ಬ’ ಆಚರಿಸಿಕೊಳ್ಳುತ್ತಿದೆ.

ಈಗ ಸರ್ಕಾರ ಕರ್ನಾಟಕ ವಿಶ್ವವಿದ್ಯಾಲಯಗಳ ಮಸೂದೆಗೆ ತಿದ್ದುಪಡಿ ತರಲು ಉದ್ದೇಶಿಸಿದೆ. ಇದೇ ತಿಂಗಳ 13ರಿಂದ ಅಂದರೆ ನಾಳೆಯಿಂದ ಆರಂಭವಾಗಲಿರುವ ಬೆಳಗಾವಿಯ ವಿಧಾನಮಂಡಲದ ಅಧಿವೇಶನದಲ್ಲಿ ಅದನ್ನು ಮಂಡಿಸಲಿದೆ. ಆ ಮಸೂದೆ ಅಂಗೀಕಾರವಾದರೆ ಕನ್ನಡ ವಿಶ್ವವಿದ್ಯಾಲಯದ 1991ರ ವಿಶೇಷ ಕಾಯ್ದೆ ರದ್ದಾಗುತ್ತದೆ. ಆಗ ವಿಶಿಷ್ಟ ಆಶಯದಿಂದ ರೂಪುಗೊಂಡ ಕನ್ನಡ ವಿವಿಯೂ ಹತ್ತರಲ್ಲಿ ಹನ್ನೊಂದೆಂಬಂತೆ ಇತರ ವಿಶ್ವವಿದ್ಯಾಲಯಗಳ ಸ್ವರೂಪ ಪಡೆಯುತ್ತದೆ.

ವಿಶಿಷ್ಟತೆಯನ್ನು ನಾಶಮಾಡುವುದೇಕೆ?: ನಮ್ಮ ಸರ್ಕಾರಕ್ಕೆ ಯಾರು ಈ ಸಲಹೆ ನೀಡಿದರೋ ತಿಳಿಯೆ. ತಾನೇ ರೂಪಿಸಿದ ವಿಶಿಷ್ಟ ವಿನ್ಯಾಸದ ವಿಶ್ವವಿದ್ಯಾಲಯವೊಂದನ್ನು ಈಗ ಅದೇ ಸರ್ಕಾರ ಅದರ ವಿಶಿಷ್ಟತೆಯನ್ನು ನಾಶ ಮಾಡಿ ಎಲ್ಲ ವಿಶ್ವವಿದ್ಯಾಲಯಗಳಂತೆ ಮಾಡುವುದಾದರೆ ‘ಕನ್ನಡ ವಿಶ್ವವಿದ್ಯಾಲಯ’ವನ್ನು ಯಾಕೆ ಸ್ಥಾಪಿಸಬೇಕಿತ್ತು? ಈಗಿರುವ ಅದರ ಸ್ವಾಯತ್ತ ನಿಯಮಗಳಿಂದ ಯಾವ ರೀತಿ ತೊಂದರೆಯಿದೆ? ಅದನ್ನು ಬದಲಾಯಿಸುವ ಅಗತ್ಯವಾದರೂ ಏನು? ಇದರ ಹಿಂದಿನ ವಿವೇಕವನ್ನು ಅಥವಾ ಅವಿವೇಕತನವನ್ನು ನಾವು ಪ್ರಶ್ನಿಸಲೇಬೇಕಾಗಿದೆ.

ಕನ್ನಡ ವಿವಿ ಪರಿಕಲ್ಪನೆ ಇತ್ತೀಚಿನದಲ್ಲ. ಅದಕ್ಕೆ ಸರಿಸುಮಾರು ಒಂದು ಶತಮಾನದಷ್ಟು ದೀರ್ಘ ಇತಿಹಾಸವಿದೆ. 1925ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಬೆನಗಲ್ ರಾಮರಾಯರು ಮೊದಲಿಗೆ ಕನ್ನಡದ ಬೆಳವಣಿಗೆಗಾಗಿ ಕನ್ನಡ ವಿಶ್ವವಿದ್ಯಾಲಯದ ಅಗತ್ಯವಿದೆಯೆಂದು ಪ್ರಸ್ತಾಪಿಸಿದ್ದರು. 1932ರಲ್ಲಿ ಮಡಿಕೇರಿ ಸಾಹಿತ್ಯ ಸಮ್ಮೇಳನದಲ್ಲಿ ಡಿ.ವಿ. ಗುಂಡಪ್ಪನವರು, 1938ರ ಬಳ್ಳಾರಿ ಸಾಹಿತ್ಯ ಸಮ್ಮೇಳನದಲ್ಲಿ ದಿವಾಕರ ರಂಗರಾಯರು ಕನ್ನಡ ವಿವಿ ಅಗತ್ಯವನ್ನು ಪ್ರತಿಪಾದಿಸಿದ್ದರು. 1990ರ ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನದಲ್ಲಿ ಈ ಬಗ್ಗೆ ಒಂದು ನಿರ್ಣಯವನ್ನೇ ಅಂಗೀಕರಿಸಿ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈ ಎಲ್ಲದರ ಪರಿಣಾಮ 1991ರಲ್ಲಿ ಕನ್ನಡ ವಿಶ್ವವಿದ್ಯಾಲಯ ಸಾಕಾರಗೊಂಡಿತು. ಕನ್ನಡ-ಕರ್ನಾಟಕದ ಬೆಳವಣಿಗೆ ಕುರಿತಂತೆ ಚಿಂತನೆ, ಅಧ್ಯಯನ, ಕ್ರಿಯಾಶೀಲ ಅನುಷ್ಠಾನಕ್ಕೆ ಒಂದು ಕೇಂದ್ರ ದೊರಕಿದಂತಾಯಿತು. ಇದು ಉಳಿದ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿರಬೇಕೆಂಬುದು ವಿಶ್ವವಿದ್ಯಾಲಯದ ಮೂಲ ಆಶಯವಾಗಿತ್ತು.

ರೂಢಿಗತ ಪರಿಕಲ್ಪನೆಗಿಂತ ಭಿನ್ನವಾಗಿರಬೇಕು: ಕುವೆಂಪು ಅವರು ವಿಶ್ವವಿದ್ಯಾಲಯದ ಕಾರ್ಯ ಕಲಾಪಗಳನ್ನು ಮೂರು ಅಂಗಗಳಾಗಿ ವಿಭಾಗಿಸುತ್ತಾರೆ. ಅವುಗಳೆಂದರೆ- ಬೋಧನಾಂಗ, ಸಂಶೋಧನಾಂಗ ಹಾಗೂ ಪ್ರಸಾರಾಂಗ. ಅವರ ಪ್ರಕಾರ ಬೋಧನಾಂಗ ವಿಶ್ವವಿದ್ಯಾಲಯದ ಕೈ ಇದ್ದಂತೆ. ಇಂದಿನ ಪೀಳಿಗೆಯವರು ಸುಸಂಸ್ಕೃತರಾಗಿ, ನಾಗರಿಕರಾಗಿ, ವಿದ್ಯಾವಂತರಾಗಿ ಪ್ರಪಂಚದ ಇತರ ಜನಗಳೊಡನೆ ಸಮಸ್ಪರ್ಧಿಗಳಾಗಿ ಹೇಗೆ ಬಾಳಬೇಕೆಂದು ಕಲಿಸುವುದು ಇದರ ಕೆಲಸ. ಇದರಲ್ಲಿ ಸ್ನಾತಕೋತ್ತರ ಬೋಧನೆ, ಅಭ್ಯಾಸಗಳು ಒಂದು ಭಾಗವಾದರೆ ಸ್ನಾತಕಪೂರ್ವ ಶಿಕ್ಷಣ ಜ್ಞಾನಾರ್ಜನೆಗಳು ಇನ್ನೊಂದು ಭಾಗ. ಎರಡನೆಯ ಸಂಶೋಧನಾಂಗ ಸ್ನಾತಕೋತ್ತರ ಶಿಕ್ಷಣ ಹಾಗೂ ಅದಕ್ಕೂ ಮುಂದಿನ ವ್ಯಾಸಂಗಕ್ಕೆ ಸಂಬಂಧಪಟ್ಟಂಥದು. ಇದು ವಿಶ್ವವಿದ್ಯಾಲಯದ ತಲೆಯಿದ್ದಂತೆ ಎಂದು ಕುವೆಂಪು ಹೇಳುತ್ತಾರೆ. ಮುಂದಿನದು ಪ್ರಸಾರಾಂಗ. ಇದು ವಿಶ್ವವಿದ್ಯಾಲಯದ ಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವ ಕೆಲಸ ಮಾಡಬೇಕು. ಇದನ್ನು ಕುವೆಂಪು ವಿಶ್ವವಿದ್ಯಾಲಯದ ಹೃದಯ ಎಂದು ಕರೆಯುತ್ತಾರೆ. ಇದು ವಿಶ್ವವಿದ್ಯಾಲಯದ ಪರಿಕಲ್ಪನೆ. ಆದರೆ ‘ಕನ್ನಡ ವಿಶ್ವವಿದ್ಯಾಲಯ’ ರೂಢಿಯ ಈ ಬಗೆಯ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾದುದು.

ಕನ್ನಡ ವಿವಿ ಸ್ವರೂಪವನ್ನು ಅದರ ಮೊದಲ ಕುಲಪತಿಗಳಾದ ಚಂದ್ರಶೇಖರ ಕಂಬಾರರು ಹೀಗೆ ವಿವರಿಸುತ್ತಾರೆ- ‘ಕನ್ನಡ ವಿಶ್ವವಿದ್ಯಾಲಯದಲ್ಲಿ ನಾಲ್ಕು ನಿಕಾಯಗಳಿದ್ದು, ಅವುಗಳಲ್ಲಿ ಒಟ್ಟು 24 ವಿಭಾಗಗಳಿವೆ. ನಮ್ಮಲ್ಲಿ ಪಿಎಚ್.ಡಿ, ಎಂ.ಫಿಲ್ ಪದವಿಗಳನ್ನು ಪಡೆಯಲು ಅವಕಾಶವಿದ್ದರೂ ಶಿಕ್ಷಣವನ್ನು ನೀಡುವುದೇ ಮುಖ್ಯ ಗುರಿಯಲ್ಲ. ಕನ್ನಡ ಭಾಷೆಯ ಸರ್ವತೋಮುಖ ಏಳಿಗೆಯನ್ನು ಸಾಧಿಸುವುದು ನಮ್ಮ ಮುಖ್ಯ ಉದ್ದೇಶ. ಗುರಿ ಸಾಧನೆಗಾಗಿ ವಿಶ್ವವಿದ್ಯಾಲಯದ ಸಂರಚನೆಯನ್ನು- ಸಂಶೋಧನಾಂಗ, ಪ್ರಸಾರಾಂಗ ಹಾಗೂ ಆಡಳಿತಾಂಗ ಎಂದು ವಿಂಗಡಿಸಿಕೊಂಡಿದ್ದೇವೆ. ಅವುಗಳಲ್ಲಿ ಸಂಶೋಧನಾಂಗ ಅತ್ಯಂತ ಮುಖ್ಯವಾದದ್ದು. ಸಂಶೋಧನೆಗಳನ್ನು ಪ್ರಸಾರ ಮಾಡುವುದು ಪ್ರಸಾರಾಂಗ. ಇವೆರಡರ ಕೆಲಸ ಸುಗಮವಾಗಿ, ಸುರಳೀತವಾಗಿ ನಡೆಯುವಂತೆ ಅನುಕೂಲ ಮಾಡಿಕೊಡುವುದು ಆಡಳಿತಾಂಗ. ಭಾಷಿಕ ಅಧ್ಯಯನದಲ್ಲಿ ನಾವು ಹೊಸ ದಾರಿಯನ್ನೇ ಹಿಡಿಯಬೇಕಾಗಿದೆಯೆಂದು ನಾನು ನಂಬಿದ್ದೇನೆ. ಭಾಷೆಯ ಅಧ್ಯಯನವೆಂದರೆ ಮನುಷ್ಯನ ಅಧ್ಯಯನವೇ ಆಗಿದೆ. ಇತಿಹಾಸ, ಸಮಾಜಶಾಸ್ತ್ರ, ಮಾನವಶಾಸ್ತ್ರ ಮತ್ತು ಜಾನಪದ ಅಧ್ಯಯನಗಳಿಗೂ ಭಾಷೆಯ ಅಧ್ಯಯನಕ್ಕೂ ನಿಕಟವಾದ ಸಂಬಂಧವಿದೆ. ಕನ್ನಡ ಭಾಷೆಯೆಂದರೆ ಕನ್ನಡ ಜನತೆಯ ನೈತಿಕ ಮೌಲ್ಯಗಳು, ಆಧ್ಯಾತ್ಮಿಕ ಆಕಾಂಕ್ಷೆಗಳು, ಧಾರ್ವಿುಕ ಅಪೇಕ್ಷೆಗಳು ಮತ್ತು ಇದುವರೆಗೆ ಎಲ್ಲೂ ದಾಖಲಾಗದಿರುವ ಕನ್ನಡ ಚರಿತ್ರೆ ಇವೆಲ್ಲವುಗಳ ಪ್ರತಿಫಲನವೇ ಆಗಿದೆ’.

ಕಂಬಾರರ ಮಾತುಗಳು ಕನ್ನಡ ವಿಶ್ವವಿದ್ಯಾಲಯದ ವಿಶಿಷ್ಟತೆಯನ್ನು ಸ್ಪಷ್ಟವಾಗಿ ವಿವರಿಸುತ್ತವೆ. ರೂಢಿಯ ವಿಶ್ವವಿದ್ಯಾಲಯಗಳಲ್ಲಿ ಬೋಧನಾಂಗ ಮುಖ್ಯವಾದದ್ದು. ಆದರೆ ಇಲ್ಲಿ ಬೋಧನಾಂಗ ಎಂಬ ಅಂಗವೇ ಇಲ್ಲ. ಪಿಎಚ್.ಡಿ, ಎಂ.ಫಿಲ್​ಗಳ ಅಧ್ಯಯನಕ್ಕೆ ಅವಕಾಶವಿದ್ದರೂ ಶಿಕ್ಷಣ ನೀಡುವುದು ಪ್ರಧಾನ ಗುರಿಯಲ್ಲ. ಪದವೀಧರರನ್ನು ಸೃಷ್ಟಿಸುವುದು ಈ ವಿಶ್ವವಿದ್ಯಾಲಯದ ಆಶಯವಲ್ಲ. ಇದು ಮೂಲತಃ ಸಂಶೋಧನೆಯನ್ನು ಕೇಂದ್ರವಾಗಿಟ್ಟುಕೊಂಡು ರೂಪುಗೊಂಡಿರುವ ವಿಶ್ವವಿದ್ಯಾಲಯ. ಅದೂ ರೂಢಿಯ ಅಕೆಡೆಮಿಕ್ ಮಾದರಿಗಿಂತ ಭಿನ್ನವಾದುದು.

ಶಾಸ್ತ್ರವಿಧಾನದ ಕೊರತೆಯಿದೆ: ಸಂಶೋಧನೆಯ ಸ್ವರೂಪದ ಬಗ್ಗೆಯೇ ಕನ್ನಡ ವಿಶ್ವವಿದ್ಯಾಲಯ ಹೊಸ ಬಗೆಯಲ್ಲಿ ಚಿಂತಿಸಿದೆ. ನಮ್ಮಲ್ಲಿ ವಿಷಯಗಳಿಗೇನೂ ಕೊರತೆಯಿಲ್ಲ, ಆದರೆ ಕೊರತೆಯೆಂದರೆ ಈ ವಿಷಯಗಳನ್ನು ಕುರಿತು ಅಭ್ಯಾಸ ಮಾಡಲು ಅನುಕೂಲವಾಗುವ ಶಾಸ್ತ್ರವಿಧಾನ. ಪಾಶ್ಚಾತ್ಯರು ತಮಗೆ ಅನುಕೂಲವಾದ ಶಾಸ್ತ್ರವಿಧಾನಗಳನ್ನು ಅನುಸರಿಸಿ ನಮ್ಮ ಇತಿಹಾಸವನ್ನು, ಸಾಮಾಜಿಕ ಸಂರಚನೆಗಳನ್ನು, ಭಾಷೆ ಸಂಸ್ಕೃತಿಗಳನ್ನು ಅಭ್ಯಾಸ ಮಾಡಿದರು. ನಾವು ಈಗಲೂ ಅದನ್ನೇ ಮಾದರಿಯಾಗಿಟ್ಟುಕೊಂಡಿದ್ದೇವೆ. ವಸಾಹತುಶಾಹಿಯ ವಿಧಾನದಿಂದ ನಮ್ಮ ತಿಳಿವಳಿಕೆ ಬೆಳೆಯುವುದಿಲ್ಲ, ನಮ್ಮ ಮನಸ್ಸು ಸೃಜನಶೀಲವಾಗುವುದಿಲ್ಲ. ನಾವು ನಮ್ಮದೇ ಆದ ಶಾಸ್ತ್ರವಿಧಾನಗಳನ್ನು ರೂಢಿಸಿಕೊಳ್ಳಬೇಕಾಗಿದೆ ಎಂಬ ಹಿನ್ನೆಲೆಯಲ್ಲಿ ಸಂಶೋಧನೆಯ ಸ್ವರೂಪವನ್ನು ರೂಪಿಸಲು ಪ್ರಯತ್ನಿಸಿದೆ.

ಪಾಶ್ಚಾತ್ಯ ಪ್ರಣೀತ ನಮ್ಮ ಶಿಕ್ಷಣ ಕ್ರಮದಲ್ಲಿ ತಿಳಿವಳಿಕೆಯ ಸಂವಹನಕ್ಕೆ ವಿಶೇಷ ಮಹತ್ವವಿದೆ. ಒಬ್ಬರಿಂದ ಒಬ್ಬರಿಗೆ ತಿಳಿವಳಿಕೆಯನ್ನು ತಲುಪಿಸುವುದು ಶಿಕ್ಷಣದ ಗುರಿಯೆಂದು ನಾವು ಈಗ ಭಾವಿಸಿದ್ದೇವೆ. ಆದರೆ ಹಾಗೆ ಸಂವಹನಗೊಳ್ಳುವುದು ಮಾಹಿತಿಯೇ ಹೊರತು ತಿಳಿವಳಿಕೆಯಲ್ಲ. ಹೀಗಾಗಿಯೆ ಈಗ ನಮ್ಮ ಶಿಕ್ಷಣವೆಂದರೆ ಮಾಹಿತಿ ಸಂಗ್ರಹ ಎಂಬಂತಾಗಿದೆ. ತಿಳಿವಳಿಕೆಯನ್ನು ತುಂಬಲು ವಿದ್ಯಾರ್ಥಿಯೊಂದು ಪಾತ್ರೆಯಲ್ಲ. ಹಾಗೆ ಅವನು ಪಾತ್ರೆಯಾದರೆ ಅದು ಬರಿದಾಗುವುದೂ ಸಾಧ್ಯ. ಶಿಕ್ಷಕನಾದವನು ವಿದ್ಯಾರ್ಥಿಯನ್ನು ತಿಳಿವಳಿಕೆಗೆ ಯೋಗ್ಯನನ್ನಾಗಿ ಮಾಡಬೇಕು. ತಿಳಿವಳಿಕೆ ಹುಟ್ಟುವುದು ವಿದ್ಯಾರ್ಥಿಯಲ್ಲಿಯೇ ಹೊರತು ಅದು ಒಬ್ಬರಿಂದ ಇನ್ನೊಬ್ಬರಿಗೆ ಹರಿದುಹೋಗುವುದಲ್ಲ. ಈ ಅರಿವಿನ ಹಿನ್ನೆಲೆಯಲ್ಲಿಯೇ ಸಂಶೋಧನೆಯ ಸ್ವರೂಪವನ್ನೂ ರೂಪಿಸಿಕೊಳ್ಳಬೇಕೆಂದು ಕನ್ನಡ ವಿಶ್ವವಿದ್ಯಾಲಯ ಭಾವಿಸುತ್ತದೆ.

ವಸಾಹತುಶಾಹಿಯ ಪ್ರಭಾವ: ಮುಂಬೈ ವಿಶ್ವವಿದ್ಯಾಲಯದ ಆರಂಭದಲ್ಲಿ ಪಿಎಚ್.ಡಿ ಪ್ರಬಂಧಗಳನ್ನು ಇಂಗ್ಲಿಷಿನಲ್ಲಿಯೇ ಬರೆಯಬೇಕೆಂಬ ನಿಯಮವಿತ್ತು. ಕನ್ನಡದಲ್ಲಿಯೂ ರೈಸ್ ಸಾಹೇಬರ ಮೊದಲ ಸಾಹಿತ್ಯಚರಿತ್ರೆ ಇಂಗ್ಲಿಷಿನಲ್ಲಿಯೇ ಇದೆ. ನಮ್ಮ ಬಹುಪಾಲು ಸಂಶೋಧನೆಗಳು ನಡೆದದ್ದು ಇಂಗ್ಲಿಷಿನಲ್ಲಿಯೇ. ಕನ್ನಡ ಶಾಸ್ತ್ರಭಾಷೆಯಾಗಲಾರದು ಎಂಬ ನಂಬಿಕೆ ಅಂದು ಮಾತ್ರವಲ್ಲ, ಇಂದೂ ಇದೆ. ಆದರೆ 1,500 ವರ್ಷಗಳ ಇತಿಹಾಸದ ಕನ್ನಡ ಭಾಷೆಯಲ್ಲಿ ವ್ಯಾಕರಣ, ರಸಸಿದ್ಧಾಂತ, ಜ್ಯೋತಿಷ, ಸೂಪಶಾಸ್ತ್ರ, ತತ್ತ್ವಶಾಸ್ತ್ರ ಮೊದಲಾದ ಗ್ರಂಥಗಳು ರಚಿತವಾಗಿದ್ದವೆಂಬುದನ್ನು ನಾವು ಮರೆಯುವಂತಿಲ್ಲ. ಈ ಹಳೆಯ ಶಾಸ್ತ್ರದ ಒಡಲಿನಿಂದ ಹೊಸ ಶಾಸ್ತ್ರ ಹುಟ್ಟಿಬಂದಿದ್ದರೆ ಕನ್ನಡವನ್ನು ಶಾಸ್ತ್ರಭಾಷೆಯಾಗಿ ಬಳಸಬಹುದಿತ್ತು. ಆದರೆ ವಸಾಹತುಶಾಹಿಯ ಪ್ರಭಾವದಿಂದಾಗಿ 19ನೆಯ ಶತಮಾನದ ವೇಳೆಗೆ ಇವೆಲ್ಲ ಮರೆತುಹೋಗಿತ್ತು. ನಮಗೆ ಶಾಸ್ತ್ರವಿಧಾನದ ಪರಿಚಯವೇ ಇಲ್ಲವೆಂಬಂತೆ ಇಂದು ನಾವು ನಮ್ಮದಲ್ಲದ ಶಾಸ್ತ್ರವಿಧಾನದಿಂದ ಅಧ್ಯಯನ ಮಾಡುತ್ತಿದ್ದೇವೆ. ಭಾರತದ ಹತ್ತಿ ಇಂಗ್ಲೆಂಡಿಗೆ ಹೋಗಿ ಅಲ್ಲಿಯ ಗಿರಣಿಗಳಲ್ಲಿ ನವಿರಾದ ಬಟ್ಟೆಯಾಗಿ ತಿರುಗಿ ಭಾರತಕ್ಕೇ ಒಂದು ಕಾಲಕ್ಕೆ ಬರುತ್ತಿತ್ತು. ಹಾಗೆಯೇ ಇಂದು ನಮ್ಮ ಜಾನಪದ ವಿದ್ಯೆಗಳ ಅಧ್ಯಯನ ನಡೆಯುವುದು ವಿದೇಶಗಳಲ್ಲಿ. ಇದು ಬದಲಾಗಬೇಕೆಂದು ಕನ್ನಡ ವಿಶ್ವವಿದ್ಯಾಲಯ ನಂಬುತ್ತದೆ. ಸ್ಥಳೀಯ ಬದುಕನ್ನು ಅರಿಯಲು ಪರದೇಶದ ನೋಟವನ್ನು ಅಳವಡಿಸಿಕೊಂಡಿದ್ದರಿಂದಲೇ ನಮ್ಮ ಸಂಶೋಧನೆಯ ಫಲಿತಗಳು ಕಪಾಟುಗಳಲ್ಲಿ ಮಾತ್ರವಿದ್ದು ನಿಜ ಬದುಕಿನಲ್ಲಿ ಅರ್ಥಹೀನವಾಗಿವೆ. ನಮ್ಮ ಸಂಶೋಧಕರು ‘ನಮ್ಮದೇ’ ಆದ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕೆಂಬುದು, ಅದಕ್ಕೆ ಸೂಕ್ತ ವಾತಾವರಣ ಕಲ್ಪಿಸಿಕೊಡಬೇಕೆಂಬುದು ಕನ್ನಡ ವಿಶ್ವವಿದ್ಯಾಲಯದ ಖಚಿತ ನಿಲುವು. ಇಲ್ಲಿನ ಒಂದು ಪ್ರಮುಖ ನಿಯಮವೆಂದರೆ ವಿದ್ಯಾರ್ಥಿಗಳು ಯಾವುದೇ ವಿಷಯದಲ್ಲಿ ಸಂಶೋಧನೆ ಮಾಡಿದರೂ-ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಜಿನಿಯರಿಂಗ್- ಯಾವುದೇ ಆಗಿರಬಹುದು, ಪ್ರಬಂಧವನ್ನು ಮಾತ್ರ ಕನ್ನಡದಲ್ಲಿಯೇ ಬರೆಯಬೇಕು.

ಪದವಿ ಇಲ್ಲಿ ಮಾನದಂಡವಲ್ಲ: ವಿದ್ಯಾರ್ಥಿಗಳು ಮಾತ್ರವಲ್ಲ, ವಿಶ್ವವಿದ್ಯಾಲಯವೇ ಒಂದು ಸಂಶೋಧನಾ ಕೇಂದ್ರವಾಗಬೇಕೆಂಬುದು ಕನ್ನಡ ವಿಶ್ವವಿದ್ಯಾಲಯದ ಅಪೇಕ್ಷೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿಶ್ವಕೋಶದ ರಚನೆ, ನಿಘಂಟುಗಳ ರಚನೆ, ಇತಿಹಾಸದ ಪುನಾರಚನೆ- ಹೀಗೆ ವಿಶ್ವವಿದ್ಯಾಲಯವೇ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲು ಅದರ ಸ್ವರೂಪದಲ್ಲಿಯೇ ಅವಕಾಶವಿದೆ. ಆ ದಿಕ್ಕಿನಲ್ಲಿ ಸಾಕಷ್ಟು ಕೆಲಸವೂ ಆಗುತ್ತಿದೆ. ಮಾತ್ರವಲ್ಲ, ಸಂಶೋಧನೆಗೆ ಮಾರ್ಗದರ್ಶನ ಮಾಡಲು, ಅದರಲ್ಲಿ ತೊಡಗಿಸಿಕೊಳ್ಳಲು ಪದವಿಯೇ ಇಲ್ಲಿ ಮಾನದಂಡವಲ್ಲ. ವಿಷಯ ಪರಿಣತಿ ಇದ್ದರೆ ಅವರು ಮಾರ್ಗದರ್ಶಕರಾಗಬಹುದು. ಸಂಶೋಧನೆಯಲ್ಲಿ ಪಾಲ್ಗೊಳ್ಳಬಹುದು. ಇದು ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾತ್ರ ಸಾಧ್ಯ.

ಕನ್ನಡದ ಅಧ್ಯಯನವೆಂದರೆ ಕನ್ನಡ ಸಾಹಿತ್ಯದ ಅಧ್ಯಯನ ಮಾತ್ರವಲ್ಲ, ಎಲ್ಲ ಜ್ಞಾನಶಿಸ್ತುಗಳ ಅಧ್ಯಯನ ಇಲ್ಲಿ- ಕನ್ನಡದಲ್ಲಿಯೇ- ಸಾಧ್ಯವಾಗಬೇಕೆಂಬುದು ಕನ್ನಡ ವಿಶ್ವವಿದ್ಯಾಲಯದ ಪ್ರಮುಖ ಆಶಯ. ಅದಕ್ಕಾಗಿ ಕನ್ನಡವನ್ನು, ನಮ್ಮ ಶಿಕ್ಷಣದ ಸ್ವರೂಪವನ್ನು ಸಜ್ಜುಗೊಳಿಸಬೇಕೆಂಬುದು ಅದರ ಗುರಿ.

ಹೀಗೆ ಅನೇಕ ವಿಶಿಷ್ಟ ಆಶಯಗಳನ್ನು ಇಟ್ಟುಕೊಂಡು ರೂಪುಗೊಂಡಿರುವ ಭಿನ್ನ ಮಾದರಿಯ ಕನ್ನಡ ವಿಶ್ವವಿದ್ಯಾಲಯವನ್ನು, ಅದರ ಸ್ವರೂಪದ ಬಗೆಗೆ ಕಿಂಚಿತ್ತೂ ಜ್ಞಾನವಿಲ್ಲದ ಅಧಿಕಾರಶಾಹಿ ಇತರ ಸಾಮಾನ್ಯ ವಿಶ್ವವಿದ್ಯಾಲಯಗಳ ಜತೆೆ ಒಂದಾಗಿ ಪರಿಭಾವಿಸಿ ತಿದ್ದುಪಡಿ ತರಲು ಹೊರಟಿದೆ. ಕನ್ನಡ ವಿವಿ ಸರ್ಕಾರಕ್ಕೆ ಸಲ್ಲಿಸಿದ ಮೊದಲ ವರದಿಯಲ್ಲೇ ಈ ಎಲ್ಲ ಮಾಹಿತಿ ಇದೆ. ಅದನ್ನಾದರೂ ತಿದ್ದುಪಡಿ ತರಲು ಹೊರಟಿರುವವರು ಓದಬಾರದೇ? ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ತಿಳಿವಳಿಕೆಯಿರುವ ನಮ್ಮ ಮುಖ್ಯಮಂತ್ರಿಗಳು ಈ ಬಗ್ಗೆ ಆಸಕ್ತಿ ವಹಿಸಿ ಈ ತಿದ್ದುಪಡಿಯಿಂದ ಕನ್ನಡ ವಿವಿಯನ್ನು ಹೊರಗಿಡಬೇಕು. ಕನ್ನಡದ ಅನೇಕ ಪ್ರಜ್ಞಾವಂತ ಮನಸ್ಸುಗಳು ಈಗಾಗಲೇ ಮನವಿ ಮಾಡಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕನ್ನಡ ವಿಶ್ವವಿದ್ಯಾಲಯದ ಅನನ್ಯತೆಯನ್ನು ರಕ್ಷಿಸಬೇಕು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top