ಕನ್ನಡ ಭಾಷೆ ಉಳಿವಿಗೆ ಪಂಚಸೂತ್ರ

ಕೋಲಾರ (ಕಾಮರೂಪಿ ವೇದಿಕೆ): ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯ ಪರಿಚಯಿಸಬೇಕೆಂಬ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಶಿಫಾರಸ್ಸನ್ನು ಅನುಷ್ಠಾನಕ್ಕೆ ತರಬೇಕು ಎಂದು ಸಂಸ್ಕೃತಿ ಚಿಂತಕ ಡಾ.ಡಿ. ಗಂಗಾಧರಮೂರ್ತಿ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಕಸಾಪದಿಂದ ಬುಧವಾರ ಆಯೋಜಿಸಿದ್ದ ಕೋಲಾರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಓದಬಾರದೆಂದೇನೂ ಇಲ್ಲ. ಹಣ ಕೊಡದಿದ್ದರೆ ಹೆಣ ಕೊಯ್ಯುವುದಿಲ್ಲ ಎನ್ನುವ ವೈದ್ಯ, ಕಳಪೆ ಕಾಮಗಾರಿ ನಡೆಸುವ ಇಂಜಿನಿಯರ್​ಗಳಿರಲು ಅವರಲ್ಲಿ ಸಾಹಿತ್ಯ ಸಂವೇದನೆ ಇಲ್ಲದಿರುವುದೇ ಕಾರಣ ಎಂದರು.

ಉನ್ನತ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯ ಅಳವಡಿಸಿದರೆ ಓದಲು ರಾಜ್ಯಕ್ಕೆ ಬರುವ ಹೊರರಾಜ್ಯದ ವೈದ್ಯ, ಇಂಜಿನಿಯರ್ ವಿದ್ಯಾರ್ಥಿಗಳಿಗೂ ಕನ್ನಡ ಸಾಹಿತ್ಯ ಪರಿಚಯಿಸಿದಂತಾಗುತ್ತದೆ ಎಂಬ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಲ್ಲಿಸಿದ್ದ ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಸರ್ಕಾರ ಈ ದಿಸೆಯಲ್ಲಿ ಗಮನಹರಿಸಬೇಕು ಎಂದರು.

ಪಂಚಸೂತ್ರ: ಕನ್ನಡ ಉಳಿವಿಗೆ ಪಂಚಸೂತ್ರ ಮುಂದಿಟ್ಟ ಸಂಸ್ಕೃತಿ ಗಂಗಾಧರಮೂರ್ತಿ, ಮೊದಲನೆಯದಾಗಿ ಕನ್ನಡ ಪುಸ್ತಕ ಓದುವ ಸಂಖ್ಯೆ ಶೇ.90 ಕಡಿಮೆಯಾಗಿರುವುದರಿಂದ ಜನತೆಯಲ್ಲಿ ಸಾಹಿತ್ಯ ಸಂವೇದನೆ ಬೆಳೆಸಬೇಕು. ಎರಡನೆಯದಾಗಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬೋಧನೆ ಮಾಡದೆ ಹೋದರೆ ಕನ್ನಡ ಅನಾಥ ಸ್ಥಿತಿಗೆ ತಲುಪುತ್ತದೆ. ಹೀಗಾಗಿ ಸಂವೇದನಾ ಶೀಲ ಸಮಾಜ ಸೃಷ್ಟಿಸಬೇಕು ಎಂದರು.

ಮೂರನೆಯದಾಗಿ ಭಾಷೆ ವಿಕಸನಗೊಳ್ಳಲು, ಬೇರೂರುವ ಸ್ಥಳ ಪ್ರಾಥಮಿಕ ಶಾಲೆಗಳು. ಇಲ್ಲಿ ಕನ್ನಡ ಬೋಧನೆ ಪರಿಣಾಮಕಾರಿಯಾಗಿಸಲು ಶಿಕ್ಷಕರ ಬೋಧನಾ ಸಾಮರ್ಥ್ಯ ಹೆಚ್ಚಳಕ್ಕೆ ಕಾರ್ಯಾಗಾರ ನಡೆಸಬೇಕು, ನಾಲ್ಕನೆಯದಾಗಿ ಪ್ರೌಢಶಾಲಾ ಮಟ್ಟದಲ್ಲಿ ಕನ್ನಡದಲ್ಲಿ ಓದಲೇಬೇಕಾದ ಪಠ್ಯ ತಯಾರಿಸಿ ತಿಂಗಳಿಗೊಮ್ಮೆ ಮಕ್ಕಳಿಗೆ ಪರಿಚಯಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು. ಕೇರಳ, ಪಶ್ಚಿಮ ಬಂಗಾಳದಲ್ಲಿ ಆಳುವ ವರ್ಗದವರಾದ ಶಾಸಕರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವ ಪ್ರಯತ್ನ ಆರಂಭವಾಗಿದೆ.

ಐದನೆಯದಾಗಿ ರಾಜ್ಯದಲ್ಲೂ ಈ ಕೆಲಸವಾಗಬೇಕು, ಶಾಲೆಗೆ ಮಕ್ಕಳ ಮರು ಪ್ರವೇಶದ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರ ಜತೆ ಕೈ ಜೋಡಿಸಿ ಒಂದು ವಾರ ಆಂದೋಲನ ನಡೆಸಿದರೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ದ್ವಿಗುಣವಾಗುತ್ತದೆ. ಈ ಕೆಲಸವನ್ನು ಕಸಾಪ ಮಾಡಬೇಕೆಂದು ಸಲಹೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಕೋಲಾರದ ಹೆಮ್ಮೆಯ ಪುತ್ರ ಡಾ.ಎಂ.ಎಸ್.ಪ್ರಭಾಕರ ರಚಿಸಿದ್ದು ಕೆಲವು ಕೃತಿಗಳಾದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತವಾಗಿದೆ. ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅವರನ್ನು ಜಿಲ್ಲೆಗೆ ಪರಿಚಯಿಸಿದ ಸಂತೋಷ ನಮ್ಮದು ಎಂದರು.

ಜಿಪಂ ಉಪಾಧ್ಯಕ್ಷೆ ಯಶೋದಮ್ಮ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ವಿ.ನಾಗರಾಜ ಮಾತನಾಡಿದರು. ಚಿ.ನಾ. ನಾಗೇಶ್ ರಚಿಸಿರುವ ‘ಮಾತೊಂದ ಹೇಳುವೆ ತಂಗಿ’ ಕವನ ಸಂಕಲನವನ್ನು ಸಮಾಜ ಸೇವಕ ಮಂಜುನಾಥ್ ಲೋಕಾರ್ಪಣೆ ಮಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ ಆಶಯ ನುಡಿಗಳನ್ನಾಡಿದರು. ಪಿಯು ಉಪನಿರ್ದೇಶಕ ಎಸ್.ವೆಂಕಟಸ್ವಾಮಿ, ಡಿಡಿಪಿಯು ಕೆ.ರತ್ನಯ್ಯ, ವಕೀಲರ ಸಂಘದ ಅಧ್ಯಕ್ಷ ಜಯರಾಂ, ಕಸಾಪ ಗೌರವ ಕೋಶಾಧ್ಯಕ್ಷ ರತ್ನಪ್ಪ ಮೇಲಾಗಾಣಿ, ಗೌರವ ಕಾರ್ಯದರ್ಶಿ ಆರ್.ಅಶ್ವತ್ಥ್, ವೆಂಕಟಸ್ವಾಮಿ, ತಾಲೂಕು ಗೌರವ ಕೋಶಾಧ್ಯಕ್ಷ ವಿನಯ್ ಗಂಗಾಪುರ, ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ರುದ್ರಪ್ಪ, ಜಿ.ಶ್ರೀನಿವಾಸ್, ಕಸಾಪ್ ನಿಕಟಪೂರ್ವ ಅಧ್ಯಕ್ಷ ನಾರಾಯಣಪ್ಪ, ಕರವೇ ಅಧ್ಯಕ್ಷ ರಾಘವೇಂದ್ರ ಇತರರಿದ್ದರು.

ಸಮ್ಮೇಳನಾಧ್ಯಕ್ಷರ ಗೈರು: ಸಮ್ಮೇಳನಾಧ್ಯಕ್ಷ ಡಾ.ಎಂ.ಎಸ್.ಪ್ರಭಾಕರ ಅನಾರೋಗ್ಯದ ಕಾರಣದಿಂದ ಸಮ್ಮೇಳನಕ್ಕೆ ಬರಲಾಗಲಿಲ್ಲ. ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ಸಮ್ಮೇಳನ ನಡೆಯಿತು. ಪ್ರಭಾಕರ ಅವರ ಬದುಕು, ಬರಹದ ಕುರಿತ ವಿಡಿಯೋ ತುಣುಕನ್ನು ಪೊ›ಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಚಿತ್ರಕಲಾವಿದ ಶಿಕ್ಷಕ ಕಾಳಿದಾಸ ಚಿತ್ರಿಸಿರುವ ಪ್ರಭಾಕರ ಅವರ ಭಾವಚಿತ್ರವನ್ನು ವೇದಿಕೆಯಲ್ಲಿಡಲಾಗಿತ್ತು.

ಪ್ರಮುಖರ ಗೈರು: ಶಾಸಕ ಕೆ.ಶ್ರೀನಿವಾಸಗೌಡ ವಿಧಾನಸೌಧದಲ್ಲಿ ತುರ್ತು ಸಭೆಯ ಕಾರಣ ನೀಡಿ ಗೈರಾದರೆ, ಡಿಸಿ, ಸಿಇಒ, ಎಸ್ಪಿ, ಎಡಿಸಿ ಹೀಗೆ ಪ್ರಮುಖ ಅಧಿಕಾರಿಗಳೂ ಗೈರಾಗಿರುವ ಬಗ್ಗೆ ತಾಪಂ ಅಧ್ಯಕ್ಷ ಸೂಲೂರು ಆಂಜಿನಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಧ್ವಜಾರೋಹಣ: ಬೆಳಗ್ಗೆ ತಹಸೀಲ್ದಾರ್ ಗಾಯತ್ರಿ ಧ್ವಜಾರೋಹಣ ನೆರವೇರಿಸಿದರೆ, ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ನಾಡಧ್ವಜ, ತಾಲೂಕು ಅಧ್ಯಕ್ಷ ಪ್ರೊ.ಎಂ.ಮುನಿರತ್ನಪ್ಪ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

Leave a Reply

Your email address will not be published. Required fields are marked *