ಕನ್ನಡ ಭಾಷೆ ಉಳಿವಿಗೆ ಕಸಾಪ ಹೋರಾಟ ಬೆಂಬಲಿಸಿ

ಸವಣೂರ: ಕನ್ನಡ ಭಾಷೆ, ಸಂಸ್ಕೃತಿಯ ಉಳಿವಿಗಾಗಿ ನಾಡಿನ ದಿಗ್ಗಜರು ಕಟ್ಟಿದ ಸಂಸ್ಥೆಯು ಶತಮಾನ ಕಂಡಿರುವುದು ಶ್ಲಾಘನೀಯವಾಗಿದೆ ಎಂದು ಡಾ. ವಿ.ಕೃ. ಗೋಕಾಕ ರಾಷ್ಟ್ರೀಯ ಟ್ರಸ್ಟ್ ಸದಸ್ಯ ಮಲ್ಲಾರಪ್ಪ ತಳ್ಳಿಹಳ್ಳಿ ಹೇಳಿದರು.

ಪಟ್ಟಣದ ಲಲಾಟೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್​ನ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಮುಂದಾಗುವ ಮೂಲಕ ಕಸಾಪ ಹೋರಾಟಕ್ಕೆ ಬೆಂಬಲವಾಗಿ ನಿಲ್ಲಬೇಕಾಗಿದೆ. ಶತಮಾನ ಕಂಡ ಸಂಸ್ಥೆಗೆ ನಾಡಿನ ರಾಜ ಮಹಾರಾಜರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳಿಂದ ಸಾಹಿತ್ಯ ರಚನೆಗೆ ಶಿಕ್ಷಕರು, ಪಾಲಕರು ಪ್ರೇರಣೆಯಾಗಬೇಕು ಎಂದರು.

ಹಿರಿಯ ಪತ್ರಕರ್ತ ಜಯತೀರ್ಥ ದೇಶಪಾಂಡೆ ಉಪನ್ಯಾಸ ನೀಡಿದರು. ಕಸಾಪ ಕಾರ್ಯದರ್ಶಿ ಚಂದ್ರಗೌಡ ಪಾಟೀಲ ಮಾತನಾಡಿದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಪ್ರಭು ಅರಗೋಳ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶರಣು ಮುದಿಗೌಡ್ರ, ರಮೇಶ ಕುರವತ್ತಿ, ಮಂಜುನಾಥ ಕಂಟೆಪ್ಪಗೌಡ್ರ ಹಾಗೂ ಇತರರು ಇದ್ದರು. ಶಿಕ್ಷಕ ಎಸ್.ವೈ. ಕಳ್ಳಿಮನಿ ಕಾರ್ಯಕ್ರಮ ನಿರ್ವಹಿಸಿದರು.