ಕನ್ನಡ ಭಾಷಾ ಬೆಳವಣಿಗೆಗೆ ರಾಜ್ ಕೊಡುಗೆ ಅಪಾರ

ಮಡಿಕೇರಿ: ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣವಾಗಲು ಗೋಕಾಕ್ ಚಳವಳಿ ಕಾರಣವಾದಂತೆ, ಕನ್ನಡ ಭಾಷಾ ಬೆಳವಣಿಗೆಗೆ ಡಾ.ರಾಜ್‌ಕುಮಾರ್ ಕೊಡುಗೆ ಅಪಾರ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೋಕೇಶ್‌ಸಾಗರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್ ಅವರ 91ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಗೋಕಾಕ್ ವರದಿ ಅನುಷ್ಠಾನಕ್ಕಾಗಿ ಡಾ.ರಾಜ್‌ಕುಮಾರ್ ಶ್ರಮಿಸಿದ್ದರು. ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ನಡೆಸಿದ್ದ ಅಪರೂಪದ ವ್ಯಕ್ತಿಯಾಗಿದ್ದರು. ನಟನೆ, ಅಭಿನಯ, ಗಾಯನ, ಯೋಗ ಸೇರಿ ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದ ಅಪರೂಪದ ಮೇರುನಟ ಎಂದು ಬಣ್ಣಿಸಿದರು.

ವೃತ್ತಿ ರಂಗಭೂಮಿ ಹಿನ್ನೆಲೆಯಿಂದ ಬಂದ ರಾಜ್‌ಕುಮಾರ್ ಕೇವಲ ಮೂರನೇ ತರಗತಿವರೆಗೆ ಓದಿದ್ದರೂ ಶಾಸ್ತ್ರೀಯ ಸಂಗೀತದಲ್ಲಿ ಪಾಂಡಿತ್ಯ ಹೊಂದಿದ್ದರು. ನಟನೆ, ಗಾಯನದ ಮೂಲಕ ಕನ್ನಡ ಭಾಷೆಗೆ ಸೊಬಗು ತಂದಿದ್ದರು ಎಂದು ಹೇಳಿದರು.

ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ ಮಾತನಾಡಿ, ಡಾ.ರಾಜ್‌ಕುಮಾರ್ ಅಭಿನಯದ ಚಿತ್ರಗಳು ಇಂದಿಗೂ ಜನಮೆಚ್ಚುಗೆಗೆ ಪಾತ್ರವಾಗಿವೆ ಎಂದರು.

ಜಿ.ಪಂ. ಸಿಇಒ ಕೆ.ಲಕ್ಷ್ಮಿಪ್ರಿಯಾ ಮಾತನಾಡಿ, ಹೊರ ರಾಜ್ಯದಿಂದ ಬಂದವರಿಗೆ ಕನ್ನಡ ಭಾಷೆ ಕಲಿಯಲು ಡಾ.ರಾಜ್‌ಕುಮಾರ್ ಅವರ ಸಿನಿಮಾಗಳು ಪ್ರೇರಣೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್ಪಿ ಸುಂದರರಾಜ್, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ನಂದ, ಜಿಲ್ಲಾ ಖಜಾನಾಧಿಕಾರಿ ಸತೀಶ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್, ವಾರ್ತಾಧಿಕಾರಿ ಚಿನ್ನಸ್ವಾಮಿ ಇತರರಿದ್ದರು.