ಕನ್ನಡ ನೆಲ, ಜಲ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಲಿ

ಅಕ್ಕಿಆಲೂರ: ಕುಟುಂಬ ಜೀವನದ ವ್ಯವಸ್ಥೆ ಭಾರತದಲ್ಲಿ ಮಾತ್ರವಿದ್ದು, ನಮ್ಮದು ಅಭೂತಪೂರ್ವ ಸಂಸ್ಕೃತಿಯ ನಾಡಾಗಿದೆ ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಗೋ.ರು. ಚನ್ನಬಸಪ್ಪ ಹೇಳಿದರು.

ಪಟ್ಟಣದ ಶ್ರೀ ದುಂಡಿಬಸವೇಶ್ವರ ಜನಪದ ಕಲಾ ಸಂಘದ ಆಶ್ರಯದಲ್ಲಿ ನಡೆದಿರುವ ಕನ್ನಡ ನುಡಿ ಸಂಭ್ರಮ-28ರ ಸಾಂಸ್ಕೃತಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡದ ಬಗೆಗಿನ ಕೀಳರಿಮೆ ಭಾಷೆ, ನೆಲ-ಜಲಗಳ ಕುರಿತು ನಡೆದಿರುವ ಹಲವಾರು ವಿವಾದಗಳು ನಾಡಿನ ಜನತೆಯ ನಿದ್ದೆಗೆಡಿಸಿವೆ. ವೇದ, ಉಪನಿಷತ್ತು, ಯೋಗ, ಆಧ್ಯಾತ್ಮಿಕತೆ, ವೈಚಾರಿಕತೆಯಂತಹ ವಿಭಿನ್ನ ವೈವಿಧ್ಯಮಯ ಸಂಸ್ಕೃತಿಯನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ನಮ್ಮ ದೇಶದಲ್ಲಿ ಇಂದು ಸಾಂಸ್ಕೃತಿಕ ಶ್ರೀಮಂತಿಕೆಯ ರಕ್ಷಣೆ ಕಾಣದೇ ಇರುವುದು ಬೇಸರದ ಸಂಗತಿಯಾಗಿದೆ ಎಂದರು.

ಬಸವಚೇತನ ಪುರಸ್ಕಾರ ಸ್ವೀಕರಿಸಿದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮಾತನಾಡಿ, ಪರಿವರ್ತನೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುವ ದೃಷ್ಟಿಯಿಂದ ನಾವೆಲ್ಲರೂ ಭಾಷೆ, ನೆಲ ಜಲದ ರಕ್ಷಣೆಗೆ ಮುಂದಾಗಬೇಕು ಎಂದರು.

ವಿಪ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಭಾಷೆಯ ಉಳಿವಿಗಾಗಿ ನಾವೆಲ್ಲರೂ ಕನ್ನಡ ಭಾಷೆಯಲ್ಲಿಯೇ ಸಹಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಕನ್ನಡದಲ್ಲಿ ಮಾಡಿದ ಸಹಿಯನ್ನು ನಕಲಿಸುವುದು ಅಸಾಧ್ಯವೆಂದು ವೈಜ್ಞಾನಿಕವಾಗಿ ರುಜುವಾತಾಗಿರುವುದು ಕನ್ನಡಿಗರು ಹೆಮ್ಮೆಪಡುವ ಸಂಗತಿಯಾಗಿದೆ ಎಂದರು.

ಬೆಂಗಳೂರಿನ ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿ. ನಾಕಪಾಣಿ ಮಾತನಾಡಿ, ಅಧ್ಯಾತ್ಮದಲ್ಲಿ ಜಗತ್ತಿನ ಭವಿಷ್ಯ ಅಡಗಿದ್ದು, ನಾವೆಲ್ಲರೂ ಅದರ ದಾಸರಷ್ಟೆ. ಮಗುವಿಗೆ ಪ್ರಾಥಮಿಕ ಶಿಕ್ಷಣಕ್ಕಿಂತ ಮೊದಲು ಉತ್ತಮ ಸಂಸ್ಕಾರ ನೀಡಬೇಕಾದ್ದು ಪ್ರತಿಯೊಬ್ಬ ಪಾಲಕರ ಧರ್ಮವಾಗಿದೆ ಎಂದರು.

ಮಾಜಿ ಶಾಸಕ ಯು.ಬಿ. ಬಣಕಾರ, ಜಿ.ಪಂ. ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ ಮಾತನಾಡಿದರು. ನಂತರ ನಟಿ ರಾಗಿಣಿ ದ್ವಿವೇದಿ ಸಾರಥ್ಯದಲ್ಲಿ ನಡೆದ ನೃತ್ಯ ಸಂಭ್ರಮದಲ್ಲಿ ನೃತ್ಯೋದಯ ನೃತ್ಯಶಾಲೆ, ಶಿರಸಿಯ ಸೌಭಾಗ್ಯ ಹಂದ್ರಾಳ ಹಾಗೂ ಪಟ್ಟಣದ ವಿವಿಧ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಗಮನ ಸೆಳೆದವು. ಮಜಾಭಾರತ ಖ್ಯಾತಿಯ ಮಂಜು ಗುಡ್ಡದವರ(ಚಿಲ್ಲರ ಮಂಜಾ), ರಾಘವೇಂದ್ರ(ರಾಗಿಣಿ) ನಡೆಸಿಕೊಟ್ಟ ಹಾಸ್ಯ ಸಂಭ್ರಮ ನೆರೆದ ಜನತೆಯನ್ನು ನಗೆಗಡಲಲ್ಲಿ ತೇಲಿಸಿತು. ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ರೊಕ್ಕಾ ನಿಮ್ಮದು, ಲೆಕ್ಕ ನಮ್ಮದು ಕಾರ್ಯಕ್ರಮ ನಡೆಸಿಕೊಟ್ಟರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಪ್ರದೀಪ ಶೇಷಗಿರಿ, ಜಿ.ಪಂ. ಸದಸ್ಯ ಟಾಕನಗೌಡ ಪಾಟೀಲ, ಶಿವಕುಮಾರ ದೇಶಮುಖ, ಸಂಘದ ಅಧ್ಯಕ್ಷ ಬಸವರಾಜ ಕೋರಿ, ಕಾರ್ಯದರ್ಶಿ ಷಣ್ಮುಖಪ್ಪ ಮುಚ್ಚಂಡಿ ಇತರರಿದ್ದರು.