ಕನ್ನಡ ಜಾತ್ರೆಗೆ ಸಜ್ಜಾದ ಮೆಣಸಿನಕಾಯಿ ನಗರಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ

ಮೆಣಸಿನಕಾಯಿ ವ್ಯಾಪಾರದ ಪ್ರಮುಖ ಕೇಂದ್ರವಾಗಿರುವ ಪಟ್ಟಣದಲ್ಲಿ ಪ್ರಥಮ ಬಾರಿಗೆ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜ. 19 ಹಾಗೂ 20ರಂದು ಜರುಗಲಿದ್ದು, ಸಮ್ಮೇಳನಕ್ಕಾಗಿ ಬೃಹತ್ ವೇದಿಕೆ ಸಜ್ಜುಗೊಂಡಿದೆ.

ಸಮ್ಮೇಳನಕ್ಕೆ ಕಳೆದ ವಾರದಿಂದ ಕಸಾಪ ಸಂಘಟನೆ ಪದಾಧಿಕಾರಿಗಳು ಸೇರಿ ವಿವಿಧ ಸಮಿತಿಗಳು ಸಕಲ ವ್ಯವಸ್ಥೆ ಮಾಡಿಕೊಂಡಿವೆ. ಬೃಹತ್ ಶಾಮಿಯಾನ ನಿರ್ವಿುಸಿದ್ದು, 2 ಸಾವಿರ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಸೌಂಡ್ ಸಿಸ್ಟಂ ಹಾಗೂ ಬೆಳಕಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆ ಸಿದ್ಧಗೊಳಿಸಿದ್ದು, ಗಣ್ಯ ವ್ಯಕ್ತಿಗಳಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನಗಳನ್ನು ಹಾಕಲಾಗಿದೆ. ವೇದಿಕೆಯ ಎಡಭಾಗದಲ್ಲಿ 20 ಸ್ಟಾಲ್​ಗಳನ್ನು ನಿರ್ವಿುಸಿ, ಪುಸ್ತಕ ಹಾಗೂ ವಿವಿಧ ವ್ಯಾಪಾರಿಗಳಿಗೆ ಅನುಕೂಲ ಮಾಡಿ ಕೊಡಲಾಗಿದೆ. ಪಟ್ಟಣದ ಎಲ್ಲೆಂದರಲ್ಲಿ ಕನ್ನಡದ ಬಾವುಟ, ಬಂಟಿಂಗ್ಸ್ ಹಾಗೂ ಕನ್ನಡಾಂಬೆಯ ಭಾವಚಿತ್ರಗಳ ಬ್ಯಾನರ್​ಗಳು ರಾರಾಜಿಸುತ್ತಿವೆ.