ಕನ್ನಡ ಚಿತ್ರರಂಗದ ಶಾಶ್ವತ ಸ್ಕೂಲ್ ಮಾಸ್ಟರ್ ಬಿ.ಆರ್. ಪಂತುಲು

| ಗಣೇಶ್ ಕಾಸರಗೋಡು

ಅದು 1958ನೇ ಇಸವಿ. ಕನ್ನಡ ಚಿತ್ರರಂಗಕ್ಕೆ ಅಷ್ಟು ಹೊತ್ತಿಗಾಗಲೇ ಭರ್ತಿ 25ರ ಸಂಭ್ರಮ. ಈ ಸಂಭ್ರಮದ ಸಮಾರಂಭವನ್ನು ಕನ್ನಡ ನಾಡಿನ ಎಲ್ಲೆಡೆ ಆಚರಿಸುವಂಥ ಸ್ಥಿತಿ ಆಗ ನಿರ್ವಣವಾಗಿರಲಿಲ್ಲ. ವರ್ಷಕ್ಕೆ 6-7 ಚಿತ್ರಗಳು ತೆರೆಕಾಣುತ್ತಿದ್ದವು. ಅದು ನಾಟಕಗಳ ಪರ್ವಕಾಲ. ಚಿತ್ರರಂಗ ಚಿಗುರುತ್ತ ಸಾಗಿತ್ತು. ನಾಟಕಗಳಿಂದ ಜನರ ಚಿತ್ತ ಸಿನಿಮಾಗಳತ್ತ ವಾಲುವ ಸಂಕ್ರಮಣದ ಕಾಲ. ಇಂಥ ಸಂಕ್ರಮಣ ಕಾಲದಲ್ಲಿ ಪವಾಡವೊಂದು ನಡೆಯಿತು!

ಅದು ಬೆಂಗಳೂರಿನ ಜೆ.ಸಿ.ರಸ್ತೆಯ ಟೌನ್ ಹಾಲ್. ಹಾಲ್ ತುಂಬ ಜನವೋ ಜನ! ಕಾರಣ, ಅಲ್ಲಿ ಬೆಳ್ಳಿತೆರೆಯ ಬೆಳ್ಳಿವರ್ಷದ ಸಂಭ್ರಮದ ಸಮಾರಂಭ. ಕನ್ನಡ ಚಿತ್ರರಂಗಕ್ಕೆ 25 ವರ್ಷ ತುಂಬಿದ ಪ್ರಯುಕ್ತ ಚಿತ್ರಾಸಕ್ತರೆಲ್ಲ ಸೇರಿ ಅದ್ದೂರಿ ಸಮಾರಂಭವನ್ನೇರ್ಪಡಿಸಿದ್ದರು. ಸಮಾರಂಭದ ಘನ ಅಧ್ಯಕ್ಷತೆ ವಹಿಸಿದ್ದವರು ಕನ್ನಡದ ಹೆಮ್ಮೆಯ ಡಿ.ವಿ.ಗುಂಡಪ್ಪನವರು! ತಮ್ಮ ಅಧ್ಯಕ್ಷ ಭಾಷಣದಲ್ಲಿ ಡಿ.ವಿ.ಜಿ.ಯವರು, ‘ಇದು ನಮ್ಮ ಸೌಭಾಗ್ಯ. ಈ ಸೌಭಾಗ್ಯ ಮತ್ತಷ್ಟು ಕಳೆಗಟ್ಟಲು ಸ್ಮರಣೀಯವಾದ ಸಿನಿಮಾವೊಂದನ್ನು ಮಾಡಬೇಕು. ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಚಲನಚಿತ್ರಗಳಿಗಿವೆ. ಹೀಗಾಗಿ ಕನ್ನಡ ಚಿತ್ರರಂಗದ ಈ ಬೆಳ್ಳಿವರ್ಷದ ಸಮಾರಂಭದಂದು ನಿಮ್ಮಲ್ಲಿ ಯಾರಾದರೂ ಒಂದೊಳ್ಳೆಯ ಸಿನಿಮಾ ಮಾಡಿದರೆ ಈ ಸಮಾರಂಭಕ್ಕೊಂದು ಅರ್ಥ ಬರುತ್ತದೆ…’ ಎಂದರು.

ಇದೇ ಸಮಾರಂಭದಲ್ಲಿ ಹಾಜರಿದ್ದ ನಿರ್ವಪಕ, ನಿರ್ದೇಶಕ ಮತ್ತು ನಟರೂ ಆಗಿರುವ ಬಿ.ಆರ್. ಪಂತುಲು ಅವರಿಗೆ ಡಿ.ವಿ.ಜಿ.ಯವರ ಮಾತಿನ ಮರ್ಮ ಅರ್ಥವಾಯಿತು! ಹಾಗೆಂದು ಕೂತ ಜಾಗದಲ್ಲೇ ಸಿನಿಮಾವೊಂದನ್ನು ಘೋಷಣೆ ಮಾಡುವಷ್ಟು ಆರ್ಥಿಕ ಚೈತನ್ಯ ಪಂತುಲು ಅವರಿಗಿರಲಿಲ್ಲ. ಅಷ್ಟರಲ್ಲಾಗಲೇ ನಾಲ್ಕಾರು ಸಿನಿಮಾ ನಿರ್ವಿುಸಿ ಕೈ ಸುಟ್ಟುಕೊಂಡಿದ್ದರು. ಜತೆಗೆ ಪಾಲುದಾರಿಕೆಯ ವ್ಯವಹಾರದಿಂದ ರೋಸಿಹೋಗಿದ್ದರು. ಆದರೆ ಡಿವಿಜಿ ಅವರ ಖಡಕ್ ಮಾತು ಅವರ ಮಿದುಳಲ್ಲಿ ಅಚ್ಚು ಹೊತ್ತಿತ್ತು! ಸ್ಮರಣೀಯ ಚಿತ್ರವೊಂದನ್ನು ಮಾಡಲೇಬೇಕೆಂಬ ಹಠದ ಮುಂದೆ ಆರ್ಥಿಕತೆಯ ನಷ್ಟದ ಯೋಚನೆಯೇ ಬರಲ್ಲಿಲ್ಲ. ಪದೇಪದೆ ಡಿವಿಜಿ ಮಾತುಗಳೇ ಕಿವಿಯಲ್ಲಿ ಗುಯಿಂಗುಡುತ್ತಿದ್ದವು. ನಂತರದ ದಿನಗಳಲ್ಲಿ ಅದುವೇ ಪ್ರೇರಣೆ ಆಯಿತು..

ಅಷ್ಟರಲ್ಲಿ ಪಂತುಲು ಅವರಿಗೆ ಒಂದು ಅದ್ಭುತವಾದ ಮರಾಠಿಯ ಕಥೆ ಸಿಕ್ಕಿತು. ಕಥೆಗಾರ ಶಿರವಾಡಕರ ಎಂಬುವವರು ಬರೆದಿರುವ ‘ವೈಷ್ಣವಿ’ ಎನ್ನುವ ಕಥೆಯದು. ಈ ಕಥೆಯನ್ನು ಆಧಾರವಾಗಿಟ್ಟುಕೊಂಡು ಮರಾಠಿಯಲ್ಲೊಂದು ಸಿನಿಮಾ ಬಂದಿತ್ತು. ಆ ಸಬ್ಜೆಕ್ಟ್​ಗೆ ಮನಸೋತ ಪಂತುಲು, ಕನ್ನಡಕ್ಕೆ ಹೊಂದಿಕೆಯಾಗುವಂತೆ ಅಲ್ಪ-ಸ್ವಲ್ಪ ಬದಲಾಯಿಸಿಕೊಂಡು ಚಿತ್ರ ಮಾಡಲು ಹೊರಟರು.

ಇದಕ್ಕೂ ಮೊದಲು ಪಂತುಲು ಅವರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಕೊಡುವುದಿದ್ದರೆ.. ಬಂಗಾರಪೇಟೆಯ ಬುಡಗೂರಿನ ಬಂಗಾರ ಈ ಪಂತುಲು! ಪೂರ್ತಿ ಹೆಸರು- ಬುಡಗೂರು ರಾಮಕೃಷ್ಣ ಪಂತುಲು ಅರ್ಥಾತ್ ಬಿ.ಆರ್.ಪಂತುಲು. ವೃತ್ತಿಯಲ್ಲಿ ಶಿಕ್ಷಕರಾಗಿದ್ದವರು. 1937ರಲ್ಲಿ ‘ಸಂಸಾರನೌಕೆ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಂತರ ಪದ್ಮಿನಿ ಪಿಕ್ಚರ್ಸ್ ಲಾಂಛನದಲ್ಲಿ ‘ಶಿವಶರಣೆ ನಂಬೆಕ್ಕ’ ಚಿತ್ರ ನಿರ್ವಿುಸಿದರು. ಅವರು ನಿರ್ದೇಶಿಸಿದ ಇತರ ಗಮನಾರ್ಹ ಚಿತ್ರಗಳೆಂದರೆ, ‘ರತ್ನಗಿರಿ ರಹಸ್ಯ’, ‘ಕಿತ್ತೂರು ಚೆನ್ನಮ್ಮ’, ‘ಶ್ರೀಕೃಷ್ಣ ದೇವರಾಯ’, ‘ಸ್ಕೂಲ್ ಮಾಸ್ಟರ್’ ಇತ್ಯಾದಿ. ಅವರ ಚಿತ್ರಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪಾತ್ರವಾದವು. ‘ಶ್ರೀಕೃಷ್ಣದೇವರಾಯ’ ಚಿತ್ರದ ತಿಮ್ಮರಸು, ಪಾತ್ರದಲ್ಲಿ ನೀಡಿದ ಅಮೋಘ ಅಭಿನಯಕ್ಕಾಗಿ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಿದ್ದನ್ನು ವಿನೀತರಾಗಿ ನಿರಾಕರಿಸಿದ ಪಂತುಲು, ಟೈಟಲ್ ರೋಲ್ ನಿರ್ವಹಿಸಿದ ರಾಜಕುಮಾರ್ ಅವರಿಗೆ ಈ ಪ್ರಶಸ್ತಿ ಸಲ್ಲಬೇಕಾಗಿತ್ತು ಎಂದು ವಾದಿಸಿದ್ದರು! ಅದಲ್ಲದೆ ತಮಿಳಿನಲ್ಲೂ ಪಂತುಲು ಅವರದ್ದು ದೊಡ್ಡ ಹೆಸರು. ‘ವೀರ ಪಾಂಡ್ಯಕಟ್ಟಬೊಮ್ಮನ್’ ಮತ್ತು ‘ಕಪ್ಪಲೋಟ್ಟಿಯ ತಮಿಳನ್’ ಎಂಬೆರಡು ಚಿತ್ರಗಳು ‘ಬಾಹುಬಲಿ’ಯನ್ನೂ ಮೀರಿಸಿದ ಆ ಕಾಲದ ಚಿತ್ರಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದವು! ಇಂಥ ಸಾಹಸಿ ನಿಧನರಾದಾಗ ಅವರಿಗೆ 63 ವರ್ಷ ವಯಸ್ಸಾಗಿತ್ತು!

ಇನ್ನು ‘ಸ್ಕೂಲ್ ಮಾಸ್ಟರ್’ ಚಿತ್ರದ ಇತರ ವಿವರಕ್ಕೆ ಬರುವುದಿದ್ದರೆ, ‘ಸ್ಕೂಲ್ ಮಾಸ್ಟರ್’ ಪಾತ್ರವನ್ನು ಸ್ವತಃ ಪಂತುಲು ಅವರೇ ನಿರ್ವಹಿಸಿದರೆ, ಸ್ಕೂಲ್ ಇನ್ಸ್​ಪೆಕ್ಟರ್ ಪಾತ್ರವನ್ನು ತಮಿಳಿನ ಶಿವಾಜಿ ಗಣೇಶನ್ ನಿರ್ವಹಿಸಿದ್ದರು. ಅಭಿನಯದ ದೃಷ್ಟಿಯಿಂದ ಪಂತುಲು ನಂಬರ್ ಒನ್. ಅದರಲ್ಲೂ ಒಡೆದ ಕನ್ನಡಕ ಧರಿಸಿ ಕಾಗದವನ್ನು ಓದುವ ದೃಶ್ಯ ಆಗಿನ ಎಲ್ಲ ವರ್ಗದ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿತ್ತು! ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಈ ಚಿತ್ರಕ್ಕೆ ಸಂಭಾಷಣೆ ಮತ್ತು ಗೀತೆ ರಚನೆ ಮಾಡಿದ್ದರು. ಟಿ.ಜಿ. ಲಿಂಗಪ್ಪ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಕಿವಿಗಿಂಪು. ಉದಾಹರಣೆಗೆ, ‘ರಾಧಾ ಮಾಧವ ವಿನೋದ ಹಾಸ..’,

‘ಅತಿ ಮಧುರ ಅನುರಾಗ..’, ‘ಭಾಮೆಯ ನೋಡಲು ತಾ ಬಂದ…’ ಒಂದೊಂದು ಹಾಡೂ ಆಯ್ದ ಮುತ್ತು! ಅದರಲ್ಲೂ ‘ಸ್ವಾಮಿದೇವನೆ ಲೋಕಪಾಲನೆ..’ ಹಾಡಂತೂ ಆ ಕಾಲದಲ್ಲಿ ಶಾಲೆಗಳ ಪ್ರಾರ್ಥನಾ ಗೀತೆಯೇ ಆಗಿ ಹೋಗಿತ್ತು! ಮೈಸೂರು ಅರಮನೆ ವಿದ್ವಾಂಸ ಸೋಸಲೆ ಅಯ್ಯ ಶಾಸ್ತ್ರಿಗಳು ಈ ಗೀತೆಯನ್ನು ರಚಿಸಿದ್ದರು. ಪಂತುಲು ಅವರು ಇದನ್ನು ಪರಿಣಾಮಕಾರಿಯಾಗಿ ತಮ್ಮ ಚಿತ್ರದಲ್ಲಿ ಬಳಸಿಕೊಂಡರು. ಉತ್ತಮವಾದ ಸಾಮಾಜಿಕ, ಸಾಂಸಾರಿಕ ಚಿತ್ರಗಳನ್ನು ಮಾಡಿದರೆ ಕನ್ನಡದಲ್ಲಿ ಯಶಸ್ವಿಯಾಗುತ್ತವೆ ಎನ್ನುವುದಕ್ಕೆ ‘ಸ್ಕೂಲ್ ಮಾಸ್ಟರ್’ ಚಿತ್ರ ಅತ್ಯುತ್ತಮ ಉದಾಹರಣೆ. ಬೆಂಗಳೂರಿನಲ್ಲಿ

25 ವಾರ ಪ್ರದರ್ಶನಗೊಂಡ ಈ ಚಿತ್ರ ಸಂಯೋಜಿತವಾಗಿ 56 ವಾರ ಪ್ರದರ್ಶನಗೊಂಡಿತು! ಏಕಕಾಲದಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಚಿತ್ರ ಸಿದ್ಧವಾಯಿತು! ಕೇಂದ್ರ ಸರ್ಕಾರದಿಂದ ದ್ವಿತೀಯ ಅತ್ಯುತ್ತಮ ಕಥಾಚಿತ್ರಕ್ಕಿರುವ ’ರಾಷ್ಟ್ರಪತಿಗಳ ರಜತ ಪದಕ’ ಲಭ್ಯವಾಯಿತು. ‘ಸ್ಕೂಲ್ ಮಾಸ್ಟರ್’ ಚಿತ್ರದ ಕಥಾಹಂದರವೇ ಅದ್ಭುತವಾಗಿದೆ. ರಂಗಣ್ಣ ನಿಷ್ಠಾವಂತ ಶಿಕ್ಷಕ. ಶಾಲಾ ಕಟ್ಟಡಗಳನ್ನು ಸ್ವಂತಕ್ಕೆ ಬಳಸುತ್ತಿದ್ದ ಊರ ಪಂಚಾಯಿತಿ ಅಧ್ಯಕ್ಷ ನಾಗಪ್ಪನ ವಂಚನೆಯನ್ನು ಖಂಡಿಸುತ್ತಾರೆ. ರಂಗಣ್ಣನ ಮಕ್ಕಳಿಬ್ಬರು ಓದಿ ಬೇರೆ ಬೇರೆ ಊರುಗಳಲ್ಲಿ ಕೆಲಸಕ್ಕೆ ಸೇರುತ್ತಾರೆ. ರಂಗಣ್ಣ ನಿವೃತ್ತರಾಗುತ್ತಾರೆ. ನಾಗಪ್ಪನ ಮೋಸದಿಂದ ಮಕ್ಕಳ ಓದಿನ ಸಾಲ ರಂಗಣ್ಣನ ಮೇಲೆ ಬರುತ್ತದೆ. ಗಂಡಹೆಂಡತಿಯರಿಬ್ಬರೂ ಬೇರೆ ಬೇರೆಯಾಗಿ ಮಕ್ಕಳ ಮನೆಗೆ ಹೋಗಿ ವಾಸಿಸಬೇಕಾಗುತ್ತದೆ. ಕಷ್ಟ-ಸಂಕಷ್ಟಗಳ ಸರಮಾಲೆ ಎದುರಾಗುತ್ತದೆ. ಊರಿನ ಮನೆ ಹರಾಜಾಗುತ್ತಿದ್ದಾಗ ಬಾಲ್ಯದಲ್ಲಿ ತನಗೆ ಕಲಿಸಿದ ಗುರುವಿನ ಮನೆಯೆಂದು ಒಬ್ಬ ಸ್ಕೂಲ್ ಇನ್ಸ್​ಪೆಕ್ಟರ್ ಕೊಂಡು ಅದನ್ನು ಗುರುಕಾಣಿಕೆಯಾಗಿ ಒಪ್ಪಿಸುತ್ತಾನೆ. ಕೊನೆಗೆ ಮಕ್ಕಳೆಲ್ಲ ತಪ್ಪೊಪ್ಪಿಕೊಂಡು

ತಂದೆ- ತಾಯಿಗಳ ಕ್ಷಮೆ ಕೋರುತ್ತಾರೆ… ಇದು ಕಥಾ ತಿರುಳು. ತಾರಾಗಣದಲ್ಲಿ ಬಿ.ಆರ್. ಪಂತುಲು, ಎಂ.ವಿ.ರಾಜಮ್ಮ, ಉದಯಕುಮಾರ್, ನರಸಿಂಹರಾಜು, ಬಿ. ಸರೋಜಾದೇವಿ, ಸಾಹುಕಾರ್ ಜಾನಕಿ, ಶಿವಾಜಿ ಗಣೇಶನ್, ಬಾಲಕೃಷ್ಣ, ಅನ್ನಪೂರ್ಣಮ್ಮ, ಸೂರ್ಯಕುಮಾರ್, ಡಿಕ್ಕಿ ಮಾಧವರಾವ್, ಚಿ. ಉದಯಶಂಕರ್ ಮೊದಲಾದವರಿರುವ ಈ ಚಿತ್ರಕ್ಕಾಗಿ ರಾಜಲಕ್ಷ್ಮೀ, ಪಿ. ಲೀಲಾ, ಕೃಷ್ಣವೇಣಿ, ಕೋಮಲ, ಜಮುನಾರಾಣಿ, ಎ. ಎಂ. ರಾಜಾ, ಸುಶೀಲಾ, ನಾಗೇಶ್ವರರಾವ್, ಟಿ.ಜಿ. ಲಿಂಗಪ್ಪ ಹಾಡಿದ್ದಾರೆ! ಒಟ್ಟಿನಲ್ಲಿ ಭಾಷಣವೊಂದು ಅದ್ಭುತವಾದ ಚಿತ್ರವೊಂದರ ನಿರ್ವಣಕ್ಕೆ ಕಾರಣವಾದದ್ದು ಕನ್ನಡ ಚಿತ್ರರಂಗದ ಒಂದು ಅಚ್ಚರಿ ಎಂದು ಧಾರಾಳವಾಗಿ ಹೇಳಬಹುದು.

Leave a Reply

Your email address will not be published. Required fields are marked *