ಕನ್ನಡದ ಹೆಮ್ಮೆ

ಸಾಹಿತ್ಯ ವಲಯದಲ್ಲಿ ಚಂದ್ರಶೇಖರ ಕಂಬಾರರ ಬಗ್ಗೆ ಅಪಾರ ಗೌರವವಿದೆ. ನಾಡಿನ ಸಂವೇದನಾಶೀಲ ಮನಸ್ಸುಗಳ ಜತೆ ಅವರಿಗೆ ನಿಕಟ ಒಡನಾಟವಿದೆ. ಅವರ ಸಾಹಿತ್ಯ ಸಾಧನೆಯ ಬಗ್ಗೆ ಅರಿವಿದೆ. ಪ್ರಭುತ್ವವನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿಕೊಂಡಿದ್ದ ನಮ್ಮ ಪ್ರಮುಖ ಪ್ರಾತಿನಿಧಿಕ ಸಂಸ್ಥೆಗಳೂ ತಮ್ಮ ಸ್ವಾಯತ್ತತೆಯನ್ನ ಕಳೆದುಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಕಂಬಾರರು ನಾಡಿನ ಪ್ರಮುಖ ಸ್ವಾಯತ್ತ ಚಿಂತನೆಯ ಸಾಹಿತ್ಯ ಅಕಾಡೆಮಿಯ ನೇತೃತ್ವ ವಹಿಸಿದ್ದಾರೆ. ಅದರ ಸ್ವಾಯತ್ತತೆಯನ್ನು ರಕ್ಷಿಸುವ ಗುರುತರ ಜವಾಬ್ದಾರಿ ಅವರ ಮೇಲಿದೆ. ಕಂಬಾರರಿಗೆ ಆ ಸಾಮರ್ಥ್ಯವಿದೆ.

| ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ

ಮೂರನೆಯ ಬಾರಿಗೆ ಕನ್ನಡಿಗರೊಬ್ಬರು ನಾಡಿನ ಅತ್ಯುನ್ನತ ಸಾಹಿತ್ಯಕ ಸಂಸ್ಥೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಗೆ ಆಯ್ಕೆಯಾಗಿದ್ದಾರೆ. ಈ ಮೊದಲು ವಿನಾಯಕ ಕೃಷ್ಣ ಗೋಕಾಕ್, ಯು.ಆರ್. ಅನಂತಮೂರ್ತಿ ಅಧ್ಯಕ್ಷರಾಗಿದ್ದರು. ಈಗ ಚಂದ್ರಶೇಖರ ಕಂಬಾರರು ಅಧ್ಯಕ್ಷರಾಗಿದ್ದಾರೆ. ಕಂಬಾರರು ಅಕಾಡೆಮಿಯ ಹನ್ನೆರಡನೇ ಅಧ್ಯಕ್ಷರು. ಅಂದರೆ ಅಕಾಡೆಮಿಯ ಈವರೆಗಿನ ಹನ್ನೆರಡು ಅಧ್ಯಕ್ಷರಲ್ಲಿ ಮೂವರು ಕನ್ನಡಿಗರೆಂಬುದು ನಾವೆಲ್ಲಾ ಹೆಮ್ಮೆಪಡುವ ಸಂಗತಿ. ಇದು ರಾಷ್ಟ್ರಮಟ್ಟದಲ್ಲಿ ಕನ್ನಡದ ಸ್ಥಾನವನ್ನೂ ಸೂಚಿಸುತ್ತದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಲ್ಲೂ ಕನ್ನಡವೇ ಭಾರತೀಯ ಭಾಷೆಗಳಲ್ಲಿ ಮುಂದಿದೆ. ಸಾಮಾನ್ಯವಾಗಿ ಅಕಾಡೆಮಿಯ ಉಪಾಧ್ಯಕ್ಷರಾಗಿದ್ದವರು ಅಧ್ಯಕ್ಷರಾಗುವುದು ಅಕಾಡೆಮಿಯಲ್ಲಿ ನಡೆದುಬಂದ ಸಂಪ್ರದಾಯ. ಇದಕ್ಕೆ ವಿರಳವಾಗಿ ಅಪವಾದವುಂಟು. ಅನಂತಮೂರ್ತಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈಗ ಕಂಬಾರರು ಕಳೆದ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದರೂ ಚುನಾವಣೆ ನಡೆಯಿತು. ಒರಿಯಾದ ಪ್ರತಿಭಾರಾಯ್, ಮರಾಠಿಯ ಬಾಲಚಂದ್ರ ನೆಮಾಡೆ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ್ದರು. ನೆಮಾಡೆಯವರ ಸ್ಪರ್ಧೆ ಸಾಂಕೇತಿಕವಾಗಿತ್ತು. ಪ್ರತಿಭಾರಾಯ್ ನಾಡಿನಾದ್ಯಂತ ಸಂಚರಿಸಿ ಅಕಾಡೆಮಿಯ ಜನರಲ್ ಕೌನ್ಸಿಲ್ ಸದಸ್ಯರನ್ನು ಸಂರ್ಪಸಿ ಒಂದು ರೀತಿ ಸಂಚಲನ ಉಂಟುಮಾಡಿದ್ದರು. ನನಗೆ ತಿಳಿದಂತೆ ನಾಡಿನ ಸಾಹಿತ್ಯ ವಲಯದಲ್ಲಿ ಕಂಬಾರರ ಬಗ್ಗೆ ಅಪಾರ ಗೌರವವಿದೆ. ನಾಡಿನ ಸಂವೇದನಾಶೀಲ ಮನಸ್ಸುಗಳ ಜತೆ ಅವರಿಗೆ ನಿಕಟ ಒಡನಾಟವಿದೆ. ಅವರ ಸಾಹಿತ್ಯ ಸಾಧನೆಯ ಬಗ್ಗೆ ಅರಿವಿದೆ. ಉಪಾಧ್ಯಕ್ಷರಾಗಿದ್ದಾಗ ಅವರು ಎಲ್ಲ ಭಾಷೆಗಳಿಗೆ ಸಂಬಂಧಿಸಿದಂತೆ ತಾಳಿದ ಕೆಲವು ಮಹತ್ವದ ನಿಲವುಗಳ ಬಗ್ಗೆ ಮೆಚ್ಚುಗೆಯಿದೆ. ಹೀಗಾಗಿ ಅವರ ಆಯ್ಕೆ ಎಲ್ಲರಿಗೂ ಸಹಜ ನಿರೀಕ್ಷೆಯಾಗಿತ್ತು. ನಿರೀಕ್ಷೆ ನಿಜವಾಗಿದೆ.

ನಾವೀಗ ಒಂದು ವಿಶಿಷ್ಟ ಸಂದರ್ಭದಲ್ಲಿದ್ದೇವೆ. ಇತ್ತೀಚೆಗೆ ನಾವು ಎದುರಿಸುತ್ತಿರುವ ಸೂಕ್ಷ್ಮವಾದ ಹಾಗೂ ಬಹುಮುಖ್ಯವಾದ ಆತಂಕವೆಂದರೆ, ಪ್ರಭುತ್ವ ಸದ್ದಿಲ್ಲದೆ ಸ್ವಾಯತ್ತತೆಯ ಮೇಲೆ ಆಕ್ರಮಣ ನಡೆಸುತ್ತಿರುವುದು, ಸ್ವತಂತ್ರವಾಗಿ ಆಲೋಚಿಸುವ ಸಮುದಾಯದ ದನಿ ಅಡಗಿಸುವ ಪ್ರಯತ್ನ ಮಾಡುತ್ತಿರುವುದು. ಪ್ರಜಾಪ್ರಭುತ್ವದ ಮೂಲ ಶಕ್ತಿಯೇ ಸ್ವಾಯತ್ತತೆ. ನಮ್ಮ ಅನೇಕ ಸಾರ್ವಜನಿಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿವೆ. ಸರ್ಕಾರದ ಸರಿ ತಪ್ಪುಗಳನ್ನು ವಿವೇಚಿಸಿ ರ್ಚಚಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಂಡಿವೆ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಭುತ್ವ ಈ ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿರುವಂತೆ ತೋರುತ್ತಿದೆ. ಪ್ರಭುತ್ವದ ಈ ಪ್ರಯತ್ನಕ್ಕೆ ಬಂಡವಾಳಶಾಹಿ ಕೈ ಜೋಡಿಸಿದೆ. ಇವೆರಡೂ ಪ್ರಜಾಪ್ರಭುತ್ವದಲ್ಲಿ ಕೈ ಕೈ ಹಿಡಿದು ಸಾಗುತ್ತಿವೆ. ನಮ್ಮ ಸಮೂಹ ಮಾಧ್ಯಮಗಳನ್ನು ಗಮನಿಸಿ: ಜನಾಭಿಪ್ರಾಯವನ್ನು ರೂಪಿಸುವಲ್ಲಿ ಇವುಗಳ ಪಾತ್ರ ಅತ್ಯಂತ ಮಹತ್ವದ್ದು. ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಯಲ್ಪಡುವ ಈ ಕ್ಷೇತ್ರವನ್ನು ನಮ್ಮ ರಾಜಕೀಯ ನಾಯಕರು ವಶಪಡಿಸಿಕೊಂಡು ತಮ್ಮ ತುತ್ತೂರಿಯನ್ನಾಗಿ ಮಾಡಿಕೊಂಡಿರುವುದು ರಹಸ್ಯ ಸಂಗತಿಯೇನಲ್ಲ. ಇದು ಈಗ ಸಾಹಿತ್ಯ ಕ್ಷೇತ್ರವನ್ನೂ ವ್ಯಾಪಿಸುತ್ತಿರುವುದು ಆತಂಕದ ಸಂಗತಿ. ಅನೇಕ ರಾಷ್ಟ್ರೀಯ ಸಾಂಸ್ಕೃತಿಕ ಸಂಸ್ಥೆಗಳ ನೇತೃತ್ವವನ್ನು ಇಂದು ಆ ಕ್ಷೇತ್ರದ ಪರಿಣತರ ಬದಲಿಗೆ ಪ್ರಭುತ್ವವನ್ನು ಓಲೈಸುವ ಹಿಂಬಾಲಕರು ವಹಿಸಿಕೊಳ್ಳುತ್ತಿದ್ದಾರೆ. ರಾಜ್ಯಗಳಲ್ಲೂ ಪರಿಸ್ಥಿತಿ ಭಿನ್ನವೇನಲ್ಲ. ಅಂದರೆ ಪ್ರಭುತ್ವವನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಕಾಯ್ದಿರಿಸಿಕೊಂಡಿದ್ದ ನಮ್ಮ ಪ್ರಮುಖ ಪ್ರಾತಿನಿಧಿಕ ಸಂಸ್ಥೆಗಳೂ ತಮ್ಮ ಸ್ವಾಯತ್ತತೆಯನ್ನ ಕಳೆದುಕೊಳ್ಳುತ್ತಿವೆ. ಇಂತಹ ಹೊತ್ತಿನಲ್ಲಿ ಕಂಬಾರರು ನಾಡಿನ ಪ್ರಮುಖ ಸ್ವಾಯತ್ತ ಚಿಂತನೆಯ ಸಾಹಿತ್ಯ ಅಕಾಡೆಮಿಯ ನೇತೃತ್ವ ವಹಿಸಿದ್ದಾರೆ. ಅದರ ಸ್ವಾಯತ್ತತೆಯನ್ನು ರಕ್ಷಿಸುವ ಗುರುತರ ಜವಾಬ್ದಾರಿ ಅವರ ಮೇಲಿದೆ. ಕಂಬಾರರಿಗೆ ಆ ಸಾಮರ್ಥ್ಯವಿದೆ.

ಅಕಾಡೆಮಿಯ ಜತೆ ಕಂಬಾರರದು ದೀರ್ಘ ಒಡನಾಟ. ಎರಡು ಅವಧಿಗೆ ಅವರು ಅಕಾಡೆಮಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಕಳೆದ ಅವಧಿಯಲ್ಲಿ ಅವರು ಅಕಾಡೆಮಿಯ ಉಪಾಧ್ಯಕ್ಷರಾಗಿದ್ದರು. ಅಕಾಡೆಮಿಯ ಒಳಹೊರಗುಗಳನ್ನು ಅವರು ಚೆನ್ನಾಗಿ ಬಲ್ಲರು. ಅಲ್ಲದೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ರಾಷ್ಟ್ರೀಯ ನಾಟಕ ಶಾಲೆ ಇವುಗಳ ನೇತೃತ್ವವನ್ನೂ ಕಂಬಾರರು ವಹಿಸಿಕೊಂಡಿದ್ದರು. ರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಸಂಸ್ಥೆಗಳ ಜತೆಗಿನ ಅವರ ಒಡನಾಟದ ಅನುಭವ ಈಗ ಉಪಯೋಗಕ್ಕೆ ಬರಲಿದೆ. ಅಲ್ಲದೆ ನಮ್ಮ ಕನ್ನಡ ವಿಶ್ವವಿದ್ಯಾಲಯದ ಆರಂಭದ ಕುಲಪತಿಯಾಗಿ ಅದನ್ನು ಕಟ್ಟಿ ಬೆಳೆಸಿದ ಆಡಳಿತಾನುಭವವೂ ಅವರಿಗಿದೆ. ಇವೆಲ್ಲ ಕೇಂದ್ರ ಸಾಹಿತ್ಯ ಅಕಾಡೆಮಿಯನ್ನು ಮುನ್ನಡೆಸುವಲ್ಲಿ ನೆರವಾಗುತ್ತವೆ.

ಕಂಬಾರರು ಕನಸುಗಾರರು. ಅವರದು ಮುನ್ನೋಟದ ದಾರ್ಶನಿಕ ಪ್ರತಿಭೆ. ಅಕಾಡೆಮಿಯ ಬಗ್ಗೆ ಅವರಿಗೆ ಅನೇಕ ಕನಸುಗಳಿವೆ. ಕೆಲವೊಮ್ಮೆ ಅವುಗಳನ್ನು ನನ್ನೊಡನೆ ಅವರು ಹಂಚಿಕೊಂಡದ್ದುಂಟು.

ಅಕಾಡೆಮಿ ನಾಡಿನ ಅತ್ಯುನ್ನತ ಸಾಹಿತ್ಯಕ ಸಂಸ್ಥೆ. ನಾಡಿನ ಭಾಷೆ, ಸಂಸ್ಕೃತಿಗಳ ಸಂಗತಿ ಬಂದಾಗ ಅಕಾಡೆಮಿಯ ದನಿ ಮುಖ್ಯವಾಗಬೇಕು. ಸರ್ಕಾರ ಅಂತಹ ಸಂದರ್ಭಗಳಲ್ಲಿ ಅಕಾಡೆಮಿಯ ಮಾರ್ಗದರ್ಶನ ಪಡೆಯುವಂತಾಗಬೇಕು. ದೇಶಭಾಷೆಗಳ ಸಂವೇದನಾಶೀಲ ಸಾಹಿತಿಗಳು ಅಕಾಡೆಮಿಯ ಕಾರ್ಯಕಾರಿ ಸಮಿತಿಯಲ್ಲಿರುತ್ತಾರೆ. ಅವರ ಚಿಂತನೆ, ದೂರದೃಷ್ಟಿಯ ಸಲಹೆಗಳನ್ನು ಸರ್ಕಾರ ಮಾನ್ಯ ಮಾಡಬೇಕು. ಆ ಬಗೆಯ ಸಾಮಾಜಿಕ ಮನ್ನಣೆಯ ಸ್ಥಾನವನ್ನು ಅಕಾಡೆಮಿ ಪಡೆದುಕೊಳ್ಳಬೇಕು. ಇದರ ಬಗ್ಗೆ ಕಂಬಾರರಿಗೆ ಅರಿವಿದೆ.

‘ನಾನು ನನ್ನ ಅನುಭವದ ಟೆಕ್ಷ್​ಚರ್ ಅನ್ನು ಪಡೆದುಕೊಳ್ಳುವುದು ಮುಖ್ಯವಾಗಿ ನನ್ನ ಪ್ರದೇಶ ಪ್ರಜ್ಞೆಯ ಮೂಲಕ’ ಎನ್ನುವ ಕಂಬಾರರು ಸಂವೇದನೆ ಆಕೃತಿಗಳೆರಡರಲ್ಲೂ ಅಪ್ಪಟ ಭಾರತೀಯ ಲೇಖಕ. ಭಾರತೀಯ ಎನ್ನುವಾಗ ಎಚ್ಚರ ಅಗತ್ಯ. ಭಾರತೀಯ ಸಮಾಜದಲ್ಲಿ ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯಿಂದುಂಟಾದ ಅಸಮಾನತೆ, ಶೋಷಣೆ ಇವುಗಳ ಬಗ್ಗೆ ಕಂಬಾರರಿಗೆ ಅರಿವಿದೆ. ಆದರೆ ಲೌಕಿಕ ವಾಸ್ತವಗಳಷ್ಟೇ ಸಂಸ್ಕೃತಿಯನ್ನು ರೂಪಿಸುವುದಿಲ್ಲ. ಭಾವಜಗತ್ತು, ಲೋಕೋತ್ತರ ಸಂಗತಿಗಳೂ ಅದರಲ್ಲಿ ಸೇರುತ್ತವೆ. ಲೌಕಿಕ ವ್ಯವಸ್ಥೆಯ ವಿರುದ್ಧ ಮಾನವ ಚೈತನ್ಯ ದಂಗೆಯೇಳುತ್ತಲೇ ತನ್ನ ಅಂತರಂಗದ ಪೊರೆಯುವ ಶಕ್ತಿಯನ್ನು ಕಾಪಾಡಿಕೊಂಡಿದೆ. ಕಂಬಾರರು ಪೊರೆಯುವ ಶಕ್ತಿಯ ಇಂತಹ ಪರ್ಯಾಯ ದೇಸಿ ಸಂಸ್ಕೃತಿಯ ನಮ್ಮ ಕಾಲದ ಪ್ರತಿನಿಧಿ. ಪ್ರಕೃತಿಯ ಜತೆ ಶೋಷಣಾತ್ಮಕ ಸಂಬಂಧವುಳ್ಳ, ಆತ್ಮನಿಷೇಧವೇ ಇರದ ಭೋಗ ಸಂಸ್ಕೃತಿಯ ಪಶ್ಚಿಮದ ವಿರುದ್ಧದ ಪ್ರತಿಭಟನೆಯ ಸಮರ್ಥ ದನಿ. ಕಂಬಾರರ ಈ ವ್ಯಕ್ತಿತ್ವ ಅಕಾಡೆಮಿಗೆ ಹೊಸ ರಕ್ತ ತುಂಬಬಲ್ಲುದು.

ಇದಕ್ಕೆ ಎರಡು ಆಯಾಮಗಳಿವೆ: ಮೊದಲನೆಯದು ದೇಶ-ಭಾಷೆಗಳ ರಕ್ಷಣೆ, ಮತ್ತೊಂದು ದೇಶಭಾಷಾ ಸಾಹಿತ್ಯವನ್ನು ಜಾಗತಿಕ ನೆಲೆಯಲ್ಲಿ ಸಮರ್ಥವಾಗಿ ಪರಿಚಯಿಸುವುದು.

ಕಂಬಾರರು ಉಪಾಧ್ಯಕ್ಷರಾಗಿದ್ದಾಗಲೇ ಈ ದಿಕ್ಕಿನಲ್ಲಿ ಆಲೋಚಿಸಿದ್ದರು. ನಮ್ಮ ಮಕ್ಕಳಿಗೆ ದೇಶಿ ಭಾಷೆಗಳಲ್ಲಿಯೇ ಶಿಕ್ಷಣ ದೊರೆಯಬೇಕೆಂಬುದು ಅವರ ಖಚಿತ ನಂಬಿಕೆ. ಇದಕ್ಕೆ ಅಕಾಡೆಮಿ ದನಿಯಾಗಬೇಕೆಂಬುದು ಅವರ ಆಶಯ. ಅದಕ್ಕಾಗಿ ಅವರು ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಈ ಸಂಬಂಧ ನಿಲುವಳಿಯೊಂದನ್ನು ಮಂಡಿಸಿ, ಸರ್ವಾನುಮತದ ಒಪ್ಪಿಗೆ ಪಡೆದು ಸೂಕ್ತ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದರು. ಐದು ಲಕ್ಷ ಜನರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದರು. ಸಾಹಿತಿಗಳ ನಿಯೋಗದೊಂದಿಗೆ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಟ್ಟಿದ್ದರು. ಈಗ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಇದನ್ನು ಸಾಧ್ಯವಾಗಿಸಲು ಕಂಬಾರರ ನೇತೃತ್ವದಲ್ಲಿ ಅಕಾಡೆಮಿ ಕಾರ್ಯಪ್ರವೃತ್ತವಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಇದು ಸಾಧ್ಯವಾದರೆ ಇಂಗ್ಲಿಷಿನ ತೆಕ್ಕೆಗೆ ಬೀಳುತ್ತಿರುವ ನಮ್ಮ ಮಕ್ಕಳು ನಮ್ಮ ಮಡಿಲಿನಲ್ಲಿಯೇ ಬೆಳೆಯಲು ಅವಕಾಶವಾಗುತ್ತದೆ. ದೇಶಭಾಷೆಗಳು ಬಲ ಪಡೆಯುತ್ತವೆ.

ಕಂಬಾರರು ಅಧ್ಯಕ್ಷರಾದ ನಂತರ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು: ‘ವಿಸ್ತಾರದಲ್ಲಿ ಬೆಳಗಾವಿ ಜಿಲ್ಲೆಗಿಂತಲೂ ಕಡಿಮೆ ಇರುವ ಅನೇಕ ರಾಷ್ಟ್ರಗಳ ಸಾಹಿತ್ಯ ವಿಶ್ವವಿಖ್ಯಾತವಾಗುತ್ತದೆ. ಆ ದೇಶದ ಸಾಹಿತಿಗಳನ್ನು ಜಗತ್ತೇ ಗುರುತಿಸುತ್ತದೆ. ಹೀಗಿರುವಾಗ ಆ ಎಲ್ಲ ಸಾಹಿತ್ಯಕ್ಕಿಂತ ಅತ್ಯಂತ ಮಹತ್ವದ ಉದಾತ್ತ ಸಾಹಿತ್ಯ ಪರಂಪರೆ ಹೊಂದಿರುವ ಭಾರತೀಯ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ಜಗತ್ತು ನೋಡುವಂತಾಗಬೇಕು, ರ್ಚಚಿಸುವಂತಾಗಬೇಕು.’ ಈ ಕೆಲಸವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯಂತಹ ಸಂಸ್ಥೆಯೇ ಮಾಡಬೇಕು, ಮಾಡುತ್ತದೆ. ಇದು ಕಂಬಾರರ ಮುನ್ನೋಟ. ಹಾಗೆ ನೋಡಿದರೆ ಫೆಸ್ಟಿವಲ್ ಹೆಸರಿನಲ್ಲಿ ಜಾಗತಿಕ ಮಟ್ಟದ ಅನೇಕ ಜಾತ್ರೆಗಳು ಭಾರತದಲ್ಲಿ ನಡೆಯುತ್ತಿವೆ. ಇವುಗಳ ಸ್ವರೂಪ ಸಾಹಿತ್ಯಕವಾಗಿರದೆ, ಮಾರುಕಟ್ಟೆಯ ಅಪೇಕ್ಷೆಗಳನ್ನು ಪೂರೈಸುವ ರೀತಿಯಲ್ಲಿ ವಾಣಿಜ್ಯೀಕರಣವಾಗಿರುವುದನ್ನು ನಾವು ಗಮನಿಸಬಹುದು. ಸಾಹಿತ್ಯವೂ ಈಗ ಮಾರುಕಟ್ಟೆಯ ಸರಕಾಗಿ ಬಿಟ್ಟಿರುವ ನಮ್ಮ ಸಂದರ್ಭದಲ್ಲಿ ಕಂಬಾರರಂಥವರ ಮುನ್ನೋಟ ಭಾರತೀಯ ಭಾಷೆಗಳ ಸತ್ವಪೂರ್ಣ ಸಾಹಿತ್ಯಕ್ಕೆ ಹೊಸ ಚೈತನ್ಯ ತುಂಬಬಲ್ಲುದು.

ಇತ್ತೀಚೆಗೆ ಅಕಾಡೆಮಿಗೆ ಬೆಂಗಳೂರು ವಿಶ್ವವಿದ್ಯಾಲಯ ಮುಕ್ಕಾಲು ಎಕರೆ ಜಮೀನನ್ನು ನೀಡಿದೆ. ಅದು ಕಲಾಗ್ರಾಮದ ಸಂಕೀರ್ಣದ ಬಳಿಯಿದೆ. ಅಲ್ಲಿಯೇ ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರ, ರಾಷ್ಟ್ರೀಯ ನಾಟಕ ಶಾಲೆ, ಕುವೆಂಪು ಭಾಷಾಭಾರತಿ ಮೊದಲಾದ ಸಂಸ್ಥೆಗಳಿವೆ. ಅಲ್ಲಿ ಕಂಬಾರರ ನೇತೃತ್ವದಲ್ಲಿ ಅಕಾಡೆಮಿಯ ಪ್ರಾದೇಶಿಕ ಕಛೇರಿಯ ಆವರಣ ರೂಪುಗೊಳ್ಳಬೇಕು. ಒಂದು ಸುಸಜ್ಜಿತ ಆಡಿಟೋರಿಯಂ, ಒಂದು ಸೆಮಿನಾರ್ ಹಾಲ್, ವಿಸ್ತಾರವಾದ ಗ್ರಂಥಾಲಯ, ದೇಶದ ಬೇರೆ ಬೇರೆ ಭಾಗಗಳಿಂದ ಸಾಹಿತಿಗಳು ಬಂದಾಗ ವಾಸ್ತವ್ಯಕ್ಕೆ ವಸತಿಗೃಹ, ಒಂದು ಕ್ಯಾಂಟೀನ್- ಹೀಗೆ ಒಂದು ಕಟ್ಟಡ ಸಂಕೀರ್ಣವನ್ನು ರೂಪಿಸಿದರೆ ಅದು ಬೆಂಗಳೂರಿನ ಮಾತ್ರವಲ್ಲ, ದಕ್ಷಿಣ ಭಾರತದ ಸಾಂಸ್ಕೃತಿಕ ಚಟುವಟಿಕೆಗಳ ಒಂದು ಅತ್ಯುತ್ತಮ ಕೇಂದ್ರವಾಗುತ್ತದೆ. ಇದರಿಂದಾಗಿ ದೆಹಲಿಯಲ್ಲಿರುವ ಅಕಾಡೆಮಿಯ ವಿಕೇಂದ್ರಿಕರಣಕ್ಕೂ ಅವಕಾಶ ಕಲ್ಪಿಸಿದಂತಾಗುತ್ತದೆ. ಅಕಾಡೆಮಿಯ ಗ್ರಂಥಾಲಯದಲ್ಲಿ ಉತ್ತಮ ಸಂಗ್ರಹವಿದೆ. ಬಹುಭಾಷಾ ಕೃತಿಗಳ ಏಕೈಕ ಗ್ರಂಥಾಲಯವಿದು. ಆದರೆ ಸ್ಥಳಾವಕಾಶದ ಕೊರತೆಯಿಂದಾಗಿ ಅದರ ಉಪಯೋಗ ಸೀಮಿತವಾಗಿದೆ. ಕಂಬಾರರಿಗೆ ಇದು ಗೊತ್ತಿದೆ. ಅವರ ಅವಧಿಯಲ್ಲಿ ಇದು ಸಾಧ್ಯವಾಗುತ್ತದೆಂಬ ವಿಶ್ವಾಸ ನನ್ನದು. ಅಕಾಡೆಮಿ ಪ್ರತಿವರ್ಷ ಭಾರತೀಯ ಸಾಹಿತ್ಯದ ಅನೇಕ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸಿ, ಅದನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡುತ್ತದೆ. ಭಾರತೀಯ ಸಾಹಿತ್ಯದ ಅತ್ಯುತ್ತಮ ಕೃತಿಗಳು ಸಿಗುವುದು ಅಕಾಡೆಮಿಯ ಪ್ರಕಟಣೆಗಳಲ್ಲಿ. ಆದರೆ ಅದನ್ನು ಸಹೃದಯರಿಗೆ ತಲುಪಿಸುವ ಮಾರಾಟ ಜಾಲದ ವ್ಯವಸ್ಥೆಯಿಲ್ಲ. ಅವೆಲ್ಲ ಗೋಡೌನ್​ಗಳಲ್ಲಿ ಕೊಳೆಯುತ್ತಿವೆ. ಎಲ್ಲ ಸರ್ಕಾರಿ ಸಂಸ್ಥೆಗಳಂತೆಯೇ ಇಲ್ಲಿಯೂ ನಿರಾಸಕ್ತಿ. ಕಂಬಾರರು ಈ ಬಗ್ಗೆ ಆಸಕ್ತಿ ವಹಿಸಿದರೆ ಶ್ರೇಷ್ಠ ಸಾಹಿತ್ಯವನ್ನು ಸಹೃದಯರಿಗೆ ತಲುಪಿಸಿದಂತಾಗುತ್ತದೆ. ಏನಿಲ್ಲವೆಂದರೂ ನಮ್ಮ ಶಾಲಾ ಕಾಲೇಜುಗಳಲ್ಲಿ ಈ ಪುಸ್ತಕಗಳು ಸಿಗುವಂತಾದರೆ ಹೊಸ ತಲೆಮಾರು ಚಿಂತನಶೀಲರಾಗಲು ನೆರವಾಗುತ್ತದೆ. ಅಕಾಡೆಮಿಯಲ್ಲಿರುವ ನಮ್ಮ ಪ್ರತಿಭಾವಂತ ಸಾಹಿತಿಗಳ ಸಾಕ್ಷ್ಯಚಿತ್ರಗಳ ಗತಿಯೂ ಇದಕ್ಕಿಂತ ಭಿನ್ನವೇನಲ್ಲ.

ಕಂಬಾರರು ಸ್ವತಃ ನಮ್ಮ ನಾಡಿನ ಶ್ರೇಷ್ಠ ಜಾನಪದ ತಜ್ಞರು. ನಾಡಿನ ಅಲಕ್ಷಿತ ಭಾಷಾ ಪರಿವಾರದಲ್ಲಿ ಹೇರಳ ಸಾಹಿತ್ಯವಿದೆ. ಅದರ ಸಮರ್ಪಕ ಪರಿಚಯ ಪ್ರಧಾನ ಧಾರೆಗಿಲ್ಲ. ನಮ್ಮ ಸಾಮಾಜಿಕ ರಚನೆಯ ವಿನ್ಯಾಸವನ್ನು ರಾಜಕೀಯ ಹಾಗೂ ಧರ್ಮ ನಿಯಂತ್ರಿಸುತ್ತಿವೆ. ಬದಲಾಗಿ ನಮ್ಮ ಜನಪದರ ವಿವೇಕ ರೂಢಿಸಿಕೊಂಡಿರುವ ಜೀವನಧರ್ಮದಿಂದ ನಾವು ಪ್ರೇರಣೆ ಪಡೆಯುವಂತಾದರೆ ನಮ್ಮ ಬದುಕಿನ ಗತಿಯೇ ಬದಲಾಗಬಹುದು. ಕಂಬಾರರ ಈ ಬಗೆಯ ಚಿಂತನೆ ಅಕಾಡೆಮಿಯ ಚಟುವಟಿಕೆಗಳಲ್ಲಿ ಸಾಕಾರಗೊಳ್ಳಲು ಸಾಧ್ಯವಾದರೆ ಭಾರತೀಯ ಸಾಹಿತ್ಯ ಸಂಸ್ಕೃತಿಗೇ ಹೊಸ ದಿಕ್ಕು ಲಭಿಸುತ್ತದೆ. ಹಾಗಾಗಲಿ ಎಂದು ಆಶಿಸೋಣ.

(ಲೇಖಕರು ಖ್ಯಾತ ವಿಮರ್ಶಕರು)

(ಪ್ರತಿಕ್ರಿಯಿಸಿ: [email protected])

Leave a Reply

Your email address will not be published. Required fields are marked *