More

  ಕನ್ನಡದ ಹಾರಕೂಡ ಮಠದಲ್ಲೀಗ ಅಕ್ಷರ ಜಾತ್ರೆ ಸಂಭ್ರಮ

  ಮಾರ್ಥಂಡ ಜೋಶಿ ಬಸವಕಲ್ಯಾಣ
  ಸಾಹಿತ್ಯ, ಕಲೆ, ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡುವ ಮೂಲಕ ಕನ್ನಡ ಪರಂಪರೆ ಮತ್ತು ಸಾಂಸ್ಕೃತಿಕ ಪ್ರತಿನಿಧಿಯಾಗಿ ಗಮನ ಸೆಳೆದಿರುವ ಹಾರಕೂಡ ಸಂಸ್ಥಾನ ಹಿರೇಮಠದಲ್ಲೀಗ ಅಕ್ಷರ ಜಾತ್ರೆ ಸಂಭ್ರಮ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಮತ್ತು ಸೋಮವಾರ ಹಮ್ಮಿಕೊಂಡಿರುವ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀಮಠ ಸಜ್ಜುಗೊಂಡಿದೆ.

  ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಧಾರ್ಮಿಕ ಕಾರ್ಯಚಟುವಟಿಕೆಗೆ ಸೀಮಿತವಾಗಿರದೆ ಸಮಾಜಮುಖಿ ಕಾರ್ಯಗಳಲ್ಲೂ ಗುರುತಿಸಿಕೊಂಡಿದೆ. ಸಾಹಿತ್ಯ, ಪ್ರಕಾಶನ, ಸಂಗೀತ, ಸಾಂಸ್ಕೃತಿಕ ಹೀಗೆ ನಿರಂತರ ಚಿಂತನೆಯೊಂದಿಗೆ ಕನ್ನಡ ಪರಂಪರೆ ಶ್ರೀಮಂತಗೊಳಿಸುವ ಕಾರ್ಯದಲ್ಲಿ ತೊಡಗಿದೆ. 2003ರಲ್ಲಿ ನಡೆದ ಜಿಲ್ಲಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆದಿರುವ ಮಠ ಈಗ ಎರಡನೇ ಸಲ ನುಡಿ ಜಾತ್ರೆಗೆ ಅಣಿಯಾಗಿದೆ.

  ಸಂಸ್ಥಾನದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯರ ಸಾನ್ನಿಧ್ಯ ಹಾಗೂ ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ನುಡಿ ಹಬ್ಬಕ್ಕೆ ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಶರಣು ಸಲಗರ ಮತ್ತು ಪರಿಷತ್ ಪದಾಧಿಕಾರಿಗಳ ನೇತೃತ್ವದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಊರಲ್ಲಿ ಕನ್ನಡ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
  ಶ್ರೀಗಳಿಗಿರುವ ಕಾಳಜಿಯಿಂದಾಗಿ ಕನ್ನಡ ಸಾರಸ್ವತ ಲೋಕಕ್ಕೆ 93ಕ್ಕೂ ಹೆಚ್ಚು ಕೃತಿಗಳನ್ನು ಹಾರಕೂಡ ಮಠ ಕೊಡಮಾಡಿದೆ. ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿಮಠ ಸಂಪಾದಿಸಿದ ವಿಷಯ ವಚನ ಸಂಪುಟಗಳು 1ರಿಂದ 14ರವರೆಗೆ ಪ್ರಕಟವಾಗಿದ್ದು, ಈ ಎಲ್ಲ ಸಂಪುಟಗಳ ವಿವರಣೆ, ವಿಶ್ಲೇಷಣೆ ಒಳಗೊಂಡ ವಚನ ವಿಷಯ ವಿವರಣೆ ಸಂಪುಟ 15 ಹೊರತರಲಾಗಿದೆ. 40 ಲಕ್ಷ ರೂ. ವೆಚ್ಚದಲ್ಲಿ ಈ 15 ಗ್ರಂಥಗಳನ್ನು ಮಠದಿಂದ ಪ್ರಕಟಿಸಿದ್ದು, 22 ಸಾವಿರಕ್ಕೂ ಹೆಚ್ಚು ವಚನ, 50 ವಚನ ವಿಷಯ ಸೇರಿ 10 ಸಾವಿರ ಪುಟಗಳನ್ನು ಹೊಂದಿವೆ.

  ಪ್ರತಿವರ್ಷ ಮೂರು ದಿನ ನಡೆವ ಜಾತ್ರೋತ್ಸವದಲ್ಲಿ ರಥೋತ್ಸವ, ಶಿವಾನುಭವ ಗೋಷ್ಠಿ ಚಿಂತನ ಪ್ರಮುಖ ಕಾರ್ಯಕ್ರಮಗಳು. ಸಾಹಿತಿ, ಕಲಾವಿದರನ್ನು ಸತ್ಕರಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಗುರುಲಿಂಗ ಶಿವಾಚಾರ್ಯ ವಸತಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಮಠದ ಪರಿಸರದಲ್ಲಿ ನಡೆಯುತ್ತಿದ್ದು, ಇಲ್ಲಿ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವೂ ಹೇಳಿಕೊಡಲಾಗುತ್ತಿದೆ.

  ಶ್ರೀ ಗುರುಲಿಂಗ ಶಿವಾಚಾರ್ಯರ ಪುಣ್ಯತಿಥಿ ನಿಮಿತ್ತ ಪ್ರತಿವರ್ಷ ಅನುಭಾವ ಪ್ರಚಾರ ಉಪನ್ಯಾಸ ಮಾಲೆ ನಡೆಯುತ್ತದೆ. 2011ರಲ್ಲಿ ಉಪನ್ಯಾಸ ಮಾಲೆ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಮಠದಿಂದ ಶ್ರೀ ಚೆನ್ನರೇಣುಕ ಬಸವ ಪ್ರಶಸ್ತಿ ಸ್ಥಾಪಿಸಲಾಗಿದೆ. ಒಂದು ಲಕ್ಷ ರೂ. ನಗದು, ಒಂದು ತೊಲ ಚಿನ್ನವನ್ನು ಒಳಗೊಂಡ ಈ ಪ್ರಶಸ್ತಿ ಪ್ರತಿವರ್ಷ ಸಾಹಿತ್ಯ, ಸಂಸ್ಕೃತಿ, ಸಂಗೀತ, ಕಲಾ ಕ್ಷೇತ್ರದ ಸಾಧಕರಿಗೆ ನೀಡಿ ಗೌರವಿಸಲಾತ್ತಿದೆ.

  ಇದಕ್ಕೆ ಹೊರತುಪಡಿಸಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಸಂಗೀತ ರತ್ನ, ಚನ್ನಶ್ರಿ, ಶ್ರೀ ಚೆನ್ನರತ್ನ ಪ್ರಶಸ್ತಿ, ಕಲ್ಯಾಣ ಕರ್ಕಾಟಕ ಶಿಕ್ಷಕ ರತ್ನ ಹಾಗೂ ಭಜನ ಸೇವಾ ರತ್ನ ಪ್ರಶಸ್ತಿ ನೀಡಲಾಗುತ್ತಿದೆ.

  ಹಾರಕೂಡ ಶ್ರೀಗಳ ಕನ್ನಡ ಪ್ರೇಮ: ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಾಹಿತ್ಯ, ಕಲೆ, ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಉಳ್ಳವರು. ಸಾಹಿತ್ಯ, ಸಾಂಸ್ಥಿಕ, ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಪೂಜ್ಯರಿಗೆ ರಾಜ್ಯ ಸರ್ಕಾರ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. 2014ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್​ಗೆ ಭಾಜನರಾಗಿದ್ದಾರೆ. ರಂಭಾಪುರಿ ಪೀಠದ ಶಿವಾಚಾರ್ಯ ರತ್ನ, ಉಜ್ಜಯನಿ ಪೀಠದ ಸಧರ್ಮ ಶಿಖಾಮಣಿ ಪ್ರಶಸ್ತಿ, ಕಾಶಿ ಪೀಠದ ಧರ್ಮರತ್ನ ಸೇರಿ ನಾಡಿನ ಪ್ರತಿಷ್ಠಿತ ಸಂಘ-ಸಂಸ್ಥೆಗಳ ಪ್ರಶಸ್ತಿ, ಪುರಸ್ಕಾರಗಳು ಶ್ರೀಗಳ ಮುಡಿಗೇರಿವೆ. ಧಾರವಾಡದ ಕರ್ನಾಟಕ ವಿವಿಯಿಂದ ಎಂ.ಎ. ಕನ್ನಡ ಪದವಿ ಪಡೆದಿರುವ ಶ್ರೀಗಳು, ಸಾಹಿತ್ಯ ಸಂಸ್ಕೃತಿ ಬಗ್ಗೆ ಆಳವಾದ ಅಧ್ಯಯನ ಮಾಡಿದ್ದಾರೆ. ಕನ್ನಡ ಭಾಷೆ ಮೇಲೆ ಪ್ರಭುತ್ವ, ಸಂಸ್ಕೃತದ ಜ್ಞಾನ ಹೊಂದಿದ್ದಾರೆ. ಸಾಹಿತಿಗಳ ಪುಸ್ತಕಗಳನ್ನು ಶ್ರೀಮಠದಿಂದ ಪ್ರಕಟಿಸುವ ಜತೆಗೆ ಸ್ವತಃ ತಾವು ಬರೆದ ಚನ್ನ ಚಿಂತನ, ಚನ್ನ ಚಂದ್ರಹಾರ, ಚನ್ನಕಾಂತ ವಿಚಾರ ಬಿಂದುಗಳು ಹಾಗೂ ಹಡಪದ ಅಪ್ಪಣ್ಣನ ನೂರೊಂದು ವಚನಗಳು ಸಂಪಾದಿತ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. ಶೈಕ್ಷಣಿಕ ಸ್ಥಿತಿಗತಿ ಬಗ್ಗೆ ಸದಾ ಚಿಂತನೆ ನಡೆಸುವ ಶ್ರೀಗಳು 14 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದು, 2000 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಚಿಂಚೋಳಿ, ಹಾರಕೂಡ, ನಿಡಗುಂದಾ, ಭಾಲ್ಕಿಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಿದ್ದು, ಉಚಿತ ಶಿಕ್ಷಣ ವ್ಯವಸ್ಥೆಯೊಂದಿಗೆ ಕನ್ನಡ ಮಾಧ್ಯಮದಲ್ಲಿ ಕಲಿಕೆ ಮಾಡುತ್ತಿರುವುದು ಇವರ ನುಡಿಪ್ರೇಮ ಎಂಥದ್ದು ಎಂಬುದನ್ನು ತೋರಿಸಿಕೊಡುತ್ತದೆ. ಪುರಾಣ-ಪ್ರವಚನ, ಕೃಷಿ ಮೇಳ, ವಸ್ತು-ಪಶು ಪ್ರದರ್ಶನ, ಉಚಿತ ಶಿಬಿರಗಳು, ಅನುಭಾವ ಚಿಂತನೆ, ಸಂಗೀತ, ನೇತ್ರ ಶಸಚಿಕಿತ್ಸೆ, ರಕ್ತದಾನ-ಆರೋಗ್ಯ ಶಿಬಿರ, ಕುಸ್ತಿಯಲ್ಲದೆ ಸಾಂಸ್ಕೃತಿಕ ಕಾರ್ಯಗಳ ಮೂಲಕ ಕನ್ನಡ ಮಠವಾಗಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts