ಅರಕಲಗೂಡು: ಪಟ್ಟಣದ ಕ್ರೀಡಾಂಗಣದಲ್ಲಿ ಜ. 31 ಮತ್ತು ಫೆ. 1ರಂದು ಎರಡು ದಿನಗಳ ಕಾಲ ನಡೆಯಲಿರುವ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ದತೆಗಳು ಭರದಿಂದ ಸಾಗಿವೆ.
ಕಾದಂಬರಿ ಸಾರ್ವಭೌಮ ಅನಕೃ ತವರಿನಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ನುಡಿ ತೇರು ಎಳೆಯಲು ಪಟ್ಟಣವನ್ನು ಸರ್ವಾಲಂಕೃತವಾಗಿ ಸಿಂಗರಿಸಲಾಗಿದೆ. ಕನ್ನಡದ ಹಿರಿಮೆ ಸಾರುವ ಹಾಗೂ ಸಾಹಿತಿಗಳ ಬ್ಯಾನರ್‌ಗಳು, ಕಟೌಟ್‌ಗಳು ರಾರಾಜಿಸುತ್ತಿವೆ.
ಡಾಂಗಣವನ್ನು ಸ್ವಚ್ಛಗೊಳಿಸಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಅನಕೃ ಪ್ರಧಾನ ವೇದಿಕೆ ನಿರ್ಮಿಸಿ ವಿಸ್ತಾರವಾದ ಜಾಗದಲ್ಲಿ ಶಾಮಿಯಾನ ಹಾಕಲಾಗಿದೆ. ಪುಸ್ತಕ ಪ್ರದರ್ಶನ, ಛಾಯಾಚಿತ್ರ ಮತ್ತು ಚಿತ್ರಕಲಾ ಪ್ರದರ್ಶನಕ್ಕಾಗಿ ಕಣ್ಣರಳಿಸುವ ಮಾದರಿಯಲ್ಲಿ ಅಚ್ಚುಕಟ್ಟಾದ ಮಳಿಗೆಗಳು ತಲೆಎತ್ತಿವೆ. ಅರಕಲಗೂಡಿನಲ್ಲಿ ತಪಸ್ಸು ಕೈಗೊಂಡಿದ್ದ ಗೌತಮ ಋಷಿ ಹೆಸರಿನಲ್ಲಿ ಮಹಾ ಮಂಟಪ, ಸಾಹಿತಿಗಳಾದ ಕೋದಂಡಪಾಣಿ ಮತ್ತು ಎ.ವಿ.ಗುಂಡಪ್ಪ ಶ್ರೇಷ್ಠಿ ದ್ವಾರಗಳನ್ನು ನಿರ್ಮಿಸುವ ಕಾಯಕದಲ್ಲಿ ಕಾರ್ಮಿಕರು ತೊಡಗಿದ್ದಾರೆ.
ಪ್ರಸಾರ ಭಾರತಿ ಅಧ್ಯಕ್ಷ ಹಾಗೂ ಲೇಖಕ ಡಾ. ಅರಕಲಗೂಡು ಸೂರ್ಯ ಪ್ರಕಾಶ್ ಸಮ್ಮೆಳನದ ಅಧ್ಯಕ್ಷರಾಗಿರುವುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಕನ್ನಡ ತೇರು ಎಳೆಯಲು ಬರುವ ಕನ್ನಡಾಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಸ್ಟಾಲ್‌ಗಳು, ಆಕರ್ಷಣೀಯ ವೇದಿಕೆ, ಸ್ವಾಗತ ಕೋರುವ ನಾಮಫಲಕಗಳು, ಗಣ್ಯರ ಭಾವಚಿತ್ರಗಳು, ಕನ್ನಡ ಬಾವುಟಗಳನ್ನು ಪಟ್ಟಣದಲ್ಲಿ ಅಳವಡಿಸಲಾಗಿದ್ದು, ಸಮ್ಮೇಳದ ರಂಗು ಹೆಚ್ಚಿದೆ.
ಸಮ್ಮೇಳನಾಧ್ಯಕ್ಷರ ಪರಿಚಯ
ಅರಕಲಗೂಡು ನರಸಿಂಹಮೂರ್ತಿ, ಪಾರ್ವತಮ್ಮ ಅವರ ಪುತ್ರ ಡಾ. ಅರಕಲಗೂಡು ಸೂರ್ಯಪ್ರಕಾಶ್ ಅವರು ದೂರದ ದೆಹಲಿಯಂತಹ ದೊಡ್ಡನಗರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದರೂ ಹುಟ್ಟಿದ ಊರಿನ ಹೆಸರನ್ನು ಮರೆಮಾಚದೆ ಹೆಸರಿನೊಂದಿಗೆ ಸೇರ್ಪಡೆಗೊಳಿಸಿಕೊಂಡು ಅಭಿಮಾನವನ್ನು ಮೆರೆದಿದ್ದಾರೆ. ಇವರ ಪತ್ನಿ ಪುಷ್ಟ ಗಿರಿಮಾಜಿ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಮಗ ಉಜ್ವಲ್ ಅರಕಲಗೂಡು ಪ್ರಸ್ತುತ ಕೆನಡಾದಲ್ಲಿ ಪ್ರತಿಷ್ಠಿತ ಕಂಪನಿಯೊಂದರ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ, ತುಮಕೂರು ವಿವಿಯಲ್ಲಿ ಡಿ.ಲಿಟ್ ಪಡೆದಿದ್ದಾರೆ. 1970 ಮತ್ತು 71ರಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಸೇರ್ಪಡೆಯಾದರು. ಇವರ ನಿರ್ಭೀತ ಪತ್ರಿಕೋದ್ಯಮ ಸೇವೆಗಾಗಿ ಹಲವಾರು ಪ್ರಶಸ್ತಿಗಳು ಬಂದಿವೆ. ದೆಹಲಿಯಲ್ಲಿ ದಕ್ಷಿಣ ರಾಜ್ಯಗಳ ಹಕ್ಕುಗಳ ಪರವಾದ ಧ್ವನಿ ಎತ್ತಿದ್ದಾರೆ.
ಇವರ ವಾಟ್ ಎಲ್ಸ್ ಇಂಡಿಯನ್ ಪಾರ್ಲಿಮೆಂಟ್ ಎಂಬ ಪುಸ್ತಕವನ್ನು ಭಾರತೀಯ ಸಂಸತ್ತು ಮತ್ತು ಭಾರತೀಯ ಸಂಸದರ ಕಾರ್ಯವೈಖರಿ ಕುರಿತ ಅಧಿಕೃತ ಪುಸ್ತಕ ಎಂದು ಪರಿಗಣಿಸಲಾಗಿದೆ. ಇವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ 2014 ರಿಂದ 2017ರ ವರೆಗೆ ಪ್ರಸಾರ ಭಾರತಿ ಅಧ್ಯಕ್ಷರಾಗಿ ನೇಮಕ ಮಾಡಿತು. ಮತ್ತೊಮ್ಮೆ 2017ರಿಂದ ಎರಡನೇ ಅವಧಿಗೆ ಅದೇ ಹುದ್ದೆಯಲ್ಲಿ ಮುಂದುವರಿಸಿದೆ. ಈ ಮೂಲಕ ಪ್ರಸಾರ ಭಾರತಿಯಲ್ಲಿ 2ನೇ ಬಾರಿಗೆ ನೇಮಕಗೊಂಡ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಜ.31ರಂದು ಬೆಳಗ್ಗೆ 9ಕ್ಕೆ ಕ್ರೀಡಾಂಗಣದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ರಾಮಸ್ವಾಮಿ, ತಹಸೀಲ್ದಾರ್ ರೇಣುಕುಮಾರ್, ಕಸಾಪ ಅಧ್ಯಕ್ಷ ವಿಷ್ಣುಪ್ರಕಾಶ್ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್ ಉದ್ಘಾಟಿಸುವರು. ಸ್ಥಳಿಯ ಮಟ್ಟದ ಅಧಿಕಾರಿಗಳು,ಗಣ್ಯರು ಭಾಗವಹಿಸುವರು.
ಮಧ್ಯಾಹ್ನ3ಕ್ಕೆ ಜಾನಪದ ಕಲಾ ತಂಡಗಳೊಂದಿಗೆ ಅಲಂಕೃತ ರಥದಲ್ಲಿ ಸಮ್ಮೇಳನಾಧ್ಯಕ್ಷರು ಹಾಗೂ ಭುವನೇಶ್ವರಿ ಭವ್ಯ ಮೆರವಣಿಗೆಗೆ ಸಮಾಜ ಸೇವಕ ಕೃಷ್ಣೇಗೌಡ ಚಾಲನೆ ನೀಡುವರು. ಜಿಲ್ಲಾಧಿಕಾರಿ ಗಿರೀಶ್, ಎಸ್ಪಿ ಡಾ.ರಾಮ್‌ನಿವಾಸ್ ಸೆಪಟ್, ಎಸಿ ಗಿರೀಶ್ ನಂದನ್ ಇತರೆ ಅಧಿಕಾರಿಗಳು ಭಾಗವಹಿಸುವರು. ಸಂಜೆ 5ಕ್ಕೆ ಜರುಗುವ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಖ್ಯಾತ ಸಾಹಿತಿ ಹಂ.ಪ.ನಾಗರಾಜಯ್ಯ ನೆರವೇರಿಸುವರು. ಅಧ್ಯಕ್ಷತೆ ಶಾಸಕ ರಾಮಸ್ವಾಮಿ, ಜಿಲ್ಲಾ ಸಚಿವ ಮಾಧುಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಸಚಿವ ಎ.ಮಂಜು ಉಪಸ್ಥಿತರಿರುವರು.