Wednesday, 12th December 2018  

Vijayavani

ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -ಕೈಗೆ ಬೆಂಬಲ ಘೋಷಿಸಿದ ಮಾಯಾವತಿ -ಶಾಸಕಾಂಗ ಪಕ್ಷದ ಸಭೆ ಕರೆದ ಕಾಂಗ್ರೆಸ್        ಪಾನ್ ಬ್ರೋಕರ್ ಡೀಲ್ ಪ್ರಕರಣದ ತನಿಖೆ ಚುರುಕು -ಸಹಕಾರ ಇಲಾಖೆಯಿಂದ ನೋಟಿಸ್ -ಇದು ದಿಗ್ವಿಜಯ ನ್ಯೂಸ್ ವರದಿ ಫಲಶ್ರುತಿ        ಋಣ ಸಂದಾಯಕ್ಕೆ ಮುಂದಾದ ರಾಮಲಿಂಗಾರೆಡ್ಡಿ -ಬಿಜೆಪಿ ಕಾರ್ಪೋರೇಟರ್ ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಪಟ್ಟ -ಪುತ್ರಿ ಗೆಲುವಿಗೆ ಸಹಕರಿಸಿದ್ದಕ್ಕೆ ಗಿಫ್ಟ್        ಸರ್ಕಾರದ ವಿರುದ್ಧ ಇಂದು ಬರಾಸ್ತ್ರ -ಸಿಎಂಗೆ ಬಿಸಿ ಮುಟ್ಟಿಸಲು ಬಿಎಸ್‌ವೈ ರಣತಂತ್ರ -ಅತ್ತ ಭದ್ರತೆಗೆ ಬಂದ ಎಸ್ಪಿಗೆ ಕೈಕೊಟ್ಟ ಕಾರು        ಕಿಡ್ನಾಪರ್ಸ್ ಹಿಡಿಯಲು ಪ್ರೇಮಿಗಳ ವೇಷ -ಆಂಧ್ರಕ್ಕೆ ಆಗಿ ಹೋದ ಪೊಲೀಸರು -ಶಿವಾಜಿನಗರ ಠಾಣೆ ಪೊಲೀಸರಿಂದ ಕಿರಾತಕರಿಗೆ ಕೋಳ        ಮುಂಬೈನಲ್ಲಿಂದು ಅಂಬಾನಿ ಮಗಳ ಅದ್ಧೂರಿ ವಿವಾಹ -ಹಿಲರಿ ಕ್ಲಿಂಟನ್ ಸೇರಿ ಗಣ್ಯಾತಿಗಣ್ಯರು ಭಾಗಿ - ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್, ಐಂದ್ರಿತಾ ಮದುವೆ ಸಂಭ್ರಮ       
Breaking News

ಕನ್ನಡದ ಅಭಿಮಾನ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆ

Sunday, 29.10.2017, 3:05 AM       No Comments

ಕನ್ನಡದ ಅಭಿವೃದ್ಧಿ, ಕರ್ನಾಟಕದ ಪ್ರಗತಿ ಯಾರೊಬ್ಬರಿಂದ ಸಾಧ್ಯವಿಲ್ಲ. ಹಾಗಾಗಬೇಕು, ಹೀಗಾಗಬೇಕು ಎಂದು ಹೇಳುತ್ತ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ನಾನೇನು ಮಾಡಬಹುದು ಎಂದು ನಾವೆಲ್ಲರೂ ಯೋಚಿಸಬೇಕಾದ ಕಾಲ ಈಗ ಬಂದಿದೆ. ಸಾಹಿತಿಗಳು, ವಿಜ್ಞಾನಿಗಳು, ಮಾಧ್ಯಮದವರು, ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ವಿುಕ ಗುರುಗಳು, ಮುಖ್ಯವಾಗಿ ಜನಸಾಮಾನ್ಯರು ತಮ್ಮ ತಮ್ಮ ಪಾಲಿನ ನಾಡು-ನುಡಿ ಕಟ್ಟುವ ಕೆಲಸವನ್ನು ಪ್ರೀತಿಯಿಂದ ಮಾಡಲು ಸಂಕಲ್ಪ ಮಾಡಬೇಕು.

ನಮ್ಮ ರಾಷ್ಟ್ರೀಯ ಮಹತ್ವದ ದಿನಗಳನ್ನು ಹಬ್ಬಗಳಂತೆ ಆಚರಿಸುವ ಮನೋಭಾವ ನಮ್ಮಲ್ಲಿನ್ನೂ ಬೆಳೆದಂತೆ ತೋರುವುದಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನೋತ್ಸವ ಮೊದಲಾದವುಗಳನ್ನು ಜನಸಮುದಾಯ ಸ್ವಯಂಪ್ರೇರಣೆಯಿಂದ ನಮ್ಮ ಧಾರ್ವಿುಕ ಹಬ್ಬಗಳಂತೆ ಆಚರಿಸುವುದನ್ನು ನಾನು ಕಂಡಿಲ್ಲ. ಇವಿನ್ನೂ ಸರ್ಕಾರಿ ಆಚರಣೆಗಳೇ! ಬಲವಂತದ ಮಾಘಸ್ನಾನವೇ! ಕನ್ನಡ ರಾಜ್ಯೋತ್ಸವವೂ ಇದೇ ಬಗೆಯದಾದರೂ ಕೊಂಚ ಭಿನ್ನ. ಇಲ್ಲಿ ವ್ಯಾವಹಾರಿಕ ಜಾಣ್ಮೆಯೂ ಕೆಲಸ ಮಾಡುತ್ತದೆ. ಹೇಳೀ ಕೇಳೀ ಇದು ‘ವ್ಯಾಪಾರಿ ಯುಗವಲ್ಲವೇ!’. ಎಲ್ಲವೂ ಮಾರಾಟದ ಸರಕುಗಳೇ- ಭಾಷೆ, ಭಾವನೆ, ಬುದ್ಧಿ, ಬಂಧುತ್ವ, ದೇವರು, ಧರ್ಮ ಎಲ್ಲವೂ…

ಸಂದರ್ಭವನ್ನು ಅವಲಂಬಿಸಿರುವ ಅಭಿಮಾನ: ನನ್ನದು ಎಂಬ ಭಾವ ಅಭಿಮಾನಕ್ಕೆ, ಹೆಮ್ಮೆಗೆ ಕಾರಣವಾಗುವುದು ಮನುಷ್ಯ ಸಹಜವಾದುದು. ಇದು ತಪ್ಪಲ್ಲ. ಅಡಿಗರು ಹೇಳುವ ಹಾಗೆ ಅಭಿಮಾನವೆನ್ನುವುದು ತನಗೆ ತಾನೇ ಒಳ್ಳೆಯದೂ ಅಲ್ಲ, ಕೆಟ್ಟದ್ದೂ ಅಲ್ಲ. ಅದು ಆಯಾಯ ಸಂದರ್ಭವನ್ನು ಅವಲಂಬಿಸಿರುತ್ತದೆ. ಸ್ವಾಭಿಮಾನ, ದುರಭಿಮಾನ ಎಂಬ ಪದಗಳ ಬಳಕೆಯಲ್ಲಿ ಇವುಗಳ ವ್ಯತ್ಯಾಸವನ್ನು ನಾವು ಕಾಣಬಹುದು. ಅಭಿಮಾನ ಆತ್ಮಗೌರವದ, ಆತ್ಮವಿಶ್ವಾಸದ ಕುರುಹಾಗಿ ವ್ಯಕ್ತಿಯ, ಸಮಾಜದ ಅಭ್ಯುದಯಕ್ಕೆ ಅಗತ್ಯವಾದ ಆತ್ಮಸತ್ವವಾಗಿ ರೂಪುಗೊಳ್ಳ ಬಹುದು. ಕೆಲವೊಮ್ಮೆ ಇದೇ ಅತಿರೇಕಕ್ಕೆ ಹೋಗಿ ತಾನೇ ಸರಿ, ತನ್ನನ್ನು ಬಿಟ್ಟರೆ ಇಲ್ಲ ಎಂಬ ಭಾವ ಬಿತ್ತಿ ಸರ್ವಾಧಿಕಾರಿ ಮನೋಭಾವಕ್ಕೂ, ತನ್ನದಲ್ಲದ ಎಲ್ಲವನ್ನೂ ಧಿಕ್ಕರಿಸುವ, ಕೀಳಾಗಿ ಕಾಣುವ ಅಸಹಿಷ್ಣುತೆಗೂ ಕಾರಣವಾಗಬಹುದು. ಇದರ ಇನ್ನೊಂದು ರೂಪವೆಂದರೆ ನಿರಭಿಮಾನ. ಇದು ಮೇಲ್ನೋಟಕ್ಕೆ ವಿನಯದಂತೆ ಭಾಸವಾದರೂ ಏನನ್ನಾದರೂ ತಾಳಿಕೊಳ್ಳುವ ದೈನ್ಯಸ್ಥಿತಿಗೆ ನಮ್ಮನ್ನು ತಳ್ಳಿಬಿಡಬಹುದು. ಈ ಯಾವುದೂ ಅತಿರೇಕಕ್ಕೆ ಹೋಗದ ಹಾಗೆ ಸಮತೋಲನ ಸಾಧಿಸಿದಾಗ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಕನ್ನಡದ ಅಭಿಮಾನವನ್ನು ನಾವು ಹೀಗೆ ಎಚ್ಚರದಿಂದ ರೂಪಿಸಿಕೊಳ್ಳಬೇಕಾಗಿದೆ. ಆದರೆ ಇದೇನೂ ನಮಗೆ ಹೊಸದಲ್ಲ. ನಮ್ಮ ಹಾಗೆ ಅಂದರೆ ಕನ್ನಡಿಗರ ಹಾಗೆ ಸಹಿಷ್ಣುತೆಯನ್ನು ಬಹುಶಃ ಭಾರತದ ಬೇರೆ ಯಾವ ರಾಜ್ಯವೂ ಪ್ರಕಟಿಸಿದಂತೆ ತೋರುವುದಿಲ್ಲ. ‘ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಪರಧರ್ಮಮುಮಂ’ ಎಂಬ ಕವಿರಾಜಮಾರ್ಗ ಕಾಲದ ವಿವೇಕವನ್ನು ಇದುವರೆಗೂ ಎಚ್ಚರದಿಂದಲೇ ಪಾಲಿಸಿಕೊಂಡು ಬಂದಿದ್ದೇವೆ. ಆದರೆ ಈ ವಿವೇಕವನ್ನು ಮಂಕಾಗಿಸುವ ಇತ್ತೀಚಿನ ಕೆಲವರ ಪ್ರಯತ್ನಗಳ ಬಗ್ಗೆ ನಾವೀಗ ಜಾಗೃತರಾಗಬೇಕಾಗಿದೆಯಷ್ಟೆ!

ನಾವು ಎದುರಿಸುತ್ತಿರುವ ಬಹುಮುಖ್ಯ ಸಮಸ್ಯೆಯೆಂದರೆ- ಸಮಗ್ರ ಪರಿಕಲ್ಪನೆಯ ಕೊರತೆ. ಕರ್ನಾಟಕವೆಂದರೆ ನಾವು ವಾಸಿಸುವಷ್ಟು ಭೂಪ್ರದೇಶ ಮಾತ್ರವಲ್ಲ ಎಂಬ ಅರಿವು ಆಡಳಿತದ ಹೊಣೆ ಹೊತ್ತವರಿಗಾದರೂ ಇರಬೇಕು. ಬೆಂಗಳೂರಿನಿಂದ ಬೀದರಿನವರೆಗೆ ಹಬ್ಬಿರುವ ವಿಸ್ತಾರವಾದ ಕನ್ನಡನಾಡು ವಿಭಿನ್ನ ಸಂಸ್ಕೃತಿಗಳ, ವೈವಿಧ್ಯಮಯ ಭೂವಲಯವನ್ನೊಳಗೊಂಡ ಸಂಪದ್ಭರಿತ ರಾಜ್ಯ. ಯಾವುದೇ ಒಂದು ಪ್ರದೇಶಕ್ಕೆ ನೀಡುವ ಒತ್ತು ವಿಕಾರ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಈಗ ಆಗಿರುವುದೂ ಅದೇ. ಬೆಂಗಳೂರು ಬೆಳವಣಿಗೆಯ ಭಾರವನ್ನು ಹೊರಲಾರದೆ ನರಳುತ್ತಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳು ನಿಕೃಷ್ಟ ಭಾವಕ್ಕೊಳಗಾಗಿ ಕೆರಳುತ್ತಿವೆ. ನಾಡಿನ ಸಂಪತ್ತು ಸಮಾನ ರೀತಿಯಲ್ಲಿ ಎಲ್ಲ ಪ್ರದೇಶಗಳಿಗೂ ಹಂಚಿಕೆಯಾಗುವುದು ಸಾಧ್ಯವಾದರೆ ಅಸಮಾನತೆಯ ಕೂಗು ಸಹಜವಾಗಿಯೇ ಮಾಯವಾಗುತ್ತದೆ. ಇದು ಪ್ರದೇಶಕ್ಕೆ ಮಾತ್ರವಲ್ಲ ಸಮುದಾಯಗಳಿಗೂ ಅನ್ವಯಿಸುತ್ತದೆ. ಯಾರಿಗೋ ನೀಡುವ ಒತ್ತು ಮತ್ತೆ ಯಾರಿಗೋ ಕುತ್ತು ತರಬಹುದು. ಸಹಬಾಳ್ವೆಯ ಪರಿಕಲ್ಪನೆ ಸಾಕಾರಗೊಳ್ಳುವುದು ಸಮಗ್ರ ನೋಟವಿದ್ದಾಗ ಮಾತ್ರ. ಇದಕ್ಕೆ ದೂರದೃಷ್ಟಿ ಬೇಕು. ಕೇವಲ ಸಾಂರ್ದಭಿಕ ಯೋಜನೆಗಳು ದೀರ್ಘಕಾಲೀನ ಸಂಕಟಗಳನ್ನು ಪರಿಹರಿಸಲಾರವು.

ಸರ್ವಾಧಿಕಾರಿ ಶಕ್ತಿಗೆ ಆಹ್ವಾನ: ಇದು ದೇಶಕ್ಕೆ ಮಾತ್ರವಲ್ಲ, ನಮ್ಮ ಬದುಕಿಗೂ ಅನ್ವಯಿಸುತ್ತದೆ. ನಮ್ಮ ಕಾಲದ ದುರಂತವೆಂದರೆ ರಾಜಕೀಯಕ್ಕೆ ಸಿಕ್ಕಿರುವ ಅತಿಯಾದ ಪ್ರಾಮುಖ್ಯ. ಇದು ಸಹ ಸಮಾಜದ ವಿಕಾರ ಬೆಳವಣಿಗೆಗೆ ಪ್ರಮುಖ ಕಾರಣವಾಗಿದೆ. ನಾವು ಈಗ ನಮ್ಮೆಲ್ಲ ಸಮಸ್ಯೆಗಳಿಗೂ ರಾಜಕೀಯವಾಗಿಯೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಇದು ಸಾಧ್ಯವೇ? ಹೀಗೆ ಯೋಚಿಸುವುದು ಸಾಧುವೇ? ಭಾರತವೆಂದರೆ, ಕರ್ನಾಟಕವೆಂದರೆ ರಾಜಕೀಯ ವಲಯಕ್ಕೆ ಮಾತ್ರ ಸೀಮಿತವಾದುದೇ? ನಮ್ಮ ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಸೂಚಿಸಬಲ್ಲ ಸರ್ವಶಕ್ತ ಸಂಪನ್ನರೇ? ಅವರು ಹಾಗೆ ಭಾವಿಸಿದ್ದಾರೋ ಇಲ್ಲವೋ, ಸಮಾಜ ಹಾಗೆ ಭಾವಿಸಿರುವಂತೆ ತೋರುತ್ತಿದೆ. ಸಂಸ್ಕೃತಿ, ಕಲೆ, ಧರ್ಮ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಅರಣ್ಯ, ಖನಿಜ, ರಕ್ಷಣೆ ಎಲ್ಲವನ್ನೂ ಅವರ ಸುಪರ್ದಿಗೆ ಒಪ್ಪಿಸಿ ನಾವು ಅವರೆದುರು ಶರಣಾದಂತೆ ತೋರುವ ಸ್ಥಿತಿ ನಿರ್ವಣವಾಗಿದೆ ಅನ್ನಿಸುತ್ತಿಲ್ಲವೇ? ಯಾವ ಸಮಾಜದಲ್ಲಿ ಇಂತಹ ಸ್ಥಿತಿ ನಿರ್ವಣವಾಗುತ್ತದೋ ಅದು ನಿಸ್ಸಂದೇಹವಾಗಿ ಸರ್ವಾಧಿಕಾರಿ ಶಕ್ತಿಗೆ ಆಹ್ವಾನ ನೀಡಿದಂತೆಯೇ ಎಂಬುದನ್ನು ಇತಿಹಾಸ ಹೇಳುತ್ತದೆ.

19ನೇ ಶತಮಾನದ ಐರೋಪ್ಯ ಸಮಾಜವನ್ನು ಮ್ಯಾಥ್ಯೂ ಆರ್ನಾಲ್ಡ್ ವ್ಯಾಖ್ಯಾನಿಸುತ್ತಾ- ಅದು ಹೆಬ್ರಾಯಿಕ್, ಹೆಲೆನಿಕ್ ಎರಡೂ ಆಗಿತ್ತೆಂದು ಹೇಳುತ್ತಾನೆ. ಹೆಬ್ರಾಯಿಕ್ ಎಂದರೆ ಧಾರ್ವಿುಕವಾದುದು. ಹೆಲೆನಿಕ್ ಎಂದರೆ ಸಾಂಸ್ಕೃತಿಕವಾದುದು. ಧರ್ಮ ಪ್ರಾಬಲ್ಯ ಪಡೆಯಲು ಪ್ರಯತ್ನಿಸಿದಾಗ ಸಂಸ್ಕೃತಿ ಅದನ್ನು ನಿಯಂತ್ರಿಸುತ್ತಿತ್ತು. ಹಾಗೆಯೇ ಸಂಸ್ಕೃತಿ ಅತಿರೇಕಕ್ಕೆ ಹೋದಾಗ ಧರ್ಮ ಅಲ್ಲಿ ಪ್ರವೇಶಿಸುತ್ತಿತ್ತು ಎಂದು ವಿವರಿಸುತ್ತಾನೆ. ನಿಯಂತ್ರಣವಿಲ್ಲದ ಸ್ಥಿತಿ ಅರಾಜಕತೆಗೆ, ಸರ್ವಾಧಿ ಕಾರಕ್ಕೆ ಅವಕಾಶ ಕಲ್ಪಿಸುತ್ತದೆ.

ಇಲ್ಲಿಯೇ ನಮಗೆ ಗಾಂಧಿ ಮುಖ್ಯವಾಗುವುದು. ಬ್ರಿಟಿಷರ ವಿರುದ್ಧ ರಾಜಕೀಯವಾಗಿ ಹೋರಾಡುತ್ತಲೇ ಗಾಂಧಿ ಭಾರತೀಯ ಸಮಾಜದಲ್ಲಿ ಅಸ್ಪ ೃಶ್ಯತೆಯನ್ನು ಹೋಗಲಾಡಿಸುವ ಬಗ್ಗೆ, ಹಿಂದೂ-ಮುಸ್ಲಿಂ ಐಕ್ಯತೆಯ ಬಗ್ಗೆ, ಗೃಹ ಕೈಗಾರಿಕೆಯಾದ ಚರಕದ ಬಗ್ಗೆ ಏಕಕಾಲದಲ್ಲಿ ಯೋಚಿಸುತ್ತಿದ್ದರು. ರಾಜಕೀಯ ಹೋರಾಟದಲ್ಲಿ ಗಾಂಧಿ ಸಂಸ್ಕೃತಿ, ಧರ್ಮ, ವಿಜ್ಞಾನ ಇವುಗಳನ್ನು ಕಡೆಗಣಿಸಲಿಲ್ಲ. ಸಮಾನ ಆಸಕ್ತಿಯಿಂದ ಅವುಗಳ ಬಗ್ಗೆ ಚಿಂತಿಸುತ್ತಿದ್ದರು. ಜನಸಮುದಾಯದ ಬದುಕಿನಲ್ಲಿ ಅವುಗಳ ಪಾತ್ರವೂ ಮಹತ್ವದ್ದೆಂದು ಅವರು ನಂಬಿದ್ದರು. ರಾಷ್ಟ್ರನಿರ್ವಣವೆಂದರೆ ಕಡೆಗೂ ಮಾನವ ಸಮುದಾಯದ ಅಭ್ಯುದಯ ತಾನೇ! ಅದು ಸಾಧ್ಯವಾಗುವುದು ಸಮಗ್ರ ಬೆಳವಣಿಗೆಯ ಮೂಲಕ ಮಾತ್ರ.

ಉದ್ಯಮಸ್ವರೂಪ ತಳೆದಿರುವ ಧರ್ಮ: ಆರೋಗ್ಯಕರ ಸಮಾಜ ನಿರ್ವಣದಲ್ಲಿ ಸಂಸ್ಕೃತಿ, ಧರ್ಮ ಹಾಗೂ ವಿಜ್ಞಾನ ಇವುಗಳ ಪಾತ್ರ ರಾಜಕೀಯದಷ್ಟೇ ಮಹತ್ವವಾದುದು. ಆದರೆ ಈಗ ಇವು ಮೂರೂ ವಲಯಗಳೂ ರಾಜಕೀಯಕ್ಕೆ ಶರಣಾಗಿರುವಂತೆ ತೋರುತ್ತಿದೆ. ಅಥವಾ ರಾಜಕೀಯ ಇವುಗಳ ಶಕ್ತಿಹರಣ ಮಾಡಿದಂತೆ ಕಾಣಿಸುತ್ತಿದೆ. ಧರ್ಮ ಈಗ ತನ್ನ ಆಧ್ಯಾತ್ಮಿಕ ಹಸಿವನ್ನು ಕಳೆದುಕೊಂಡು ಉದ್ಯಮದ ರೂಪ ತಾಳಿದೆ. ಸಂಸ್ಕೃತಿಯೂ ತನ್ನ ಜೀವಂತಿಕೆಯನ್ನು ಕಳೆದುಕೊಂಡು ವ್ಯಾಪಾರದ ಸರಕಾಗಿಬಿಟ್ಟಿದೆ. ರಿಚರ್ಡ್ಸ್ ಬಹಳ ಹಿಂದೆಯೇ ಇದನ್ನು ಗುರ್ತಿಸಿದ್ದ. ಒಮ್ಮೆ ಧರ್ಮವಾಗಲೀ ಸಂಸ್ಕೃತಿಯಾಗಲೀ ಹೀಗೆ ತಮ್ಮ ಸ್ವಾಯತ್ತ ಶಕ್ತಿಯನ್ನು ಕಳೆದುಕೊಂಡು ಉದ್ಯಮವಾಗಿ ರೂಪಾಂತರ ಹೊಂದಿದ ನಂತರ ಅವುಗಳು ತಮ್ಮ ಉಳಿವಿಗಾಗಿ ರಾಜಕೀಯವನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ವಿಜ್ಞಾನವನ್ನು ಹಿಂದಿಕ್ಕಿ ತಂತ್ರಜ್ಞಾನ ಮುನ್ನೆಲೆಗೆ ಬಂದ ಮೇಲೆ ಅದೂ ಉದ್ಯಮವಾಗಿ ರೂಪಾಂತರ ಹೊಂದಿತು. ಪ್ರಭುತ್ವದ ಬೆಂಬಲವಿಲ್ಲದೆ ಯಾವುದೇ ಉದ್ಯಮ ಉಳಿಯುವುದು ಕಷ್ಟ. ಉದ್ಯಮವೆಂದರೆ ವ್ಯವಹಾರ. ಕೊಡು-ಕೊಳ್ಳುವಿಕೆ ಇದರ ಧರ್ಮ. ರಾಜಕೀಯ, ಧರ್ಮ, ಸಂಸ್ಕೃತಿ, ವಿಜ್ಞಾನ ಇವುಗಳ ನಡುವೆ ಈಗ ಕೊಡು-ಕೊಳ್ಳುವಿಕೆಯ ಹೊಂದಾಣಿಕೆಯಿದೆ. ಸಮಾಜದ ನೈತಿಕ ಶಕ್ತಿಮೂಲಗಳೇ ಹೀಗೆ ಪ್ರಭುತ್ವಕ್ಕೆ ಶರಣಾದ ಸ್ಥಿತಿಯಲ್ಲಿ ಪ್ರಗತಿಪರ ಚಿಂತನೆಗೆ ಅವಕಾಶವಾದರೂ ಎಲ್ಲಿ?

ಕನ್ನಡ ಪರಂಪರೆಯಲ್ಲಿ ಇಂತಹ ಸ್ಥಿತಿ ಇದೇ ಮೊದಲಲ್ಲ. ಈ ಮೊದಲು ನಮ್ಮ ಸಂವೇದನಾಶೀಲ ಪ್ರತಿಭಾವಂತ ಮನಸ್ಸುಗಳು ಇದನ್ನು ಎದುರಿಸಿರುವ ಬಗೆಯನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಪ್ರಭುತ್ವ ಮತ್ತು ಸೃಜನಶೀಲತೆಯ ಸಂಬಂಧವನ್ನು ಪಂಪ ಎದುರಿಸಿದ ರೀತಿ ಈಗಲೂ ನಮಗೆ ಮಾದರಿ ಒದಗಿಸುತ್ತದೆ. ಅರಿಕೇಸರಿಯ ಆಸ್ಥಾನದಲ್ಲಿ ಎಲ್ಲ ಬಗೆಯ ಮನ್ನಣೆಗಳಿಗೆ ಪಾತ್ರನಾಗಿದ್ದ ಪಂಪ ಅರಿಕೇಸರಿಯನ್ನು ಅರ್ಜುನನೊಡನೆ ಸಮೀಕರಿಸಿ ‘ವಿಕ್ರಮಾರ್ಜುನ ವಿಜಯ’ ಬರೆಯತೊಡಗುತ್ತಾನೆ. ಹೆಸರೇ ಸೂಚಿಸುವ ಹಾಗೆ ಇದು ಅರ್ಜುನನ ಅಂದರೆ ಅರಿಕೇಸರಿಯ ವೈಭವೀಕರಣದ ಕತೆ. ಆದರೆ ಪಂಪ ತನ್ನ ಸೃಜನಶೀಲ ಕ್ಷಣಗಳಲ್ಲಿ ಪ್ರಭುತ್ವದ ಹಂಗು ತೊರೆದು ‘ನೆನೆಯದಿರಣ್ಣ ಭಾರತದೊಳಿಂ ಪೆರರಾರುಮನ್, ನೆನೆವೊಡೆ ಕರ್ಣನಂ ನೆನೆಯ…’ ಎಂದು ‘ವಿಕ್ರಮಾರ್ಜುನ ವಿಜಯ’ವನ್ನು ‘ಕರ್ಣ ರಸಾಯನ’ವನ್ನಾಗಿ ರೂಪಾಂತರಿಸುತ್ತಾನೆ. ಇದು ಪ್ರಭುತ್ವದ ಎದುರು ಸೃಜನಶೀಲತೆಯ ಗೆಲುವು.

ಧರ್ಮವು ರಾಜಕೀಯ ದಾಳವಾಗಬಾರದು: ಕನಕದಾಸರ ‘ರಾಮಧಾನ್ಯ ಚರಿತೆ’ ಪ್ರಭುತ್ವ ಹಾಗೂ ಧರ್ಮ ಜನಮುಖಿಯಾಗಬೇಕಾದ ಕ್ರಮವನ್ನು ಹೇಳುವ ಅಪರೂಪದ ಕೃತಿ. ಅಕ್ಕಿ ಹಾಗೂ ರಾಗಿಯ ಜಗಳದ ಕತೆಯಾದ ಇದರಲ್ಲಿ ಪುರುಷೋತ್ತಮನಾದ ರಾಮ ಕಡೆಗೆ ಸಾಮಾನ್ಯ ಜನರ ಪ್ರತಿನಿಧಿಯಾದ ರಾಗಿಯ ಪರ ನಿಂತು ‘ನರೆದಲಗ’ ಎಂಬ ಹೆಸರಿನ ಧಾನ್ಯವನ್ನು ತನ್ನ ಹೆಸರುಗಳಲ್ಲಿ ಒಂದಾದ ‘ರಾಘವ’ ಎಂಬುದಾಗಿ ಕರೆಯುತ್ತಾನೆ. ಅದೇ ಮುಂದೆ ‘ರಾಗಿ’ ಎಂದಾಗುತ್ತದೆ. ಉಳ್ಳವರು ಹಾಗೂ ಸಾಮಾನ್ಯರ ನಡುವಿನ ಸಂಘರ್ಷದಲ್ಲಿ ಧರ್ಮ ಹಿಡಿಯಬೇಕಾದ ಹಾದಿಯನ್ನು ಕನಕದಾಸರು ಇಲ್ಲಿ ತೋರಿಸಿದ್ದಾರೆ. ನಮ್ಮ ಈಗಿನ ಧಾರ್ವಿುಕಗುರುಗಳಿಗೆ ಇದು ಪ್ರೇರಣೆ ಒದಗಿಸಬಲ್ಲುದು. ಧರ್ಮ ಈಗಲೂ ನಮ್ಮ ಸಾಮಾಜಿಕ ಬದುಕಿನಲ್ಲಿ ತನ್ನ ಮಹತ್ವ ಉಳಿಸಿಕೊಂಡಿದೆ. ಆದರೆ ಅದು ಬಳಕೆಯಾಗುತ್ತಿರುವ ರೀತಿ ಮಾತ್ರ ಆತಂಕ ಹುಟ್ಟಿಸುತ್ತಿದೆ. ಧರ್ಮ ತನ್ನ ಸ್ವಾಯತ್ತತೆಯನ್ನು ಕಾಪಾಡಿಕೊಂಡು, ರಾಜಕೀಯ ದಾಳವಾಗದೆ, ಪ್ರಭುತ್ವವನ್ನು ಓಲೈಸುವ ಬದಲು ಜನೋಪಯೋಗಿ ಯೋಜನೆಗಳತ್ತ ಗಮನ ಹರಿಸಿದರೆ ಕರ್ನಾಟಕ ಅಭಿವೃದ್ಧಿಯ ಪಥದಲ್ಲಿ ಸಾಗುವುದರಲ್ಲಿ ಅನುಮಾನವೇ ಇಲ್ಲ. ಅಂತಹ ಮಾದರಿ ಧರ್ಮಗುರುಗಳು ಇಲ್ಲವೆಂದಲ್ಲ. ಅವರ ಸಂಖ್ಯೆ ಜಾಸ್ತಿಯಾಗಬೇಕಷ್ಟೆ! ಬಹುಪಾಲು ಧರ್ಮಗುರುಗಳನ್ನು ಕಂಡಾಗ ಕಾವಿಗೂ ಖಾದಿಗೂ ಅಂತಹ ವ್ಯತ್ಯಾಸ ಕಾಣಿಸದು.

ಪ್ರಕೃತಿಯ ಜತೆಗೆ ಶೋಷಣಾತ್ಮಕ ಸಂಬಂಧ ಮಾತ್ರ ಉಳ್ಳ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಆತ್ಮನಿಷೇಧವೇ ಇರದ ಭೋಗಸಂಸ್ಕೃತಿ ಪಶ್ಚಿಮದಿಂದ ನಮಗೆ ಬಂದ ಕೊಡುಗೆಗಳು. ವಸಾಹತೀಕರಣದ ಸಂದರ್ಭದಲ್ಲಿ ಆರಂಭವಾದ ಇವುಗಳ ಬಗೆಗಿನ ಮೋಹ ಜಾಗತೀಕರಣದ ನಂತರ ಅತಿರೇಕ ತಲುಪಿದಂತೆ ತೋರುತ್ತಿದೆ. ಇದರಿಂದ ಪಾರಾಗದೆ ಸಮಗ್ರ ಅಭಿವೃದ್ಧಿಯ ಕನಸು ಸಾಧ್ಯವಾಗದು. ಇದಕ್ಕಿರುವ ದಾರಿ ಮತ್ತೆ ನಾವು ದೇಸೀ ಸಂಸ್ಕೃತಿಯ ಕಡೆಗೆ ಮುಖ ಮಾಡುವುದು. ಕನ್ನಡ ಪರಂಪರೆಯಲ್ಲಿ ಇಂತಹ ‘ಮಾರ್ಗ’ದ ವಿರುದ್ಧ ‘ದೇಸಿ’ ಸತ್ವ ಮತ್ತೆ ಮತ್ತೆ ಸೆಣಸಿದೆ. 12ನೆಯ ಶತಮಾನ ಈ ದೃಷ್ಟಿಯಿಂದ ಕನ್ನಡ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಘಟ್ಟ. ವಚನಗಳ ಅಧ್ಯಯನ ನಮಗೆ ಈಗ ಅನೇಕ ನೆಲೆಗಳಲ್ಲಿ ಅತ್ಯಗತ್ಯ. ಒಂದು ಸಣ್ಣ ನಿದರ್ಶನ ನೀಡುವುದಾದರೆ- ಕನ್ನಡ ಭಾಷೆ ಆಡುನುಡಿ ಮಾತ್ರ. ಅದಕ್ಕೆ ಉನ್ನತ ಅನುಭಾವಿ ವಿಚಾರಗಳನ್ನು, ಧಾರ್ವಿುಕ ಸಂಗತಿಗಳನ್ನು ಅಭಿವ್ಯಕ್ತಿಸುವ ಶಕ್ತಿ ಇಲ್ಲ ಎಂದು ಭಾವಿಸಲಾಗಿತ್ತು. ಸರಳವಾಗಿ ಹೇಳುವುದಾದರೆ ದೇವರೊಡನೆ ಮಾತನಾಡಲು ಸಂಸ್ಕೃತದಲ್ಲಿ ಮಾತ್ರ ಸಾಧ್ಯ ಎಂಬ ನಂಬಿಕೆಯಿತ್ತು. ಈಗಲೂ ನಮ್ಮ ಮಂತ್ರಗಳೆಲ್ಲ ಸಂಸ್ಕೃತದಲ್ಲಿಯೇ ಇರುವುದನ್ನು ಗಮನಿಸಬೇಕು. ಅಂತಹ ಹೊತ್ತಿನಲ್ಲಿ ಕನ್ನಡಕ್ಕೂ ಅಂತಹ ಶಕ್ತಿಯಿದೆ ಎಂದು ಶರಣರು ತೋರಿಸಿಕೊಟ್ಟರು. ‘ದಯೆಯಿಲ್ಲದ ಧರ್ಮವಾವುದಯ್ಯಾ?’ ಎಂಬ ಮಾತು ಧರ್ಮದ ಸಾರರೂಪೀ ಹೇಳಿಕೆ. ಜಗತ್ತಿನ ಯಾವುದೇ ಭಾಷೆಯಲ್ಲಾದರೂ ಧರ್ಮದ ಸಾರವನ್ನು ಇದಕ್ಕಿಂತ ಸರಳವಾಗಿ, ಇಷ್ಟು ಪರಿಣಾಮಕಾರಿಯಾಗಿ ಹೇಳಿರುವುದು ಅತಿ ವಿರಳ. ಈಗ ಇಂಥದೇ ಇನ್ನೊಂದು ಭ್ರಮೆಯಲ್ಲಿ ನಾವಿದ್ದೇವೆ. ಅದೆಂದರೆ ವಿಜ್ಞಾನ, ತಂತ್ರಜ್ಞಾನವನ್ನು ಕನ್ನಡದಲ್ಲಿ ಹೇಳುವುದು ಕಷ್ಟ ಎಂಬುದು ಕೆಲವರ ಅಭಿಮತ. ಆದರೆ ಸಾವಿರ ವರ್ಷಗಳ ಇತಿಹಾಸವುಳ್ಳ ಕನ್ನಡಕ್ಕೆ ಆ ಶಕ್ತಿಯಿದೆ ಎಂಬುದನ್ನು ವಚನಕಾರರಂತೆ ನಮ್ಮ ಹೊಸ ತಲೆಮಾರಿನ ವಿಜ್ಞಾನದ ವಿದ್ಯಾರ್ಥಿಗಳು ತೋರಿಸಿಕೊಡಬೇಕಾಗಿದೆ. ಆಧುನಿಕ ಸವಾಲುಗಳಿಗೆ ಕನ್ನಡವನ್ನು ಸಜ್ಜುಗೊಳಿಸುವ ಕೈಂಕರ್ಯವನ್ನು ನಮ್ಮ ಯುವ ಪ್ರತಿಭಾವಂತ ಕನ್ನಡ ಮನಸ್ಸುಗಳು ಕೈಗೆತ್ತಿಕೊಳ್ಳಬೇಕಾಗಿದೆ. ವಿಜ್ಞಾನ ಬಲ್ಲವರಿಗೆ ಕನ್ನಡ ಭಾಷೆಯಲ್ಲಿ ಪ್ರಭುತ್ವವಿಲ್ಲ, ಕನ್ನಡ ಬಲ್ಲವರಿಗೆ ವಿಜ್ಞಾನ ಗೊತ್ತಿಲ್ಲ ಎಂಬ ಸ್ಥಿತಿಯಿದೆ. ಆದರೆ ಮೆಟ್ರಿಕ್ಯುಲೇಷನ್ ಮಾತ್ರ ಓದಿದ ಶಿವರಾಮ ಕಾರಂತರು ‘ವಿಜ್ಞಾನ ಪ್ರಪಂಚ’ ರಚಿಸಿದ ಉದಾಹರಣೆ ನಮ್ಮ ಕಣ್ಮುಂದಿದೆ. ನಮ್ಮ ಯುವಕರು ಮನಸ್ಸು ಮಾಡಿದರೆ ವಿಜ್ಞಾನದಲ್ಲಾಗಲೀ, ಕನ್ನಡ ಭಾಷೆಯಲ್ಲಾಗಲೀ ಪ್ರಭುತ್ವ ಪಡೆಯುವುದು ಅಸಾಧ್ಯವೇನಲ್ಲ. ಮನಸ್ಸು ಮಾಡಬೇಕಷ್ಟೆ!

ನೀತಿಯಿಷ್ಟೆ- ಕನ್ನಡದ ಅಭಿವೃದ್ಧಿ, ಕರ್ನಾಟಕದ ಪ್ರಗತಿ ಯಾರೊಬ್ಬರಿಂದ ಸಾಧ್ಯವಿಲ್ಲ. ಹಾಗಾಗಬೇಕು, ಹೀಗಾಗಬೇಕು ಎಂದು ಹೇಳುತ್ತ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ನಾನೇನು ಮಾಡಬಹುದು ಎಂದು ನಾವೆಲ್ಲರೂ ಯೋಚಿಸಬೇಕಾದ ಕಾಲ ಈಗ ಬಂದಿದೆ. ಎಲ್ಲ ಕ್ಷೇತ್ರಗಳ ಸಂವೇದನಾಶೀಲರೂ- ಸಾಹಿತಿಗಳು, ವಿಜ್ಞಾನಿಗಳು, ಮಾಧ್ಯಮದವರು, ಅಧಿಕಾರಿಗಳು, ಜನಪ್ರತಿನಿಧಿಗಳು, ಧಾರ್ವಿುಕ ಗುರುಗಳು, ಮುಖ್ಯವಾಗಿ ಜನಸಾಮಾನ್ಯರು ತಮ್ಮ ತಮ್ಮ ಪಾಲಿನ ನಾಡು-ನುಡಿ ಕಟ್ಟುವ ಕೆಲಸವನ್ನು ಪ್ರೀತಿಯಿಂದ ಮಾಡಲು ಸಂಕಲ್ಪ ಮಾಡಬೇಕು. ಅಂತಹ ವಾತಾವರಣವೊಂದನ್ನು ನಿರ್ಮಾಣ ಮಾಡುವತ್ತ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಆ ದಿಕ್ಕಿನ ಮೊದಲ ಸರಳ ಪ್ರಯತ್ನ ಕನ್ನಡ ಪರಿಸರವೊಂದನ್ನು ರೂಪಿಸುವುದು. ಅಂದರೆ ದಿನಬಳಕೆಯಲ್ಲಿ ಕನ್ನಡದ ಜತೆ ಒಡನಾಡುವುದು. ಇದು ಸಾಧ್ಯವಾಗುವುದು ತಂತ್ರಜ್ಞಾನದಲ್ಲಿ ಕನ್ನಡವನ್ನು ಬಳಸಲು ಸಜ್ಜುಗೊಳಿಸಿದಾಗ. ಆ ಕೆಲಸ ಈಗ ಅಗತ್ಯ ಆಗಬೇಕಾಗಿರುವಂಥದು. ಮತ್ತೊಂದು ನಮ್ಮ ಎಲ್ಲ ಹಿರಿಯರೂ ಹೇಳುತ್ತ ಬಂದಿರುವ ಮಾತು- ‘ಇಂಗ್ಲಿಷಿನಲ್ಲಿ ಕಲಿ, ಕನ್ನಡವನ್ನು ಕಲಿ’ ಎಂಬುದಕ್ಕೆ ಬದಲಾಗಿ ‘ಕನ್ನಡದಲ್ಲಿ ಕಲಿ, ಇಂಗ್ಲಿಷನ್ನು ಕಲಿ’ ಎಂಬುದನ್ನು ನಮ್ಮ ಶಿಕ್ಷಣ ಕ್ರಮದಲ್ಲಿ ಅಳವಡಿಸಿಕೊಳ್ಳುವುದು ಸಾಧ್ಯವಾಗಬೇಕು. ಅಂದರೆ ಮಾಧ್ಯಮ ಕನ್ನಡವಾಗಬೇಕು, ಇಂಗ್ಲಿಷನ್ನೂ ನಮ್ಮ ಮಕ್ಕಳು ಕಲಿಯಬೇಕು. ಆಗ ನಮ್ಮ ಮಕ್ಕಳು ಕನ್ನಡದ ಕೈತಪ್ಪಿ ಹೋಗಲಾರರು. ಹಾಗೆಯೇ ಎಲ್ಲಿಯೂ ತಮ್ಮ ನೆಲೆ ಕಂಡುಕೊಳ್ಳಬಲ್ಲರು. ಕನ್ನಡದ ಅಭಿಮಾನ ಭಾವನಾತ್ಮಕ ಆಚರಣೆಯಾಗದೆ ಕ್ರಿಯಾತ್ಮಕ ರೂಪ ಪಡೆಯುವಂತಾದರೆ ನಾಡಿನ ಜನರ ಬದುಕು ಹಸನಾದೀತು.

(ಲೇಖಕರು ಖ್ಯಾತ ವಿಮರ್ಶಕರು)

Leave a Reply

Your email address will not be published. Required fields are marked *

Back To Top