ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಚಿಕ್ಕಮಗಳೂರು: ಅಲ್ಲಿ ವಾದ್ಯಗೋಷ್ಠಿಗಳ ಹಂಗಿರಲಿಲ್ಲ. ಅದ್ದೂರಿ-ಆಡಂಬರಗಳಿರಲಿಲ್ಲ. ವಿಶೇಷ ವೈಭವದ ಅಲಂಕಾರ, ವಿನ್ಯಾಸಗಲೂ ಇರಲಿಲ್ಲ. ಅಲ್ಲಿದ್ದದ್ದು ಕಡಿಮೆ ಸಂಖ್ಯೆಯಲ್ಲಿದ್ದ ಅತಿಥಿ-ಅಭ್ಯಾಗತರು, ಆಪ್ತೇಷ್ಟ ಜನರು. ಎಲ್ಲಕ್ಕೂ ಮಿಗಿಲಾಗಿ ಭಾರತ ಮಾತೆಯ ಭಾವಚಿತ್ರ ಪೂಜಾ ಸ್ಥಾನದಲ್ಲಿ ಗಮನ ಸೆಳೆಯಿತು.

ಕನ್ನಡದಲ್ಲಿ ಮಂತ್ರ ಪ್ರಯೋಗದ ಮುಖೇನ ಪೂಜಾವಿಧಿಗಳಲ್ಲಿ ಮೂಲಕ ಹೊಸ ಭಾಷ್ಯ ಬರೆದ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ನೇತೃತ್ವದಲ್ಲಿ ಗುರುವಾರ ನಡೆದ ಆದರ್ಶ ವಿವಾಹದ ಪ್ರಸಂಗವಿದು. ಆದರ್ಶ ವಿವಾಹವಾಗಲು ಮುಂದಾದ ಜೋಡಿಗೆ ಕಣ್ಣನ್ ನಿರರ್ಗಳ ಮಂತ್ರ ಪಠಣ ಮಾಡಿ ಸಂಸ್ಕೃತಿಯ ಅನಾವರಣ ಮಾಡಿದರು. ಜತೆಗೆ ಕುವೆಂಪು, ಬೇಂದ್ರೆ, ಮಾಸ್ತಿ, ತೀನಂಶ್ರೀ, ಬಿಎಂಶ್ರೀ, ಕೆ.ಸಿ.ಶಿವಪ್ಪ, ಡಿವಿಜಿ ಅವರ ಕವಿತೆಗಳು ಅನುರಣಿಸಿದವು.

ಆಕೆ ಮೂಡಿಗೆರೆ ತಾಲೂಕು ಸಂಸೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ. ಆತ ಶಿವಮೊಗ್ಗ ಜಿಲ್ಲೆ ಸಾಗರದ ಪ್ರಥಮ ದರ್ಜೆ ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ. ಅಂತರಂಗದ ದೃಷ್ಟಿ ಇರುವ ಶಿಕ್ಷಕಿ ಅನಿತಾ ಹಾಗೂ ಬಾಹ್ಯ ದೃಷ್ಟಿಯ ಕೊರತೆ ಇರುವ ಸಹ ಪ್ರಾಧ್ಯಾಪಕ ವಿನೋದ್ ಪ್ರಕಾಶ್ ಇವರ ನಡುವೆ ಮದುವೆಯ ಬಂಧ ಬೆಸೆಯಲು ವೇದಿಕೆಯಾದದ್ದು ಹಿರೇಮಗಳೂರಿನ ಪ್ರಸಾದ್ ಹಾಗೂ ರಾಜ್ಯ ಹೆಬ್ಬಾರ್ ಶ್ರೀವೈಷ್ಣವ ಸಭಾದ ಉಪಾಧ್ಯಕ್ಷೆ ರಮಾಪ್ರಸಾದ್ ಅವರಿಗೆ ಸೇರಿದ ಹೆಬ್ಬಾರ್ ಶ್ರೀ ವೈಷ್ಣವ ಸಭಾದ ಆವರಣ.

ತರೀಕೆರೆ ತಾಲೂಕು ಚೀರನಹಳ್ಳಿಯ ಸಿ.ಎಚ್.ರಾಮಪ್ಪ ಹಾಗೂ ಚಂದ್ರಮ್ಮ ದಂಪತಿಯ ಪುತ್ರಿ ಅನಿತಾ ಹಾಗೂ ಭದ್ರಾವತಿ ತಾಲೂಕು ತಾರೀಕಟ್ಟೆಯ ರಾಜಪ್ಪ ಮತ್ತು ಲಕ್ಷ್ಮೀ ದಂಪತಿಯ ಪುತ್ರ ವಿನೋದ್ ಪ್ರಕಾಶ್​ಗೂ ವಿವಾಹ ಸಂಬಂಧ ಕೂಡಿ ಬಂದದ್ದು ಸ್ನೇಹಿತರಿಂದ. ಎಂಎಸ್​ಸಿಬಿಎಡ್ ಪದವೀಧರೆ ಅನಿತಾ, ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದಲ್ಲಿ ಎಂಎ ಪದವೀಧರ ಹಾಗೂ ಪಿಎಚ್​ಡಿ ಮಾಡುತ್ತಿರುವ ವಿನೋದ್ ಪ್ರಕಾಶ್ ಪರಸ್ಪರ ಮೆಚ್ಚಿಕೊಂಡು ಕೈಹಿಡಿಯುವ ನಿರ್ಧಾರ ಕೈಗೊಂಡೇ ಬಿಟ್ಟರು.

ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಸರಳ ವಿವಾಹ, ಆದರ್ಶದ ಬದುಕು ಕಟ್ಟಿಕೊಳ್ಳುವ ನಿರ್ಧಾರ. ಇಬ್ಬರದೂ ಒಂದೇ ಚಿಂತನೆ. ಒಂದೇ ಲಹರಿ. ಇದಕ್ಕೆ ಸಮ್ಮತಿಸಿ ನೀರೆರೆದ್ದು ಎರಡೂ ಕಡೆಯ ಪಾಲಕರು. ಎರಡೂ ಕಡೆಯ ಬಂಧುಮಿತ್ರರನ್ನು ಒಳಗೊಂಡ 40 ರಿಂದ 50 ಜನರಷ್ಟೇ ಅಲ್ಲಿ ಸೇರಿದ್ದರು.

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಎಂದು ಪ್ರಾರ್ಥಿಸುವ ಮೂಲಕ ದಾಂಪತ್ಯಕ್ಕೆ ಕಾಲಿಡಲು ಸಿದ್ಧರಾದ ವಧು ಅನಿತಾ ಸಂದರ್ಭಕ್ಕೆ ತಕ್ಕಂತೆ ಅರ್ಥವತ್ತಾದ ಪ್ರಾರ್ಥನೆ ಸಲ್ಲಿಸಿ ಎಲ್ಲರನ್ನೂ ಭಾವಪರವಶಗೊಳಿಸಿದರು. ಕಣ್ಣನ್ ಅವರಿಂದ ಕನ್ನಡದಲ್ಲಿ ಮಂತ್ರಗಳು ಮೊಳಗಿ ಮಾಂಗಲ್ಯ ಧಾರಣೆಯೂ ನಡೆಯಿತು. ಕುಂಭ ಕಲಶದ ಜತೆಗೆ ಅಲ್ಲಿದ್ದದ್ದು, ವರ ವಿನೋದ್ ಪ್ರಕಾಶ್ ಅವರ ಆಕಾಂಕ್ಷೆಯಂತೆ ಅಲ್ಲಿದ್ದದ್ದು ಭಾರತ ಮಾತೆಯ ಭಾವಚಿತ್ರ. ಹೀಗಾಗಿ ನಡುವೆ ಭಾರತ್ ಮಾತಾಕಿ ಜೈ… ಎನ್ನುವ ಉದ್ಗಾರ ಸಹ ಗಮನ ಸೆಳೆಯುತ್ತಿತ್ತು. ಜತೆಗೆ ಕಣ್ಣನ್ ತಮ್ಮ ಹಾಸ್ಯ ಲಹರಿ ಹರಿಸುತ್ತಿದ್ದದ್ದು ವಿಶೇಷವಾಗಿತ್ತು. ಸತತ ಎರಡೂವರೆ ತಾಸುಗಳ ಕಾಲ ಶಾಸ್ತ್ರೋಕ್ತವಾದ ವಿಧಿಗಳ ನಡುವೆ ಅವರಿಬ್ಬರೂ ಸತಿಪತಿಗಳಾದರು. ಎಲ್ಲವೂ ಸರಳವಾಗಿದ್ದಂತೆ ಊಟೋಪಚಾರವೂ ಗಮನ ಸೆಳೆಯಿತು. ರುಚಿಕರವಾದ ಬಿಸಿಬೇಳೆ ಬಾತ್, ಮೊಸರನ್ನ, ಕೇಸರಿಬಾತ್, ಜಿಲೇಬಿ ಸವಿದ ಅತಿಥಿ-ಅಭ್ಯಾಗತರು ಮನಸಾರೆ ಹರಸಿದರು.

ಕನ್ನಡದಲ್ಲಿ ಸಪ್ತಪದಿ ಅರ್ಥ:ಹೆಜ್ಜೆ ಒಂದನ್ನು ಇರಿಸು ಅನ್ನಕ್ಕೆ ಎಂದೆ, ಹೆಜ್ಜೆ ಎರಡು ಇರಿಸು ಬಲವೃದ್ಧಿಗೆಂದೆ, ಹೆಜ್ಜೆ ಮೂರು ಇರಿಸು ಧನಬಲಕೆ ಎಂದೆ, ಹೆಜ್ಜೆ ನಾಲ್ಕನ್ನು ಇರಿಸು ಮಮತೆಗೆಂದೆ, ಹೆಜ್ಜೆ ಐದನ್ನು ಇರಿಸು ಸಂತತಿಗೆಂದೆ, ಹೆಜ್ಜೆ ಆರನ್ನು ಇರಿಸು ಅನುಕೂಲಕೆಂದೆ, ಹೆಜ್ಜೆ ಏಳನ್ನು ಇರಿಸು ನಾ ಗೆಳತಿ ಎಂದೆ, ಸಪ್ತಪದಿ ತುಳಿದ ಸಂದರ್ಭ ವರ ನುಡಿಯುವ ಪ್ರತೀ ವಾಕ್ಯದ ಮುಂದೆ ವಧು ಅಂತೆ ಇರಿಸುತ ಬಂದೆ ನಲ್ಲಾ ನಾ ನಿನ್ನ ಹಿಂದೆ ಎಂದದ್ದು ಅಲ್ಲಿ ಗಮನ ಸೆಳೆಯುತ್ತಿತ್ತು. ಮಂತ್ರಪಠಣದ ಪ್ರತೀ ಹಂತದಲ್ಲಿ ಶುಭ ಮುಹೂರ್ತಕ್ಕೆ ಶುಭವಾಗಲಿ ಎನ್ನುವ ಎಲ್ಲರಿಗೂ ಅರ್ಥವಾಗುವ ಶೈಲಿ ವಿಶೇಷವೆನಿಸಿತು.

Leave a Reply

Your email address will not be published. Required fields are marked *