ಕನಸುಗಾರನ ಖಾಸ್​ಬಾತ್

  • ಅವಿನಾಶ್ ಜಿ. ರಾಮ್ ಬೆಂಗಳೂರು

ಸದಾ ಸಿನಿಮಾವನ್ನೇ ಧ್ಯಾನಿಸುವ ವ್ಯಕ್ತಿ, ನಟ-ನಿರ್ದೇಶಕ ರವಿಚಂದ್ರನ್. ಅವರು ಒಂದಷ್ಟು ಗ್ಯಾಪ್ ಪಡೆದು ಕೊಂಡಿದ್ದಾರೆ ಎಂದರೆ, ಯಾವುದೋ ಹೊಸ ಸಿನಿಮಾಗೆ ಯೋಜನೆ ಸಿದ್ಧವಾಗುತ್ತಿದೆ ಎಂದೇ ಅರ್ಥ. ಅಂತೆಯೇ ಅವರ ನಿರ್ದೇಶನದ ‘ಅಪೂರ್ವ’ ತೆರೆಕಂಡ ಎಂಟು ತಿಂಗಳಿಗೆ ಸರಿಯಾಗಿ ಹೊಸ ಚಿತ್ರಗಳನ್ನು ಘೊಷಿಸಿದ್ದಾರೆ.

ಇತ್ತೀಚಿನ ‘ಮಾಣಿಕ್ಯ’ ಸೇರಿ ಒಟ್ಟು ನಾಲ್ಕು ಚಿತ್ರಗಳಲ್ಲಿ ‘ಕ್ರೇಜಿ ಸ್ಟಾರ್’ ರವಿಚಂದ್ರನ್ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲೋ ಒಂದು ಕಡೆ ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದ್ದು ನಿಜ. ‘ಪ್ರೇಮಲೋಕ’ದ ಪ್ರಿನ್ಸಿಪಾಲ್ ಬರೀ ಪೋಷಕ ಪಾತ್ರಗಳಿಗೆ ಸೀಮಿತವಾಗುತ್ತಾರಾ ಎಂಬುದು ಆ ಬೇಸರದ ಹಿಂದಿನ ಪ್ರಶ್ನೆ. ‘ಹೆಬ್ಬುಲಿ’ ಬಿಡುಗಡೆಗೂ ಮುನ್ನಾ ರವಿಚಂದ್ರನ್ ಒಂದು ಮಾತು ಹೇಳಿದ್ದರು; ‘ಸುದೀಪ್ ಜತೆ ‘ಮಾಣಿಕ್ಯ’ದಲ್ಲಿ ಅಪ್ಪನಾಗಿ ಕಾಣಿಸಿಕೊಂಡೆ, ‘ಹೆಬ್ಬುಲಿ’ಯಲ್ಲಿ ಅಣ್ಣನಾದೆ. ಈಗ ಪುನಃ ಹೀರೋ ಆಗುತ್ತೇನೆ..’- ಅದೇ ರೀತಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಅಭಿಮಾನಿಗಳ ಆತಂಕವನ್ನೂ ದೂರ ಮಾಡಿದ್ದಾರೆ. ಒಂದೇ ದಿನ ತಾವು ನಾಯಕನಾಗಿ ನಟಿಸಲಿರುವ ಮೂರು ಚಿತ್ರಗಳಿಗೆ ಚಾಲನೆ ನೀಡಿದ್ದಾರೆ. ‘ಏನಾದರೂ ರೆಸೊಲ್ಯುಷನ್ ಇಟ್ಟುಕೊಂಡಿದ್ದೀರಾ, ಹೇಗೆ’ ಎಂದರೆ, ‘ರೆಸೊಲ್ಯುಷನ್ ಏನಿಲ್ಲ, ನನಗೆ ರೆವಲೂಶನ್ ಮಾಡಿಯೇ ಅಭ್ಯಾಸ’ ಎಂದು ತಮ್ಮದೇ ಸ್ಟೈಲ್​ನಲ್ಲಿ ಹೇಳುತ್ತಾರೆ ಅವರು.

ಒಂದು ಕಡೆ ಹೀರೋ, ಮತ್ತೊಂದೆಡೆ ಪೋಷಕ ಪಾತ್ರಗಳು.. ಹೀಗೆ ಎರಡು ಆಯಾಮ ಸೃಷ್ಟಿಸಿಕೊಂಡಿದ್ದಾರೆ ಅವರು. ‘ನಾನು ಹೀರೋ ಆಗಿಯೂ ಮಾಡಿದ್ದೇನೆ. ಪೋಷಕ ಪಾತ್ರಗಳಲ್ಲೂ ಮಿಂಚಿದ್ದೇನೆ. ಆದರೆ ಪೋಷಕ ಪಾತ್ರಗಳಿಂದ ಕೆಲ ಅಭಿಮಾನಿಗಳಿಗೆ ಬೇಸರವಾಗಿತ್ತು. ಅದಕ್ಕೆ ಈ ರೀತಿ ಮೂರು ಸಿನಿಮಾ ಶುರು ಮಾಡಿದ್ದೇನೆ. ಹಾಗಂತ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಾಡುವುದಿಲ್ಲ ಎಂದಲ್ಲ. ತಾತನ ಪಾತ್ರ ಮಾಡುವುದಕ್ಕೂ ನಾನು ಸಿದ್ಧ. ಹಾಗೇ ಖಳನ ಪಾತ್ರ ಸಿಕ್ಕರೆ, ಅದನ್ನೂ ಮಾಡುತ್ತೇನೆ. ಬಿಳಿ ಪರದೆ ಹೇಗೆಲ್ಲ ಆಡಿಸುತ್ತದೋ ಹಾಗೆಲ್ಲ ಮಾಡುತ್ತೇನೆ’ ಎನ್ನುತ್ತಾರೆ ರವಿಚಂದ್ರನ್. ಒಬ್ಬ ನಾಯಕ ನಟ ಪೋಷಕ ಪಾತ್ರ ಮಾಡುತ್ತಾನೆ ಎಂದಾಗ ಅದು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚುವಂತೆ ಮಾಡುತ್ತದೆ ಎಂಬುದು ‘ಕ್ರೇಜಿ ಸ್ಟಾರ್’ ಅಭಿಪ್ರಾಯ. ಅದಕ್ಕೆ ತಕ್ಕಂತೆ ಆ ಕಲಾವಿದನನ್ನು ಸಿನಿಮಾದಲ್ಲಿ ಸರಿಯಾಗಿ ಬಳಸಿಕೊಳ್ಳಿ ಎಂಬ ಸಲಹೆ ಅವರದು. ‘ಒಂದು ಸಿನಿಮಾ ಬರೀ ನಾಯಕ ನಟನಿಂದ ಮಾತ್ರ ನಿಲ್ಲುವುದಿಲ್ಲ. ‘ಪುಟ್ನಂಜ’ ಹೆಸರು ಹೇಳಿದ ಕೂಡಲೇ ಮೊದಲು ನೆನಪಾಗೋದು ಉಮಾಶ್ರೀ. ‘ಪ್ರೇಮಲೋಕ’ ಎಂದಾಗ, ವಿಷ್ಣುವರ್ಧನ್, ಪ್ರಭಾಕರ್, ಶ್ರೀನಾಥ್.. ಹೀಗೆ ಎಲ್ಲರೂ ನೆನಪಾಗುತ್ತಾರೆ. ನನ್ನ ಸಿನಿಮಾಗಳಲ್ಲಿ ಎಲ್ಲ ಪಾತ್ರ ಗಳು ಹೈಲೈಟ್ ಆಗುತ್ತವೆ. ಅದೇ ಥರ ನನ್ನನ್ನು ಬಳಸಿ ಕೊಂಡಾಗ ಸಿನಿಮಾ ಕೂಡ ದೊಡ್ಡದಾಗುತ್ತದೆ’ ಎನ್ನುವ ಅವರಿಗೆ ಸಿನಿಮಾ ಯಾವತ್ತೂ ಮೋಸ ಮಾಡಿಲ್ಲವಂತೆ.

ಅಷ್ಟಕ್ಕೂ ರವಿಚಂದ್ರನ್ ಇದೀಗ ಒಂದೇ ಸಲಕ್ಕೆ ಮೂರು ಸಿನಿಮಾ ಶುರು ಮಾಡಿದ್ದರ ಹಿಂದೆಯೂ ಒಂದು ಕಥೆ ಇದೆ. ‘ಅಪೂರ್ವ’ ಬಳಿಕ ಪಕ್ಕಾ ಮನರಂಜನಾ ಚಿತ್ರವೊಂದನ್ನು ಮಾಡುವ ನಿರ್ಧಾರ ಮಾಡಿ ಏಳು ತಿಂಗಳು ಕೂತು ಸ್ಕ್ರಿಪ್ಟ್ ಬರೆದಿದ್ದಾರೆ. ಅದೇ ಸಮಯಕ್ಕೆ ನಿರ್ದೇಶಕ ಎಂ.ಎಸ್. ರಮೇಶ್ ‘ದಶರಥ’ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದರೆ, ‘ಕರ್ವ’ ತಂಡ ‘ಬಕಾಸುರ’ ಕಥೆ ಹಿಡಿದುಕೊಂಡು ಬಂದಿದೆ. ಎಲ್ಲ ಕೂಡಿಬಂದಂತೆ ಒಂದೇ ಬಾರಿಗೆ ಮೂರಕ್ಕೂ ಚಾಲನೆ ಸಿಕ್ಕಿದೆ. ಹಾಗಂತ, ಅದು ಮೊದಲು ಇದು ಮೊದಲು ಅಂತೇನಿಲ್ಲ. ಸಮಯ ಸಂದರ್ಭ ಯಾವುದಕ್ಕೆ ಅನುಕೂಲವಾಗುತ್ತದೋ ಅದೇ ಮೊದಲು ಶುರುವಾಗಲಿದೆಯಂತೆ. ಎಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡಲಿದ್ದಾರಂತೆ.

ಇತ್ತೀಚಿನ ಸಿನಿಮಾಗಳಲ್ಲಿ ರವಿಚಂದ್ರನ್ ಫಿಲಾಸಫಿಗೆ ಹೆಚ್ಚು ಮಹತ್ವ ನೀಡಿದಂತಿತ್ತು. ಆದರೀಗ ಪುನಃ ಮನರಂಜನೆ ಮೂಲಕ ಏನು ಹೇಳಬೇಕೋ ಅದನ್ನು ಹೇಳುವ ಶೈಲಿಗೆ ಒಗ್ಗಿದ್ದಾರಂತೆ ಅವರು. ‘ಮೊದಲು ತೂಕವಾಗಿ ಬರೆಯೋಕೆ ಬರುತ್ತಿರಲಿಲ್ಲ. ಬರೆದ ಮೇಲೆ ಅದನ್ನು ತೂಕವಾಗಿ ಬರುವ ಥರ ಮಾಡುತ್ತಿದ್ದೆ. ಈಗೀಗ ತುಂಬ ತೂಕವಾಗಿ ಬರೆಯೋಕೆ ಶುರು ಮಾಡಿದ್ದೇನೆ. ಹಾಗಾಗಿ, ಅದನ್ನು ಸಾಧ್ಯವಾದಷ್ಟು ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಫಿಲಾಸಫಿ ಹೇಳುವುದು ದೊಡ್ಡ ವಿಷಯವಲ್ಲ, ಅದರ ಜತೆಗೆ ಮನರಂಜನೆ ಮರೆಯಬಾರದು’ ಎನ್ನುತ್ತಾರವರು. ಹಾಗಂತ, ಅವರದು ಫಾಮುಲಾ ಇಟ್ಟುಕೊಂಡು ಸಿನಿಮಾ ಮಾಡುವ ಜಾಯಮಾನವಲ್ಲ. ‘ನನಗೆ ಬೆಳೆದಿರುವ ಖುಷಿ ಇದೆ. ಏನು ಗೊತ್ತಿಲ್ಲದ್ದಿದ್ದಾಗ ಸಕ್ಸಸ್ ಸಿಕ್ಕಿತು. ಆದರೆ ಎಲ್ಲ ಗೊತ್ತಾದ ಮೇಲೆ ಸಕ್ಸಸ್ ಪಡೆಯುವುದು ಕಷ್ಟವಾಗುತ್ತಿದೆ. ಫಾಮುಲಾ ಇಟ್ಟುಕೊಂಡು ಸಿನಿಮಾ ಮಾಡಿದ್ದರೆ, ‘ಪ್ರೇಮಲೋಕ’ ಮಾಡುವುದಕ್ಕೇ ಆಗುತ್ತಿರಲಿಲ್ಲ’ ಎನ್ನುವುದು ರವಿಚಂದ್ರನ್ ಮಾತು.

ತಮ್ಮ ಕರಿಯರ್​ನಲ್ಲಿ ಸಾಕಷ್ಟು ಏಳುಬೀಳು ಕಂಡಿರುವ ‘ಕ್ರೇಜಿಸ್ಟಾರ್’ ಯಾವತ್ತೂ ತಾನು ಸೋತಿದ್ದೇನೆ ಎಂಬುದನ್ನು ಒಪ್ಪುವುದಿಲ್ಲ. ‘ನನ್ನ ಮೊದಲ ಸಿನಿಮಾದಲ್ಲಿ ನಾನು ವಿಲನ್ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ‘ಚಕ್ರವ್ಯೂಹ’ದಲ್ಲಿನ ಪಾತ್ರ ಇಷ್ಟಪಟ್ಟು ಜನ ಚಪ್ಪಾಳೆ ತಟ್ಟುತ್ತಾರೆಂಬುದು ತಿಳಿದಿರಲಿಲ್ಲ. ಸಿನಿಮಾ ದುಡ್ಡು ಮಾಡುತ್ತಾ, ಇಲ್ವಾ ಎಂಬುದನ್ನು ಯಾವತ್ತೂ ಯೋಚನೆ ಮಾಡಿದವನೇ ಅಲ್ಲ. ಸೋಲು-ಗೆಲುವಿನ ಲೆಕ್ಕಾಚಾರ ಹಾಕಿಕೊಂಡು ಕುಳಿತಿದ್ದರೆ ‘ಪ್ರೇಮಲೋಕ’ದಂಥ ಚಿತ್ರ ಮಾಡುತ್ತಿರಲಿಲ್ಲ, ಈ ಹಂತಕ್ಕೆ ಬೆಳೆಯುವುದಕ್ಕೂ ಆಗುತ್ತಿರಲಿಲ್ಲ. ‘ಪ್ರೇಮಲೋಕ’ದ ಕಥೆ ಹೇಳೋಕೆ ಆಗುತ್ತಾ? ‘ಹೀರೋ ಬಂದಾಗ ಒಂದ್ ಹಾಡು.. ಹೀರೋಯಿನ್ ಬರ್ತಾಳೆ ಒಂದು ಹಾಡು.. ಕಾಲೇಜಿಗೆ ಬರ್ತಾರೆ ಒಂದು ಹಾಡು.. ಹೀಗೆಲ್ಲ ಹೇಳಿದ್ರೆ ಯಾರಾದರೂ ಹತ್ತಿರಕ್ಕೆ ಸೇರಿಸುತ್ತಾರಾ? ನನ್ನ ತಂದೆ ಇಟ್ಟ ನಂಬಿಕೆ ಇಲ್ಲಿಯವರೆಗೂ ನನ್ನನ್ನು ಕರೆದುಕೊಂಡು ಬಂದಿದೆ. ಕಲೆಕ್ಷನ್ ನೋಡಿ ಎಲ್ಲರೂ ಸೋಲು ಅಂತಾರೆ. ಆದರೆ ಸಿನಿಮಾ ಮೇಲಿಟ್ಟಿರುವ ಕನೆಕ್ಷನ್​ನಲ್ಲಿ ಸೋತಿಲ್ಲ. ನಾನು ಅಂದುಕೊಂಡಂತೆ ಸಿನಿಮಾ ಮಾಡದೇ ಇದ್ದಾಗ ಮಾತ್ರ ನಾನು ಸೋತಂತೆ’ ಎಂಬ ಅಭಿಪ್ರಾಯ ಅವರದು. ‘ಅಪೂರ್ವ’ದ ಬಗ್ಗೆಯೂ ಮಾತನಾಡುವ ಅವರು, ‘ಆ ಚಿತ್ರದ ಎಷ್ಟೋ ವಿಷಯಗಳು ಜನರಿಗೆ ತಲುಪಲೇ ಇಲ್ಲ. 6 ಆಡಿ, 4 ಅಡಿ ಲಿಫ್ಟ್​ನಲ್ಲಿ ಎಷ್ಟು ಶಾಟ್ ತೆಗೆಯಬಹುದು? ಅಂಥದ್ದೊಂದು ಸಿನಿಮಾ ಮಾಡಲಿ ತಿಳಿಯುತ್ತದೆ. ಅದರಲ್ಲಿ ಎಷ್ಟು ವಿಷಯ ಇತ್ತು, ಎಷ್ಟು ಕಾಣಿಸದೇ ಹೋಯ್ತು ಎಂಬುದು ನನಗೆ ಗೊತ್ತು. ಆ ಬಗ್ಗೆ ನನಗೆ ಬೇಸರ ಇಲ್ಲ. ನಾನು ಒಂದೂವರೆ ವರ್ಷದಲ್ಲಿ ಮಾಡಿದ ಸಿನಿಮಾವನ್ನು ಎರಡೂವರೆ ಗಂಟೆಯಲ್ಲಿ ಅರ್ಥ ಮಾಡಿಸುವುದು ಕಷ್ಟ’ ಎನ್ನುವ ಅವರಿಗೆ ಕಮರ್ಷಿಯಲ್ ಸಿನಿಮಾ ಮಾಡುವುದು ಕಷ್ಟ ಎನಿಸುವುದಿಲ್ಲವಂತೆ.

ಪಾತ್ರಗಳು ಹೀರೋ ಆಗಬೇಕು

ರವಿಚಂದ್ರನ್ ನಿರ್ದೇಶನ ಮಾಡಲಿರುವ ಚಿತ್ರಕ್ಕೆ ‘ರಾಜೇಂದ್ರ ಪೊನ್ನಪ್ಪ’ ಎಂದು ನಾಮಕರಣ ಮಾಡಲಾಗಿದೆ. ‘ದೃಶ್ಯ’ ಚಿತ್ರದ ನಾಯಕನ ಹೆಸರದು. ‘ಪಾತ್ರಗಳು ಹೀರೋ ಆಗಬೇಕು ಎಂದು ಬಯಸಿದವನು ನಾನು. ‘ದೃಶ್ಯ’ದಲ್ಲಿ ರಾಜೇಂದ್ರ ಪೊನ್ನಪ್ಪ ಒದೆ ತಿಂದು ಹೀರೋ ಆದವನು. ಅದೇ ಶೀರ್ಷಿಕೆ ಇಟ್ಟುಕೊಂಡು ನನ್ನದೊಂದು ಸಿನಿಮಾ ಶುರು ಮಾಡಿದ್ದೇನೆ. ‘ಯುದ್ಧಕಾಂಡ’ ಬಳಿಕ ‘ದಶರಥ’ದಲ್ಲಿ ಲಾಯರ್ ಪಾತ್ರ ಮಾಡುತ್ತಿದ್ದೇನೆ’ ಎಂದು ಮಾಹಿತಿ ನೀಡುತ್ತಾರವರು.

Leave a Reply

Your email address will not be published. Required fields are marked *