ಕನಸಿಲ್ಲದ ಬದುಕನ್ನು ಬದುಕಬಹುದೇ?

| ಡಾ. ಕೆ.ಪಿ.ಪುತ್ತೂರಾಯ

ಬದುಕು ಭಗವಂತ ನಮಗಿತ್ತ ಬಹುದೊಡ್ಡ ಬಳುವಳಿ. ದೇವರು ನಮಗೆ ಏನೆಲ್ಲ ಕೊಟ್ಟ ಅನ್ನೋದಕ್ಕಿಂತಲೂ ಕೊಟ್ಟದ್ದನ್ನು ನಾವು ಹೇಗೆ ಬಳಸಿಕೊಂಡೆವು ಅನ್ನೋದು ಮುಖ್ಯ. ಈ ಹಿನ್ನೆಲೆಯಲ್ಲಿ ನಮ್ಮ ಪಾಲಿಗೆ ಪ್ರಾಪ್ತವಾಗುವ ಬದುಕನ್ನು ವ್ಯರ್ಥಗೊಳಿಸದೆ ಸಾಧನೆಗಳೊಂದಿಗೆ ಸಾರ್ಥಕಗೊಳಿಸಿ, ತೆರಳೋದೇ ನಾವು ಭಗವಂತನಿಗೆ ಪ್ರತಿಯಾಗಿ ನೀಡುವ ಬಳುವಳಿ. ಇದೇ ಅರ್ಥ “There is a difference between just existing and living’ಎಂಬ ಮಾತಿನಂತೆ ಬರೇ ಜೀವಂತವಾಗಿದ್ದು ಕಾಲ ಕಳೆಯೋದಕ್ಕೂ ಸಂತಸದ ಸಕ್ರಿಯ, ಸಾರ್ಥಕ ಜೀವನವನ್ನು ನಡೆಸುವುದಕ್ಕೂ ವ್ಯತ್ಯಾಸವಿದೆ. ‘ತೇವವ ಜೀವಂತೀ ಮನಸೈವ ಜೀಮತೀ’ ಎಂಬ ಸಂಸ್ಕೃತದ ಉಕ್ತಿಯಂತೆ, ನಾವು ಬದುಕಬೇಕು. ಆದರೆ ಚೆನ್ನಾಗಿ ಬದುಕಬೇಕು; ಮನಸಾರೆ ಬದುಕಬೇಕು. ಈ ಹಿನ್ನೆಲೆಯಲ್ಲಿ ‘ಬದುಕು ಇರೋದು ಬಾಳಲು-ಬಳಲಲು ಅಲ್ಲ; ಸವಿಯಲು-ಸವೆದು ಹೋಗಲು ಅಲ್ಲ; ಏನನ್ನಾದರೂ ಸಾಧಿಸಲು-ರೋಧಿಸಲು ಅಲ್ಲ; ಸಂತಸಪಡಲು-ಸಂಕಟಪಡಲು ಅಲ್ಲ’ ಎಂಬ ಧೋರಣೆ ನಮ್ಮದಾಗಬೇಕು. ಒಟ್ಟಿನಲ್ಲಿ ‘ಗೌರವಿಸು ಜೀವನವ-ಗೌರವಿಸು ಚೇತನವ’ ಎಂಬ ಸಿದ್ಧಾಂತದಡಿ, ಬದುಕು ಒಂದು ಸಂಭ್ರಮವಾಗಬೇಕು, ಸಂಗ್ರಾಮವಾಗಬಾರದು. (Life should be a celebration-not a struggle). ಬಂದಂತೆ ಬದುಕೋದು ಬದುಕಲ್ಲ; ನಾವಂದುಕೊಂಡಂತೆ ಬದುಕೋದೇ ನಿಜವಾದ ಬದುಕು. ಭಗವಂತ ನಮಗೆ ಹಣೆಯನ್ನಷ್ಟೆ ಕೊಟ್ಟ; ನಮ್ಮ ಹಣೆಬರಹವನ್ನು ಬರೆಯುವ ಕೆಲಸವನ್ನು ನಮಗೆ ಬಿಟ್ಟು ಬಿಟ್ಟ. ‘ಜಾತಕದಿ ಹಣೆಬರಹ ತಿದ್ದುವನೇ ಜೊಯಿಸನು’-ಎಂಬ ಡಿವಿಜಿಯವರ ಮಾತಿನಂತೆ ನಮ್ಮ ಹಣೆಬರಹವನ್ನು ಇನ್ಯಾರಿಂದಲೋ ಬದಲಿಸಲಾಗದು. ದೇವರು ನಮಗೆ ಜೀವನವನ್ನಷ್ಟೆ ಕೊಟ್ಟ; ಜೀವಿಸುವ ಬಗೆಯನ್ನು ನಮಗೇ ಬಿಟ್ಟುಬಿಟ್ಟ. ಜೀವನವೆಂದರೆ ಒಂದು ಪುಸ್ತಕವಿದ್ದಂತೆ; ಮೊದಲನೆಯ ಪುಟ ಜನನವಾದರೆ, ಕೊನೆಯ ಪುಟ ಮರಣ. ನಡುವಿನ ಹಾಳೆಗಳನ್ನು ನಾವೇ ತುಂಬಿಕೊಳ್ಳಬೇಕು. ಜೀವನವೆಂದರೆ ಎಲ್ಲರ ಪಾಲಿಗೂ ಒಂದು ಪರೀಕ್ಷೆ ಇದ್ದಂತೆ; ಆದರೆ ಪ್ರತಿಯೊಬ್ಬರ ಪ್ರಶ್ನಾಪತ್ರಿಕೆಯೂ ಬೇರೆ ಬೇರೆ ಆಗಿರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಪ್ರಶ್ನೆಗಳು. ಅವರವರ ಪ್ರಶ್ನೆಗಳಿಗೆ ಅವರವರೇ ಉತ್ತರಿಸಬೇಕು. ಇತರರ ಉತ್ತರಗಳನ್ನು ನಕಲು ಹೊಡೆದರೆ, ಫೇಲಾಗೋದು ಖಂಡಿತ. ಆದರೆ, ಬದುಕು ಸಂಕೀರ್ಣವಾದುದು. ಅದು ಕೆಲವೊಮ್ಮೆ ಉತ್ತರವೇ ಇಲ್ಲದ ಪ್ರಶ್ನೆಗಳು. ಅವರವರ ಪ್ರಶ್ನೆಗಳಿಗೆ ಅವರವರೇ ಉತ್ತರಿಸಬೇಕು. ಇತರರ ಉತ್ತರಗಳನ್ನು ನಕಲು ಹೊಡೆದರೆ, ಫೇಲಾಗೋದು ಖಂಡಿತ. ಆದರೆ, ಬದುಕು ಸಂಕೀರ್ಣವಾದುದು. ಅದು ಕೆಲವೊಮ್ಮೆ ಉತ್ತರವೇ ಇಲ್ಲದ ಪ್ರಶ್ನೆಗಳನ್ನು ಪರಿಹಾರವೇ ಇಲ್ಲದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಆದ್ದರಿಂದ ಪ್ರತಿಯೊಂದು ಪ್ರಶ್ನೆಗೂ ಉತ್ತರ ಪಡೆದೇ ತೀರುತ್ತೇನೆಂದು ಹಠ ಹಿಡಿಯಬಾರದು. ಕಾರಣ, ಕೆಲವೊಮ್ಮೆ ಉತ್ತರ ಸಿಗುವ ಹೊತ್ತಿಗೆ ಪ್ರಶ್ನೆಯೇ ಬದಲಾಗಿರುತ್ತದೆ. ಹೀಗೆ ನಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ರೂವಾರಿಗಳು ನಾವೇ ಆಗಿದ್ದರೂ, ಎಲ್ಲದಕ್ಕೂ ‘ವಿಧಿಯಾಟ’ ಎಂಬ ಹಣೆಪಟ್ಟಿಯನ್ನು ಕಟ್ಟಿ ಜಾರಿಕೊಳ್ಳುತ್ತೇವೆ. ಇದು ತರವಲ್ಲ, ಬದುಕು ಎಂದರೆ, ಒಂದು ಹಾರಾಟವೂ ಅಲ್ಲ; ಹೋರಾಟವೂ ಅಲ್ಲ; ವಿಧಿಯಾಟವೂ ಅಲ್ಲ; ಒಂದು ರೀತಿಯಲ್ಲಿ ನೋಡಿದರೆ ಅದು ಒಂದು ಚದುರಂಗದ ಪಗಡೆ ಆಟವಿದ್ದಂತೆ. ಆಟವನ್ನು ಗೆಲ್ಲಬೇಕಾದರೆ ಕಾಯಿಗಳನ್ನು ಬರೇ ಮುಂದಕ್ಕೆ-ಹಿಂದಕ್ಕೆ ಮಾತ್ರವಲ್ಲ. ಆ ಕಡೆ-ಈ ಕಡೆ ಎಲ್ಲ ಕಡೆ ಚಲಾಯಿಸಬೇಕಾಗುತ್ತದೆ. ಬದುಕು ಎಂದರೆ ಒಂದು ಜೋಕಾಲಿ ಇದ್ದಂತೆ-ಜೋಕಾಲಿ ಮುಂದಕ್ಕೆ ಹೋಗಬೇಕಾದರೆ ಹಿಂದಕ್ಕೆ ಹೋಗಬೇಕು. ಜೀವನದಲ್ಲಿ ಮುನ್ನಡೆ-ಹಿನ್ನಡೆ, ಏಳು-ಬೀಳುಗಳು ಸರ್ವೆ ಸಾಮಾನ್ಯ. ಹಾಗೆಂದು ಕೈ ಕಟ್ಟಿ ಕುಳಿತಿರಲು ಸಾಧ್ಯವೇ?’ ಬಾಡಿ ಹೋಗಲಿದ್ದೇನೆ-ಬಿದ್ದು ಹೋಗಲಿದ್ದೇನೆ’ ಎಂದು ತಿಳಿದಿದ್ದರೂ ಅರಳದೇ ಹೂ? ಸತ್ತು ಹೋಗಲಿದ್ದೇನೆ-ಸುಟ್ಟು ಹೋಗಲಿದ್ದೇನೆ’ ಎಂಬ ಅರಿವು ಇದ್ದರೂ ಬದುಕಿ ಬಾಳದೇ ಈ ಜೀವ? ಆದ್ದರಿಂದ ಸಾಯುವವರೆಗೆ ಬದುಕಲೇಬೇಕು; ಬದುಕಿಬಾಳಲೇ ಬೇಕು. ನಮ್ಮ ಜೀವನ ಸಾರ್ಥಕವಾಗೋದು, ಸಾಯೋದಕ್ಕೂ ಮೊದಲು ನಾನು ಈ ಪ್ರಪಂಚಕ್ಕೆ ಏನಾದರೂ ಒಳ್ಳೇದನ್ನ ಕೊಟ್ಟು ಹೋಗಬೇಕು. ಒಳ್ಳೇದನ್ನ ಮಾಡಿ ಹೋಗಬೇಕು’ ಎಂಬ ಕನಸು ಬಂದು, ಆ ಕನಸನ್ನು ನನಸು ಮಾಡಿಕೊಳ್ಳಲು ನಾವು ಕಾರ್ಯಪ್ರವೃತ್ತರಾದಾಗ ಮಾತ್ರ! ಈ ಹಿನ್ನೆಲೆಯಲ್ಲಿ, ಮೊದಲಿಗೆ ನಾವು ಜೀವನದಲ್ಲಿ ಏನಾಗಬೇಕೆಂದಿದ್ದೇವೆ; ಏನನ್ನು ಸಾಧಿಸಬೇಕೆಂದಿದ್ದೇವೆ ಎಂಬುದರ ಬಗ್ಗೆ ಒಂದು ಕನಸಿರಬೇಕು. ಕನಸಿಲ್ಲದ ಜೀವನ ಗುರಿ ಇಲ್ಲದ ಪಯಣದಂತೆ. ಗುರಿ ಇಲ್ಲದ ಹಕ್ಕಿಯಂತೆ. ತಾವೆಲ್ಲಿಗೆ ಹೋಗಬೇಕೆಂದು ತಿಳಿಯದವರು ಎಲ್ಲಿಗೆ ಹೊರಟರೇನು ಪ್ರಯೋಜನ? ಗುರಿ ತಲುಪದಿರೋದು ದುಃಖದ ವಿಷಯವಲ್ಲ; ಜೀವನದಲ್ಲಿ ಗುರಿಯೇ ಇಲ್ಲದಿರೋದು ದುರಂತದ ವಿಷಯ. ‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು; ಆದರೆ ಕನಸಿಲ್ಲದ ಬದುಕನ್ನು ಬದುಕಬಹುದೇ?’ ಎಂಬ ಕವಿಯ ಮಾತುಗಳಲ್ಲಿ ಕನಸಿಲ್ಲದವರ ಬಗ್ಗೆ ಕಳಕಳಿ ಇದೆ. ಜೀವನದಲ್ಲಿ ಏನೂ ಕನಸಿಲ್ಲದವರು, ಕನಸಿರುವ ಇತರರಿಗಾಗಿ, ಅವರ ಕನಸುಗಳನ್ನು ಸಾಕಾರಗೊಳಿಸಲು ದುಡಿಯುತ್ತಿರುತ್ತಾರೆ, ಏನೂ ಕನಸಿಲ್ಲದವರು, ಕನಸಿರುವ ಇತರರಿಗಾಗಿ, ಅವರ ಕನಸುಗಳನ್ನು ಸಾಕಾರಗೊಳಿಸಲು ದುಡಿಯುತ್ತಿರುತ್ತಾರೆ ಎಂಬುದು ಸತ್ಯ ಸಂಗತಿ. ಹಣವಿಲ್ಲದವ ಬಡವನಲ್ಲ; ಕನಸಿಲ್ಲದವನೇ ನಿಜವಾದ ಬಡವ’ ಎನ್ನಲಾಗಿದೆ.ಎಲ್ಲ ಯಶಸ್ವೀ ಪಯಣಗಳು ಎರಡು ನಂಬಿಕೆಗಳಿಂದ ಮುಂದುವರಿಯುತ್ತದೆ.

ಒಂದು ಇಂದಿಗಿಂತ ನಾಳೆ, ಉತ್ತಮವಾಗಿರುತ್ತದೆ. ಎರಡನೆಯದ್ದು ಅದನ್ನು ‘ಹೌದು’ಗೊಳಿಸುವ ಸಾಮರ್ಥ್ಯ ನನ್ನಲ್ಲಿದೆ.  ಹಾಗೆ ನೋಡಿದರೆ, ಮಹಾನ್ ವ್ಯಕ್ತಿಗಳ ಮಹತ್ಕಾರ್ಯಗಳ ಹಿಂದೆ, ಅವರದೇ ಆದ ಒಂದು ಸುಂದರ ಕನಸು ನನಸು ಮಾಡಿದೆ. ಆದರೆ ಕನಸುಗಳು ತೀರ ವೈಯಕ್ತಿಕ ವಿಚಾರಗಳು. ಇದರಲ್ಲಿ ಅನುಕರಣೆ ಇಲ್ಲಿ ಹಾಗೆ ಸಲ್ಲ. ನಮ್ಮ ಕನಸು ನಮ್ಮ ನಮ್ಮ ಆಸಕ್ತಿ-ಅಭಿರುಚಿ ಮತ್ತು ನಮ್ಮ ನಮ್ಮ ಸಕ್ತಿ-ಸಾಮರ್ಥ್ಯಗಳಿಗನುಗುಸಾರವಾಗಿರಲಿ; ಹಾಗೂ ನನಸು ಮಾಡಿಕೊಳ್ಳಲು ಸಾಧ್ಯವಾಗುವಂತಹ ಕನಸುಗಳಾಗಿರಲಿ. ಮಾತ್ರವೇ ಅಲ್ಲ, ಅವು ನಮ್ಮ ನಿದ್ದೆಯಲ್ಲಿ ಬರುವ ಕನಸುಗಳಲ್ಲ; ನಮ್ಮನ್ನು ನಿದ್ದೆ ಮಾಡಲು ಬಿಡದ ಕನಸುಗಳಾಗಿರಲಿ. ಕನಸು ಕಾಣೋದು ಎರಡನೆಯ ಹೆಜ್ಜೆ; ಮತ್ತು ಕಾಡುವ ಕನಸನ್ನು ಬೆನ್ನಟ್ಟುವುದು ಸಾಧನೆಯತ್ತ ಸಾಗುವ ಕೊನೆಯ ಹೆಜ್ಜೆ. ಇಂತವರನ್ನು ಯಶಸ್ಸು ಒಂದಲ್ಲ ಒಂದು ದಿನ ಬಾಚಿ ತಬ್ಬಿಕೊಳ್ಳುತ್ತದೆ. ಈ ದೃಷ್ಟಿಯಲ್ಲಿ ನಮ್ಮ ನೆಚ್ಚಿನ ಮಾಜಿ ರಾಷ್ಟ್ರಪತಿ ದಿವಂಗತ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದ “Dream, Dream, Dream. Dare to dream and dream and dream to dare’ ಎಂಬ ಮಾತುಗಳಲ್ಲಿ ಒಂದು ಅದ್ಭುತವಾದ ಸಂದೇಶವಿದೆ. ಒಂದು ಕನಸು, ನನಸಾಗುವ ಭರವಸೆಯ ಬಲದಿಂದಲೇ ಜೀವಿಸುತ್ತಿರುತ್ತದೆ. ಕಂಡ ಕನಸುಗಳೆಲ್ಲ ನನಸಾದೀತು ಎಂಬ ಗ್ಯಾರಂಟಿ ಇಲ್ಲ. ಆದರೆ, ಕನಸು ಕಾಣದೇನೇ ನಾವು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ನಾವು ಕನಸು ಕಾಣೋದನ್ನ ನಿಲ್ಲಿಸುತ್ತೇವೆಯೋ, ಅಂದಿಗೆ ನಮ್ಮ ಸಾಧನೆಗಳೂ ನಿಂತು ಹೋಗುತ್ತವೆ. ಆದ್ದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸುವ ಕನಸುಗಳಿರಲಿ. ಕಂಡ ಕನಸು ನನಸಾದೀತೋ ಅಥವಾ ಕನಸಾಗಿಯೋ ಉಳಿದೀತೋ-ಅದು ಬೇರೆಯ ಮಾತು. ಆದರೆ, ನಾಳೆಗಳ ಬಗ್ಗೆ ಕನಸು ಕಾಣುತ್ತ, ಮನಸ್ಸಿನೊಳಗೆ ಸಂತೋಷಪಡುವುದಿದೆಯಲ್ಲ, ಅದು ಕೂಡ ಒಂದು ಬಂಗಾರದ ಕ್ಷಣವಲ್ಲವೇ! ಕನಸುಗಳೆಂದರೆ, ಭವಿಷ್ಯದ ಯೋಜನೆಗೆ ಮೊದಲೇ ಹಾಕಿಕೊಂಡಿರುವ ನಕ್ಷೆಗಳು. ಒಟ್ಟಿನಲ್ಲಿ, ಜೀವನದಲ್ಲಿ ಎಲ್ಲರಿಗೂ ಒಂದು ಕನಸು ಬೇಕು; ಆದರೆ ಹುಚ್ಚು ಕನಸು ಬೇಡ, ಹೆಚ್ಚು ಕನಸು ಬೇಡ; ನನಸು ಮಾಡಲು ಸಾಧ್ಯವಾಗುವಂತಹ ಒಂದು ಪುಟ್ಟ ಕನಸಿದ್ದರೆ ಸಾಕು.

ಜೀವನದಲ್ಲಿ ಮೊದಲು ಒಂದು ಕನಸಿರಲಿ, ತದ ನಂತರ ಅದನ್ನು ಕಾರ್ಯಗತಗೊಳಿಸುವ ಕಾರ್ಯ ತಂತ್ರ ಸಿದ್ಧಗೊಳ್ಳಲಿ. ಸಮಾಜದಲ್ಲಿ 3 ವರ್ಗದ ಜನರಿರುತ್ತಾರೆ. ಕನಸೇ ಇಲ್ಲದವರು ಅಂದರೆ ಯಾವ ಕನಸನ್ನು ಕಾಣದವರು, ಬರೇ ಕನಸುಗಳನ್ನು ನನಸು ಮಾಡಿಕೊಳ್ಳುವವರು ಮತ್ತೊಂದು ಕಂಡ ಕನಸುಗಳನ್ನು ನನಸು ಮಾಡಿಕೊಳ್ಳುವವರು.

ಆಸೆ, ಆಕಾಂಕ್ಷೆಗಳೇ ಕನಸುಗಳಿಗೆ ಜೀವಾಧಾರ. ಆದ್ದರಿಂದ ಕನಸು ಕಾಣೋದರಲ್ಲಿ ತಪ್ಪಿಲ್ಲ. ಕನಸು ಕಾಣದಿರೋದೆ ದೊಡ್ಡ ತಪ್ಪು. ಆದರೆ ಕನಸುಗಳಲ್ಲೇ ಬದುಕನ್ನು ಕಳೆದುಬಿಡೋದು ಅತಿ ದೊಡ್ಡ ತಪ್ಪು. ಆದ್ದರಿಂದ ಕಂಡ ಕನಸುಗಳು ಕನಸುಗಳಾಗಿಯೇ ಉಳಿಯಬಾರದು; ಅವು ಸಾಕಾರಗೊಳ್ಳಬೇಕು.

ಕಂಡ ಕನಸುಗಳನ್ನು ನನಸು ಮಾಡಲು, ಮೊದಲು ಒಂದು ಕಾರ್ಯ ಸೂಚಿ ((Agenda) ಸಿದ್ಧವಾಗಬೇಕು; ನಂತರ ಅದನ್ನು ಕಾಯರ್åರೂಪದಲ್ಲಿ ತರುವ ನಕ್ಷೆ ರೂಪುಗೊಳ್ಳಬೇಕು. “Plan your work, next work your plan’ ಎಂಬ ಜಪಾನಿ ಗಾದೆಯಂತೆ, ಮೊದಲು ತಲುಪಬೇಕಾದ ಗುರಿ ನಿಗದಿಯಾಗಲಿ; ನಂತರ ಆ ಗುರಿ ತಲುಪುವ ವಿಧಾನ ಮಾರ್ಗ ರೂಪುಗೊಳ್ಳಲಿ. ಆದರೆ ಜೀವನದಲ್ಲಿ ಗುರಿ ಇಲ್ಲವೇ ಕನಸು ಎಷ್ಟು ಮುಖ್ಯವೋ, ಆ ಗುರಿಯನ್ನು ತಲುಪುವ ಹಾಗೂ ಕಂಡ ಕನಸನ್ನು ಸಾಕಾರಗೊಳಿಸುವ ಮಾರ್ಗ ಕೂಡ ಅಷ್ಟೇ ಮುಖ್ಯ. ಅದು ಸನ್ಮಾರ್ಗವಾಗಿರಬೇಕು; ನ್ಯಾಯ ಸಮ್ಮತವಾಗಿರಬೇಕು; ಧರ್ಮ ಸಮ್ಮತವಾಗಿರಬೇಕು. ನಾವು ಕ್ರಮಿಸುತ್ತಿರುವ ಮಾರ್ಗ ಸರಿ ಇಲ್ಲವೆಂದಾದರೆ, ನಾವು ಎಷ್ಟೇ ದೂರ ಕ್ರಮಿಸಿದ್ದರೂ, ತಕ್ಷಣ ಮಾರ್ಗ ಬದಲಾಯಿಸಿಕೊಳ್ಳಬೇಕು. ಕಾರಣ ವಾಮಮಾರ್ಗದಿಂದ ಸಾಧಿಸಿದ ಸಾಧನೆ, ಸಾಧನೆಯೂ ಅಲ್ಲ!

ಕಂಡ ಕನಸುಗಳನ್ನು ನನಸಾಗಿಸಲು ಅವಶ್ಯವಾದ ಇನ್ನಿತರ ವಿಷಯಗಳೆಂದರೆ, ಆತ್ಮ ವಿಶ್ವಾಸ, ಬದ್ಧತೆ, ದೃಢನಿರ್ಧಾರ ಹಾಗೂ ಪ್ರಾಮಾಣಿಕ ಪರಿಶ್ರಮ. (sit like a rock, work like a clock) ಈ ಜಗತ್ತಿನ ಮಹಾನ್ ಸಾಧಕರೆಲ್ಲರೂ, ತಾವು ಎಚ್ಚರವಾಗಿದ್ದು, ತಮ್ಮ ಪ್ರಯತ್ನಗಳನ್ನು ಮುಂದುವರಿಸಿದರು. ಇವರೆಲ್ಲ ಅದೃಷ್ಟದ ಕ್ಷಣಗಳಿಗಾಗಿ ಕಾದವರಲ್ಲ; ಕಠಿಣ ಪರಿಶ್ರಮದಲ್ಲಿ ಮಾತ್ರವೇ ನಂಬಿದವರು. ಪರಿಶ್ರಮವೆಂದರೆ ಮೆಟ್ಟಿಲುಗಳಿದ್ದಂತೆ; ಅದೃಷ್ಟವೆಂದರೆ ಲಿಫ್ಟ್ ಇದ್ದಂತೆ. ಲಿಫ್ಟ್ ಒಮ್ಮೊಮ್ಮೆ ಕೈಕೊಡಬಹುದು. ಕಾರಣ ಅದಕ್ಕೆ ವಿದ್ಯುಚ್ಛಕ್ತಿಯ ಅವಶ್ಯಕತೆಯಿದೆ. ಆದರೆ ಮೆಟ್ಟಿಲುಗಳು ಹಾಗಲ್ಲ; ನಾವು ಏರುತ್ತ ಹೋದಷ್ಟು ನಮ್ಮನ್ನು ಮೇಲಕ್ಕೆ ಮೇಲಕ್ಕೆ ಕೊಂಡೊಯ್ಯುತ್ತದೆ. ಮಾತ್ರವೇ ಅಲ್ಲ; ಒಂದು ವೇಳೆ ಬಿದ್ದರೂ, ಕೆಳಗಿನ ಮೆಟ್ಟಿಲಿನ ಮೇಲೆಯಷ್ಟೆ ಬೀಳುತ್ತೇವೆಯೇ ಹೊರತು, ಲಿಫ್ಟ್​ನಿಂದ ಬಿದ್ದಂತೆ ಪಾತಾಳಕ್ಕಲ್ಲ! ಮೇಲಾಗಿ ಒಂದೊಂದು ಮೆಟ್ಟಿಲನ್ನು ಏರುತ್ತ, ಇತರರ ಸಹಾಯವಿಲ್ಲದೇನೇ ನಾವಾಗಿಯೇ ನಮ್ಮ ಪರಿಶ್ರಮ-ಪ್ರತಿಭೆಯಿಂದ ಎತ್ತರಕ್ಕೆ ಏರೋದರಲ್ಲಿ ಸಂತಸವಿದೆ! ಸಂತೃಪ್ತಿ ಇದೆ; ಸಮಾಧಾನವಿದೆ. ಆದ್ದರಿಂದ ಜೀವನದಲ್ಲಿ ಮೇಲಕ್ಕೆ ಏರುವ ಸಾಧಿಸುವ ಕನಸಿರಲಿ; ಆ ಕನಸನ್ನು ನನಸಾಗಿಸುವ ಛಲವೂ ನಮ್ಮದಾಗಿರಲಿ. ನಾವು ಈ ಜಗತ್ತಿಗೆ ಹೇಗೆ ಬಂದೆವು ಅನ್ನೋದಕ್ಕಿಂತಲೂ, ಬಂದವರು ಹೇಗೆ ಹೋದೆವು ಅನ್ನೋದು ಮುಖ್ಯವಲ್ಲವೇ? ಒಬ್ಬ ವ್ಯಕ್ತಿ ಈ ಜಗತ್ತನ್ನು ಹೇಗೆ ಬಿಟ್ಟ ಅನ್ನೋದಕ್ಕಿಂತಲೂ, ಬಿಡುವ ಮುನ್ನ ಏನನ್ನು ಕೊಟ್ಟ ಅನ್ನೋದು ಮುಖ್ಯ. ಈ ಜಗತ್ತಿಗೆ ಬರುವಾಗ ನಮಗಿದ್ದುದು ಬರೇ ಉಸಿರು ಮಾತ್ರ; ಹೆಸರಲ್ಲ; ಈ ಜಗತ್ತನ್ನು ಬಿಟ್ಟು ಹೋಗುವಾಗ ಉಸಿರು ಇರೋದಿಲ್ಲ; ಒಳ್ಳೆಯ ಹೆಸರಿರಲಿ; ಹೀಗಾಗಲು, ಎಲ್ಲರಿಗೂ ಒಂದು ಸುಂದರ ಕನಸಿರಲಿ!

Leave a Reply

Your email address will not be published. Required fields are marked *