ಕನಸಿನಲ್ಲೂ ಉತ್ತರಾಧಿಕಾರ ನೆನೆಸಿರಲಿಲ್ಲ

ಗದಗ: ಪ್ರೇರಣೆ, ಪ್ರೋತ್ಸಾಹದ ಮೂಲಕ ಅಧ್ಯಯನದಲ್ಲಿ ಅಭಿರುಚಿ ಹೆಚ್ಚಿಸಿ ಬೆಳಗಾವಿ ನಾಗನೂರು ಮಠದ ಪೀಠಾಧಿಪತಿಯನ್ನಾಗಿಸಿದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಪುನಃ ತೋಂಟದಾರ್ಯ ಮಠಕ್ಕೆ ಉತ್ತರಾಧಿಕಾರಿನ್ನಾಗಿ ನೇಮಿಸುತ್ತಾರೆ ಎಂಬುದನ್ನು ಕನಸಿನಲ್ಲೂ ನೆನಸಿರಲಿಲ್ಲ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ಸೋಮವಾರ ಗುರುವಂದನೆ ಸ್ವೀಕರಿಸಿ ಮಾತನಾಡಿದ ಅವರು, ತೋಂಟದ ಸಿದ್ಧಲಿಂಗ ಶ್ರೀಗಳು ನೇರ ಹಾಗೂ ನಿಷ್ಠುರವಾದಿಗಳಾಗಿದ್ದರು. ಅವರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಗಳಿಸಿದ ನಾನೇ ಧನ್ಯ ಎಂದು ಹೇಳಿದರು.

ತೋಂಟದಾರ್ಯ ಮಠವು ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ವಿಶ್ವವಿದ್ಯಾಲಯಗಳಿಗೆ ಸಾಧ್ಯವಾಗದ ಕೆಲಸವನ್ನು ಸಾಧಿಸಿದ ಶ್ರೀಮಠವು ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ 600ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದೆ. ಸಾಹಿತಿಗಳನ್ನು, ಸಂಶೋಧಕರನ್ನು, ಕಲಾವಿದರನ್ನು ಪೋಷಿಸುವ ಕೆಲಸವನ್ನು ಶ್ರೀಮಠ ಮಾಡುತ್ತಿದೆ. ಶ್ರೀಗಳ ಉತ್ತಮ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದರು.

ಶಿವಮೊಗ್ಗ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಮಠಗಳಲ್ಲಿ ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಇಂತಹ ಸಮಯದಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಸಮಸ್ಯೆಯನ್ನು ಸೂಕ್ಷ್ಮವಾಗಿ, ಸುಲಭವಾಗಿ ಪರಿಹರಿಸಿದ್ದಾರೆ. ಎಲ್ಲರಿಂದಲೂ ಒಪ್ಪಿಗೆ, ಮೆಚ್ಚುಗೆ ಗಳಿಸಿದೆ ಎಂದು ಹೇಳಿದರು.

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರು ಡಾ. ತೋಂಟದ ಸಿದ್ಧರಾಮ ಶ್ರೀಗಳು ಕನ್ನಡಕ್ಕೆ ಅನುವಾದಿಸಿ ಭಾರತೀಯ ತತ್ತ್ವಾಸ್ತ್ರ ಗ್ರಂಥವನ್ನು ಬಿಡುಗಡೆಗೊಳಿಸಿದರು. ಇಲಕಲ್ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿದರು. ನಾಗನೂರು, ಬೀಳಗಿ, ಬೆಳಗಾವಿ, ಹಲಗಲಿ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ನೂತನ ಪೀಠಾಧೀಪತಿ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿಗಳಿಗೆ ಗುರುವಂದನೆ ಸಲ್ಲಿಸಿದರು ಬೆಳಗಾವಿ, ಬೆಂಗಳೂರು, ವಿಜಯಪುರ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಗುರುವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಲಿಂ. ಸಿದ್ಧಲಿಂಗ ಸ್ವಾಮೀಜಿ ನಮ್ಮ ಪಾಲಿನ ಆಶಾದೀಪದಂತಿದ್ದರು. ಅವರು ಇಲ್ಲವಾಗಿರುವುದು ಅತೀವ ದುಃಖ ತರಿಸಿದೆ. ಲಿಂ. ಶ್ರೀಗಳ ಆಶೀರ್ವಾದದಿಂದಲೇ ಬಾಲ್ಕಿಯಲ್ಲಿ ಆರಂಭಿಸಿರುವ ಚನ್ನಬಸವ ಗುರುಕುಲದಲ್ಲಿ ಇಂದು 15 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇವರ ಪ್ರೋತ್ಸಾಹದಿಂದಲೇ ಅದು ಸಾಧ್ಯವಾಯಿತು. ತಂದೆ, ತಾಯಿ, ಗುರುವಾಗಿ ನಮ್ಮನ್ನು ರಕ್ಷಿಸಿದವರು ಲಿಂ. ಶ್ರೀಗಳು. ಲಿಂ. ಶ್ರೀಗಳು ತಮ್ಮ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನೇ ಆಯ್ಕೆ ಮಾಡಿದ್ದಾರೆ. ಸಿದ್ಧರಾಮ ಸ್ವಾಮೀಜಿ ಬಸವಾದಿ ಶರಣರು, ಲಿಂಗಾಯತ ಧರ್ಮದ ಬಗೆಗೆ ಅತೀ ಪ್ರೀತಿವುಳ್ಳವರಾಗಿದ್ದು, ಹೋರಾಟವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಾರೆ ಎಂಬ ಅಚಲ ನಂಬಿಕೆ ಇದೆ. ಶ್ರೀಮಠದ ಪರಂಪರೆಯಡಿ ಸಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಡಾ. ಬಸವಲಿಂಗ ಪಟ್ಟಾಧ್ಯಕ್ಷರು, ಹಿರೇಮಠ, ಭಾಲ್ಕಿ

ಮನುಷ್ಯನ ಬದುಕು ರಹಸ್ಯಮಯ ಹಾಗೂ ವಿಸ್ಮಯವಾಗಿದೆ. ಋಷಿಗಳು, ಸಂತರು ಹಾಗೂ ದಾರ್ಶನಿಕರು ಬದುಕನ್ನು ಅರಿಯುವ ಪ್ರಯತ್ನ ಮಾಡಿದರು. ಬದುಕಿನಲ್ಲಿನ ವಾಸ್ತವಿಕ ಸತ್ಯಗಳನ್ನು ಅರಿತು ತೋಂಟದ ಸಿದ್ಧಲಿಂಗ ಶ್ರೀಗಳು ತಮ್ಮ ಅನುಭವದ ನುಡಿಗಳ ಮೂಲಕ ಭಕ್ತರಿಗೆ ಉತ್ತಮ ಮಾರ್ಗದರ್ಶನ ನೀಡಿದರು. ಅದರಂತೆ, ಮನುಷ್ಯರು ವ್ಯವಹಾರಿಕ ಬದುಕನ್ನು ಸುಂದರವಾಗಿಸಲು ವಾಸ್ತವಿಕ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ಅಂದಾಗ ಜೀವನ ಸಾರ್ಥಕವಾಗುತ್ತದೆ.

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಗವಿಮಠ, ಕೊಪ್ಪಳ