Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕನಕ ಬದುಕಿನ ಕೊನೆತನಕ…

Monday, 06.11.2017, 3:02 AM       No Comments

| ಡಾ. ಸುನಿಲ್​ ಕೆ. ಎಸ್​

ಮೊದಲಿಗೆ, ಕೆಲ ವಾಸ್ತವಗಳ ಕಟ್ಟನ್ನು ಬಿಚ್ಚಿಟ್ಟು ನಂತರ ವಿಷಯಕ್ಕೆ ಅಡಿಯಿಡೋಣ. ಜಯಂತಿ ಎನ್ನುವ ಶಬ್ದ ಪರಾಕಿನ ಹಿನ್ನೆಲೆಯಲ್ಲಿ ಬಳಸಿ ಅದರೊಂದಿಗೆ ಪರಾಕಿಗೆ ಅರ್ಥಶಃ ಯೋಗ್ಯರಾದವರ ಸ್ಮರಣೆಯನ್ನು ಮಾಡಿ ಅವರ ಹಾದಿಯಲ್ಲಿ ಸಾಗುವ ಹಿರಿದಾಸೆ ಬೆಳೆಸಿಕೊಳ್ಳಬೇಕೆನ್ನುವುದು ವಾಸ್ತವಿಕಾರ್ಥ. ಆದರೆ, ಇಂದು ಇದೇ ಜಯಂತಿಗಳು ವಿಶ್ರಾಂತಿ ಎಂಬರ್ಥದಲ್ಲಿ, ಪಂಗಡಗಳ ತೋರಿಕೆಯ ಹೆಮ್ಮೆಯ ಸಂಗತಿಯಾಗಿ, ರಾಜಕಾರಣದ ಲೇಪದೊಂದಿಗೆ ‘ಆ ದಿನಕ್ಕಷ್ಟೇ’ ಮೀಸಲಾಗಿ ಮರೆವ ವಿಷಯವಾಗಿರುವುದು ದುರಂತವೇ ಸರಿ. ಇದಕ್ಕೆ ಬಾಲಿಶ ಬುದ್ಧಿ ಕಾರಣವೋ ಅಥವಾ ತಿಳಿಹೇಳುವ ಮಂದಿಯನ್ನು ದೂರಿಟ್ಟಿರುವುದೋ? ತಿಳಿಯುವುದು ತುಸು ಕಷ್ಟ. ಏನೇ ಆಗಲಿ, ಹಿಂದಿನ ಸಾಮಾಜಿಕ ಸ್ಥಿತಿಗತಿಗಳಿಗೂ ಇಂದಿನ ಸಾಮಾಜಿಕ ಆಚರಣೆಗಳಿಗೂ ಸಮನ್ವಯ ಮಾಡಲಾಗದ ಸ್ಥಿತಿಯನ್ನು ಈಗಾಗಲೇ ತಲುಪಿಬಿಟ್ಟಿದ್ದೇವೆ. ಈ ದುರಂತದ ನಡುವೆ ಅನುಕ್ಷಣವೂ ನೆನೆಯಬೇಕಾದ ಜ್ಞಾನಿಗಳನೇಕರನ್ನು ವರ್ಷಕ್ಕೊಮ್ಮೆಯಷ್ಟೇ ನೆನೆವ ಆಗಂತುಕ ಅಭಿಮಾನಿಗಳನ್ನುದ್ದೇಶಿಸಿ ಈ ಸಣ್ಣ ವಿಚಾರವನ್ನು ಪ್ರಸ್ತಾಪಿಸುತ್ತಿದ್ದೇನೆ.

ಪಂಗಡಗಳ ಡಂಬಾಚಾರಗಳನ್ನು ವಿಶ್ಲೇಷಿಸುವ ಮಹತ್ಕಾರ್ಯವನ್ನು ನಮ್ಮ ನಾಡಿನ ಅನೇಕ ಮಹನೀಯರುಗಳು ಮೊದಲಿಂದಲೂ ಮಾಡುತ್ತಾ ಬಂದಿರುವರು. ವಿಶ್ಲೇಷಣೆಯನ್ನು ವಿರೋಧವೆಂಬ ಅರ್ಥದಲ್ಲಿ ಅನುಸಂಧಾನ ಮಾಡಿದ್ದು ಬುದ್ಧಿಜೀವಿಗಳೆಂದು ತಳಕು ಹಾಕಿಕೊಂಡವರಷ್ಟೇ ಹೊರತು ಸತ್ಯದ ಹುಡುಕಾಟದಲ್ಲಿರುವವರಲ್ಲ. ವ್ಯಾಸರಿಂದ ಮೊದಲ್ಗೊಂಡು ದಾಸಪರಂಪರೆಯ ತನಕ ಅಥವಾ ಶರಣರವರೆಗೂ ಈ ವೈಚಾರಿಕಕ್ರಾಂತಿ ಹಲವು ಆಯಾಮಗಳನ್ನು ಪಡೆಯುತ್ತ ಹೋಯಿತು. ವಿಚಾರವಂತಿಕೆಯಲ್ಲಿ ಭಿನ್ನತೆಯಿದ್ದರೂ ಅದರ ಸತ್ವ ಒಂದೇ ಆಗಿದ್ದುದು ಒಪ್ಪಬೇಕಾದ ಸತ್ಯ. ಈ ನೆಲೆಗಟ್ಟಲ್ಲಿ ಸ್ಮರಣೀಯ ವ್ಯಕ್ತಿಗಳಲ್ಲೋರ್ವನಾದ ಕನಕನ ಕುರಿತಂತೆ ಸ್ವಲ್ಪ ತಿಳಿದು ಬೆಳೆಯೋಣ. ಲೇಖನದುದ್ದಕ್ಕೂ ಕನಕ ಎಂದು ಏಕವಚನದ ಬಳಕೆ ಮಾಡಲಾಗಿರುವ ಕಾರಣವೊಂದೇ- ಆತನ ಮೇಲಿನ ವಿಶೇಷ ಆಸ್ಥೆ, ಗೌರವವೇ ಹೊರತು ಕೆಲವರು ಅರಚುವ ‘ಜಾತಿತಾರತಮ್ಯದ’ ಈರ್ಷ್ಯೆಯಿಂದಲ್ಲ.

ಕನಕನ ಬದುಕು ನಮ್ಮೆಲ್ಲರ ಬದುಕಿಗೆ ಆದರ್ಶದ ಹೊತ್ತಿಗೆ. ಅದನ್ನು ಬಿಡಿಸಿ ಅದರಲ್ಲಿನ ಪುಟಗಳನ್ನು ಎಣಿಸಿ ಪೋಣಿಸಿದ ಪದಗಳನ್ನು ಅರ್ಥೈಸಿಕೊಂಡರಷ್ಟೇ ನಾವಾರೆಂದು ನಮಗರಿವಾಗುವುದು. ವೈದಿಕ ಸಾಹಿತ್ಯದ ಹಿನ್ನೆಲೆಯಲ್ಲಿ ಬೆಳೆದ ಅವರ ಚಿಂತನೆಗಳನ್ನು ಪೋಷಿಸಿ ಪೊರೆದಿದ್ದು ವ್ಯಾಸರಾಜರು, ಪುರಂದರದಾಸರೇ ಮೊದಲಾದ ಪ್ರಾತಃಸ್ಮರಣೀಯರು. ಆದ್ದರಿಂದಲೇ, ಅವರ ಕೃತಿಗಳುದ್ದಕ್ಕೂ ಜೀವೇಶಭೇದ ಮುಂತಾದ ಪ್ರಾಪಂಚಿಕಸತ್ಯಗಳು ಅನಾವರಣಗೊಳ್ಳುತ್ತ ಸಾಗುವುದು. ಬದುಕನ್ನು ಕಂಡುಕೊಂಡವನಿಗಷ್ಟೇ ಅದನ್ನು ಕಟ್ಟಿಕೊಟ್ಟವನನ್ನು ತಲುಪಲು ಸಾಧ್ಯವೆಂಬ ಮರ್ಮ ತಿಳಿಹೇಳಿದವನು ಕನಕ. ಹೆಸರಲ್ಲಿ ಮೋಹಕ ಚಿನ್ನವಿದ್ದರೂ ಅದನ್ನು ಚಾರಿತ್ರ್ಯದಲ್ಲಿ ಹೊಳಪಿಸಬೇಕೆಂಬ ಭವ್ಯಚಿಂತನೆಯನ್ನು ನಮಗಾಗಿ ಹೇಳಿದ ಅಕ್ಕಸಾಲಿಗ ಈ ಕನಕ. ತನ್ನ ಹುಟ್ಟು ಎಲ್ಲಿ, ಯಾರಲ್ಲಿ, ಮುಂತಾದ ಸಾಮಾನ್ಯದರಿವುಗಳಿಗೆ ಪ್ರಾಶಸ್ಱ ಕೊಡದೆ ಏತಕ್ಕೆ, ಹೇಗೆ ಎಂಬ ವಾಸ್ತವಗಳನ್ನು ತಿಳಿಗನ್ನಡದಲ್ಲಿ ತಿಳಿಹೇಳಿದ ಕ್ರಾಂತಿಕಾರಿ ಈತ. ಕನಕನ ನುಡಿಗಟ್ಟುಗಳಲ್ಲಿ ಹೊಮ್ಮಿದ ಉದಾತ್ತಚಿಂತನೆಗಳನ್ನು ಯಥಾಮತಿ ಮೆಲುಕುಹಾಕೋಣ.

ಜಾತ್ಯತೀತ ಕನಕ: ಜಾತಿಯೆನ್ನುವುದು ನಮ್ಮಿರಿವಿಗೆ ಮಾಪಕವೆನಿಸಿ, ಅದರ ಅಂತಃಸತ್ವವೆನಿಸಿಹ ಜವಾಬ್ದಾರಿಗಳನ್ನು ಅರಿತು ಮುನ್ನಡೆವ ಸಣ್ಣ ಗುರುತೇ ಹೊರತು ಹೆಮ್ಮೆಯ ವಿಷಯವಲ್ಲವೆಂದು ಭಗವಂತ ತನ್ನದೇ ನುಡಿಗಳಲ್ಲಿ ಎಲ್ಲೆಡೆ ವ್ಯಕ್ತಪಡಿಸಿದ್ದಾನೆ. ನಮ್ಮರಿವಿಗೆ ಬಾರದ ಕಾರಣ ನಾವು ನಮ್ಮ ಬೇಳೆ ಬೇಯಿಸಿಕೊಳ್ಳುವ ಅಥವಾ ತೆಗಳುವ ಸಾಧನವನ್ನಾಗಿ ಬಳಸುತ್ತಿರುವುದು ಮೂರ್ಖತನವಲ್ಲದೇ ಮತ್ತೇನು?. ಐತಿಹ್ಯವನ್ನು ಸರಿಯಾಗಿ ಅವಲೋಕಿಸಿದಾಗ ಅದರಲ್ಲಿನ ಸಾಧಕರೆಲ್ಲರೂ ಅಂತ್ಯಜರಾಗಿಯೂ ಮೇಲ್ಪಂಕ್ತಿಯನ್ನಲಂಕರಿಸಿರುವುದನ್ನು ಕಣ್ತುಂಬಿಕೊಳ್ಳುವೆವು. ಈ ನಿಟ್ಟಿನಲ್ಲಿ ತನ್ನದೇ ಪದಗಳಲ್ಲಿ ಬಣ್ಣಿಸುವ ಕನಕ-‘ಹುಟ್ಟಿದ ಯೋನಿಗಳಿಲ್ಲ ಮೆಟ್ಟಿದ ಭೂಮಿಗಳಿಲ್ಲ ಅಟ್ಟು ಉಣ್ಣದ ವಸ್ತುಗಳಿಲ್ಲ ಗುಟ್ಟು ಕಾಣಿಸೆ ಬಂತು ಹಿರಿದೇನು ಕಿರಿದೇನು ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ’ ಎಂದು ಕಳಕಳಿಯಿಂದ ಕಿವಿಹಿಂಡುವನು. ಉಚ್ಚಕುಲ-ನೀಚಕುಲಗಳೆಂದರೆ ಹೆಚ್ಚು ಸಾಮಾಜಿಕ ಸಾಮರಸ್ಯ ಬೆಸೆವ ಹಾಗೂ ಸಾಮರಸ್ಯಕ್ಕೆ ಪೋಷಕವಾಗಬಲ್ಲ ಕುಲಗಳೆಂದು ಹೊರತು ಶ್ರೇಷ್ಠ-ಕನಿಷ್ಟ/ಅನಿಷ್ಟಗಳೆಂದಲ್ಲ. ಭಾಷಾಭಾವವನ್ನು ಅರಿಯದೆ ನೀಚಶಬ್ದಕ್ಕೆ ಕೆಳಮಟ್ಟದ್ದೆಂದು ಅರಿತು ಬೊಬ್ಬಿಟ್ಟರೆ ಅದು ಹುಂಬತನವಷ್ಟೆ. ನಮ್ಮೆಲ್ಲರ ಅಸ್ತಿತ್ವಕ್ಕೆ ಕಾರಣನಾದ ಭಗವಂತನನ್ನು ಮರೆತು ಉಚ್ಚತ್ವ ನೀಚತ್ವಭಾವವನ್ನು ಮೇಲೆಳೆದುಕೊಳ್ವ ನಾವು ಕುಲದ ನೆಲೆಯೇನೆಂಬುದರ ಅರಿವೇ ಇಲ್ಲದೆ ಕೂಗಾಡುತ್ತಿರುವೆವು. ಎಲ್ಲದಕ್ಕೂ ನೆಲೆಯೆನಿಸಿದ ಭಗವಂತನ ಪಾದಸೇವಿಸುವವನು ಆತನ ಕುಲಜನೆನ್ನಿಸುವನು. ಇಂತಹ ಉದಾತ್ತತೆಯನ್ನು ಅಂತರಂಗಭಕ್ತನಾದ ಕನಕನಲ್ಲಷ್ಟೇ ನೋಡಲು ಸಾಧ್ಯ, ಪ್ರತಿನಿಧಿಗಳೆನಿಸುವವರಲ್ಲಿ ಹುಡುಕಬೇಕೇನೋ! ಮನುಕುಲಕ್ಕೆ ಜಾತ್ಯತೀತತೆಯನ್ನು ಸಾರುವ-‘ಕುಲ ಕುಲ ಕುಲವೆನ್ನುತಿಹರು, ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ || ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ ಹಸುವಿನ ಮಾಂಸದೊಳುತ್ಪತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ?’

ಹೂವು ಹುಟ್ಟಿದ್ದು ಕೆಸರಲ್ಲಾದರೂ ಮೆಟ್ಟಿದ್ದು ಭಗವಂತನ ಪಾದವನ್ನು, ಹಾಲನು ಸೇದಿದ್ದು ಹಸುವಿನ ಮಜ್ಜೆಯಿಂದಾದರೂ ಬಳಸಿ, ಸೇವಿಸದ್ದು ಮನುಜನಲ್ಲವೇ! ಹೀಗೆ ಪಟ್ಟಿಮಾಡಿದಂತೆಲ್ಲ ಜಾತ್ಯತೀತತೆಯನ್ನು ಕೆನೆಪದರದಂತೆ ಬಡಿಸುವ ಕನಕನ ಉದಾತ್ತತೆ ಹೇಳಿದಷ್ಟೂ ಸಾಕಾಗದು.

ಕನಕ-ದಾಸರಾದ ಬಗೆ: ಕನಕದಾಸರ ದಾಸ್ಯ ಇಂದಿನ ಸಮಾಜದಲ್ಲಿ ಕಾಣುವ ಶೋಷಿತ ದಾಸ್ಯವಲ್ಲ ಬದಲಿಗೆ ಅಂತರಂಗದಲ್ಲಿ ಭಗವಂತನಿಗೆ ತನ್ನನ್ನೇ ಒಪ್ಪಿಸಿಕೊಂಡ ಪ್ರೇಮನಿವೇದನೆ. ಈ ಪರಿಯ ಅರ್ಪಣಾಭಾವ ಬರುವುದೇ ಏಕಾಂತಭಕ್ತರೆನಿಸಿದವರಿಗೆ. ಸಮಾಜದ ಓರೆಕೋರೆಗಳನ್ನೆಲ್ಲ ಅಳೆದು ತೂಗುವವರಿಗೆ ಪ್ರಾಥಮಿಕವಾಗಿರಬೇಕಾದ ತಿಳಿವೇ- ‘ಎಲ್ಲದಕೂ ಕಾರಣ ಎಲ್ಲವನು ಬಲ್ಲ ಭಗವಂತನೆಂದು’. ಇದು ನಿಚ್ಚಾದರೆ ಅವ ನೆಚ್ಚಿ ದಾಸ್ಯಭಾವಕ್ಕೆ ಇಂಬು ನೀಡುವನು ಇಲ್ಲವಾದಲ್ಲಿ ಬದುಕು ನಿರರ್ಥಕವೆನ್ನುವರು. ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವ’ ಎಂಬ ಪದ್ಯದಲ್ಲಿನ ಪ್ರಶ್ನೆಗಳೆಲ್ಲವೂ ನಮ್ಮ ಬದುಕಿಗೆ ಹಿಡಿದ ಕನ್ನಡಿಯಾಗಿವೆ. ಜಗತ್ತಿನ ಅಸಾಧ್ಯತೆಗಳೆಲ್ಲವನ್ನೂ ಸಾಧ್ಯವನ್ನಾಗಿಸಿಕೊಳ್ಳಬಹುದು ಆದರೆ, ನಿನ್ನ ಚರಣದ ಹರವು ಎತ್ತರಗಳೇ ಕೈಗೆಟುಕದಂತಾಗಿದೆ! ಎಂದು ಆರ್ದ್ರಭಾವದಿಂದ ಕೊಂಡಾಡುವರು.

ರಾಗಿಯ ಸಂದೇಶ ಬಿತ್ತರಿಸಿದ ವಿರಾಗಿ: ‘ರಾಮಧಾನ್ಯಚರಿತೆ’ ಎಂಬ ಅಪೂರ್ವಕೃತಿಯಲ್ಲಿ ಕನಕ ಗುಣಾವಗುಣಗಳನ್ನು ರಾಗಿ-ಭತ್ತಗಳ ಉಪಮೆಯೊಂದಿಗೆ ಬಣ್ಣಿಸುವ ರೀತಿಯೇ ಅತ್ಯಂತ ಹೃದ್ಯ. ಅವತಾರಕಾರ್ಯದ ಮೂಲೋದ್ದೇಶವಾದ ದುಷ್ಟನಿಗ್ರಹ ಮಾಡಿ ಶ್ರೀರಾಮ ಪರಿವಾರದೊಂದಿಗೆ ಹಿಂದಿರುಗುವಾಗ ಎದುರುಗೊಳ್ವ ಮುನಿಗಳನೇಕರು ಶ್ರೀರಾಮನ ಪರಿವಾರವನ್ನು ಬಗೆಯ ಧಾನ್ಯಗಳೊಂದಿಗೆ ಸತ್ಕರಿಸುವರು, ಆಗ ಭತ್ತ-ರಾಗಿಗಳ ನಡುವೆ ಹುಟ್ಟುವ ಶ್ರೇಷ್ಠರಾರೆಂಬ ಗೊಂದಲವೇ ಈ ಕೃತಿಯ ಕೇಂದ್ರಬಿಂದು. ಕೊನೆಗೆ ಶ್ರೀರಾಮನು ಈರ್ವರನ್ನು ಆರು ಮಾಹೆಗಳ ತನಕ ಬಂಧಿಸಿಡಲು ಇಬ್ಬರಲ್ಲಿ ಭತ್ತ ಒಣಗಿ ನಲುಗಿದರೆ, ರಾಗಿ ಎಂದಿನ ಲವಲವಿಕೆಯಿಂದ ಪುಟಿಯುತ್ತಿರುವುದ ಕಂಡು ರಾಗಿಯನ್ನು ಓಲೈಸುವುದೇ ಕಥೆಯ ತಿರುಳು. ಇಲ್ಲಿನ ಕಥೆ ಕಾಲ್ಪನಿಕವಾದರೆ ಸಂದೇಶ ಸಾರ್ವಕಾಲಿಕವಾದುದು. ರಾಗಿ ಎಂದರೆ ಭಗವಂತನ ಮೇಲೆ ಅನುರಾಗ(ಶುದ್ಧ ಪ್ರೀತಿ) ಉಳ್ಳವ ಎಂದರ್ಥ. ಅದು ಎಂದಿಗೂ ಬಾಡದ ರೀತಿಯಲ್ಲಿ ಅಭಿವ್ಯಕ್ತವಾದರೆ ಅದರಿಂದ ಸಾರ್ಥಕ್ಯ ಸಿಗುವುದೇ ಹೊರತು ದುಃಖವಲ್ಲ ಎಂಬ ಸೂಚ್ಯ ಅಂಶವನ್ನು ತಿಳಿಯಾಗಿ ಉಣಬಡಿಸುವ ಕನಕ ಪ್ರಾಪಂಚಿಕ ಸುಖವೆಲ್ಲ ಅಜೀರ್ಣಕ್ಕೆ ಕಾರಣವೆಂದು ಅರುಹುವನು.

ಕ್ರಾಂತಿ – ತಾರಕವೆಂದ ಕನಕ: ಕ್ರಾಂತಿಕಾರಿಗಳೆಂಬ ಹಣೆಪಟ್ಟಿಯೊಂದಿಗೆ ಬೀದಿಗಿಳಿವ ಮಂದಿಗೆ ಕನಕ ಕುಟುಕುವ ಪರಿಯನೊಮ್ಮೆ ಈ ಪದ್ಯದಲ್ಲಿ ಕಾಣಿ; ‘ಉತ್ತಮರ ಜೀವನಕೆ ದಾರಿಯಿಲ್ಲ. ನಿತ್ಯದಲಿ ಕಳುವು ವ್ಯಭಿಚಾರವುಳ್ಳವರೆಲ್ಲ ಅರ್ಥ ಸಂಪದರಾಗಿ ಅನುಭವಿಸುತಿಹರು. ಹರಿಹರ ಪೂಜೆಗಳು ಹಗರಣಗಳಾದವು ಉರಿಮೋರೆ ಚಾಮುಂಡಿ ಶಕ್ತಿಗಳಿಗೆ ಕುರಿ ಕೋಣ ನೈವೇದ್ಯ ಧೂಪದೀಪಗಳಿಂದ ಪರಮ ಭಕ್ತಿಯ ಮಾಡಿ ಪೂಜಿಸುವರಯ್ಯ’. ಇಲ್ಲಿನ ಪದಗಳ ಭಾವವನ್ನು ಇಂದು ಕಣ್ಣಾರೆ ಕಂಡರೂ ಕಣ್ಪಟ್ಟಿ ಹಾಕಿದವರಂತೆ ಬದುಕುತ್ತಿದ್ದೇವೆ. ಇಲ್ಲಿ ಸಾರ್ವಕಾಲಿಕ ರಾಜಕೀಯದ ವಿಶ್ಲೇಷಣೆಯಿದೆ, ದುರಾಚಾರದಿಂದ ಕೊಬ್ಬಿದ ಮೈಗಳ್ಳರ ಚಿತ್ರಣವಿದೆ, ಡಂಬಾಚಾರಿಗಳ ಕುರಿತ ವ್ಯಂಗ್ಯವಿದೆ. ಒಟ್ಟಾರೆ ಆತ್ಮಾವಲೋಕನಕ್ಕೆ ಅವಕಾಶವಿದೆ. ಇಂತಹ ಮಾತುಗಳು ಕ್ರಾಂತಿಕಾರಕವೆನಿಸುವವೆ ಹೊರತು ವರ್ಗೀಯ ನಿಂದನೆಗಳಾಗಲಿ, ಪ್ರವೃತ್ತಿಯಿರದ ಆಶ್ವಾಸನೆಗಳಾಗಲಿ ಕ್ರಾಂತಿಕಾರಕಗಳೆನಿಸುವುದಿಲ್ಲ. ಕನಕದಾಸರನ್ನು ಜನಾಂಗೀಯ ವ್ಯಕ್ತಿಯನ್ನಾಗಿ ಭಾವಿಸದೆ ಪರಮಹರಿಭಕ್ತನೆಂದರಿತಾಗ ನಮ್ಮಲ್ಲೂ ಆ ದೈವೀಭಾವ ಜಾಗೃತವಾಗುವುದು. ಪರಮವೈಷ್ಣವನೆನಿಸಿದ ಈ ದಾಸಶ್ರೇಷ್ಠನನ್ನು ಮನುಕುಲದ ಪ್ರತಿನಿಧಿಯಾಗಿ, ಆದರ್ಶಗಳ ಭಂಡಾರಿಯಾಗಿ ಅರ್ಚಿಸಿದಾಗ ಅವರಿದ್ದ ನಾಡಿನವರು ನಾವೆಲ್ಲ ಎಂಬ ಧನ್ಯತೆ ಮೂಡುವುದು. ವಸ್ತುನಿಷ್ಠವಾಗಿ ಚಿಂತಿಸಿದಾಗ ಅರಿವಿಗೆ ಬರುವ ಮೊದಲ ಸಂಗತಿಯೇ- ಇತಿಹಾಸವಾಗಲಿ, ಸಾಮಾಜಿಕ ಹರಿಕಾರರಾಗಲಿ ನಮಗಾಗಿ ಬಿಟ್ಟುಕೊಟ್ಟ ಸಂಗತಿಗಳು ಅಪರಿಮಿತ. ಆದರೆ ಅದರ ಆಳವನ್ನರಿಯದೆ, ಅಳವಡಿಕೆಯಲ್ಲಿ ಮುಂದಾಗದೇ ಕೇವಲ ವರ್ಷಕ್ಕೊಮ್ಮೆ ಹಾರತುರಾಯಿಗಳೊಂದಿಗೆ ಆಚರಿಸಿ ಬೀಗುವ ಪದ್ಧತಿಯನ್ನು ಮೊದಲು ಕೊನೆಗಾಣಿಸಬೇಕಿದೆ. ಈ ಎಲ್ಲ ಜ್ಞಾನಿಗಳ ಹಾದಿಯನ್ನು ಸರಿಯಾಗಿ ಅರ್ಥೈಸಿಕೊಂಡು ಮುನ್ನಡೆದರೆ, ಜಯಂತಿ ಆಚರಿಸಿದ್ದಕ್ಕೆ ಸಾರ್ಥಕತೆ ಸಿಗುವುದು. ಕನಕದಾಸರ ಆದರ್ಶಗಳು, ಜ್ಞಾನ-ಭಕ್ತಿ-ವೈರಾಗ್ಯಗಳು ವಿಶೇಷವಾಗಿ ಹರಿಸ್ಮರಣೆಯನ್ನು-ಜನಗಳಲ್ಲಿ, ಸಮಾಜದಲ್ಲಿ ಬೇಡುತ್ತ ಇಂದಿನ ಜಯಂತಿಯಿಂದಾದರೂ ಕನಕದಾಸರನ್ನು ಮತ್ತಷ್ಟು ನೆನೆಯೋಣ.

(ಲೇಖಕರು ಸಂಸ್ಕೃತ ಪ್ರವಾಚಕರು ಹಾಗೂ ವಿಮರ್ಶಕರು)

Leave a Reply

Your email address will not be published. Required fields are marked *

Back To Top