ಕನಕಪುರ ರಸ್ತೆ, ಕೆಂಗೇರಿ ಪ್ರದೇಶದಲ್ಲಿ ಭೂಮಿಗೆ ಚಿನ್ನದ ಬೆಲೆ

  • ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು

ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ದಕ್ಷಿಣ ಹಾಗೂ ಪಶ್ಚಿಮ ಭಾಗದ ಮೆಟ್ರೋ ವಿಸ್ತರಣಾ ಮಾರ್ಗದ ಕಾಮಗಾರಿಗೆ ಚುರುಕು ಸಿಕ್ಕಿದೆ. ಈಗಾಗಲೇ ಕನಕಪುರ ರಸ್ತೆ ಹಾಗೂ ಮೈಸೂರು ರಸ್ತೆಯ ಕೆಂಗೇರಿಯವರೆಗಿನ ಮೆಟ್ರೋ ಕಾಮಗಾರಿ ವೇಗದಲ್ಲಿ ನಡೆಯಯತ್ತಿದ್ದು, 2019ರೊಳಗೆ ಎರಡೂ ಮಾರ್ಗದ ವಿಸ್ತರಣೆ ಮುಗಿಯುವ ಸಾಧ್ಯತೆಯಿದೆ. ಇದು ನೇರವಾಗಿ ಈ ಭಾಗದ ಪ್ರಾಪರ್ಟಿಗಳ ಮೇಲೆ ಪ್ರಭಾವ ಬೀರಿದೆ.

ಈ ಎರಡೂ ಮಾರ್ಗದಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದ್ದಂತೆಯೇ ಪ್ರಾಪರ್ಟಿಯ ಬೆಲೆಯೂ ಏರಿಕೆಯಾಗುತ್ತಿದ್ದು, ಹೂಡಿಕೆಗೆ ಸೂಕ್ತ ಸಮಯ ಎಂದು ರಿಯಲ್ ಎಸ್ಟೇಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನಕಪುರ ರಸ್ತೆಯಲ್ಲಿ ನಮ್ಮ ಮೆಟ್ರೋ ಮೊದಲನೇ ಹಂತದಲ್ಲಿ ಯಲಚೇನಹಳ್ಳಿಯವರೆಗೆ ಮೆಟ್ರೋ ಮಾರ್ಗವಿದೆ. 2017ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಂಪೂರ್ಣ ನಾಗಸಂದ್ರ-ಯಲಚೇನಹಳ್ಳಿ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಓಡಾಟ ಆರಂಭವಾಗಲಿದೆ.

ಪರ್ಯಾಯವಾಗಿ ಯಲಚೇನಹಳ್ಳಿ – ಅಂಜನಾಪುರ ಟೌನ್​ಶಿಪ್ 6.54 ಕಿ.ಮೀ.ವಿಸ್ತರಣಾ ಕಾಮಗಾರಿಯೂ ಚುರುಕಿನಿಂದ ಸಾಗುತ್ತಿದೆ. ಈ ವಿಸ್ತರಣಾ ಮಾರ್ಗದಲ್ಲಿ ಅಂಜಾನಪುರ ರೋಡ್ ಕ್ರಾಸ್, ಕೃಷ್ಣ ಲೀಲಾ ಪಾರ್ಕ್, ವಜ್ರಹಳ್ಳಿ, ತಲಘಟ್ಟಪುರ ಹಾಗೂ ಅಂಜನಾಪುರ ಟೌನ್​ಶಿಪ್ ಹೀಗೆ 5 ಪ್ರಮುಖ ನಿಲ್ದಾಣಗಳು ಬರಲಿದೆ. ಅದೇ ರೀತಿ ಮೈಸೂರು ರಸ್ತೆ/ನಾಯಂಡಹಳ್ಳಿಯಿಂದ ಕೆಂಗೇರಿಯವರೆಗೂ 7 ಕಿ.ಮೀ.ನ ಮೆಟ್ರೋ ಮಾರ್ಗದ ಕಾಮಗಾರಿಗೆ ವೇಗ ದೊರಕಿದ್ದು, ಸುತ್ತಮುತ್ತಲಿನ ಭೂಮಿ ಹಾಗೂ ಪ್ರಾಪರ್ಟಿಗಳ ಬೆಲೆಯೂ ಏರಿಕೆಯಾಗುತ್ತಿದೆ.

ಎರಡೂ ಮೆಟ್ರೋ ಮಾರ್ಗಗಳು ಅಂತ್ಯವಾಗುವ ಪ್ರದೇಶ ನಗರದ ಹೊರಭಾಗದಲ್ಲಿದ್ದು ಟ್ರಾಫಿಕ್ ಸಮಸ್ಯೆಯಿಂದ ದೂರವಾಗಿದೆ. ಮೈಸೂರು ರಸ್ತೆ 10 ಪಥದ ರಸ್ತೆಯಾಗಲಿದ್ದು, ಅದೇ ರೀತಿ ಕನಕಪುರ ರಸ್ತೆಯೂ 4 ಪಥದ ರಸ್ತೆಯಾಗಲಿದೆ. ಬಿಡದಿ ಟೌನ್​ಶಿಪ್ ಕೂಡ ಪ್ರಾಪರ್ಟಿ ಬೆಲೆಯ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಈಗಾಗಲೇ ಈ ಪ್ರದೇಶದಲ್ಲಿ ಪ್ರಾಪರ್ಟಿಗಳಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು. ಮುಂದಿನ ದಿನಗಳಲ್ಲಿ ಮೆಟ್ರೋ ವಿಸ್ತರಣೆ ಸಂಪೂರ್ಣವಾಗುತ್ತಿದ್ದಂತೆಯೇ ಪ್ರಾಪರ್ಟಿ ಬೆಲೆ ದುಪ್ಪಟ್ಟಾಗಲಿದೆ.

ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆ ಮೆಟ್ರೋ ವಿಸ್ತರಣೆಯಿಂದಾಗಿ ಎರಡೂ ಪ್ರದೇಶದ ಪ್ರಾಪರ್ಟಿಗಳ ಬೆಲೆ ಏರಿಕೆಯಾಗಲಿದೆ. ಎರಡೂ ಪ್ರದೇಶದಲ್ಲಿ ಬಹಳಷ್ಟು ಭೂಮಿಯ ಲಭ್ಯತೆಯಿದೆ. ಈಗಾಗಲೇ ಕನಕಪುರ ರಸ್ತೆಯಲ್ಲಿ ಶಿಕ್ಷಣ ಸಂಸ್ಥೆಗಳ ಸಾಲೇ ಇದೆ. ಉತ್ತಮವಾದ ಸಂಪರ್ಕ ಸೌಲಭ್ಯವಿದೆ.

| ಸುರೇಶ್ ಹರಿ ಕ್ರೖೆಡೈ ಬೆಂಗಳೂರು ಕಾರ್ಯದರ್ಶಿ

ಹೂಡಿಕೆಗೆ ಇದು ಸೂಕ್ತ ಸಮಯ

ಕನಕಪುರ ರಸ್ತೆ ಹಾಗೂ ಮೈಸೂರು ರಸ್ತೆಯಲ್ಲಿನ ಪ್ರಾಪರ್ಟಿಗಳ ಮೇಲೆ ಹೂಡಿಕೆ ಅಥವಾ ಖರೀದಿ ಮಾಡಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಡುತ್ತಾರೆ ಡಿಎಸ್ ಮ್ಯಾಕ್ಸ್​ನ ನಿರ್ದೇಶಕ ದಯಾನಂದ್. ಕನಕಪುರ ರಸ್ತೆ ನಗರಕ್ಕೆ ಹತ್ತಿರವಾಗಿದ್ದು ಬೆಂಗಳೂರಿನ ಪೂರ್ವ ಮತ್ತು ಉತ್ತರ ಭಾಗಗಳಿಗೆ ಹೋಲಿಸಿದರೆ ಅಷ್ಟೊಂದು ದಟ್ಟಣೆಯಿಲ್ಲ. ಮೆಟ್ರೋ ಕಾಮಗಾರಿಯೂ ವಿಸ್ತರಣೆಯಾಗುತ್ತಿದ್ದು, ಕನಕಪುರ ರಸ್ತೆಯ ನೈಸ್ ಸಮೀಪದಿಂದ ಅರ್ಧ ಗಂಟೆಯೊಳಗೆ ಮೆಜೆಸ್ಟಿಕ್ ತಲುಪಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಈ ಪ್ರದೇಶದ ಪ್ರಾಪರ್ಟಿ ಬೆಲೆಯೂ ಹೆಚ್ಚಲಿದೆ. ಸದ್ಯ ಇಲ್ಲಿನ ಅಪಾರ್ಟ್​ವೆುಂಟ್​ಗಳ ಬೆಲೆ ಪ್ರತಿ ಚದರಡಿಗೆ 4000ರಿಂದ 4500 ರೂ. ಇದ್ದು ಮುಂದಿನ ವರ್ಷಗಳಲ್ಲಿ 6000ರೂ.ವರೆಗೂ ಏರಿಕೆಯಾಗಲಿದೆ. ಹೀಗಾಗಿಯೇ ತಕ್ಷಣ ಹೂಡಿಕೆ ಮಾಡಲು ಕನಕಪುರ ರಸ್ತೆ ಪ್ರದೇಶ ಸೂಕ್ತ ಎನ್ನುತ್ತಾರೆ ದಯಾನಂದ್.

Leave a Reply

Your email address will not be published. Required fields are marked *