ಕದಂಬ ಆವರಣದಲ್ಲಿ ಸಾವಯವ ಸಂತೆ

ಶಿರಸಿ: ರೈತರು ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ, ಆಹಾರ ಧಾನ್ಯಗಳಿಗೆ ನಗರದ ಕದಂಬ ಸಂಸ್ಥೆ ಮಾರುಕಟ್ಟೆ ಒದಗಿಸಿದೆ. ರೈತರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಲ್ಪನೆಯೊಂದಿಗೆ ಸಂಸ್ಥೆ ಹಮ್ಮಿಕೊಂಡಿರುವ ‘ಸಾವಯವ ಸಂತೆ’ಗೆ ಶನಿವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ, ‘ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಇಲ್ಲ ಎಂಬ ಕೂಗು ಒಂದೆಡೆ ಕೇಳುತ್ತಿದ್ದರೆ, ಇನ್ನೊಂದೆಡೆ ಗ್ರಾಹಕರು ಶುದ್ಧವಾದ ಆಹಾರೋತ್ಪನ್ನಗಳು ಲಭ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಾವಯವ ಮಾದರಿಯಲ್ಲಿ ರೈತರಿಗೆ ತರಕಾರಿ ಮತ್ತು ಆಹಾರೋತ್ಪನ್ನಗಳನ್ನು ಬೆಳೆಯಲು ನಾವು ಉತ್ತೇಜಿಸುವ ಜೊತೆಗೆ ಗ್ರಾಹಕರು ನೇರವಾಗಿ ರೈತರಿಂದ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂಬ ಕಲ್ಪನೆಯೊಂದಿಗೆ ಈ ಸಾವಯವ ಸಂತೆ ಹಮ್ಮಿಕೊಳ್ಳಲಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ ಗುಣಮಟ್ಟದ ತರಕಾರಿ ಇಲ್ಲಿ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ’ ಎಂದರು.

ಕದಂಬ ಮಾರ್ಕೆಟಿಂಗ್ ವ್ಯವಸ್ಥಾಪಕ ವಿಶ್ವೇಶ್ವರ ಭಟ್ ಮಾತನಾಡಿ,‘ಪ್ರತಿ 15 ದಿನಗಳಿಗೆ ಒಮ್ಮೆ ಸಂಸ್ಥೆಯ ಆವರಣದಲ್ಲಿ ಸಾವಯವ ಸಂತೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ’ ಎಂದರು.

ಕೃಷಿ ಇಲಾಖೆ ಪ್ರಮುಖರಾದ ರಶ್ಮಿ ಶಹಾಪುರಮಠ, ಪ್ರಮುಖರಾದ ಕೆ. ವಿ. ಕೊರ್ಸೆ ಇತರರಿದ್ದರು.

ಹಲವು ಬೆಳೆಗಳ ಮಾರಾಟ: ಅಂಕೋಲಾದಿಂದ ರೈತರು ತಂದ ಕಲ್ಲಂಗಡಿ ಹಣ್ಣುಗಳು, ಸುವರ್ಣಗಡ್ಡೆ, ಗೋಕರ್ಣದ ರೈತರು ತಂದ ಮೆಣಸು, ಗೆಣಸು, ತೊಂಡೆಕಾಯಿ ಹಾಗೂ ಸೊಪ್ಪು ಅಧಿಕ ಸಂಖ್ಯೆಯಲ್ಲಿ ಮಾರಾಟವಾಯಿತು. ಜೊಯಿಡಾ ಹಾಗೂ ವಿವಿಧ ಭಾಗದಿಂದ ಆಗಮಿಸಿದ 20ಕ್ಕೂ ಅಧಿಕ ರೈತರು ತಮ್ಮ ಹೊಲದಲ್ಲಿ ಬೆಳೆದ ಹಲವು ಉತ್ಪನ್ನಗಳನ್ನು ಸಂತೆಯ ಮೂಲಕ ಮಾರಾಟ ಮಾಡಿದರು.