ಕತ್ತಲೆಯಲ್ಲಿ 1298 ಅಂಗನವಾಡಿ

ಹರೀಶ್ ಮೋಟುಕಾನ ಮಂಗಳೂರು
ಬಡತನ ಮತ್ತು ಅಪೌಷ್ಟಿಕತೆ ಹೋಗಲಾಡಿಸಿ, ಭವಿಷ್ಯದ ಶಿಕ್ಷಣಕ್ಕೆ ತಳಹದಿ ಹಾಕಿ ಕೊಡುವುದು ಅಂಗನವಾಡಿಗಳ ಉದ್ದೇಶ. ಆದರೆ ಬಿಲ್ ಪಾವತಿಯಾಗಿಲ್ಲ ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 1298 ಅಂಗನವಾಡಿಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮಕ್ಕಳು ಗಾಳಿ, ಬೆಳಕು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಸಂಪರ್ಕ ಕಡಿತಗೊಂಡ ಅಂಗನವಾಡಿಗಳ ಪೈಕಿ ಹಾಸನ ಜಿಲ್ಲೆ (272) ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ (3) ಕೊನೇ ಸ್ಥಾನದಲ್ಲಿದೆ. ಹಾವೇರಿ ಜಿಲ್ಲೆಯ 263, ಮೈಸೂರು 211, ಚಿಕ್ಕಬಳ್ಳಾಪುರ 113, ಯಾದಗಿರಿ 110, ಗದಗ 98, ರಾಮನಗರ 96, ಬೆಳಗಾವಿ 24 ಹಾಗೂ ದಾವಣಗೆರೆಯ 17 ಅಂಗನವಾಡಿಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಮೂರ್ನಾಲ್ಕು ತಿಂಗಳಿಂದ ಬಿಲ್ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕಾಗಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇದರಿಂದ ಫ್ಯಾನ್ ಇಲ್ಲದೆ ಸೆಕೆ ಹಾಗೂ ಬೆಳಕಿಲ್ಲದೆ ಕತ್ತಲೆಯಲ್ಲಿ ನಾಲ್ಕು ಗೋಡೆಗಳ ನಡುವೆ ಮಕ್ಕಳು ಕಾಲ ಕಳೆಯುವಂತಾಗಿದೆ. ಪರಿಣಾಮವಾಗಿ ಒಂದು ತಿಂಗಳಿನಿಂದ ಈ ಅಂಗನವಾಡಿಗಳಿಗೆ ಬರುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ.

ಹಲವು ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಲ್ಲ. ಹೆಚ್ಚಿನ ಅಂಗನವಾಡಿ ಕೇಂದ್ರಗಳಲ್ಲಿ ಶೌಚಗೃಹ, ಕುಡಿಯುವ ನೀರು ಮುಂತಾದ ಮೂಲಸೌಕರ್ಯವಿಲ್ಲ. ಕೆಲವೊಂದು ಅಂಗನವಾಡಿಗಳು ದಾನಿಗಳ ನೆರವಿನಿಂದ ಎಲ್ಲ ಸೌಲಭ್ಯಗಳನ್ನು ಒಳಗೊಂಡು ಮಾದರಿಯಾಗಿವೆ.

ಸೋಲಾರ್ ಚಿಂತನೆ?:
ಸೋಲಾರ್ ದಾರಿದೀಪ ಮಾದರಿಯಲ್ಲಿ ಅಂಗನವಾಡಿಗಳಿಗೆ ಸೋಲಾರ್ ಅಳವಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವ ಇದೆ. ವಿದ್ಯುತ್ ಉಳಿಕೆಯಾಗುವುದರ ಜತೆಗೆ ಸ್ವಾವಲಂಬನೆ ಸಾಧ್ಯವಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಡಾ.ಜಯಮಾಲ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಸರ್ಕಾರದ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ತಿಳಿಸಿದ್ದಾರೆ. ಅಂಗನವಾಡಿಗಳ ವಿದ್ಯುತ್ ಬಿಲ್ ಗ್ರಾಪಂಗಳು ಪಾವತಿಸುವಂತೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಶೀಘ್ರ ಈ ಕುರಿತ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದೂ ತಿಳಿಸಿದ್ದಾರೆ.

  • ಎಲ್ಲ ಅಂಗನವಾಡಿ ಕೇಂದ್ರಗಳ ವಿದ್ಯುತ್ ಬಿಲ್ ಸರ್ಕಾರದಿಂದಲೇ ಪಾವತಿ ಮಾಡಬೇಕು ಎಂದು ಸಚಿವೆ ಡಾ.ಜಯಮಾಲ ಅವರಿಗೆ ಮನವಿ ಸಲ್ಲಿಸಿದ್ದೇವೆ. ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಲ್ಲೆಯಲ್ಲಿ ಮೂರು ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಸಮಸ್ಯೆ ಇದೆ.
    |ಸುಂದರ ಪೂಜಾರಿ, ಉಪನಿರ್ದೇಶಕರು, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ರಾಜ್ಯದ ಅಂಗನವಾಡಿಗಳ ವಿದ್ಯುತ್ ಬಿಲ್‌ಗಳನ್ನು ಕಾರ್ಯಕರ್ತರೇ ಕಟ್ಟುತ್ತಿದ್ದಾರೆ. ಅವರ ಬೇಡಿಕೆ ಈಡೇರಿಸದೆ ಇರುವುದರಿಂದ ಕೆಲವು ಕಡೆ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಹಾಗಾಗಿ ವಿದ್ಯುತ್ ಕಡಿತ ಮಾಡಿದ್ದಾರೆ. ತಿಂಗಳಿಗೆ 80ರಿಂದ 100 ರೂ.ಕೈಯಿಂದಲೇ ಹಣ ಹಾಕಿ ಬಿಲ್ ಕಟ್ಟುತ್ತಿದ್ದರು.
    | ಜಯಲಕ್ಷ್ಮಿ ಬಿ.ಆರ್, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ