Friday, 16th November 2018  

Vijayavani

Breaking News

ಕತೆ ಕತೆ ಕಾಚಿ…. ಒಲೆ ಮುಂದೆ ಕೂಚಿ…..

Thursday, 12.10.2017, 3:02 AM       No Comments

ಮಕ್ಕಳ ಕಲ್ಪನಾಲೋಕ ಬೆಳೆಯುವುದೇ ಕತೆ ಹೇಳುವ-ಕೇಳುವ ಪ್ರಕ್ರಿಯೆಯಿಂದ. ಆಸಕ್ತಿಯಿಂದ ಕತೆ ಕೇಳಬಯಸುವ ಮಕ್ಕಳು ಈಗಲೂ ಸುತ್ತಮುತ್ತ ಸಾಕಷ್ಟಿದ್ದರೂ, ನಾವೇ ಕತೆ ಹೇಳುವುದನ್ನು ಮರೆತುಬಿಟ್ಟಿದ್ದೇವೆ. ಪರಿಣಾಮ ಅವು ಟಿವಿ ಮುಂದೆ ಕೂರುವಂತಾಗಿದೆ. ಹೀಗೇ ಮುಂದುವರಿದರೆ, ನಮ್ಮ ಹಾಗೂ ಮಕ್ಕಳ ನಡುವಿನ ಬಾಂಧವ್ಯಸೇತು ದುರ್ಬಲವಾಗದೇ? 

ಅದೊಂದು ಕಾಲವಿತ್ತು. ಸೂರ್ಯ ಪಶ್ಚಿಮದ ಮನೆಯೊಳಗೆ ತೂರಿಕೊಂಡು ಬೆಳಕಿನ ಕಿರಣ ಮಾಯವಾಗಿ ಕತ್ತಲು ಆವರಿಸಿಕೊಳ್ಳುವುದನ್ನು ನಾವು ಕಾಯುತ್ತಿದ್ದ ಕಾಲ. ಮನೆ ಮಂದಿಯೂ ಗೂಡು ಸೇರಿ ವಿರಾಮವಾಗಿ ಕುಳಿತುಕೊಳ್ಳುವ ಹೊತ್ತದು. ನಾವಿದ್ದ ಮನೆಗಳಲ್ಲಿ ವಿದ್ಯುದ್ದೀಪಗಳ ಬೆಳಕು ಇದ್ದರೂ ಅದು ಉರಿಯುತ್ತಿದ್ದ ದಿನಗಳು ಇಷ್ಟೇ ಎಂದು ಬೆರಳಲ್ಲಿ ಲೆಕ್ಕಹಾಕಿ ಹೇಳಬಹುದಿತ್ತು. ಆದ್ದರಿಂದ ಸೀಮೆಎಣ್ಣೆಯ ದೀಪಗಳು ಮಂದವಾಗಿ ತಲೆ ಅಲುಗಿಸುತ್ತ ಅವುಗಳಿದ್ದ ಜಾಗಕ್ಕೆ ನಮ್ಮನ್ನು ಆಹ್ವಾನಿಸುತ್ತಿದ್ದವು. ಶಾಲೆಯ ಕೆಲಸವೇನಾದರೂ ಇದ್ದರೆ ಪಟಪಟನೆ ಮುಗಿಸಿಬಿಡುತ್ತಿದ್ದೆವು. ನಂತರ ಏನಿದ್ದರೂ ಕಿವಿಗಳಿಗೇ ಕೆಲಸ.

ಹೀಗೆ ಸಂಜೆಯಾಯಿತು ಎಂದೊಡನೆ ಬುಡ್ಡಿದೀಪದ ಬೆಳಕಲ್ಲಿ ಕತೆಗಳನ್ನು ಹರವಿ ಕುಳಿತುಕೊಳ್ಳುವ ಸುಂದರ ಕಥಾಕಾಲ. ಅಮ್ಮ ಹೇಳುವ ‘ಧರಣಿ ಮಂಡಲ’ದ ಅಳು ತರಿಸುವ ಕತೆ, ಅಪ್ಪ ಹೇಳುವ ಕೃಷ್ಣನ ಬಾಲಲೀಲೆಗಳ ಕತೆ, ಅಜ್ಜನ ಮನೆಗೆ ಹೋದರೆ ಅಜ್ಜ ಹೇಳುತ್ತಿದ್ದ ಹೆದರಿಕೆ ಹುಟ್ಟಿಸುವ ಭೂತಗಳ ಕತೆ, ಅಣ್ಣಂದಿರು ಹೇಳುತ್ತಿದ್ದ ತಮ್ಮದೇ ಸಾಹಸಗಳ ನೈಜಕತೆ….. ಒಟ್ಟಾರೆ ಅದೊಂದು ಬೇರೆಯದೇ ಲೋಕದಲ್ಲಿ ವಿಹರಿಸುವ ಸಮಯ. ಕತೆ ದೀರ್ಘವಾಗಿದ್ದು ಉಳಿದುಬಿಟ್ಟರೆ ಅದೊಂದು ಮಧುರನೋವು. ಹಾಸಿಗೆ ಸೇರಿದ ಕೂಡಲೇ ಮತ್ತೆ ರಾಗ ಶುರು- ‘ಆಗಿನ ಕತೆ ಮುಂದಕ್ಕೆ ಹೇಳು’ ಎಂದು. ಪ್ರತಿ ವಾಕ್ಯಕ್ಕೂ ‘ಹೂಂ’ಗುಡುತ್ತ ಇರುವುದು ಕತೆಯ ಮೊದಲನೆ ನಿಯಮ. ಆ ಸದ್ದು ನಿಂತಿತು ಎಂದಾದರೆ ಕತೆ ಹೇಳುವವರಿಗೆ ಮುಕ್ತಿ. ಮರುದಿನ ಎಲ್ಲಿಯವರೆಗೆ ಕತೆ ನೆನಪಿತ್ತೋ ಅಲ್ಲಿಂದ ಮುಂದಕ್ಕೆ ಮುಂದುವರಿಯಬೇಕಿತ್ತು. ಆ ಕೇಳುವ ಸುಖಕ್ಕೆ ಮಿಗಿಲಾದ ಸುಖ ಇನ್ನೊಂದಿದೆ ಎಂದು ನನಗನ್ನಿಸುವುದಿಲ್ಲ.

ರಾಮಾಯಣ, ಮಹಾಭಾರತದಂತಹ ಕತೆಗಳು ಸರಳ ಕತೆಗಳಾಗಿ ಮನದೊಳಗಿಳಿದವು. ಅದರ ಸೂಕ್ಷ್ಮತೆಗಳೆಲ್ಲ ಹೇಳುವವರಿಗೂ ಕೇಳುವವರಿಗೂ ಗೊತ್ತಿರಲೇಬೇಕಾದ ಅನಿವಾರ್ಯತೆಗಳಿಲ್ಲದೆಯೇ ಕತೆಯೊಂದು ಮನರಂಜಿ ಸುತ್ತಿತ್ತು. ‘ಒಂದೂರಿನಲ್ಲಿ….’ ಎಂದೇ ಶುರುವಾಗುವ ಕತೆಗಳಲ್ಲಿ ರಾಜಕುಮಾರರು ರಾಜಕುಮಾರಿಯರು ಇದ್ದಂತೆ ಪ್ರಾಣಿ-ಪಕ್ಷಿಗಳು ಇರುತ್ತಿದ್ದವು. ಒಂದು ಕತೆಯಲ್ಲಿ ಹುಲಿ ಖಳನಾಯಕನಾದರೆ, ಇನ್ನೊಂದರಲ್ಲಿ ನಾಯಕನಾಗಿ ಮೆರೆಯುತ್ತಿತ್ತು. ಇದರಿಂದಾಗಿ ಎಲ್ಲವನ್ನು ಆ ಕತೆಯ ಮಟ್ಟಿಗಷ್ಟೇ ಪ್ರೀತಿಸುವ, ದ್ವೇಷಿಸುವ ಮನಸ್ಥಿತಿ.

ಕತೆ ಕೇಳುವ ನನ್ನ ಹುಚ್ಚು ಎಷ್ಟು ಭಯಂಕರದ್ದಿತ್ತು ಎಂದರೆ ಮನೆಯಲ್ಲಿ ಕೇಳುವ ಕತೆಗಳು ಸಾಕಾಗದೆ ಹತ್ತಿರದ ಮನೆಗೆ ಓಡುತ್ತಿದ್ದೆ. ಆ ಮನೆಯಲ್ಲಿ ಪ್ರತಿನಿತ್ಯ ಹೂ ತೋಟದ ನಡುವೆ ಕೂರಿಸಿಕೊಂಡು ‘ದಿನಕ್ಕೆ ಮೂರು ಕತೆಗಳು’ ಎಂಬ ನಿಯಮದಡಿ ಕತೆ ಹೇಳುತ್ತಿದ್ದ ಅಕ್ಕ ಕೂಡಾ ಇದ್ದರು. ವಿದ್ಯಾಭ್ಯಾಸಕ್ಕೆಂದು ಪರ ಊರಲ್ಲಿದ್ದ ಆಕೆಗೆ ರಜೆ ಸಿಕ್ಕಿದೆ ಎಂಬ ಸೂಚನೆ ಬಂದರೆ ಸಾಕು ನಾನಲ್ಲಿಗೆ ಹಾಜರಿ ಹಾಕುತ್ತಿದ್ದೆ. ಒಂದಿಷ್ಟೂ ತಾಳ್ಮೆ ಕಳೆದುಕೊಳ್ಳದೆ ಆಕೆ ಹೇಳುತ್ತಿದ್ದ ಕತೆಗಳು ಎಷ್ಟು ರಂಜನೀಯವಾಗಿದ್ದುವೆಂದರೆ ರಾತ್ರಿ ನಿದ್ರೆಯಲ್ಲೂ ಆ ಕತೆಗಳದ್ದೇ ಕನಸು…..

ಹಾಗೆಂದು, ಈ ಕತೆ ಕೇಳುವ ಹುಚ್ಚು ನನ್ನಲ್ಲಿ ಒಂದಿಷ್ಟು ಅಹಂಕಾರವನ್ನೂ ಹುಟ್ಟಿಸಿತ್ತು. ಯಾವುದೇ ಕತೆಯನ್ನು ಒಮ್ಮೆ ಕೇಳಿದ ಕೂಡಲೆ, ಅದು ನನಗೆಲ್ಲವೂ ಗೊತ್ತು. ಇನ್ನೊಮ್ಮೆ ಓದುವ, ಕೇಳುವ ಅನಿವಾರ್ಯತೆ ಇಲ್ಲ ಎಂದುಕೊಳ್ಳುತ್ತಿದ್ದೆ. ಆಗ ಶಾಲೆಗಳಲ್ಲಿ ರಾಮಾಯಣ, ಮಹಾಭಾರತಗಳನ್ನು ಸರಳಗೊಳಿಸಿ ಮಕ್ಕಳ ಓದಿಗಾಗಿಯೇ ತಯಾರಿಸಿ ಅದರ ಮೇಲೆ ಪರೀಕ್ಷೆಗಳನ್ನು ಮಾಡುತ್ತಿದ್ದರು. ನಾನು ಆ ಪರೀಕ್ಷೆ ಬರೆಯುವ ಉತ್ಸಾಹದಲ್ಲಿದ್ದೆ. ನನಗೂ ಒಂದು ಬಾಲಭಾರತ ಪುಸ್ತಕ ಸಿಕ್ಕಿತ್ತು. ಮಹಾಭಾರತದ ಕತೆಯನ್ನು ಮನೆಯಲ್ಲಿ ಕೇಳಿದ್ದರಿಂದ ‘ನನಗೆಲ್ಲ ಗೊತ್ತು, ಇದನ್ನು ಪುಟ ತೆರೆದು ನೋಡುವ ಅವಶ್ಯಕತೆಯೇ ಇಲ್ಲ’ ಎಂಬ ಹುಂಬತನ ನನ್ನದು. ಜತೆಗೆ ಕತೆ ಗೊತ್ತಿರುವುದರಿಂದ ರ್ಯಾಂಕ್ ನನಗೇ ಎಂದು ಕೊಚ್ಚಿಕೊಂಡೂ ಆಗಿತ್ತು.

ತಂದ ಪುಸ್ತಕವನ್ನು ಒಮ್ಮೆಯೂ ಬಿಡಿಸಿ ನೋಡದ ನಾನು ಪರೀಕ್ಷೆಯ ದಿನ ಪ್ರಶ್ನೆಪತ್ರಿಕೆ ಹಿಡಿದು ಕುಳಿತಿದ್ದೆ. ಪಾಂಡವರೈವರ ಹೆಸರು ಹೇಳಿ ಎಂಬ ಒಂದು ಪಶ್ನೆಗೆ ಉತ್ತರ ಗೊತ್ತಿತ್ತು. ಶಲ್ಯ ಯಾರು ಎಂದು ಕೇಳಿದರೆ ನನಗೆ ಆಲೂಗಡ್ಡೆ ಪಲ್ಯ ನೆನಪಾಗುತ್ತಿತ್ತು ಬಿಟ್ಟರೆ ಇಂತಹ ಹೆಸರೊಂದು ಮಹಾಭಾರತದಲ್ಲಿ ಎಲ್ಲಿ ಬರುತ್ತದೆ ಎನ್ನುವುದೂ ತಿಳಿದಿರಲಿಲ್ಲ. ನಮ್ಮ ಶಾಲೆಯದ್ದೇ ಒಬ್ಬಳು ಹುಡುಗಿ ಮಹಾಭಾರತ ಪರೀಕ್ಷೆಯಲ್ಲಿ ಚಿನ್ನದ ಮೆಡಲ್ ಗಳಿಸಿದಳು ಎನ್ನುವುದು ಆ ಹೊತ್ತಿಗೆ ನನಗೆ ಅಸೂಯೆ ಉಂಟುಮಾಡಿದರೂ, ಕತೆಗಳ ಆಳಕ್ಕಿಳಿದು ಓದುವ ಅಭ್ಯಾಸ ಬೆಳೆಯಿತು.

ಮಗ ಸಣ್ಣವನಿರುವಾಗ ಪ್ರತಿದಿನವೂ ಅವನಿಗೆ ಹೇಳಬೇಕಾದ ಕತೆ ಎಂದರೆ ‘ಮೂರು ಕರಡಿ ಕತೆ’. ಪ್ರತಿಸಲ ಕೇಳುವಾಗಲೂ ಇಂದೇ ಕೇಳುತ್ತಿರುವುದೇನೋ ಎಂಬ ಕುತೂಹಲದಿಂದಲೇ ಕೇಳುತ್ತಿದ್ದ. ನನಗಂತೂ ಕತೆ ಹೇಳಿ ಅವನನ್ನು ನಿದ್ರೆ ಮಾಡಿಸುವ ಬದಲು ನಾನು ನಿದ್ರೆ ಮಾಡುವ ಪರಿಸ್ಥಿತಿ ಬರುತ್ತಿತ್ತು. ಹಾಗಾಗಿ ಅವನು ಕತೆ ಎಂದು ರಾಗ ಎಳೆದಾಗ ಅತ್ತೆಯ ಕಡೆ ಬೊಟ್ಟುಮಾಡಿ ‘ಅಜ್ಜಿ ಹತ್ರ ಕೇಳು, ಅವರು ಚೆನ್ನಾಗಿ ಹೇಳ್ತಾರೆ’ ಎಂದು ಕಳುಹಿಸುತ್ತಿದ್ದೆ. ನನ್ನ ಅತ್ತೆ ಆ ಕತೆಯನ್ನು ಅದೆಷ್ಟು ಪ್ರೀತಿಯಿಂದ ಪ್ರತಿಸಾರಿ ಹೊಸದನ್ನೇ ಹೇಳುತ್ತಿದ್ದೇನೆ ಎಂಬ ಆಸ್ಥೆಯಿಂದ ಹೇಳುತ್ತಿದ್ದರು. ಅತ್ತೆ ಹೇಳುವ ಆ ಕತೆ ಎಷ್ಟು ಫೇಮಸ್ ಆಗಿತ್ತು ಎಂದರೆ ಮನೆಯ ಮೊಮ್ಮಕ್ಕಳಲ್ಲದೆ ಹೊರಗಿನ ಮಕ್ಕಳು ಬಂದರೂ ಅದೇ ಕತೆ ಹೇಳಿ ಎಂದು ಅವರನ್ನು ಪೀಡಿಸುತ್ತಿದ್ದರು. ಕೆಲವೊಂದು ಕತೆಗಳಿಗೆ ಆ ರೀತಿ ಕೇಳಿಸಿಕೊಳ್ಳುವ ಗುಣ ಇರುತ್ತದೋ ಅಥವಾ ಹೇಳುವವರ ಭಾವ ಹಾಗೆ ಕೇಳುವಂತೆ ಮಾಡುತ್ತದೋ ಏನೋ..

ನಮ್ಮ ಪಕ್ಕದ ಮನೆಯ ಪುಟ್ಟಪೋರಿ ರಜ ಇದ್ದಾಗ ನಮ್ಮ ಮನೆಗೂ ಭೇಟಿ ಕೊಡುತ್ತಾಳೆ. ಆಗೀಗ ಕತೆ ಕೇಳುವ ಅಭ್ಯಾಸ ಅವಳದ್ದು. ನಾನು ಪಾತ್ರೆ ತೊಳೆಯುತ್ತಾ ಕುಳಿತಿದ್ದಾಗ ಬಂದಳು. ಕೆಲಸ ಮಾಡುತ್ತಲೇ ಅವಳನ್ನು ಮಾತನಾಡಿಸಿದೆ. ‘ನಂಗೆ ಸ್ವಲ್ಪ ಸೋಪಿನ ಹುಡಿಗೆ ನೀರು ಹಾಕಿಕೊಡಿ’ ಅಂದಳು. ಆಟ ಆಡಲು ಕೇಳಿದ್ದಾಳೆ ಎಂದುಕೊಂಡು ಪುಟ್ಟ ಪಾತ್ರೆಯಲ್ಲಿ ಸೋಪಿನ ನೊರೆ ಬರುವಂತೆ ಮಾಡಿ ಕೊಟ್ಟೆ. ಬಿಸಿಲು ಬರುವಲ್ಲಿ ಅದನ್ನು ಹಿಡಿದು ನಿಂತು ‘ನಿಮಗೆ ಗೊತ್ತಾ ಈ ನೊರೆಯಲ್ಲೆಲ್ಲಾ ದೇವರಿದ್ದಾನೆ’ ಎಂದಳು. ಈ ದೇವರು ಎಲ್ಲೆಲ್ಲೂ ಇದ್ದಾನೆ ಎಂಬ ಕಾನ್ಸೆಪ್ಟ್ ಕೆಲ ದಿನಗಳ ಮೊದಲು ನಾನೇ ಹೇಳಿದ ಭಕ್ತ ಪ್ರಹ್ಲಾದ ಕತೆಯ ‘ಆಪ್ಟರ್ ಇಫೆಕ್ಟ್’.

ಆದರೂ ಇಷ್ಟು ಹೊತ್ತು ಪಾತ್ರೆ ತೊಳೆಯುವಾಗ ಕೈ ಮೈ ಎಲ್ಲಾ ನೊರೆ ಮಾಡಿಕೊಂಡ ನನಗೆ ಕಾಣದ ದೇವರು ಇವಳಿಗೆಲ್ಲಿ ಕಂಡ ಎಂದಚ್ಚರಿಪಡುತ್ತಾ ‘ಎಲ್ಲಿದ್ದಾನೆ ದೇವರು?’ ಎಂದೆ ಥೇಟ್ ಹಿರಣ್ಯಕಶಿಪುವಿನ ಸ್ಟೈಲಿನಲ್ಲಿ….

‘ನೋಡಿ ಈ ನೊರೆಯಲ್ಲೆಲ್ಲಾ ಎಷ್ಟು ಸೂರ್ಯ ಇದ್ದಾನೆ. ಸೂರ್ಯ ಅಂದರೆ ದೇವರು ಅಂತ ಮಾಮಿ ಹೇಳಿದ್ದಾಳೆ’ ಎನ್ನುತ್ತಲೇ ಬೆರಳು ಹಾಕಿ ಇನ್ನಷ್ಟು ನೊರೆ ಬರಿಸಿದಳು. ನಾನು ಆ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನೀರು ಹಾಕಿ ಗಲಬರಿಸಿ ‘ಈಗೆಲ್ಲಿದ್ದಾನೆ ನಿನ್ನ ದೇವರು?’ ಎಂದೆ. ‘ಅವನು ನೀರು ದೇವರೊಂದಿಗೆ ಆಟ ಆಡಲು ಹೋಗಿದ್ದಾನೆ’ ಎಂಬ ಉತ್ತರ ಬಂತು. ನೀರು ಹಾಳು ಮಾಡಬಾರದು, ನೀರೆಂದರೆ ದೇವರಿದ್ದ ಹಾಗೆ ಎಂದು ನಾನು ಮಾಡಿದ್ದ ಉಪದೇಶ ಈ ರೀತಿಯಲ್ಲಿ ಮರಳಿ ನನಗೆ ಬಂತು.

ಆ ನೀರು ಹೋಗಿ ಸೇರುವುದು ಹತ್ತಿರದ ಬಸಳೆ ಚಪ್ಪರದ ಬುಡಕ್ಕೆ. ಅಲ್ಲಿ ನೆಲವಷ್ಟೇ ಒದ್ದೆಯಾಗಿತ್ತು. ನೀರು ನೊರೆ ಯಾವುದೂ ಇರಲಿಲ್ಲ. ಈ ಸಲ ಅವಳು ಸೋಲುವುದು ಗ್ಯಾರಂಟಿ ಎಂದುಕೊಳ್ಳುತ್ತಲೇ ‘ಈಗ ಕಾಣಿಸುತ್ತಾನೆಯೇ ನಿನ್ನ ದೇವರು?’ ಎಂಬ ಪ್ರಶ್ನೆ ಹಾಕಿದೆ.

‘ಅವೆರಡೂ ಕಣ್ಣಾಮುಚ್ಚಾಲೆ ಆಡ್ತಾ ಇವೆ. ಹಾಗೆ ನಮಗೀಗ ಕಾಣಿಸಲ್ಲ’ ಎಂದಳು. ಮಾತುಗಳಿಲ್ಲದ ನಾನು ಸೋತೆ ಎಂದೊಪ್ಪಿಕೊಂಡೆ.

ನನ್ನ ಅತ್ತಿಗೆ ಮಗಳು ಅಮೃತಾ ಸಣ್ಣವಳಿದ್ದಾಗ ಕತೆ ಕೇಳುವುದಕ್ಕಿಂತ ಹೆಚ್ಚಾಗಿ ಕತೆ ಹೇಳುತ್ತಿದ್ದಳು. ಆ ಕ್ಷಣದ ಘಟನೆಗಳು ಕತೆಗೆ ಸೇರಿಕೊಳ್ಳುತ್ತಿದ್ದವು. ಒಮ್ಮೆ ನಮ್ಮ ಮೂರು ಗಂಟೆಗಳ ಕಾರಿನ ಪ್ರಯಾಣದಲ್ಲಿಡೀ ಕತೆ ಹೇಳಿದ್ದಳು. ಮನೆಗೆ ತಲುಪುವಾಗಲೂ ಆ ಕತೆ ಮುಗಿದಿರಲಿಲ್ಲ. ದಾರಿಯಲ್ಲಿನ ಕತೆಯ ಬೆಳವಣಿಗೆ ಅಲ್ಲಿ ಕಾಣುವ ಗಿಡ ಮರ ಪ್ರಾಣಿಗಳು ಅವುಗಳ ಬಣ್ಣ, ದಾರಿಯಲ್ಲಿ ಸಾಗುವ ವಾಹನಗಳು, ಅತ್ತಿತ್ತ ನಡೆಯುತ್ತಾ ಹೋಗುತ್ತಿರುವ ಮನುಷ್ಯರು, ಕಣ್ಣಿಗೆ ಕಾಣಿಸುತ್ತಿದ್ದ ಅಂಗಡಿಗಳು ಎಲ್ಲವನ್ನೂ ಒಳಗೊಳ್ಳುತ್ತಲೇ ಬೆಳೆಯುತ್ತಾ ಹೋಗುತ್ತಿತ್ತು. ಬಹುಶಃ ಇನ್ನಷ್ಟು ದೂರ ಪ್ರಯಾಣ ಮುಂದುವರಿದಿದ್ದರೆ ಕತೆಯೂ ಮುಂದುವರಿಯುತ್ತಿತ್ತೇನೋ….

ಮಕ್ಕಳ ಕಲ್ಪನಾಲೋಕ ಒಂದು ಕತೆಯಿಂದ ಈ ರೀತಿ ವಿಶಾಲವಾಗುತ್ತ ಹೋಗುವುದು ಎಷ್ಟು ಚೆಂದ. ಈಗಲೂ ನಮ್ಮ ಸುತ್ತಮುತ್ತ ಆಸಕ್ತಿಯಿಂದ ಕತೆ ಕೇಳಬಯಸುವ ಮಕ್ಕಳಿದ್ದಾರೆ. ಆದರೆ ನಾವೇ ಕತೆ ಹೇಳುವುದನ್ನು ಮರೆತುಬಿಟ್ಟಿದ್ದೇವೆ. ನಮ್ಮ ಸಂಜೆಗಳು ಕತೆಗಳನ್ನು ಹುಟ್ಟುಹಾಕುವುದನ್ನು ಮರೆತಿವೆ. ಹೀಗೇ ಮುಂದುವರಿದರೆ ನಮ್ಮ ಕತೆಗಳು ನಮ್ಮನ್ನು ಮರೆಯುತ್ತ ಹೋಗುತ್ತವೆ. ಮನೆಯವರ ಅನಿವಾರ್ಯತೆಗಳಿರದ ದೃಶ್ಯಮಾಧ್ಯಮಗಳ ಕೂಸಾದ ಕಾರ್ಟೂನುಗಳು ಮಕ್ಕಳನ್ನು ಅದಕ್ಕಂಟಿ ಕೂರುವಂತೆ ಮಾಡುತ್ತವೆ. ನಾವೂ ಅಷ್ಟೇ… ಮಗು ಹಠ ಮಾಡಿದರೆ ಟಿವಿ ಹಾಕಿ ಕೂರಿಸಿದೆ ಎಂಬ ಉಪಶಮನವನ್ನು ಮಾತ್ರ ಕಲಿತುಕೊಂಡು ಮಕ್ಕಳನ್ನು ನಮ್ಮಿಂದ ದೂರ ಮಾಡುತ್ತ ಬಾಂಧವ್ಯಸೇತುವನ್ನು ದುರ್ಬಲಗೊಳಿಸುತ್ತ ಹೋಗುತ್ತೇವೆ.

ನಾವು ಮನಸ್ಸು ಮಾಡಿದರೆ ಈಗಲೂ ಆ ಕಥಾಕಾಲಕ್ಕೆ ಮಕ್ಕಳನ್ನು ಹೊತ್ತೊಯ್ಯಬಹುದು. ಆ ರಮ್ಯಲೋಕದ ಪರಿಚಯ ಅವರಿಗೂ ಮಾಡಿಸಿ ಅವರ ಕಲ್ಪನೆಗಳನ್ನು ವಿಸ್ತಾರಗೊಳಿಸಲು ಸಹಾಯ ಮಾಡಬಹುದು.. ಒಂದಿಷ್ಟು ಅವರಿಗಾಗಿ ಸಮಯ ಮೀಸಲಿಡುವ ದಿನಚರಿ ನಮ್ಮದಾಗಬೇಕಷ್ಟೇ…

(ಲೇಖಕರು ಸಾಹಿತಿ)

Leave a Reply

Your email address will not be published. Required fields are marked *

Back To Top