ಕಣ್ಮನ ಸೆಳೆದ ಫಲ-ಪುಷ್ಪ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ಗದಗ
ಸಿರಿಧಾನ್ಯ, ತರಕಾರಿ, ಮರಳು, ಒಣ ತೆಂಗಿನಕಾಯಿ ಸೇರಿ ಕಲರ್​ಫುಲ್ ಹೂಗಳಿಂದ ಅರಳಿದ ಕಲಾಕೃತಿಗಳು ಜನರ ಕಣ್ಮನ ಸೆಳೆಯುತ್ತಿದ್ದು, ನೋಡುಗರು ಕಲಾಕೃತಿಗಳ ಮುಂದೆ ನಿಂತು ಸೆಲ್ಪಿ ಫೋಟೋ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದಾರೆ.

ನಗರದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಫಲ-ಪುಷ್ಪ ಪ್ರದರ್ಶನವು ಆಕರ್ಷಣೆ ಕೇಂದ್ರವಾಗಿದ್ದು ಸಾರ್ವಜನಿಕರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಹುಬ್ಬಳ್ಳಿಯ ಕಲಾವಿದ ಶಿವಲಿಂಗಪ್ಪ ಬಡಿಗೇರ ಅವರು ರಂಗೋಲಿಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಭಾವಚಿತ್ರ, ಸಿರಿಧಾನ್ಯಗಳಲ್ಲಿ ರಚಿಸಿರುವ ತಾಯಿ ಭುವನೇಶ್ವರಿ ಮೂರ್ತಿ, ಇತ್ತೀಚೆಗೆ ಶಿವೈಕ್ಯರಾದ ತುಮಕೂರಿನ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿ, ಗದಗ-ಡಂಬಳ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಕಲಾಕೃತಿಗಳು ಗಮನ ಸೆಳೆಯುತ್ತಿವೆ.

ಧಾರವಾಡದ ಕಲಾವಿದ ಜಗದೀಶಗೌಡ ಭಾವಿಕಟ್ಟಿ ಅವರ ಕಲಾಕುಂಚದಿಂದ ಒಣ ತೆಂಗಿನಕಾಯಿಯಲ್ಲಿ ಅರಳಿರುವ ಗಣೇಶ, ಬುದ್ಧ, ಮಹಾವೀರ, ಬಸವಣ್ಣ, ಗಿಳಿ, ಕೋತಿ, ಹಡಗು, ಡಮರು, ಚಕ್ಕಡಿ, ಎತ್ತು ಸೇರಿ 30ಕ್ಕೂ ಹೆಚ್ಚು ಕಲಾಕೃತಿಗಳು ನೋಡುಗರ ಆಸಕ್ತಿ ಹೆಚ್ಚಿಸಿತ್ತು.

ಪುಲ್ವಾಮಾ ದಾಳಿಯಲ್ಲಿ ವೀರಮರಣ ಅಪ್ಪಿದ ಹುತಾತ್ಮ ಸೈನಿಕರ ನೆನಪಿಗಾಗಿ ಕೆಂಪು, ಹಳದಿ, ಬಿಳಿ ಸೇರಿ 4 ಬಣ್ಣದ, 3,500 ಗುಲಾಬಿ ಹೂಗಳಿಂದ ರಚಿತವಾಗಿರುವ ಅಮರ್ ಜವಾನ್ ಕಲಾಕೃತಿ, 5 ಬಣ್ಣಗಳ 12,500ಕ್ಕೂ ಹೆಚ್ಚು ಗುಲಾಬಿ ಹೂಗಳಿಂದ ರಚಿತವಾಗಿರುವ ವಿಮಾನ ರಮಣೀಯವಾಗಿತ್ತು. 13,100 ಕೊಲ್ಕತ್ತಾ ಬಿಳಿ ಸೇವಂತಿಗೆ, 2,000 ಕೆಂಪು ಗುಲಾಬಿ ಮತ್ತು 500 ಹಳದಿ ಗುಲಾಬಿ ಹೂಗಳಿಂದ ರಚನೆಯಾಗಿರುವ ತೋಂಟದಾರ್ಯ ಮಠದ ಹೆಬ್ಬಾಗಿಲು ನೋಡುಗರನ್ನು ಆಕರ್ಷಿಸುತ್ತಿವೆ.

ಹಾಗಲಕಾಯಿಯಲ್ಲಿ ಕೆತ್ತನೆ ಮಾಡಿದ ಮೊಸಳೆ, ಕುಂಬಳಕಾಯಿಯಲ್ಲಿ ಈಶ್ವರ ಲಿಂಗ, ತಬಲಾ ಹಾಗೂ ಸಂಗೀತ ವಾದ್ಯಗಳು, ಸೋರೆಕಾಯಿ, ಕುಂಬಳಕಾಯಿ, ಗಜ್ಜರಿಯಲ್ಲಿ ಅರಳಿದ ನವಿಲು, ಸೌತೆಕಾಯಿಯಲ್ಲಿ ಕೆತ್ತನೆಗೊಂಡ ಹಂಸಗಳು ನಯನ ಮನೋಹರವಾಗಿ ಮತ್ತೊಮ್ಮೆ ನೋಡುವಂತೆ ಕುತೂಹಲ ಮೂಡಿಸುತ್ತಿತ್ತು.

ಜಿಲ್ಲೆಯ ರೈತರು ಬೆಳೆದ ಚಕ್ಕೋತಾ, ರಾಮಫಲ, ತೆಂಗಿನಕಾಯಿ, ಮಾವಿನಕಾಯಿ, ಚಿಕ್ಕು, ಕಾಲಿಫ್ಲಾವರ್, ಬೆಂಡೆಕಾಯಿ, ಪೇರಲಹಣ್ಣು, ಬಾಳೆ, ದಾಳಿಂಬೆ, ಹುಣಸೆ, ಪಪ್ಪಾಯಿ, ವೀಳ್ಯದೆಲೆ, ನಿಂಬೆ, ಬದನೆಕಾಯಿ, ಮೆಣಸಿನಕಾಯಿ ಸೇರಿ ವಿವಿಧ ಬಗೆಯ ತರಕಾರಿಗಳು ಪ್ರದರ್ಶನದಲ್ಲಿದ್ದವು.

ವಿಶೇಷ ಆಕರ್ಷಣೆ
ಮೈಸೂರಿನ ಎಂ.ಎನ್. ಗೌರಿ, ಎಂ.ಎನ್. ನೀಲಾಂಬಿಕಾ ಸಹೋದರಿಯರು ಎರಡು ದಿನಗಳ ಕಾಲ ಒಂದು ಟ್ರಕ್ ಮರಳಿನಿಂದ ರಚಿಸಿದ ಮರಳುಗಾಡಿನಲ್ಲಿ ಕುಳಿತಿರುವ ಒಂಟೆಯ ಕಲಾಕೃತಿ ವಿಭಿನ್ನವಾಗಿತ್ತು. ಒಂಟೆಯ ಚರ್ಮದ ತಕ್ಕಂತೆ ಬಣ್ಣ ನೀಡಿ ನಿಜವಾದ ಒಂಟೆ ಮಲಗಿದೆ ಎನ್ನುವಷ್ಟು ನೈಜವಾಗಿ ಮರಳಿನ ಕಲಾಕೃತಿ ರಚಿಸಲಾಗಿತ್ತು. ಅಲ್ಲದೇ, ಕೆಳಭಾಗದಲ್ಲಿ ಮತಜಾಗೃತಿ ಕುರಿತು‘ ನಮ್ಮ ಮತ ನಮ್ಮ ಶಕ್ತಿ’ ಕಡ್ಡಾಯವಾಗಿ ಮತಚಲಾಯಿಸೋಣ ಎಂಬ ಘೊಷವಾಕ್ಯ ಯುವ ಮತದಾರರನ್ನು ಆಕರ್ಷಿಸಿತು.

ಮರಳಿನಿಂದ ಅನೇಕ ಕಲಾಕೃತಿಗಳನ್ನು ರಚಿಸಬಹುದಾಗಿದೆ. ಕಳೆದ ಎರಡು ದಿನಗಳಿಂದ ಕಷ್ಟಪಟ್ಟು ಮರಳುಗಾಡಿನಲ್ಲಿ ಕುಳಿತಿರುವ ಒಂಟೆಯ ಕಲಾಕೃತಿ ರಚಿಸಿದ್ದಕ್ಕೂ ತೃಪ್ತಿ ಸಿಕ್ಕಿದೆ. ಸಾರ್ವಜನಿಕರು ಕಲಾಕೃತಿ ನೋಡಿ ಚೆನ್ನಾಗಿದೆ ಎಂದು ಅಭಿಪ್ರಾಯ ತಿಳಿಸಿ ಸೆಲ್ಪಿ ಫೋಟೊ ತೆಗೆದುಕೊಂಡು ಹೋಗುತ್ತಿರುವುದು ಸಂತಸವಾಗುತ್ತಿದೆ.
-ಎಂ.ಎನ್. ಗೌರಿ, ಕಲಾವಿದೆ

ಪ್ರಸಕ್ತ ವಿದ್ಯಮಾನಗಳ ಕುರಿತಾದ ಕಲಾಕೃತಿಗಳು, ವಿವಿಧ ಬಗೆಯ ಹೂಗಳಿಂದ, ಹಣ್ಣು ಮತ್ತು ತರಕಾರಿಗಳಿಂದ ರಚಿತವಾದ ಕಲಾಕೃತಿಗಳು ಸಾರ್ವಜನಿಕರನ್ನು ಅದರಲ್ಲೂ ಯುವಕರ ಗಮನ ಸೆಳೆಯುತ್ತಿದೆ. ಭಾನುವಾರ ಸಂಜೆಯವರೆಗೆ ಫಲ-ಪುಷ್ಪ ಪ್ರದರ್ಶನ ನಡೆಯಲಿದ್ದು ಸಾರ್ವಜನಿಕರು ಆಗಮಿಸಿ ಕಣ್ತುಂಬಿಕೊಳ್ಳಬಹುದು.
-ಎಲ್. ಪ್ರದೀಪ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ