ಕಣ್ಣೀರು ಸುರಿಸುವವರಿಗೆ ಮರುಳಾಗದಿರಿ

ಹಾರೋಹಳ್ಳಿ: ಕಣ್ಣೀರಿನಿಂದ ಜನರನ್ನು ಮರಳು ಮಾಡುತ್ತಿರುವ ನಾಯಕರನ್ನು ನಂಬಬೇಡಿ. ಅವರಿಂದ ಅಭಿವೃದ್ಧಿ ಮರೀಚಿಕೆಯಾಗಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗುಡುಗಿದರು.

ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮಲ್ಲಿಗೆಮೆಟ್ಟಿಲು ಗ್ರಾಮದ ಈಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಬಿಜೆಪಿ ಚುನಾವಣಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.

ಅಭಿವೃದ್ಧಿ ಮರೆತು ಕೇವಲ ಕಣ್ಣೀರಿನ ನಾಟಕವಾಡುವ ಇವರಿಗೆ ಜನತೆ ತಕ್ಕಪಾಠ ಕಲಿಸಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಸಾವಿರ ಅಡಿ ಕೊರೆಸಿದರೂ ನೀರು ಸಿಗದಂತಾಗಿದೆ. ಇಷ್ಟು ದಿನ ಅಭಿವೃದ್ಧಿ ಕೆಲಸ ಮಾಡದೇ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.

ಜಿಲ್ಲಾ ಬಿಜೆಪಿ ಘಟಕದ ಎಂ.ರುದ್ರೇಶ್ ಮಾತನಾಡಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಗೂಂಡಾ ಮತ್ತು ಡ್ರಾಮಾ ಸರ್ಕಾರವಾಗಿದ್ದು ಜನತೆಗೆ ಮಸಿ ಬಳಿಯುತ್ತಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದು, ಇವರ ಮೋಸಕ್ಕೆ ಬಲಿಯಾಗಬೇಡಿ. ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದ ಈ ಸರ್ಕಾರದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಮಾತನಾಡಿ, ಎಲ್ಲಿಂದಲೋ ಬಂದವರಿಗೆ ಮಣೆ ಹಾಕಬೇಡಿ. ನಿಮ್ಮ ಮನೆ ಮಗನಿಗೆ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುವ ನನಗೆ ಆಶೀರ್ವಾದ ಮಾಡಿ ಎಂದು ಮತಯಾಚಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಒಬಿಸಿ ಜಿಲ್ಲಾ ಘಟಕ ಅಧ್ಯಕ್ಷ ನಾಗರಾಜು, ಕಗ್ಗಲಹಳ್ಳಿ ಜಿಪಂ ಸದಸ್ಯ ಶಿವಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಚಂದ್ರಪ್ರಭಾ, ಮುಖಂಡರಾದ ಪ್ರವೀಣ್ ಗೌಡ, ಮಲ್ಲೇಶ್, ಮಹೇಶ್ ಇತರರು ಇದ್ದರು.

ಕಣ್ಣೀರಿಗೆ ಜನ ಮಣಿಯಲ್ಲ: ಶಾಸಕ ಎಸ್. ಸುರೇಶ್ ಕುಮಾರ್ ಕಾರ್ಯಕರ್ತರೊಂದಿಗೆ ನಗರದ 6, 7, 8ನೇ ವಾರ್ಡ್​ನಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಪರ ಮತಯಾಚಿಸಿದರು.

ಚುನಾವಣೆ ಸಂದರ್ಭ ಅಪ್ಪ-ಮಕ್ಕಳು ಸಾವಿನ ವಿಚಾರ ಮುಂದಿಟ್ಟುಕೊಂಡು ಮತಯಾಚಿಸುವ ಮೂಲಕ ಮತದಾರರ ಅನುಕಂಪ ಗಿಟ್ಟಿಸುತ್ತಾರೆ ಎಂದು ಆರೋಪಿಸಿದರು.

ಚುನಾವಣಾ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ಮತ ಕೇಳುವುದು ಗೌಡರ ಕುಟುಂಬಕ್ಕೆ ಒಗ್ಗುವುದಿಲ್ಲ. ಮೊಸಳೆ ಕಣ್ಣೀರು ಸುರಿಸಿ ತಂತ್ರ ಹೂಡುತ್ತಾರೆ. ಅಪ್ಪ-ಮಕ್ಕಳು ರಾಜ್ಯದ ಅಭಿವೃದ್ಧಿಗೆ ಶ್ರಮಿಸಬೇಕೇ ಹೊರತು ಭಾವನಾತ್ಮಕವಾಗಿ ಬ್ಲಾಕ್​ವೆುೕಲ್ ಮಾಡಿ ಮತ ಪಡೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಕೇವಲ ನಾಯಕರ ಮಟ್ಟಕ್ಕೆ ಮಾತ್ರ ಸೀಮಿತವಾಗಿದೆ. ಕ್ಷೇತ್ರದ ಜನರು ಈ ಅಪವಿತ್ರ ಮೈತ್ರಿಗೆ ಮಣೆ ಹಾಕುವುದಿಲ್ಲ, ಬಿಜೆಪಿ ಮೈತ್ರಿ ಜನರ ನಡುವೆ ಆಗಿರುವುದರಿಂದ ಕ್ಷೇತ್ರದ ಜನತೆ ಈ ಬಾರಿ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಅವರನ್ನು ಗೆಲ್ಲಿಸಬೇಕು ಎಂದರು.

ರಾಮನಗರ ಜಿಲ್ಲಾ ವಕೀಲರ ಸಂಘಕ್ಕೂ ಭೇಟಿ ನೀಡಿ ಮತಯಾಚಿಸಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್.ಆರ್. ನಾಗರಾಜ್, ವಕ್ತಾರ ಪದ್ಮನಾಭ್, ನಗರಸಭಾ ಸದಸ್ಯ ನಾಗೇಶ್, ರಾಮನಗರ ಟೌನ್ ಬಿಜೆಪಿ. ಅಧ್ಯಕ್ಷ ಮಂಜು, ಮಾಧ್ಯಮ ಪ್ರಮುಖ್ ಸಿ. ರಮೇಶ್, ಮುಖಂಡರಾದ ರುದ್ರದೇವರು, ಚಂದ್ರಶೇಖರರೆಡ್ಡಿ, ಚಂದನ್​ವೊರೆ, ಚಂದ್ರಕಲಾ, ವೀಣಾ, ಕಾಳಯ್ಯ, ಚನ್ನಪ್ಪ, ತಾಲೂಕು ಅಧ್ಯಕ್ಷ ಪ್ರವೀಣ್​ಗೌಡ, ವಕೀಲ ವಿನೋದ್ ಭಗತ್ ಇದ್ದರು.

ದೇವೇಗೌಡರದು ಬ್ಲಾ್ಯಕ್​ವೆುೕಲ್ ತಂತ್ರ: ರಾಮನಗರ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚುನಾವಣೆ ಸಂದರ್ಭ ಅಲ್ಪಸಂಖ್ಯಾತ ಸಮುದಾಯವನ್ನು ಭಾವನಾತ್ಮಕವಾಗಿ ಬ್ಲಾ್ಯಕ್​ವೆುೕಲ್ ಮಾಡುವ ತಂತ್ರ ಬಿಡಬೇಕು ಎಂದು ಬಿಜೆಪಿ ವಕ್ತಾರ ಅಶ್ವಥ್ ನಾರಾಯಣ ಆಗ್ರಹಿಸಿದರು.

ರಾಮನಗರದ ಉಪಚುನಾವಣೆ ವಿಚಾರದಲ್ಲಿ ಬಿಜೆಪಿ ಅಭಿವೃದ್ಧಿ ವಿಚಾರ ಮುಂದಿಟ್ಟು ಚರ್ಚೆ ಮಾಡುತ್ತಿದ್ದರೆ, ದೇವೇಗೌಡರು ಮುಸ್ಲಿಮರು ಮತ್ತು ರಾಷ್ಟ್ರೀಯತೆ ವಿಚಾರ ತಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಈಗಾಗಲೇ ರಾಮನಗರದಲ್ಲಿ ಉಗ್ರನ ಬಂಧನ ಆಗಿದ್ದು, ಇದೇ ರೀತಿ ರಾಜ್ಯ ಸರ್ಕಾರ ನಡೆದುಕೊಂಡರೆ ಈ ನೆಲ ಭಯೋತ್ಪಾದಕರ ಸ್ಲೀಪರ್​ಸೆಲ್ ಆಗಿ ಮಾರ್ಪಡಲಿದೆ ಎಂದು ಎಚ್ಚರಿಸಿದರು.

ದೇಶದ ಮಾಜಿ ಪ್ರಧಾನಿಯೊಬ್ಬರು ಈ ರೀತಿ ಹೇಳಿಕೆ ನೀಡುವುದು ದುರದೃಷ್ಟಕರ. ಅವರು ಹೇಳುವಂತೆ ದೇಶದಲ್ಲಿ 60 ಕೋಟಿ ಅಲ್ಪಸಂಖ್ಯಾತರು ಇರುವ ಬಗ್ಗೆ ನಮಗೆ ಗೊತ್ತಿಲ್ಲ. ಬಿಜೆಪಿ ಎಲ್ಲಿಯೂ ಅಲ್ಪಸಂಖ್ಯಾತರನ್ನು ದೇಶದಿಂದ ಹೊರಗೆ ಕಳುಹಿಸುವ ಮಾತನಾಡಿಲ್ಲ. ರೋಹಿಂಗ್ಯಾ ಸಮುದಾಯ ಅಸ್ಸಾಂನಲ್ಲಿ ನಡೆಸುತ್ತಿರುವ ಅನಾಚಾರಗಳ ಬಗ್ಗೆ ಮಾಹಿತಿ ಇಲ್ಲದ ಗೌಡರು ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನಮ್ಮಿಂದಲೂ ಸಾಲ ಮನ್ನಾ: ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಎಲ್ಲಿಯೂ ರೈತರ ಸಾಲ ಮನ್ನಾ ಮಾಡಿಲ್ಲ ಎಂಬ ಗೌಡರ ಹೇಳಿಕೆ ಸುಳ್ಳು. ಉತ್ತರ ಪ್ರದೇಶದಲ್ಲಿ 36 ಸಾವಿರ ಕೋಟಿ ರೂ. ಸಾಲ ಮನ್ನಾ ಆಗಿದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ರೈತರ 1 ಲಕ್ಷ ರೂ. ವರೆಗಿನ ಸಾಲ ಮನ್ನಾಮಾಡಿದ್ದಾರೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ಅರಸ್ ಕಳೆದ ಜೂನ್​ನಲ್ಲಿ ರೈತರ 27,419 ಕೋಟಿ ರೂ. ಮನ್ನಾ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಜೆಡಿಎಸ್​ನವರಿಗೆ ಚುನಾವಣೆ ಸಂದರ್ಭದಲ್ಲಿ ಮೇಕೆದಾಟು ನೆನಪಾಗಿದೆ. 2007ರ ಫೆಬ್ರವರಿಯಲ್ಲಿ ಕಾವೇರಿ ಐ-ತೀರ್ಪ ಬಂದಾಗ ಎಚ್​ಡಿಕೆ ಮುಖ್ಯಮಂತ್ರಿ ಆಗಿದ್ದರು. ರಾಜ್ಯದಲ್ಲಿನ ನೀರಾವರಿ ಪ್ರದೇಶವನ್ನು 18 ಲಕ್ಷ ಹೆಕ್ಟೇರ್ ವರೆಗೆ ವಿಸ್ತರಿಸಿಕೊಳ್ಳಲು ನ್ಯಾಯಾಲಯ ಅನುಮತಿ ನೀಡಿತ್ತು. ಆದರೆ ಈವರೆಗೆ ಎಷ್ಟು ಹೆಕ್ಟೇರ್ ವಿಸ್ತರಣೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ರಾಮನಗರದಲ್ಲಿ ಎಷ್ಟು ನೀರಾವರಿ ಅಭಿವೃದ್ಧಿ ಮಾಡಿದ್ದೀರಿ. ಮಂಚನಬೆಲೆ ನೀರನ್ನು ಎಷ್ಟು ಬಳಸಿಕೊಂಡಿದ್ದೀರಿ. ರೇಷ್ಮೆ ಬೆಳೆಗಾರರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹಧನ ಏಕೆ ನಿಲ್ಲಿಸಿದ್ದೀರಿ. ಇಂತಹ ಜನಪರ ವಿಷಯಗಳ ಬಗ್ಗೆ ಚರ್ಚೆಗೆ ಬಿಜೆಪಿ ಸಿದ್ಧ ಎಂದು ಅವರು ಸವಾಲು ಹಾಕಿದರು.