ಚಿತ್ರದುರ್ಗ: ಕೋಟೆನಗರಿಯ ನವದುರ್ಗೆಯರಲ್ಲಿ ಪ್ರಮುಖ ಶಕ್ತಿದೇವತೆಯಾದ ಕುಂಚಿಗನಾಳ್ ಶ್ರೀ ಕಣಿವೆಮಾರಮ್ಮ ದೇವಿಯ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಶುಕ್ರವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಸಿಡಿ’ ಮಹೋತ್ಸವ ಜರುಗಲಿದೆ.
ಜಾತ್ರೆ ಅಂಗವಾಗಿ ಗುರುವಾರ ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆಮಾರಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಅದ್ದೂರಿಯಾಗಿ ಜರುಗಿತು. ಇದಕ್ಕೂ ಮುನ್ನ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಬೆಳ್ಳಿ ವರ್ಣದ ಸಾರೋಟಿನಲ್ಲಿ ಪ್ರತಿಷ್ಠಾಪಿಸಲಾಯಿತು. ಮಹಾಮಂಗಳಾರತಿ ನಂತರ ಚಾಲನೆ ದೊರೆಯಿತು.
ದೇಗುಲ ಮುಂಭಾಗದಿಂದ ಮೆರವಣಿಗೆಯೂ ಆರಂಭವಾಗಿ ಬಸವ ಮಂಟಪ, ದೊಡ್ಡಪೇಟೆ, ಏಕನಾಥೇಶ್ವರಿ ದೇವಿ ಪಾದಗುಡಿ, ಉತ್ಸವಾಂಬ ದೇಗುಲ, ಚಿಕ್ಕಪೇಟೆ, ಆನೆ ಬಾಗಿಲು, ಎಸ್‌ಬಿಐ, ಮದಕರಿನಾಯಕ ವೃತ್ತ ಮಾರ್ಗಗಳಲ್ಲಿ ಸಂಚರಿಸಿ ಸಂಜೆ ದೇಗುಲ ತಲುಪಿತು.
ಪುರ ಪ್ರವೇಶಿಸಿದ ದೇವಿಗೆ ಮಾರ್ಗದುದ್ದಕ್ಕೂ ಭಕ್ತರು ನೀರೆರೆಚುವ ಮೂಲಕ ಸ್ವಾಗತಿಸಿದರು. ಉರುಮೆ, ತಮಟೆ, ಡೊಳ್ಳು ಸೇರಿ ಇತರೆ ಮಂಗಳವಾದ್ಯಗಳು ಮೆರುಗು ನೀಡಿದವು. ದೇವಿಯ ಮೂರ್ತಿಗಳನ್ನು ಹೊತ್ತ ಅನೇಕ ಜೋಗಮ್ಮಂದಿರು, ಗೊಂಬೆ ವೇಷಧಾರಿಗಳು ಗಮನ ಸೆಳೆದರು. ಉಧೋ ಉಧೋ ಹರ್ಷೋದ್ಗಾರ ಮೊಳಗಿತು.
ಮುಂಜಾನೆ ದೇವಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿತು. ಬೆಳಗ್ಗೆ 10ರಿಂದ ರಾತ್ರಿ 9.30ರ ವರೆಗೂ ಅನೇಕ ಭಕ್ತರು ಭೇಟಿ ನೀಡಿ ಅಮ್ಮನ ದರ್ಶನ ಪಡೆದರು. ದೇಗುಲ ಮುಂಭಾಗ ನಡೆದ ಭಜನೆಯಲ್ಲಿ ದೇವಿಯ ಹಾಡುಗಳನ್ನು, ಪದಗಳನ್ನು ಹೇಳುವ ಮೂಲಕ ಭಕ್ತಿ ಸಮರ್ಪಿಸಲಾಯಿತು.
ತವರೂರಲ್ಲಿ ಮೀಸಲು ಸಮರ್ಪಣೆ: ದೇವಿಯ ತವರಾದ ಪಾಲವ್ವನಹಳ್ಳಿಯ ಈಶ್ವರ ದೇಗುಲ, ಕ್ಯಾದಿಗೆರೆಯ ಲಕ್ಷ್ಮೀ ದೇವಿ ದೇಗುಲ ಸೇರಿ ದೊಡ್ಡಸಿದ್ದವ್ವನಹಳ್ಳಿಯಲ್ಲೂ ದೇವಿಗೆ ಭಕ್ತರು ಮೀಸಲು ಸಮರ್ಪಿಸಿದರು. ದೇವಿ ಮುಂಭಾಗದ ಬಸವನಮೂರ್ತಿ ಮೂರು ಗ್ರಾಮಗಳ ಎಲ್ಲ ಭಕ್ತರ ಮನೆಗಳಿಗೂ ತೆರಳಿ ಪೂಜೆ ಸ್ವೀಕರಿಸಿದ ನಂತರ ದೇಗುಲಕ್ಕೆ ಕರೆತರಲಾಯಿತು. ಇಂದು ಕೂಡ ಅನೇಕ ಭಕ್ತರು ಮೀಸಲು, ಹರಕೆ ಸಲ್ಲಿಸಲಿದ್ದಾರೆ.
ಕುಣಿದು ಸಂಭ್ರಮಿಸಿದ ಅರ್ಚಕರು: ಕಣಿವೆಮಾರಮ್ಮ, ಕೊಲ್ಲಾಪುರದಮ್ಮ ದೇವಿಗೆ ಬುಧವಾರ ಜಲ್ದಿ ಪೂಜೆ ನಂತರ ವರ್ಷಕೊಮ್ಮೆ ನಡೆಯುವ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು. ಈ ವೇಳೆ ನೂರಾರು ಭಕ್ತರು ಉತ್ಸವ ಮೂರ್ತಿಗಳನ್ನು ಕಣ್ತುಂಬಿಕೊಂಡರು. ಕೊಲ್ಲಾಪುರದಮ್ಮ ದೇವಿಯನ್ನು ಹೊತ್ತ ಅರ್ಚಕರು ಕುಣಿದು ದೇಗುಲ ಪ್ರವೇಶಿಸುವ ಆಚರಣೆ ಈ ಜಾತ್ರೆಯಲ್ಲೇ ಅತ್ಯಂತ ವಿಶೇಷ ಎನ್ನುತ್ತಾರೆ ದೇಗುಲದ ಅರ್ಚಕರು.
