ಬೆಳಗಾವಿ: ಕಣಬರ್ಗಿ ಹೊಸ ವಸತಿ ಬಡಾವಣೆ ನಿರ್ಮಾಣ ಯೋಜನೆಗೆ ಅಡ್ಡಿಯಾಗಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮೇಲೆದ್ದಿರುವ ಬೆಳಗಾವಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ಗೆ ತಾಂತ್ರಿಕ ಅನುಮತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಒಂದೂವರೆ ದಶಕದಿಂದ ಭೂ ಸ್ವಾಧೀನಕ್ಕೆ ವಿರೋಧ ಸೇರಿ ನಾನಾ ಅಡ್ಡಿ ಆತಂಕಗಳಿಂದ ನನೆಗುದಿಗೆ ಬಿದ್ದಿದ್ದ ಕಣಬರ್ಗಿ ಬಡಾವಣೆ (ಸ್ಕೀಂ ನಂ-61) ನಿರ್ಮಾಣ ಯೋಜನೆ ಅಂತಿಮ ಹಂತ ತಲುಪಿದೆ. ಆದರೆ, ಬಡಾವಣೆಯ ಅಭಿವೃದ್ಧಿ ಟೆಂಡರ್ ಕರೆಯಲು ಆರ್ಥಿಕ ಇಲಖೆಯಿಂದ ತಾಂತ್ರಿಕ ಒಪ್ಪಿಗೆ ಸಿಗುತ್ತಿಲ್ಲ. ನಾಲ್ಕೈದು ತಿಂಗಳುಗಳಿಂದ ಬುಡಾ ಅಧಿಕಾರಿಗಳು ಅಂದಾಜು ವೆಚ್ಚದ ಕ್ರಿಯಾ ಯೋಜನೆ ತಿದ್ದುಪಡಿ ಮಾಡಿ ಮೇಲಿಂದ ಮೇಲೆ ದಾಖಲೆಗಳನ್ನು ಸಲ್ಲಿಸುವುದೆ ಬುಡಾ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆಯಾಗಿದೆ.
ಈಗಾಗಲೇ ನಗರದ ಜನಸಂಖ್ಯೆಗೆ ಅನುಗುಣವಾಗಿ, ಪ್ರತಿಯೊಬ್ಬರಿಗೆ ನಿವೇಶನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಬುಡಾ ಅಧಿಕಾರಿಗಳು 2007ರಲ್ಲಿ ಕಣಬರ್ಗಿ ಹೊಸ ಬಡಾವಣೆ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ನಗರದ ಹೊರವಲಯದಲ್ಲಿ 159ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಬಡಾವಣೆಯ ನಿರ್ಮಾಣಕ್ಕೆ ರೈತರು ಕೃಷಿ ಭೂಮಿ ನೀಡಿದ್ದಾರೆ. ಆರ್ಥಿಕ ಇಲಾಖೆ ಅನುಮತಿ ನೀಡಿತ್ತು. ಬಳಿಕ ಯೋಜನಾ ವೆಚ್ಚ 127 ಕೋಟಿ ರೂ. ಆಗಿದ್ದರಿಂದ ಸಚಿವ ಸಂಪುಟವು 2022 ಜುಲೈನಲ್ಲಿ ಒಪ್ಪಿಗೆ ನೀಡಿದೆ. ಆದರೆ, ಕಣಬರ್ಗಿಯಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಗೊಂಡು ಬರೋಬ್ಬರಿ ಆರು ತಿಂಗಳು ಕಳೆಯಿತು. ಆದರೆ, ಸರ್ಕಾರದಿಂದ ಟೆಂಡರ್ ಕರೆಯಲು ತಾಂತ್ರಿಕ ಒಪ್ಪಿಗೆ ಸಿಗುತ್ತಿಲ್ಲ.
ಕಣಬರ್ಗಿ ವಸತಿ ಬಡಾವಣೆ ಒಟ್ಟು 159 ಎಕರೆ ಪ್ರದೇಶ ವ್ಯಾಪ್ತಿ ಪ್ರದೇಶದ ಪೈಕಿ ಮೊದಲ ಹಂತದಲ್ಲಿ 105 ಎಕರೆ ಪ್ರದೇಶದಲ್ಲಿ 1,247 ನಿವೇಶನಗಳು ನಿರ್ಮಾಣಗೊಳ್ಳಲಿವೆ. ಎರಡನೇ ಹಂತದಲ್ಲಿ ಜಿ+3 ಮಾದರಿಯಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಲಿವೆ. ಜತೆ ರಸ್ತೆ, ಉದ್ಯಾನ ಅಭಿವೃದ್ಧಿ ಪಡಿಸಲಾಗುವುದು. 2022 ಡಿಸೆಂಬರ್ ಅಂತ್ಯದ ಒಳಗಾಗಿ ಬಡಾವಣೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸುವ ಗುರಿ ಹೊಂದಲಾಗಿತ್ತು. ಅಲ್ಲದೆ, ನಿವೇಶನಗಳ ಹಂಚಿಕೆಯಲ್ಲಿ ಪಾರದರ್ಶಕತೆಗಾಗಿ ಹೊಸದಾಗಿ
ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಆದರೆ, ಸರ್ಕಾರದಿಂದ ತಾಂತ್ರಿಕ ಒಪ್ಪಿಗೆ ಸಿಗದಿರುವ ಕಾರಣ ವಿಳಂಬವಾಗುತ್ತಿದೆ ಎಂದು ಬುಡಾ ಅಧಿಕಾರಿಗಳು ತಿಳಿಸಿದ್ದಾರೆ.
ಬಡಾವಣೆಗೆ ಸಿಎಂ ಚಾಲನೆ!: ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಆರಂಭವಾಗಿರುವ ಚಳಿಗಾಲ ಅಧಿವೇಶನದ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದಲೇ ಬೆಳಗಾವಿ ನಗರದ ಕಣಬರ್ಗಿ ಹೊಸ ಬಡಾವಣೆ ನಿರ್ಮಾಣಕ್ಕೆ ಚಾಲನೆ ಕೊಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಬಿಜೆಪಿ ಮಾಡುತ್ತಿದೆ. ಹಾಗಾಗಿ, ಅಧಿವೇಶನದ ಒಳಗಾಗಿ ತಾಂತ್ರಿಕ ಒಪ್ಪಿಗೆ ಪಡೆದುಕೊಳ್ಳಲು ಶಾಸಕರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಸುವರ್ಣ ವಿಧಾನಸೌಧದಲ್ಲಿ ಡಿ.19ರಿಂದ ಜರುಗಲಿರುವ ಚಳಿಗಾಲ ಅಧಿವೇಶನದ ವೇಳೆಗೆ ಕಣಬರ್ಗಿ ವಸತಿ ಬಡಾವಣೆ ನಿರ್ಮಾಣಕ್ಕೆ ಟೆಂಡರ್ ಕರೆಯಲು ತಾಂತ್ರಿಕ ಒಪ್ಪಿಗೆ ಸಿಗಲಿದೆ. ಡಿಸೆಂಬರ್ ಅಂತ್ಯದ ಒಳಗಾಗಿ ಕಾಮಗಾರಿ ಆರಂಭಿಸಲಾಗುವುದು.
| ಪ್ರೀತಂ ನಸ್ಲಾಪುರೆ ಬುಡಾ ಆಯುಕ್ತ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ