ಕಣದಲ್ಲಿದ್ದಾರೆ ಕೂಲಿ ಕಾರ್ವಿುಕರು, ವಯೋವೃದ್ಧರು, ಕೋಟಿ ಒಡೆಯರು

ಹಾವೇರಿ: ಸ್ಥಳೀಯ ಲೋಕಸಭಾ ಚುನಾವಣೆ ಅಖಾಡದಲ್ಲಿ ಅಂತಿಮವಾಗಿ 10 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಅದರಲ್ಲಿ ವಯೋವೃದ್ಧರು, ಯುವಕರು ಹಾಗೂ ಪದವೀಧರರು ಇದ್ದಾರೆ.

ಚುನಾವಣಾ ಅಖಾಡದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಸೇರಿ ಒಟ್ಟು 6 ಜನರು ಪದವೀಧರರಿದ್ದಾರೆ. ಮೂವರು ಎಸ್ಸೆಸ್ಸೆಲ್ಸಿ ಓದಿದ್ದರೆ, ಒಬ್ಬರು 7ನೇ ತರಗತಿ ಮುಗಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಬೆಂಗಳೂರು ಇನ್​ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಕಾಲೇಜ್​ನಲ್ಲಿ ಬಿಇ (ಮೆಕಾನಿಕಲ್) ಅಭ್ಯಾಸ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲರು ಬಿಇ (ಮೆಕಾನಿಕಲ್) ಪದವೀಧರರಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ, ಬಿಎಸ್​ಪಿಯ ಎ.ಎ. ಪಠಾಣ, ಪಕ್ಷೇತರ ಅಭ್ಯರ್ಥಿ ರಾಮಣ್ಣ ಬೊಮ್ಮಾಜಿ ಕಾನೂನು ಪದವೀಧರರಾಗಿದ್ದಾರೆ. ಇಂಡಿಯನ್ ಲೇಬರ್ ಪಾರ್ಟಿಯಿಂದ ಕಣಕ್ಕಿಳಿದಿರುವ ಶೈಲೇಶ ನಾಜರೆ ಬಿಕಾಂ ಪದವೀಧರರಾಗಿದ್ದರೆ, ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ ಬಿಎ ಪದವಿ ಮುಗಿಸಿದ್ದರೆ. ಉತ್ತಮ ಪ್ರಜಾಕೀಯ ಪಕ್ಷದ ಈಶ್ವರ ಪಾಟೀಲ, ಪಕ್ಷೇತರರಾದ ಬಸವರಾಜ ದೇಸಾಯಿ, ಸಿದ್ದಪ್ಪ ಪೂಜಾರ ಎಸ್ಸೆಸ್ಸೆಲ್ಸಿ ಓದಿದ್ದಾರೆ. ವೀರಭದ್ರಪ್ಪ ಕಬ್ಬಿಣದ 7ನೇ ತರಗತಿ ಪಾಸಾಗಿದ್ದಾರೆ.

ಹಿರಿಯ ಅಭ್ಯರ್ಥಿ: ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಡಿ.ಆರ್. ಪಾಟೀಲ ಹಾಗೂ ಪಕ್ಷೇತರ ಅಭ್ಯರ್ಥಿ ವೀರಭದ್ರಪ್ಪ ಕಬ್ಬಿಣದ 72 ವರ್ಷ ವಯಸ್ಸಿನವರಾಗಿದ್ದು, ಕಣದಲ್ಲಿ ಹಿರಿಯರಾಗಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿರುವ ಹನುಮಂತಪ್ಪ ಕಬ್ಬಾರ ಕಿರಿಯ ಅಭ್ಯರ್ಥಿಯಾಗಿದ್ದಾರೆ.

ಕೋಟಿ ಒಡೆಯರು, ಕಾರ್ವಿುಕರೂ ಇದ್ದಾರೆ: ಕಣದಲ್ಲಿರುವ ಕೆಲ ಅಭ್ಯರ್ಥಿಗಳ ಆಸ್ತಿ ಕೋಟಿ ದಾಟಿದ್ದರೆ, ಇನ್ನು ಕೆಲವರು ಕಾರ್ವಿುಕರಾಗಿದ್ದಾರೆ. ಬಿಜೆಪಿಯ ಅಭ್ಯರ್ಥಿ ಹಾಲಿ ಸಂಸದ ಶಿವಕುಮಾರ ಉದಾಸಿ ಅಂದಾಜು 64 ಕೋಟಿ ರೂ.ಗಳ ಆಸ್ತಿಯನ್ನು ಅಫಿಡವಿಟ್​ನಲ್ಲಿ ತೋರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ 4,68 ಕೋಟಿ ರೂ.ಗಳ ಆಸ್ತಿ ಘೊಷಿಸಿದ್ದಾರೆ. ಹಾನಗಲ್ಲ ತಾಲೂಕು ಬಮ್ಮನಹಳ್ಳಿಯ ಸಿದ್ದಪ್ಪ ಪೂಜಾರ ಕೂಲಿ ಕಾರ್ವಿುಕರಾಗಿದ್ದಾರೆ. ಈಶ್ವರ ಪಾಟೀಲ, ಶೈಲೇಶ ನಾಜರೆ ಸ್ವ ಉದ್ಯೋಗಿಯಾಗಿದ್ದರೆ, ರಾಮಪ್ಪ ಬೊಮ್ಮಾಜಿ, ಹನುಮಂತಪ್ಪ ಕಬ್ಬಾರ, ವೀರಭದ್ರಪ್ಪ ಕಬ್ಬಿಣದ, ಬಸವರಾಜ ದೇಸಾಯಿ ರೈತರಾಗಿದ್ದಾರೆ.

ಅಭ್ಯರ್ಥಿ ಪಕ್ಷ ವಯಸ್ಸು ವಿದ್ಯಾರ್ಹತೆ

ಶಿವಕುಮಾರ ಉದಾಸಿ ಬಿಜೆಪಿ 52 ಬಿಇ (ಮೆಕಾನಿಕಲ್)

ಡಿ.ಆರ್. ಪಾಟೀಲ ಕಾಂಗ್ರೆಸ್ 72 ಬಿಇ (ಮೆಕಾನಿಕಲ್)

ಎ.ಎ. ಪಠಾಣ ಬಿಎಸ್​ಪಿ 64 ಬಿಎ,ಎಲ್​ಎಲ್​ಬಿ

ಈಶ್ವರ ಪಾಟೀಲ ಯುಪಿಪಿ 37 ಎಸ್ಸೆಸ್ಸೆಲ್ಸಿ

ಶೈಲೇಶ ನಾಜರೆ ಐಎಲ್​ಪಿ 48 ಬಿಕಾಂ

ವೀರಭದ್ರಪ್ಪ ಕಬ್ಬಿಣದ ಪಕ್ಷೇತರ 72 7ನೇ ಇಯತ್ತೆ

ಬಸವರಾಜ ದೇಸಾಯಿ ಪಕ್ಷೇತರ 47 ಎಸ್ಸೆಸ್ಸೆಲ್ಸಿ

ಸಿದ್ದಪ್ಪ ಪೂಜಾರ ಪಕ್ಷೇತರ 37 ಎಸ್ಸೆಸ್ಸೆಲ್ಸಿ

ರಾಮಪ್ಪ ಬೊಮ್ಮಾಜಿ ಪಕ್ಷೇತರ 64 ಬಿಎ (ಕಾನೂನು)

ಹನಮಂತಪ್ಪ ಕಬ್ಬಾರ ಪಕ್ಷೇತರ 35 ಬಿಎ