Tuesday, 11th December 2018  

Vijayavani

Breaking News

ಕಡ್ಡಾಯ ಸಾರ್ವತ್ರಿಕ ಶಿಕ್ಷಣಕ್ಕೆ ಮಹತ್ವ ಸಿಗಲಿ

Wednesday, 20.12.2017, 3:01 AM       No Comments

| ಸಜ್ಜನ್​ ಪೂವಯ್ಯ

 ಎಲ್ಲರಿಗೂ ಸಾರ್ವತ್ರಿಕ ಹಾಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕೆಂಬುದೇ ಸಂವಿಧಾನದ ವಿಧಿ 45ರ ಅಂತಿಮಗುರಿ. ಆದರೆ, ಸಂವಿಧಾನವನ್ನು ಅಳವಡಿಸಿಕೊಂಡು 50 ವರ್ಷಗಳಾದ ನಂತರವೂ, ಈ ಗುರಿಸಾಧನೆ ಆಗಲೇ ಇಲ್ಲ ಎಂಬುದು ವಿಷಾದನೀಯ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದಷ್ಟು ಯತ್ನಿಸಿವೆಯಾದರೂ ನಿರೀಕ್ಷಿತ ಫಲ ದಕ್ಕಿಲ್ಲ.

‘ನಿಮ್ಮಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳು ಇವೆಯೆಂದ ಮಾತ್ರಕ್ಕೆ ನೀವು ಸುಶಿಕ್ಷಿತರಾಗಿದ್ದೀರಿ ಎಂದರ್ಥವಲ್ಲ’- ಹೀಗೆನ್ನುತ್ತಾನೆ ಮಾಲ್ಕಮ್ ಎಕ್ಸ್ ಎಂಬ ಅಮೆರಿಕದ ರಾಜಕೀಯ ಕ್ರಿಯಾವಾದಿ.

ವಿದ್ಯಾರ್ಥಿಗಳ ಜಾತಿ, ಮತ, ನೆಲೆ ಅಥವಾ ಲಿಂಗ ಯಾವುದೇ ಇರಲಿ, ತುಲನಾತ್ಮಕ ಗುಣಮಟ್ಟದ ಕಡ್ಡಾಯ ಸರ್ವಸಮಾನ ಶಿಕ್ಷಣವು ಎಲ್ಲ ವಿದ್ಯಾರ್ಥಿಗಳಿಗೂ ದೊರೆಯುವಂತಾಗುವುದರ ಖಾತರಿಯನ್ನು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯು ಆಧರಿಸಿದೆ. ಸಮಾಜದ ಸ್ವಾವಲಂಬಿ ಮತ್ತು ಸ್ವಯಂಪೂರ್ಣ ಭಾಗೀದಾರರಾಗುವಂತಾಗುವ ನಿಟ್ಟಿನಲ್ಲಿ ಒಬ್ಬೊಬ್ಬ ವಿದ್ಯಾರ್ಥಿಯನ್ನೂ ಸಜ್ಜುಗೊಳಿಸುವುದರ ಜತೆಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನೂ ಒಳಗೊಂಡಿರುವ ಇಂಥದೊಂದು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣವು, ಸರ್ವಸಮಾನತೆಯಂಥ ಮೂಲಭೂತ ಅಂಶದ ನೆರವಿನೊಂದಿಗೆ ಎಲ್ಲರನ್ನೂ ಏಕಸ್ತರದಲ್ಲಿ ನೆಲೆಗೊಳಿಸುತ್ತದೆ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ಹುಟ್ಟುಹಾಕುತ್ತದೆ.

ಶಿಕ್ಷಣದಲ್ಲಿ ಅಸಮತೋಲನ ಇರಬಾರದು: ಒಂದು ಸಾಮಾನ್ಯ ಕನಿಷ್ಠ ಪಠ್ಯಕ್ರಮವು ಈ ಸಾರ್ವತ್ರಿಕ ಶೈಕ್ಷಣಿಕ ಪದ್ಧತಿಯ ಒಂದು ನಿರ್ಣಾಯಕ ಅಂಶವಾಗಿದ್ದು, ಇದನ್ನು ಎಲ್ಲರೂ ಅನುಸರಿಸಬೇಕಿರುತ್ತದೆ ಮತ್ತು ಎಲ್ಲ ಮಕ್ಕಳಿಗೂ ನೀಡಬೇಕಾಗಿಬರುತ್ತದೆ. ಇಲ್ಲವಾದಲ್ಲಿ, ಭಿನ್ನ ಸಮಾಜೋ-ಭೌಗೋಳಿಕ ನೆಲೆಗಳಲ್ಲಿ ವಿಭಿನ್ನ ಶಿಕ್ಷಣ ಮಾನದಂಡಗಳನ್ನು ಅಳವಡಿಸಿಕೊಳ್ಳುವಂತಾಗಿ, ಅಸಮತೋಲನ-ಅಸಮಾನತೆ-ಭೇದಭಾವಗಳಿಗೆ ಬಾಗಿಲು ತೆರೆದಂತಾಗುತ್ತದೆ. ಆದರೆ, ಸಾಮಾನ್ಯ ಕನಿಷ್ಠ ಪಠ್ಯಕ್ರಮವಿದ್ದಲ್ಲಿ, ವಿದ್ಯಾರ್ಥಿಗಳ ಜನಾಂಗೀಯತೆ, ಪ್ರದೇಶ ಮತ್ತು ಮನೆತನಗಳೇನೇ ಇರಲಿ, ತಮ್ಮ ಭವಿಷ್ಯತ್ತಿನ ಸಾಹಸಗಳಿಗೆ ಅಗತ್ಯವಾಗಿರುವ ಸರ್ವಸಮಾನ ಸೌಕರ್ಯಗಳೊಂದಿಗೆ ಅವರು ಸನ್ನದ್ಧರಾಗುವುದಕ್ಕೆ ಸಾಧ್ಯವಾಗುತ್ತದೆ. ಆದಾಗ್ಯೂ, ಒಂದೊಮ್ಮೆ ಕಡ್ಡಾಯ ಶಿಕ್ಷಣ ಪದ್ಧತಿಯ ಆದೇಶವನ್ನು ಭೌತಿಕ ಹಾಜರಿಗಷ್ಟೇ ಸೀಮಿತಗೊಳಿಸುವಂತಾದಲ್ಲಿ ಮತ್ತು ಪಠ್ಯಕ್ರಮದ ನಿಯಂತ್ರಣದ ಆಶಯ ಅದರಲ್ಲಿ ಇಲ್ಲದೆ ಹೋದಲ್ಲಿ, ಮಕ್ಕಳು ಶಾಲೆಯಲ್ಲಿ ಭೌತಿಕವಾಗಿ ಹಾಜರಿರಬಹುದಾದರೂ, ತರಗತಿಯಲ್ಲಿ ನಡೆಯುವ ಚಟುವಟಿಕೆಗಳಿಂದ ಮಾನಸಿಕವಾಗಿ ಗೈರುಹಾಜರಾಗಿರುವಂಥ ಪರಿಸ್ಥಿತಿ ರೂಪುಗೊಳ್ಳಬಹುದು.

ಪಠ್ಯಕ್ರಮ ಶಿಕ್ಷಣ ವ್ಯವಸ್ಥೆಯ ಜೀವಾಳ: ಇದು, ಎಲ್ಲ ವಿದ್ಯಾರ್ಥಿಗಳೂ ಅನುಸರಿಸಿ ಅಧ್ಯಯನ ಮಾಡಬೇಕಾಗಿ ಬರುವ ಒಂದು ಸಮಗ್ರ/ವ್ಯಾಪಕ ಪಠ್ಯಕ್ರಮದ ಪರವಾಗಿರುವ ವಾದವಲ್ಲ; ಪಠ್ಯಕ್ರಮ ಎಂಬುದು ಶೈಕ್ಷಣಿಕ ವ್ಯವಸ್ಥೆಯೊಂದರ ಜೀವಾಳವಾಗಿದ್ದು, ಕನಿಷ್ಠಪಕ್ಷ ಅತ್ಯಂತ ಮೂಲಭೂತ ಶೈಕ್ಷಣಿಕ ಹಕ್ಕುಗಳು ಪ್ರತಿಯೊಬ್ಬರನ್ನೂ ತಲುಪುವಂತಾಗಬೇಕು ಎಂಬುದಷ್ಟೇ ಇಲ್ಲಿನ ಸಮರ್ಥನೆ. ಒಂದು ಪರಿಣಾಮಕಾರಿ ಹಾಗೂ ಸಾಮಾನ್ಯ ಕನಿಷ್ಠ ಪಠ್ಯಕ್ರಮವಿಲ್ಲದೆ ಹೋದಲ್ಲಿ, ಸುಲಭಲಭ್ಯ ಪ್ರವೇಶ ಪ್ರಕ್ರಿಯೆಗಳು, ನೆರೆಹೊರೆಯ ಶಾಲೆಗಳು, ಶಾಲೆಗೆ ಮಕ್ಕಳನ್ನು ಕಳಿಸುವ ನಿಟ್ಟಿನಲ್ಲಿ ಪಾಲಕರಿಗಿರಬೇಕಾದ ಬದ್ಧತೆ ಇವೇ ಮೊದಲಾದವಕ್ಕೆ ಸಂಬಂಧಿಸಿದ ಉಪಬಂಧಗಳು ಅಥವಾ ಮುನ್ನೇರ್ಪಾಡುಗಳು ಅರ್ಥಹೀನವಾಗಿಬಿಡುತ್ತವೆ.

‘ಕಡ್ಡಾಯ’ ಮತ್ತು ‘ಸರ್ವಸಮಾನತೆ’ಗೆ ಸಂಬಂಧಿಸಿದ ಆದೇಶಗಳು ಮಕ್ಕಳನ್ನು ಭಯಭೀತರನ್ನಾಗಿಸುವುದಕ್ಕಾಗಲೀ ಅಥವಾ ಅವರ ‘ಬ್ರೇನ್​ವಾಷ್’ ಮಾಡುವುದಕ್ಕಾಗಲೀ ಇರುವಂಥವಲ್ಲ. ಬದಲಿಗೆ, ಎಲ್ಲ ಮಕ್ಕಳಿಗೂ ಓದುವಿಕೆ-ಬರೆಯುವಿಕೆ-ಅಂಕಗಣಿತದಂಥ ವಿಷಯಗಳಲ್ಲಿ ಮೂಲಭೂತ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಇವು ಅತ್ಯಗತ್ಯವಾಗಿವೆ. ಈ ನಿರ್ಬಂಧದ ನಿರ್ವಹಣೆಯಿಂದಾಗಿ ಮಕ್ಕಳು ಸೌಲಭ್ಯವಂತರಾಗಿ ನಿಜಾರ್ಥದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗುತ್ತಾರೆ; ಈ ಸೌಲಭ್ಯಗಳು ಸರ್ವಸಮಾನ ಮತ್ತು ಮೂಲಭೂತವಾಗಿರುವಂಥವು ಮಾತ್ರವಲ್ಲದೆ, ತಾನು ಕನಸಿದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮಗುವಿಗೂ ಅವು ಅತ್ಯಗತ್ಯವಾಗಿರುತ್ತವೆ. ಉದಾಹರಣೆಗೆ, ಧಾರ್ವಿುಕ ಗ್ರಂಥಗಳ ಅಧ್ಯಯನವೇ ಮಗುವೊಂದರ ಏಕಮಾತ್ರ ಬಯಕೆಯಾಗಿದ್ದಲ್ಲಿ, ಓದುವುದು ಮತ್ತು ಬರೆಯುವುದು ಹೇಗೆಂಬುದರ ಕುರಿತು ಆ ಮಗು ಅರಿಯವುದು ಅತಿಮುಖ್ಯವಾಗುತ್ತದೆ. ಇದೇ ರೀತಿಯಲ್ಲಿ, ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಮಗುವಿನ ಬಯಕೆಯಾಗಿದ್ದಲ್ಲಿ, ಓದುವಿಕೆ-ಬರೆಯುವಿಕೆ-ಅಂಕಗಣಿತ ವಿಷಯಗಳ ಹದವಾದ ಮಿಶ್ರಣ ಆ ಮಗುವಿಗೆ ನೆರವಾಗಬಲ್ಲದು.

ಭಾವಿ ಪ್ರಜೆಗಳು ಸಮರ್ಥರಾಗಬೇಕು: ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ಪ್ರಾಮುಖ್ಯವನ್ನು ನಿದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ‘ಆಮಿಷ್’ ಸಮುದಾಯ ಉತ್ತಮ ಉದಾಹರಣೆಯಾಗಬಲ್ಲದು. ಇದೊಂದು ಅತಿ ನೇಮನಿಷ್ಠೆಯ, ಸಂಪ್ರದಾಯವಾದಿ, ಧಾರ್ವಿುಕ ಸಮುದಾಯವಾಗಿದ್ದು, ಸಾರ್ವತ್ರಿಕ ಜೀವನವಿಧಾನದಿಂದ ಸಂಪೂರ್ಣ ದೂರವಿರುವುದಕ್ಕೆ ಆದ್ಯತೆ ನೀಡುವಂಥದ್ದಾಗಿದೆ. ಈ ಸಮುದಾಯ ಕೂಡ, ಸರ್ವಸಮಾನ ಕಡ್ಡಾಯ ಶಿಕ್ಷಣಕ್ಕಿರುವ ಪ್ರಾಮುಖ್ಯವನ್ನು ಅಮೆರಿಕದ ಸವೋಚ್ಚ ನ್ಯಾಯಾಲಯದ ಸಮ್ಮುಖದಲ್ಲಿ ಒಪ್ಪಿಕೊಂಡಿತು. ಅಷ್ಟೇ ಅಲ್ಲ, ಓದುವ ಸಾಮರ್ಥ್ಯಕ್ಕಿರುವ (ಇದಿಲ್ಲದೆ ಹೋದಲ್ಲಿ, ಬೈಬಲ್​ನ ಅಧ್ಯಯನದ ಯತ್ನವು ನಿಷ್ಪಲವಾಗುತ್ತದೆ) ಮಹತ್ವವನ್ನು ಕೂಡ ಅದು ಗುರುತಿಸಿತು.

ಎಲ್ಲಕ್ಕಿಂತ ಮಿಗಿಲಾಗಿ, ಮುಕ್ತ ರಾಜಕೀಯ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯೊಂದರಲ್ಲಿ ಪರಿಣಾಮಕಾರಿಯಾಗಿ ಹಾಗೂ ಬುದ್ಧಿವಂತಿಕೆಯಿಂದ ಪಾಲ್ಗೊಳ್ಳುವಂತಾಗಲು ದೇಶದ ಭಾವಿ ಪ್ರಜೆಗಳನ್ನು ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣ ಪದ್ಧತಿಯು ಸಜ್ಜುಗೊಳಿಸುತ್ತದೆ ಎನ್ನಲಡ್ಡಿಯಿಲ್ಲ. ಜತೆಗೆ, ಆರೋಗ್ಯಕರವಲ್ಲದ ಬಾಲಕಾರ್ವಿುಕ ಪದ್ಧತಿ ಹಾಗೂ ಕಡ್ಡಾಯ ನಿಷ್ಕ್ರಿಯತೆಯ ಹರಡಿಕೆಯಿಂದಾಗುವ ಅನಪೇಕ್ಷಿತ ಪರಿಣಾಮಗಳಿಗೂ ಅಪೇಕ್ಷಣೀಯ ಪರ್ಯಾಯವನ್ನೂ ಇಂಥದೊಂದು ಪದ್ಧತಿ ಒದಗಿಸುತ್ತದೆ.

ಗುರಿ ಇನ್ನೂ ಈಡೇರಿಲ್ಲ: ಭಾರತದ ಸಂವಿಧಾನದ ವಿಧಿ 45ರಲ್ಲಿ ಅಂತರ್ಗತವಾಗಿರುವ ‘ಸರ್ಕಾರಿ ಕಾರ್ಯನೀತಿಯ ಮಾರ್ಗದರ್ಶಿ ಸೂತ್ರ’ವು ಈ ವಿಷಯಕ್ಕೆ ಸಂಬಂಧಿಸಿದ ಉಪಬಂಧವೊಂದನ್ನು ಒಳಗೊಂಡಿದೆ; ಎಲ್ಲ ಮಕ್ಕಳಿಗೂ 14 ವರ್ಷ ವಯಸ್ಸಿನವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸಲು ಸರ್ಕಾರವು ಪ್ರಯತ್ನಿಸಬೇಕು ಎಂಬುದೇ ಆ ಉಪಬಂಧ. ಎಲ್ಲರಿಗೂ ಸಾರ್ವತ್ರಿಕ ಹಾಗೂ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕೆಂಬುದೇ ಇದರ ಅಂತಿಮಗುರಿ. ಆದಾಗ್ಯೂ, ಸಂವಿಧಾನ ಮತ್ತು ಅದರ ವೈವಿಧ್ಯಮಯ ವಿಧಿಗಳನ್ನು ಸ್ವೀಕರಿಸಿ ಅಳವಡಿಸಿಕೊಂಡು 50 ವರ್ಷಗಳಾದ ನಂತರವೂ, ನಾವು ಈ ಗುರಿಯನ್ನು ಸಾಧಿಸಲೇ ಇಲ್ಲ ಎಂಬುದು ವಿಷಾದನೀಯ ಸಂಗತಿ. ಈ ಆದೇಶವನ್ನು ನೆರವೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಒಂದಷ್ಟು ಪ್ರಯತ್ನಗಳನ್ನು ಮಾಡಿದವಾದರೂ, ಸಾರ್ವತ್ರಿಕ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಅಂತಿಮಗುರಿಯ ಈಡೇರದೆ ಹಾಗೇ ಉಳಿದುಬಿಟ್ಟಿದೆ. ಸಂವಿಧಾನದ 45ನೇ ವಿಧಿಯು ಸರ್ಕಾರಿ ಕಾರ್ಯನೀತಿಯ ಒಂದು ಮಾರ್ಗದರ್ಶಿ ಸೂತ್ರವಾಗಿರುವುದರಿಂದಾಗಿ, ಹಾಗೂ ಇದಕ್ಕೆ ಸಮರ್ಥನೀಯ ನೆಲೆಗಟ್ಟು ಒದಗಿಸುವುದಕ್ಕಾಗಲೀ ಅಥವಾ ಇದನ್ನು ಜಾರಿಮಾಡಲಾಗಲೀ ಸಾಧ್ಯವಾಗದಿರುವುದರಿಂದ, ಮತ್ತು ಹಿಂದಿನ ಎಲ್ಲ ಪ್ರಯತ್ನಗಳೂ ವಿಫಲವಾಗಿರುವ ಕಾರಣಕ್ಕೆ, ಈ ಚರ್ಚಾವಿಷಯಕ್ಕೆ ಸಂಬಂಧಿಸಿದಂತೆ ದೃಢವಾದ ಹೆಜ್ಜೆಯನ್ನಿರಿಸುವ ಅಗತ್ಯ ಹಿಂದೆಂದಿಗಿಂತ ಹೆಚ್ಚಾಗಿದೆ ಎಂಬ ಅಭಿಪ್ರಾಯ ರೂಪುಗೊಳ್ಳುವಂತಾಯಿತು.

ತರುವಾಯದಲ್ಲಿ, ವಿಧಿ 21ಎ ಅಡಿಯಲ್ಲಿ ಸುಸ್ಪಷ್ಟ ಉಪಬಂಧವೊಂದರ ಸೇರ್ಪಡೆಗೆ ಅನುವು ಮಾಡಿಕೊಡಲು, 2002ರ ವರ್ಷದಲ್ಲಿ ಸಂವಿಧಾನಕ್ಕೆ 86ನೇ ತಿದ್ದುಪಡಿ ಮಾಡಲಾಯಿತು; ಸರ್ಕಾರವು ಕಾನೂನಿನ ಮಾಗೋಪಾಯದ ಮೂಲಕ ನಿರ್ಷRಸಿದ ವಿಧಾನದಲ್ಲಿ, ಆರರಿಂದ 14 ವರ್ಷ ವಯಸ್ಸಿನವರೆಗಿನ ಎಲ್ಲ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಸರ್ಕಾರ ಒದಗಿಸುವಂತಾಗಬೇಕು ಎಂಬುದಾಗಿ ಈ ಉಪಬಂಧ ಸ್ಪಷ್ಟ ಆದೇಶವನ್ನು ನೀಡಿತು. ಈ ತಿದ್ದುಪಡಿಯಿಂದಾಗಿ, ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕೆ ಸಂಬಂಧಿಸಿದ ಉಪಬಂಧವು ಜಾರಿಮಾಡಲಾಗದ ಮಾರ್ಗದರ್ಶಿ ಸೂತ್ರವಾಗೇ ಉಳಿದುಕೊಳ್ಳಲಿಲ್ಲ; ಆರರಿಂದ ಹದಿನಾಲ್ಕು ವರ್ಷಗಳವರೆಗಿನ ವಯೋಮಾನದ ಎಲ್ಲ ಮಕ್ಕಳ ಒಂದು ‘ಪರಿಪಕ್ವ/ಸುಸಜ್ಜಿತ ಸುಸ್ಪಷ್ಟ ಮೂಲಭೂತ ಹಕ್ಕಾಗಿ’ ರೂಪಾಂತರಗೊಂಡಿತು.

ಸಂವಿಧಾನದಲ್ಲಿ ಈ ಉಪಬಂಧದ ಸೇರ್ಪಡೆಯ ತರುವಾಯ ಆದ ಬೆಳವಣಿಗೆಗಳೇನು? ಈ ಸಂಬಂಧವಾಗಿ ರೂಪುಗೊಂಡ ಕಾಯ್ದೆಯ ಉದ್ದೇಶ ಏನಾಗಿತ್ತು, ಇದರ ಅನುಷ್ಠಾನದ ಸ್ಥಿತಿಗತಿ ಹೇಗಿತ್ತು? ಕಾಯ್ದೆಯ ಆಶಯ ಈಡೇರಿತೇ? ಇವೇ ಮೊದಲಾದ ವಿಷಯಗಳ ಕುರಿತಾಗಿ ಮುಂದಿನ ಕಂತಿನಲ್ಲಿ ಅವಲೋಕಿಸೋಣ.

ಲೇಖಕರು ಖ್ಯಾತ ಹಿರಿಯ ನ್ಯಾಯವಾದಿ, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್)

(ಅನಿವಾರ್ಯ ಕಾರಣದಿಂದ ‘ಜಗದಗಲ’ ಅಂಕಣ ಪ್ರಕಟಗೊಂಡಿಲ್ಲ)

Leave a Reply

Your email address will not be published. Required fields are marked *

Back To Top