ಕಡ್ಡಾಯವಾಗಿ ಹಾಜರಿದ್ದು ಮಾಹಿತಿ ನೀಡಿ

ರೋಣ: ಯಾವುದೇ ಸಭೆ ಆಗಿರಲಿ ಕಡ್ಡಾಯವಾಗಿ ಹಾಜರಿದ್ದು, ಇಲಾಖಾವಾರು ಮಾಹಿತಿ ನೀಡಬೇಕೆಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಸಮಿತಿ ಸದಸ್ಯ ಶಂಕರ ಕಳಿಗಣ್ಣವರ ಖಡಕ್ ಎಚ್ಚರಿಕೆ ನೀಡಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಬಹುತೇಕ ಅಧಿಕಾರಿಗಳು ಗೈರಾಗಿದ್ದಕ್ಕೆ ಸಿಟ್ಟಾದ ಅವರು, ಸಭೆಗೆ ಗೈರಾಗುವ ಅಧಿಕಾರಿಗಳು ಸೂಕ್ತ ಕಾರಣ ನೀಡಬೇಕು, ಇಲ್ಲದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು. ಅಲ್ಲದೆ, ಪ್ರತಿಯೊಬ್ಬ ಅಧಿಕಾರಿಗಳು ಇಚ್ಛಾಶಕ್ತಿಯಿಂದ ತಮ್ಮ ಕೆಲಸ ಮಾಡುವುದೇ ಆ ಪಜಾ ಮತ್ತು ಪಪಂ ವರ್ಗಕ್ಕೆ ನೀಡುವ ಗೌರವವಾಗುತ್ತದೆ ಎಂದು ತಿಳಿಸಿದರು.

ತಾಲೂಕಿನಾದ್ಯಂತ ಪಜಾ ಮತ್ತು ಪಪಂಗಳ ಬಡಾವಣೆಗಳಿಗೆ ಮಂಜೂರಾಗಿರುವ ಕಾಮಗಾರಿಗಳನ್ನು ಗುತ್ತಿಗೆದಾರರು ಚೇಂಜ್ ಆಫ್ ವರ್ಕ್ ಮಾಡಿಸಿಕೊಂಡು ಬೇರೆ ಕಡೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಬಗ್ಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಸಮಿತಿ ಇನ್ನೊಬ್ಬ ಸದಸ್ಯ ದುರ್ಗಪ್ಪ ಸಂದಿಮನಿ ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಬೇಕಿದ್ದ ಜಿಪಂ, ಲೋಕೋಪಯೋಗಿ ಇಂಜಿನಿಯರ್ ಸಭೆಗೆ ಗೈರಾಗಿದ್ದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಶರಣಮ್ಮಾ ಕಾರಿ ಮಾತನಾಡಿ, ಇತ್ತೀಚೆಗೆ ತಾಲೂಕಿನ ಕರಮುಡಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ನಡೆದ ಕೆಲ ಅಹಿತಕರ ಘಟನೆಗಳನ್ನು ಸರಿಪಡಿಸುವ ಮೂಲಕ ಆ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಸಾಮರಸ್ಯದಿಂದ ಇರುವಂತೆ ನೋಡಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ತಾಪಂ ಇಒ ಎಂ.ವಿ. ಚಳಗೇರಿ, ಪಿಎಸ್​ಐ ಎಲ್.ಕೆ. ಜೂಲಕಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ನಂಜುಂಡಯ್ಯ, ಸಮಾಜ ಕಲ್ಯಾಣಾಧಿಕಾರಿ ಬಿ.ಎಂ. ಬಡಿಗೇರ, ಇತರರಿದ್ದರು.

Leave a Reply

Your email address will not be published. Required fields are marked *