ಕಡಿಮೆ ನೀರಲ್ಲಿ ಬೆಳೆ, ಸಂಶೋಧನೆ ಅಗತ್ಯ

ಹುಬ್ಬಳ್ಳಿ: ಬರಬರುತ್ತ ಭೂಮಿಯಿಂದ ನೀರಿನ ಲಭ್ಯತೆ ಕಡಿಮೆಯಾಗುತ್ತ ಸಾಗುತ್ತಿದ್ದು, ಕಡಿಮೆ ನೀರು ಬಳಸಿ ಬೆಳೆ ಬೆಳೆಯುವ ಬಗ್ಗೆ ಹೆಚ್ಚಿನ ಸಂಶೋಧನೆಗಳು ಅಗತ್ಯವಾಗಿದೆ. ಇಸ್ರೇಲ್ ಮಾದರಿ ಕೃಷಿಯಲ್ಲಿ ಕಡಿಮೆ ನೀರು ಬಳಕೆಯಾಗುತ್ತದೆ ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಮಹಾದೇವ ಚೆಟ್ಟಿ ಹೇಳಿದರು.
ಇಲ್ಲಿಯ ಕೆಎಲ್​ಇ ತಾಂತ್ರಿಕ ವಿವಿ ಆವರಣದ ದೇಶಪಾಂಡೆ ಫೌಂಡೇಶನ್ ಆಡಿಟೋರಿಯಂನಲ್ಲಿ ಪ್ರಜ್ಞಾ ಪ್ರವಾಹ ವೇದಿಕೆಯಿಂದ ಶುಕ್ರವಾರ ನಡೆದ ಎರಡು ದಿನಗಳ ಜ್ಞಾನ ಸಂಗಮ- 19 ಸಮಾರೋಪದಲ್ಲಿ ಅವರು ಅತಿಥಿಯಾಗಿ ಮಾತನಾಡಿದರು.
ಮೊದಲೆಲ್ಲ 30-40 ಅಡಿ ಕೊರೆದರೆ ಸಾಕು ನೀರು ಹತ್ತುತ್ತಿತ್ತು. ಆದರೆ, ಈಗ ಸಾವಿರ ಅಡಿ ಹೋದರೂ ನೀರಿಲ್ಲ. ಇಸ್ರೇಲ್ ಮಾದರಿ ಕೃಷಿಯಿಂದ ಶೇ. 60- 70 ರಷ್ಟು ನೀರು ಉಳಿಸಬಹುದು. ಕೃಷಿ ವಿವಿ ಕಡಿಮೆ ನೀರು ಬಳಸಿ ಕೃಷಿ ಮಾಡುವುದು, ಅದನ್ನು ಪ್ರೋತ್ಸಾಹಿಸುವ ಬಗ್ಗೆ ಕೆಲಸ ಮಾಡುತ್ತಿದೆ ಎಂದರು.
ಭಾರತೀಯ ತಂತ್ರಜ್ಞಾನದ ಇತಿಹಾಸ
ರಾಣಿ ಚನ್ನಮ್ಮ ವಿವಿ ಕುಲಪತಿ ಪ್ರೊ. ಎಸ್.ಬಿ. ಹೊಸಮನಿ ಮಾತನಾಡಿ, ಹರಪ್ಪ ನಾಗರಿಕತೆ ಕಾಲದಿಂದಲೂ ಭಾರತದಲ್ಲಿ ತಂತ್ರಜ್ಞಾನ ಇತ್ತು. ಅದೇ ಈಗ ಬೆಳವಣಿಗೆಯಾಗಿದೆ. ಸಂಶೋಧನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೇಕು. ನಮ್ಮ ಆವಿಷ್ಕಾರ, ಶೋಧನೆಗಳಿಗೆ ಪೇಟೆಂಟ್ ತೆಗೆದುಕೊಳ್ಳುವ ಕೆಲಸ ಆಗಬೇಕು. ಜಪಾನ್​ನಂತಹ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪೇಟೆಂಟ್ ಬಗ್ಗೆ ಚಿಂತಿಸುವವರು ಕಡಿಮೆ ಎಂದರು.
ಪ್ರಜ್ಞಾ ಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ, ವಿದ್ಯಾರ್ಥಿ ದೆಸೆಯಿಂದಲೇ ಪ್ರಶ್ನೆ ಕೇಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರಶ್ನೆ ಕೇಳುವ ಗುಣವೇ ಮುಂದೆ ಸಂಶೋಧನೆಗೆ ಪ್ರೇರಣೆಯಾಗುತ್ತದೆ ಎಂದರು.
ಪ್ರಜ್ಞಾ ಪ್ರವಾಹದ ಸಹ ಸಂಚಾಲಕ ಡಾ. ಸುಶಾಂತ ಜೋಶಿ ವರದಿ ವಾಚನ ಮಾಡಿದರು. ಸಂದೀಪ ನಾಯರ್ ನಿರೂಪಿಸಿದರು. ಪ್ರಜ್ಞಾ ಪ್ರವಾಹದ ಸಂಚಾಲಕ ಜಗದೀಶ ಹಿರೇಮಠ ವಂದಿಸಿದರು.
ಲಕ್ಷ ರೈತರಿಗೆ ಮೆಸೇಜ್
ತರಿಗೆ ಹವಾಮಾನದ ಮುನ್ಸೂಚನೆ ನೀಡುವುದು ತುಂಬಾ ಅಗತ್ಯವಾಗಿದೆ. ರೈತರ ಅನುಕೂಲಕ್ಕೆ 600 ಕೃಷಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಿದೆ. ಆಪ್​ಗಳ ಮೂಲಕ ಹವಾಮಾನ, ಬೆಳೆಗಳ ರೋಗ, ಹತೋಟಿ ಕುರಿತು ರೈತರಿಗೆ ಮಾಹಿತಿ ನೀಡುವುದು ಅಗತ್ಯ. ಅದಕ್ಕಾಗಿ ನಿತ್ಯ ಲಕ್ಷ ರೈತರಿಗೆ ಮೆಸೇಜ್ ಕಳಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಕುಲಪತಿ ಡಾ. ಮಹಾದೇವ ಚೆಟ್ಟಿ ಹೇಳಿದರು.