ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ಹೊನ್ನಾವರ: ತಾಲೂಕಿನ ರ್ಕ ಗ್ರಾಮದ ತೊಪ್ಪಲಕೇರಿ ಮಜರೆ ಮೂರು ವರ್ಷಗಳಿಂದ ತೀವ್ರತರವಾದ ಸಮುದ್ರ ಕೊರೆತದ ಆರ್ಭಟಕ್ಕೆ ತತ್ತರಿಸುತ್ತಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಬದುಕುವ ಅವಕಾಶಕ್ಕಾಗಿ ಪ್ರಧಾನಮಂತ್ರಿಯವರಲ್ಲಿ ಮೊರೆ ಇಟ್ಟಿದ್ದಾರೆ.

ತೊಪ್ಪಲಕೇರಿಯಲ್ಲಿ ಕೆಲವು ವರ್ಷಗಳಿಂದ ಸಮುದ್ರ ಕೊರೆತಕ್ಕೆ ಮನೆ, ಕುಡಿಯುವ ನೀರಿನ ಬಾವಿ, ಗಿಡ ಮರಗಳು ನಾಶವಾಗುತ್ತಿವೆ. ಪ್ರತಿವರ್ಷ ಅನಾಹುತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟ್ವೀಟ್ ಮಾಡಿ ಸಮುದ್ರ ಕೊರೆತದಿಂದ ಜೀವ ಕಾಪಾಡಿ ಎಂದು ಬೇಡಿಕೊಂಡರೂ ಪ್ರಯೋಜವಾಗಿಲ್ಲ. ಗ್ರಾಮಸ್ಥರ ಗೋಳು ಕೇಳುವ ರಾಜ್ಯದ ಎಲ್ಲ ಬಾಗಿಲುಗಳು ಮುಚ್ಚಿದ ಮೇಲೆ ಡಾ. ಮಾಧವ ನಾರಾಯಣ ನಾಯಕ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ನಮೋ ಆಪ್’ ಮೂಲಕ ದೂರು ನೀಡಿದ್ದಾರೆ.

ತೊಪ್ಪಲಕೇರಿಯಲ್ಲಿ ರಾತ್ರಿ ಮಲಗಿದಾಗ ನಮ್ಮೆಲ್ಲರ ಮನೆ ಎಷ್ಟೊತ್ತಿಗೆ ಉದುರಿ ಬೀಳುತ್ತದೆ ಎಂದು ಗೊತ್ತಾಗುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಹೆಂಗಸರು ಮಕ್ಕಳೊಂದಿಗೆ ಹೇಗೆ ಕಾಲ ಕಳೆಯಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಕಳೆದ ವರ್ಷ ಮಾಧ್ಯಮದವರು ನಮ್ಮೂರಿನ ಈ ಸಮಸ್ಯೆ ಬಗ್ಗೆ ವಿವರವಾಗಿ ಬರೆದರೂ ಜಿಲ್ಲಾಡಳಿತವಾಗಲಿ, ಮಾನವ ಹಕ್ಕು ಆಯೋಗವಾಗಲೀ ಸ್ಪಂದಿಸಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಪಾಯಕಾರಿ ಕಡಲ ಕೊರೆತದಿಂದ ಕಂಗಾಲಾದ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ, ಅಂದಿನ ಶಾಸಕಿ ಶಾರದಾ ಶೆಟ್ಟಿ, ಇಂದಿನ ಶಾಸಕ ದಿನಕರ ಕೆ. ಶೆಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗದೇ ರಾಜ್ಯ ಮಾನವ ಹಕ್ಕು ಆಯೋಗಕ್ಕೂ ಪರಿಸ್ಥಿತಿಯನ್ನು ವಿವರಿಸಿ ಬದುಕಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಲಾಗಿತ್ತು. ಆದರೆ ಅಲ್ಲಿಯೂ ನಮ್ಮ ದೂರು ಮೇಜಿನಿಂದ ಮೇಜಿಗೆ ಹೋಯಿತೇ ಹೊರತು ತೊಪ್ಪಲಕೇರಿ ಮಜರೆಯ ಜನರ ಗೋಳನ್ನು ಕೇಳಿಸಿಕೊಳ್ಳಲೇ ಇಲ್ಲ. ದೂರು ಬಂದ ನಂತರ ಶಾಸಕರು, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದರಾದರೂ ಬಜೆಟ್ ಇಲ್ಲ ಎಂಬ ನೆಪವೊಡ್ಡಿ ಮೇಲಧಿಕಾರಿಗಳಿಗೆ ಬರೆಯುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಇತ್ತ ಸಮುದ್ರ ಕೊರೆತದ ಭೀಕರತೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಇದರಿಂದ ಜೀವ ಕಾಪಾಡಿ ಎಂದು ಡಾ. ಮಾಧವ ನಾರಾಯಣ ನಾಯಕ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *