ಕಡಲಿಗಿಳಿದ ಬೋಟ್​ಗಳು

ಕಾರವಾರ: ಯಾಂತ್ರೀಕೃತ ಬೋಟ್​ಗಳ ಮೀನುಗಾರರಿಗೆ ಮೊದಲ ದಿನದ ಆಳ ಸಮುದ್ರ ಮೀನುಗಾರಿಕೆ ಖುಷಿ-ಬೇಸರ ಎರಡನ್ನೂ ನೀಡಿದೆ.

ಜೂನ್ 1 ರಿಂದ ಎರಡು ತಿಂಗಳ ನಿಷೇಧ ಅವಧಿಯ ನಂತರ ಮೀನುಗಾರರು ಬುಧವಾರ ತಮ್ಮ ಯಾಂತ್ರೀಕೃತ ಬೋಟ್​ಗಳನ್ನು ತೋರಣ ಕಟ್ಟಿ ಸಿಂಗರಿಸಿ, ಪೂಜೆ ಮಾಡಿ ಕಡಲಿಗಿಳಿಸಿದರು. ಕಾರವಾರದ ಬೈತಖೋಲ್ ಬಂದರಿನ ಸುಮಾರು 10ರಷ್ಟು ಟ್ರಾಲರ್ ದೋಣಿಗಳು ವಿವಿಧ ತಾಂತ್ರಿಕ ದೋಷ ಹಾಗೂ ಇತರ ಕಾರಣಗಳಿಂದ ಖಾಲಿ ಕೈಯಲ್ಲಿ ವಾಪಸಾಗಿವೆ. ಇನ್ನು ಹಲವು ಬೋಟ್​ಗಳಿಗೆ 50 ಕೆಜಿಯಿಂದ 4 ಕ್ವಿಂಟಾಲ್​ವರೆಗೂ ಶಿಗಡಿ ಬೇಟೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ 125 ರೂ. ಬೆಲೆ ಇರುವ ತೇಂಬ್ಲಿ ಜಾತಿಯ ಸಿಗಡಿಗಳು ಹೇರಳವಾಗಿ ಬಲೆಗೆ ಬಿದ್ದಿವೆ.

ವಾರ ಮಾತ್ರ

ಆಗಸ್ಟ್ 1 ರಿಂದ ಆಳ ಸಮುದ್ರ ಮೀನುಗಾರಿಕೆ ಪ್ರಾರಂಭವಾಗಿ ಒಂದು ಅಥವಾ ಎರಡು ವಾರ ಮಾತ್ರ ಶಿಗಡಿ ಹೆಚ್ಚಿನ ಪ್ರಮಾಣದಲ್ಲಿ ಬಲೆಗೆ ಬೀಳುತ್ತದೆ. ಇದರಿಂದ ತಿಂಗಳ ವರಮಾನವನ್ನು ಒಂದೇ ದಿನದಲ್ಲಿ ದುಡಿಯಬಹುದಾಗಿದೆ. ಆದರೆ, ಆಯಾ ವರ್ಷದ ಸಮುದ್ರದ ವಾತಾವರಣದ ಮೇಲೆ ಶಿಗಡಿಗಳ ಲಭ್ಯತೆ ನಿರ್ಧಾರವಾಗುತ್ತದೆ.