ಮಗುಚಿದ ಬೋಟ್

ಅಂಕೋಲಾ: ಮೀನುಗಾರಿಕೆ ವೇಳೆ ಉಂಟಾದ ಕಡಲಬ್ಬರಕ್ಕೆ ಫಿಶಿಂಗ್ ಬೋಟ್ ಮಗುಚಿ ಅದರಲ್ಲಿದ್ದ ಮೂವರು ಅದೃಷ್ಟವಶಾತ್ ಸಾವಿನಿಂದ ಪಾರಾಗಿ ಬಂದ ಘಟನೆ ಶುಕ್ರವಾರ ನಡೆದಿದೆ. ಆಳ ಮೀನುಗಾರಿಕೆಗೆ ಆ. 1 ರಿಂದ ಅನುಮತಿ ನೀಡಲಾಗಿದ್ದು, ಮೀನು ಬೇಟೆ ಕಾರ್ಯ ಚುರುಕುಗೊಂಡಿತ್ತು. ಬೇಲೆಕೇರಿಯಿಂದ ತೆರಳಿದ ಫಿಶಿಂಗ್ ಬೋಟೊಂದು ಸುಮಾರು 6 ಕಿ.ಮೀ. ದೂರ ಸಮುದ್ರದಲ್ಲಿ ಮುಳುಗಡೆಯಾಗಿತ್ತು. ಇದನ್ನು ಗಮನಿಸಿದ ಇನ್ನೊಂದು ಬೋಟ್​ನವರು ಅದರಲ್ಲಿದ್ದ ಮೂವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೇಲೆಕೇರಿ ಗ್ರಾಮದ ಕೃಷ್ಣ ರಾಮ ಬಾನಾವಳಿಕರ, ಹರ್ಷ ಕೃಷ್ಣ ಬಾನಾವಳಿಕರ, ರಾಧಾಕೃಷ್ಣ ಕುವಾಳೇಕರ ಸಾವಿನಿಂದ ಪಾರಾಗಿ ಬಂದವರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಬೇಲೆಕೇರಿಗೆ ಮೀನುಗಾರಿಕೆ ಉಪನಿರ್ದೇಶಕ ಟಿ. ನಾಗರಾಜು, ಸಹಾಯಕ ನಿರ್ದೇಶಕ ತಿಮ್ಮಪ್ಪ ಎಂ.ಎಚ್. ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೋಟ್ ಮತ್ತು ಅದರಲ್ಲಿದ್ದ ಬಲೆಯು ನೀರು ಪಾಲಾಗಿದ್ದು, 6 ಲಕ್ಷ ರೂ. ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

ಬ್ಯಾಂಕ್ ಅಧಿಕಾರಿ ಹೆಸರಿನಲ್ಲಿ ಮೋಸ

ಕಾರವಾರ: ಎಸ್​ಬಿಐ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿ ಗೃಹಿಣಿಯ ಎಟಿಎಂ ಕಾರ್ಡ್ ಮಾಹಿತಿ ಪಡೆದು ಖಾತೆಯಿಂದ 35 ಸಾವಿರ ಎಗರಿಸಿದ ಬಗೆಗೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ್ಸಾದ ನಿರ್ಮಲಾ ದಯಾನಂದ ರಾಯ್ಕರ್ ಎಂಬುವವರು ದೂರು ದಾಖಲಿಸಿದ್ದಾರೆ.

ಜೂಜಾಟ, ಬಂಧನ

ಯಲ್ಲಾಪುರ: ಜೂಜಾಟ ಆಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಕಿರವತ್ತಿ ಸಮೀಪದ ಕರಿಯವ್ವನಗುಂಡಿ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಕಿರವತ್ತಿಯ ಜಯಂತಿನಗರದ ಬಾರ್ಕಲ್ ಮೋತೇಶ ಸಿದ್ದಿ ಕಿರವತ್ತಿ, ಇಂದಿರಾನಗರದ ಶಬ್ಬೀರ್ ಅಹ್ಮದ್ ರಜಾಕ್​ಸಾಬ್ ಪಠಾಣ ಹಾಗೂ ಅನ್ವರ್ ನಜೀರ್ ಅಹಮ್ಮದ್ ನದಾಫ್ ಬಂಧಿತರು. 3700 ರೂ. ನಗದು ವಶಪಡಿಸಿಕೊಂಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.