ಕಟ್ಟಡ ನಿರ್ಮಾಣ ಲೈಸೆನ್ಸ್​ಗೆ ಕಚೇರಿಗಳಿಗೆ ಸುತ್ತಬೇಕಿಲ್ಲ

| ವಿಜಯ್ ಮಡಿವಾಳ

ಮನೆ ಕಟ್ಟುವ ಯೋಜನೆ ಹಾಕಿಕೊಂಡಿದ್ದೀರಾ? ಲೈಸೆನ್ಸ್ ಪಡೆಯುವುದು ಹೇಗಪ್ಪ ಅಂಥ ಚಿಂತೆಯಲ್ಲಿದ್ದೀರಾ? ಆ ಚಿಂತೆ ಬಿಟ್ಟುಬಿಡಿ. ಏಕೆಂದರೆ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಅಗ್ನಿಶಾಮಕ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಕಂದಾಯ ಹೀಗೆ ಹತ್ತಾರು ಇಲಾಖೆಗಳ ಕಚೇರಿಗೆ ತಿಂಗಳುಗಟ್ಟಲೆ ಅಲೆದಾಡಿ, ಅಲ್ಲಿನ ಸಿಬ್ಬಂದಿ ಕೈ ಬೆಚ್ಚಗೆ ಮಾಡಿ ಪರವಾನಗಿ ಪಡೆಯುವ ತಾಪತ್ರಯ ಶೀಘ್ರದಲ್ಲೇ ದೂರವಾಗಲಿದೆ.

ಹೌದು, ಇನ್ನು ಮುಂದೆ ಯಾವುದೇ ಕಟ್ಟಡ ನಿರ್ಮಾಣ ಪರವಾನಗಿ, ಬಡಾವಣೆ ನಿರ್ಮಾಣ ಯೋಜನೆ ಜಾರಿಗೆ ಲೈಸೆನ್ಸ್, ಭೂ ಪರಿವರ್ತನೆಗಾಗಿ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆದಾಟ ತಪ್ಪಿಸುವ ಹಾಗೂ ಈ ಪ್ರಕ್ರಿಯೆಯಲ್ಲಿ ಶೇ.100 ಪಾದರ್ಶಕತೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಆನ್​ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ.

ನಗರಾಭಿವೃದ್ಧಿ ಇಲಾಖೆ ಆನ್​ಲೈನ್ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. 7.46 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಟೆಕ್ನಾಲಜಿ ಸಂಸ್ಥೆಯೊಂದು ಈ ತಂತ್ರಜ್ಞಾನವನ್ನು ರೂಪಿಸಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಥ ಆನ್​ಲೈನ್ ಯೋಜನೆಯನ್ನು ಅನುಷ್ಠಾನಕ್ಕೆ ತರುತ್ತಿದ್ದು, ಕೆಲವೇ ದಿನಗಳಲ್ಲಿ ಈ ಹೊಸ ವ್ಯವಸ್ಥೆಯ ಸೇವೆ ಸಾರ್ವಜನಿಕರಿಗೆ ದೊರೆಯಲಿದೆ.

ಅನುಮತಿ ಪತ್ರ ಕೈಗೇ ಸಿಗುತ್ತೆ

ಏಕಗವಾಕ್ಷಿ ವ್ಯವಸ್ಥೆಯಡಿ ವಲಯವಾರು, ಕಟ್ಟಡ ಉಪ ನಿಯಮಗಳ ಪ್ರಕಾರ ದಾಖಲಾತಿಗಳು ಸಮರ್ಪಕವಾಗಿದ್ದರೆ 30ಗಿ40 ಅಡಿ ನಿವೇಶನಗಳಲ್ಲಿ ಮನೆ ಕಟ್ಟುವವರಿಗೆ ನೇರವಾಗಿ ಕೈಗೇ ಅನುಮತಿ ಪತ್ರ ಸಿಗಲಿದೆ. ಈ ಸೌಲಭ್ಯವನ್ನು 60ಗಿ40 ಅಡಿಗೂ ಹೆಚ್ಚು ವಿಸ್ತೀರ್ಣದಲ್ಲಿ ಮನೆ ಕಟ್ಟುವವರಿಗೂ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಹೊಸ ಮನೆ ಕಟ್ಟುವ ಕನಸು ಹೊತ್ತಿರುವ ಮಾಲೀಕರಿಗೆ ಅನುಮತಿ ಪತ್ರ ಪಡೆಯುವುದು ಸುಲಭವಾಗಲಿದೆ.

7 ದಿನದಲ್ಲೇ ಸಿಗುತ್ತೆ ಎನ್​ಒಸಿ

ಆನ್​ಲೈನ್ ವ್ಯವಸ್ಥೆಯಡಿ ದಾಖಲೆಗಳ ಸಮೇತ ಮಾಲೀಕರು ಅರ್ಜಿ ಸಲ್ಲಿಸಿದರೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು 7 ದಿನಗಳ ಒಳಗೆ ನಿರಾಕ್ಷೇಪಣಾ ಪತ್ರ (ಎನ್​ಒಸಿ) ಕೊಡಬೇಕು. ಒಂದು ವೇಳೆ ಗಡುವಿನ ಒಳಗೆ ಎನ್​ಒಸಿ ಕೊಡದಿದ್ದಲ್ಲಿ 7 ದಿನಗಳ ಬಳಿಕ ಆ ಅರ್ಜಿ ತನ್ನಿಂದ ತಾನೇ ಅನುಮೋದನೆಗೊಳ್ಳಲಿದೆ. ಅಲ್ಲದೆ ಒಂದು ವೇಳೆ ಕಾಲ ಮಿತಿಯೊಳಗೆ ಅರ್ಜಿಯನ್ನು ಪರಿಶೀಲಿಸಿ ಅನುಮತಿ ನೀಡಿಲ್ಲವಾದರೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನು ಅದಕ್ಕೆ ಹೊಣೆಯನ್ನಾಗಿಸಿ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆ ಕೊಡಲಾಗಿದೆ.

ಶುಲ್ಕ ವಿವರ ಶೀಘ್ರ ಪ್ರಕಟ

ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ 30 ದಿನದಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದು ಪರವಾನಗಿ ಕೈಗೆ ಸಿಗಲಿದೆ. ಆದರೆ, ಎಲ್ಲ ಇಲಾಖೆಗಳ ಪರಿಶೀಲನೆಗೆ ತಗಲುವ ವೆಚ್ಚವನ್ನು ಒಟ್ಟಿಗೆ ಆನ್​ಲೈನ್​ನಲ್ಲೇ ಪಾವತಿಸಬೇಕಾಗು ತ್ತದೆ. ಯಾವುದಕ್ಕೆ ಎಷ್ಟು ಶುಲ್ಕ ಭರಿಸಬೇಕು ಎಂಬುದರ ಸಂಪೂರ್ಣ ವಿವರಗಳನ್ನು ಶೀಘ್ರವೇ ಪ್ರಕಟಿಸಲಿದೆ.

ಮನೆಯಲ್ಲಿ ಕುಳಿತೇ ಅರ್ಜಿ ಸಲ್ಲಿಸಿ

ಸದ್ಯ ಜಾರಿಯಲ್ಲಿರುವ ವ್ಯವಸ್ಥೆ ಪ್ರಕಾರ ಕಟ್ಟಡ ನಿರ್ವಣ, ಹಾಗೂ ಬಡಾವಣೆ ನಿರ್ಮಾಣ ಯೋಜನೆಗಳ ಪರವಾನಗಿ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಅಂದಾಜು 14 ಇಲಾಖೆಗಳಿಗಿಂತ ಹೆಚ್ಚು ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವ ಪರಿಸ್ಥಿತಿ ಇದೆ. ಈಗ ಏಕಗವಾಕ್ಷಿ ಯೋಜನೆ ಜಾರಿಗೆ ತರುತ್ತಿರುವುದರಿಂದ ಮನೆಯಲ್ಲಿ ಕುಳಿತೇ ಆನ್​ಲೈನ್ ಮೂಲಕ ಅರ್ಜಿ ಹಾಕಬಹುದು. ಈ ಅರ್ಜಿ ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಏಕ ಕಾಲಕ್ಕೆ ತಲುಪಲಿದೆ.

ಎಲ್ಲ ಅಧಿಕಾರಿಗಳ ಭೇಟಿ

ಈವರೆಗೆ ಒಂದೊಂದು ಇಲಾಖೆ ಅಧಿಕಾರಿಗಳು ಒಂದೊಂದು ಬಾರಿ ಅನುಮತಿ ನೀಡಬೇಕಾದ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅನುಮತಿ ಕೊಡುತ್ತಿದ್ದರು. ಇದರಿಂದ ಸಮಯ ವ್ಯರ್ಥವಾಗುತ್ತಿತ್ತು. ಇದೀಗ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ತರುವಾಯ ಎಲ್ಲ ಇಲಾಖೆಗಳ ಅಧಿಕಾರಿಗಳು ಒಂದೇ ಬಾರಿಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಿದ್ದಾರೆ. ಇದರಿಂದಾಗಿ ಬರೀ 30 ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿಯಲಿವೆ. ಸಮಯದ ಉಳಿತಾಯದ ಜತೆಗೆ ಸುಖಾಸುಮ್ಮನೆ ಜನ ಕಚೇರಿಗಳಿಗೆ ಅಲೆದಾಡುವ ಪ್ರಮೇಯವೇ ಇರುವುದಿಲ್ಲ. ಕಚೇರಿಗಳಿಗೆ ಹೋಗಿ ಅಧಿಕಾರಿಗಳನ್ನು ಕೇಳಿಕೊಳ್ಳುವ ಅಗತ್ಯ ಬರುವುದಿಲ್ಲ.

ಕಟ್ಟಡ ನಿರ್ವಣ, ಬಡಾವಣೆ ನಿರ್ಮಾಣ ಹಾಗೂ ಭೂ ಪರಿವರ್ತನೆ ಯೋಜನೆಗಳನ್ನು ಜಾರಿಗೊಳಿಸಲು ಬೇಕಾಗಿರುವ ಅನುಮತಿ ಪತ್ರಗಳಿಗಾಗಿ ಜನಸ್ನೇಹಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲ ಸಿದ್ಧತೆ ಈಗಾಗಲೇ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಈ ಸೇವೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.

| ಯು.ಟಿ. ಖಾದರ್, ನಗರಾಭಿವೃದ್ಧಿ ಸಚಿವ

Leave a Reply

Your email address will not be published. Required fields are marked *