ಕಟ್ಟಡ ನಿರ್ಮಾಣದಲ್ಲಿ ತಂತ್ರಜ್ಞಾನ ಬಳಕೆ

ಹುಬ್ಬಳ್ಳಿ: ಕಟ್ಟಡಗಳ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನ ಬಳಕೆ ಹಾಗೂ ಆವಿಷ್ಕಾರಗಳು ನಡೆಯುತ್ತಿವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಆಶ್ರಯದಲ್ಲಿ ಇಲ್ಲಿನ ಇಂದಿರಾ ಗಾಜಿನಮನೆ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನಗಳವರೆಗೆ ನಡೆಯಲಿರುವ ‘ಕಾನ್​ವ್ಯಾಟ್-2019’ ಕಟ್ಟಡ ನಿರ್ಮಾಣ ಹಾಗೂ ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಈ ಪ್ರದರ್ಶನ ಕಟ್ಟಡ ನಿರ್ಮಾಣದಾರರು ಹಾಗೂ ರಿಯಲ್ ಎಸ್ಟೆಟ್ ಉದ್ಯಮಿಗಳಷ್ಟೇ ಅಲ್ಲದೆ, ಜನಸಾಮಾನ್ಯರಿಗೂ ಉಪಯೋಗವಾಗಿದೆ. ಕಟ್ಟಡ ನಿರ್ಮಾಣ ಹಾಗೂ ಗೃಹ ಅಲಂಕಾರಿಕ ವಸ್ತುಗಳ ಅರಿವು ಇಂತಹ ಪ್ರದರ್ಶನಗಳಿಂದ ಬರುತ್ತದೆ ಎಂದರು.
ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಆದರೆ, ಆಡಳಿತದ ನಿರ್ಲಕ್ಷತನ ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಈ ಯೋಜನೆಗಳು ಸಮರ್ಪಕವಾಗಿ ಸಾಕಾರಗೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ ಇದ್ದ ಬೇಜವಾಬ್ದಾರಿತನದ ಸರ್ಕಾರದಿಂದಾಗಿ ತಮ್ಮ ಕ್ಷೇತ್ರದಲ್ಲಿ ಆಶ್ರಯ ಮನೆಗಳ ನಿರ್ಮಾಣ ಸಾಧ್ಯವಾಗಲಿಲ್ಲ. ಆದರೆ, ಈ ಬಾರಿ 5-10 ಸಾವಿರ ಮನೆಗಳ ನಿರ್ವಣಕ್ಕೆ ನಿರ್ಧರಿಸಿದ್ದು, ಸುಮಾರು 100 ಎಕರೆ ಭೂಮಿ ಅಗತ್ಯವಿದೆ. ರೈತರು ಭೂಮಿ ಮಾರಾಟಕ್ಕೆ ಮುಂದೆ ಬಂದಿದ್ದಾರೆ ಎಂದರು.
ಮಹಾನಗರ ಅಭಿವೃದ್ಧಿಗಾಗಿ ಸಿಡಿಪಿ ಸಿದ್ಧಪಡಿಸಿ ಎರಡು ವರ್ಷಗಳ ಹಿಂದೆಯೇ ಒಪ್ಪಿಗೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿ ಪದ್ಮರಾಜ ನಗರದ ಶ್ರೀ ಪ್ರಣವಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಾನ್​ವ್ಯಾಟ್ ಚೇರ್ಮನ್ ಅಶೋಕ ಬಸವಾ, ವೈಸ್ ಚೇರ್ಮನ್ ನಾರಾಯಣಪ್ರಸಾದ ಪಾಠಕ, ಹೇಮಂತ ವರ್ವ, ಸುರೇಶ ಕಿರೇಸೂರ, ಸುರೇಶ ಶೇಜವಾಡಕರ, ಎಸ್.ಬಿ. ಪಾಟೀಲ, ಸಂಜೀವ ಜೋಶಿ, ಉಮೇಶ ನೀಲಿ, ವಸಂತ ಪಾಲನಕರ ಮತ್ತಿತರರಿದ್ದರು.
ವಿವಿಧ ಕಂಪನಿಗಳಿಂದ ತಯಾರಿಸಿದ ಪೈಪ್, ಟೈಲ್ಸ್, ಸ್ನಾನಗೃಹದ ಪರಿಕರಗಳು ಕಟ್ಟಡಕ್ಕೆ ಬೇಕಾದ ಮತ್ತಿತರ ವಸ್ತುಗಳ ಮಳಿಗೆಗಳು ಪ್ರದರ್ಶನದಲ್ಲಿವೆ.
ಪ್ರತ್ಯೇಕ ವಿವಿ ಸ್ಥಾಪಿಸಿಕೊಳ್ಳಲಿ
ವಿಟಿಯು ಇಬ್ಭಾಗಗೊಳಿಸಿ, ಹಾಸನಕ್ಕೆ ಸ್ಥಳಾಂತರಿಸುವ ಬದಲು ಅಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು. ಹಾಸನದ ಬಗ್ಗೆ ಮುಖ್ಯಮಂತ್ರಿಯವರಿಗೆ ಪ್ರೀತಿ ಇದ್ದರೆ ಅಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲಿ. ಆದರೆ, ಇಲ್ಲಿನ ವಿಶ್ವವಿದ್ಯಾಲಯ ಇಬ್ಭಾಗಗೊಳಿಸಿ, ಈ ಭಾಗಕ್ಕೆ ಅನ್ಯಾಯ ಮಾಡುವುದು ಏಕೆ ಎಂದು ಪ್ರಶ್ನಿಸಿದರು.