ಕಟ್ಟಡಗಳಿಗೆ ಹಾನಿ ತಡೆಯಲು ಕ್ರಮ

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ವೇಳೆ ಕಟ್ಟಡಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಬಿಎಐಂಆರ್​ಸಿಎಲ್ ಹಲವು ಕ್ರಮ ಕೈಗೊಳ್ಳುತ್ತಿದೆ.

2ನೇ ಹಂತದಲ್ಲಿ 72 ಕಿ.ಮೀ. ಉದ್ದದ ಮಾರ್ಗ ನಿರ್ವಿುಸಲಾಗುತ್ತಿದ್ದು, ಅದರಲ್ಲಿ 14 ಕಿ.ಮೀ. ಸುರಂಗ ಮಾರ್ಗವಿರಲಿದೆ. ಇಲ್ಲಿ ಸುರಂಗ ಕೊರೆಯುವ ಯಂತ್ರಗಳಿಂದಾಗುವ ಕಂಪನಗಳಿಂದ ಕಟ್ಟಡಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕಾಮಗಾರಿ ನಡೆಸುವವರಿಗೆ ಸೂಚನೆ ನೀಡಲಾಗಿದೆ.

ಮೊದಲ ಹಂತದಲ್ಲಿನ 42.30 ಕಿ.ಮೀ. ಉದ್ದದ ಮಾರ್ಗದಲ್ಲಿ 8.82 ಕಿ.ಮೀ. ಸುರಂಗ ಮಾರ್ಗವಿದೆ. ಇದೀಗ 2ನೇ ಹಂತದಲ್ಲಿ 72 ಕಿ.ಮೀ. ಉದ್ದದ ಮಾರ್ಗ ನಿರ್ವಿುಸಲಾಗುತ್ತಿದ್ದು, ಅದರಲ್ಲಿ ನಾಗವಾರದಿಂದ ಗೊಟ್ಟಿಗೆರೆವರೆಗಿನ ಮಾರ್ಗದಲ್ಲಿ ಡೈರಿ ವೃತ್ತದಿಂದ ನಾಗವಾರವರೆಗಿನ 14 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ವಿುಸಲಾಗುತ್ತಿದೆ.

ಹಳೆಯ ಕಟ್ಟಡಗಳು: ಸದ್ಯ ಸುರಂಗ ಮಾರ್ಗ ನಿರ್ವಿುಸಲಾಗುತ್ತಿರುವ ಸ್ಥಳದಲ್ಲಿ 100 ವರ್ಷಕ್ಕೂ ಹಳೆಯ ಕಟ್ಟಡಗಳಿವೆ. ಅದರಲ್ಲೂ ಶಿವಾಜಿನಗರ, ಟ್ಯಾನರಿ ರಸ್ತೆ, ಪಾಟರಿ ರಸ್ತೆಯಲ್ಲಿ ಹಳೆಯ ಕಟ್ಟಡಗಳ ಸಂಖ್ಯೆ ಹೆಚ್ಚಿದೆ. ಜತೆಗೆ 150 ವರ್ಷ ಹಳೆಯದಾದ ಆಲ್ ಸೇಂಟ್ ಚರ್ಚ್ ಕೂಡ ಇದೇ ಮಾರ್ಗದಲ್ಲಿ ಬರಲಿದ್ದು, ಅದಕ್ಕೆ ಹಾನಿಯಾಗದಂತೆ ಕಾಮಗಾರಿ ನಡೆಸಬೇಕಾದ ಸವಾಲು ಬಿಎಂಆರ್​ಸಿಎಲ್ ಮುಂದಿದೆ.

ಹಾನಿ ಕಡಿಮೆ ಮಾಡುವ ಸಾಧನಗಳು

ಸುರಂಗ ಕೊರೆಯುವ ಸ್ಥಳದಲ್ಲಿ ಕ್ರ್ಯಾಕ್ ಮೀಟರ್, ಟಿಲ್ಟ್ ಮೀಟರ್, ಸರ್ಫೆಸ್ ಸೆಟಲ್​ವೆುಂಟ್ ಮಾರ್ಕರ್ ಸೇರಿ ಇನ್ನಿತರ ಸಾಧನಗಳ ಮೂಲಕ ಭೂಮಿಯ ಕಂಪನ, ಅದನ್ನು ಕಡಿಮೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳನ್ನು ನಿರ್ಧ ರಿಸಲಾಗುತ್ತದೆ. ಆ ಮೂಲಕ ಸುರಂಗ ಕೊರೆ ಯುವ ಸ್ಥಳದ ಮೇಲ್ಭಾಗದಲ್ಲಿರುವ ಕಟ್ಟಡಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲಾಗುತ್ತದೆ.

ಕಳೆದ ಬಾರಿ 2.8 ಕೋಟಿ ರೂಪಾಯಿ ಪರಿಹಾರ

ನಮ್ಮ ಮೆಟ್ರೋ ಮೊದಲ ಹಂತದ ಸುರಂಗ ಮಾರ್ಗ ನಿರ್ಮಾಣ ವೇಳೆ 19 ಕಟ್ಟಡಗಳಿಗೆ ಗಂಭೀರ ಪ್ರಮಾಣದಲ್ಲಿ ಹಾನಿಯುಂಟಾಗಿತ್ತು. ಪ್ರಮುಖವಾಗಿ ವಾಣಿವಿಲಾಸ ಆಸ್ಪತ್ರೆ, ಸೆಂಟ್ರಲ್ ಕಾಲೇಜು ಕಟ್ಟಡಗಳಲ್ಲೂ ಬಿರುಕು ಕಾಣಿಸಿಕೊಂಡಿತ್ತು. ಹೀಗೆ ಬಿರುಕು ಬಿಟ್ಟು ಹಾನಿಯಾದ ಕಟ್ಟಡಗಳಿಗೆ 2.8 ಕೋಟಿ ರೂ.ಗಳ ಪರಿಹಾರ ನೀಡಲಾಗಿದೆ.

Leave a Reply

Your email address will not be published. Required fields are marked *