ಕಚೇರಿ ಒಂದೆಡೆ, ಟ್ರ್ಯಾಕ್ ಬೇರೆಡೆ

ಮಂಜುನಾಥ ಸಾಯೀಮನೆ ಶಿರಸಿ
ಇದುವರೆಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ ನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್​ಟಿಒ) ಸ್ವಂತ ಕಟ್ಟಡ ನಿರ್ವಣಕ್ಕೆ ಅಂತೂ ಇಂತೂ ಸರ್ಕಾರ ಜಾಗ ಮಂಜೂರು ಮಾಡಿದೆ. ಆದರೆ, ಟ್ರಯಲ್ ಟ್ರ್ಯಾಕ್ ನಿರ್ವಣಕ್ಕಾಗಿ ದೊಡ್ನಳ್ಳಿಯಲ್ಲಿ ಜಾಗ ನೀಡಲಾಗಿದ್ದರೆ, ಕಚೇರಿ ನಿರ್ವಣಕ್ಕಾಗಿ ಕಸ್ತೂರಬಾ ನಗರದ ಬಳಿ ನಿವೇಶನ ನೀಡಲಾಗಿದೆ. ಹೀಗಾದರೆ, ಸಾರ್ವಜನಿಕರ ಅಲೆದಾಟ ಮತ್ತಷ್ಟು ಹೆಚ್ಚಲಿದೆ!

ಹೌದು, ‘ಆರ್​ಟಿಒ ಕಚೇರಿ ಕೆಲಸ ಎಂದರೆ ಅಲೆದಾಟದ ಕಾರ್ಯ’ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಶಿರಸಿ ಕಚೇರಿಯಲ್ಲಿ ಈ ಅಲೆದಾಟ ತುಸು ಜಾಸ್ತಿಯೇ ಇದೆ. ಇಲ್ಲಿಯ ಹುಬ್ಬಳ್ಳಿ ರಸ್ತೆಯ ಬಶೆಟ್ಟಿಕೆರೆ ಸಮೀಪದ ಬಾಡಿಗೆ ಕಟ್ಟಡದಲ್ಲಿರುವ ಆರ್​ಟಿಒ ಕಚೇರಿ ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತು ಮುಂಡಗೋಡ ತಾಲೂಕುಗಳ ವ್ಯಾಪ್ತಿ ಹೊಂದಿದೆ. ನಿತ್ಯವೂ ನೂರಾರು ಜನ ತಮ್ಮ ಕೆಲಸಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ. ಈ ಕಟ್ಟಡದಲ್ಲಿ ಜಾಗವೂ ಇಕ್ಕಟ್ಟು, ಲೈಸನ್ಸ್ ಪಡೆಯುವವರಿಗೆ ವಾಹನ ಚಲಾಯಿಸಿ ಟ್ರಯಲ್ ತೋರಿಸಲು ಹೊರಗಡೆ ಜಾಗವೂ ಇಲ್ಲದ ಸ್ಥಿತಿ ಇದೆ. ಕೆಲ ವರ್ಷಗಳ ಹಿಂದೆ ಇಲ್ಲಿನ ಇಕ್ಕಟ್ಟಿನ ಜಾಗದಲ್ಲಿಯೇ ಟ್ರಯಲ್ ಟ್ರ್ಯಾಕ್ ನಿರ್ವಿುಸಲಾಗಿತ್ತಾದರೂ, ಸ್ವಂತ ಜಾಗವಲ್ಲದ ಕಾರಣ ಸಮಸ್ಯೆ ಎದುರಿಸು ವಂತಾಗಿತ್ತು. ಟ್ರ್ಯಾಕ್ ಸಿದ್ಧಪಡಿಸಿದ ಸ್ಥಳ ತನಗೆ ಸೇರಿದ್ದೆಂದು ನಗರಸಭೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಕೆರೆ ದಂಡೆಯ ಮೇಲೆ ಈ ಟ್ರ್ಯಾಕ್ ನಿರ್ವಿುಸಿದ್ದರಿಂದ ಲೈಸನ್ಸ್ ಪಡೆಯಲು ಬಂದ ಹೊಸಬರು ವಾಹನ ಕೆರೆಗೆ ಜಿಗಿಯದಂತೆ ನೋಡಿಕೊಂಡು ಪರೀಕ್ಷೆಯಲ್ಲಿ ಸೈ ಎನಿಸಿಕೊಳ್ಳುವುದು ಹರ ಸಾಹಸವಾಗಿತ್ತು. ಈ ಎಲ್ಲ ಸಮಸ್ಯೆಗಳ ನಡುವೆ ಬ್ರೇಕ್ ಇನ್​ಸ್ಪೆಕ್ಟರ್ ಮರ್ಜಿಯೇ ಪರೀಕ್ಷೆ ಪಾಸಾಗುವ ಮಾನದಂಡ ವಾಗಿ ಪರಿಣಮಿಸಿತ್ತು! ಈ ಯಾವ ಉಸಾಬರಿಯೇ ಬೇಡ, ಸ್ವಂತ ಕಟ್ಟಡ ನಿರ್ವಿುಸಿ ಕಚೇರಿ ಕಾರ್ಯಗಳನ್ನು ಸುಗಮವಾಗಿ ನಡೆಸುವ ಸಲುವಾಗಿ ನಿವೇಶನ ಮಂಜೂರಿಗೆ ಕಳೆದ 5 ವರ್ಷಗಳಿಂದ ಯತ್ನ ಆರಂಭಗೊಂಡು ಈಗ ಅಂತೂ ಜಾಗ ಮಂಜೂರಾಗಿದೆ.

ಲೈಸನ್ಸ್ ನೀಡುವ ಪೂರ್ವ ಚಾಲಕನ ಪರೀಕ್ಷೆಗಾಗಿ ವಿಶೇಷ ಟ್ರ್ಯಾಕ್ ನಿರ್ವಿುಸಬೇಕಾಗಿದ್ದು, ಇದಕ್ಕಾಗಿ ನಗರದಿಂದ ಎಂಟು ಕಿಲೋ ಮೀಟರ್ ದೂರದ ದೊಡ್ನಳ್ಳಿಯಲ್ಲಿ ನಾಲ್ಕು ಎಕರೆ ಜಾಗವನ್ನು ಸರ್ಕಾರ ಮಂಜೂರು ಮಾಡಿದೆ. ಇನ್ನೊಂದೆಡೆ, ಕಚೇರಿ ನಿರ್ವಣಕ್ಕಾಗಿ ಕಸ್ತೂರಬಾ ನಗರದ ಬಳಿ 20 ಗುಂಟೆ ಜಾಗ ಮಂಜೂರಾಗಿದೆ. ಹೀಗಾಗಿ, ಸಾರ್ವಜನಿಕರು ಆರ್​ಟಿಒ ಕಚೇರಿ ಕೆಲಸಕ್ಕಾಗಿ ಮುಂದಿನ ದಿನಗಳಲ್ಲಿ ಎರಡು ಕಡೆ ಅಲೆಯಬೇಕಾಗಲಿದೆ. ಈ ಎರಡೂ ಜಾಗಗಳ ಹಸ್ತಾಂತರ ಪ್ರಕ್ರಿಯೆ ಮುಕ್ತಾಯ ವಾದ ಬಳಿಕ ಸ್ವಂತ ಕಟ್ಟಡ ಮತ್ತು ಟ್ರ್ಯಾಕ್ ನಿರ್ವಣದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎನ್ನುತ್ತಾರೆ ಇಲ್ಲಿಯ ಅಧಿಕಾರಿಗಳು.

ಜಾಗ ನಮ್ಮ ಹೆಸರಿಗೆ ಕಳೆದ ತಿಂಗಳು ಮಂಜೂರಾಗಿದೆ. ಶೀಘ್ರವೇ ಕಟ್ಟಡ ನಿರ್ವಣಕ್ಕಾಗಿ ಮತ್ತು ಟ್ರಯಲ್ ಟ್ರ್ಯಾಕ್ ನಿರ್ವಣಕ್ಕಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ.
| ವಾಸಿಂ ಬಿ. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿರಸಿ

Leave a Reply

Your email address will not be published. Required fields are marked *