ಕಚೇರಿಯ ಪೀಠೋಪಕರಣ ಜಪ್ತಿ

ಗದಗ: ಕೋರ್ಟ್ ಆದೇಶದ ನಡುವೆಯೂ 8 ವರ್ಷಗಳಿಂದ ಗುತ್ತಿಗೆದಾರರ ಬಿಲ್ ಪಾವತಿಸದ ಕಾರಣ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯ ಪಿಠೋಪಕರಣಗಳನ್ನು ಶನಿವಾರ ಜಪ್ತಿ ಮಾಡಲಾಯಿತು.

ವಕೀಲ ಆರ್.ಕೆ. ಶಾಂತಗಿರಿ, ಗುತ್ತಿಗೆದಾರ ಎಸ್.ವಿ. ಪಟ್ಟಣಶೆಟ್ಟಿ ಅವರು ಕೋರ್ಟ್ ಆದೇಶದ ಪ್ರತಿಯೊಂದಿಗೆ ಶನಿವಾರ ನಗರದ ಮುಳಗುಂದ ರಸ್ತೆಯಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಗೆ ಭೇಟಿ ನೀಡಿ ಕುರ್ಚಿ, ಟೇಬಲ್, ಕಂಪ್ಯೂಟರ್, ಪ್ರಿಂಟರ್ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದರು.

ಗುತ್ತಿಗೆದಾರ ಎಸ್.ವಿ. ಪಟ್ಟಣಶೆಟ್ಟಿ ಅವರು 1992ರಲ್ಲಿ ಅಂದಾಜು 50 ಲಕ್ಷ ರೂ. ಮೊತ್ತದಲ್ಲಿ ತುಂಗಭದ್ರಾ ನದಿಯಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ಮುಂಡರಗಿ ಮತ್ತು ಡಂಬಳ ಬಳಿ ಸಂಪ್ ಮತ್ತು ಪಂಪ್​ಹೌಸ್ ನಿರ್ಮಾಣ ಕಾಮಗಾರಿ ಗುತ್ತಿಗೆ ಪಡೆದಿದ್ದರು. ಹೆಚ್ಚುವರಿಯಾಗಿ 18 ಲಕ್ಷ ರೂ. ಖರ್ಚಾಗಿತ್ತು. ನಂತರ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗುತ್ತಿಗೆದಾರರಿಗೆ 25 ಲಕ್ಷ ರೂ. ಬಿಲ್ ಪಾವತಿಸಿ ಬಾಕಿ 43 ಲಕ್ಷ ರೂ. ಉಳಿಸಿಕೊಂಡಿತ್ತು. ಗುತ್ತಿಗೆದಾರ ಎಸ್.ವಿ. ಪಟ್ಟಣಶೆಟ್ಟಿ ಅವರು ಬಾಕಿ ಬಿಲ್ ಪಾವತಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. 2010ರಲ್ಲಿ ಬಾಕಿ ಉಳಿಸಿಕೊಂಡ 43 ಲಕ್ಷ ರೂ. ಪಾವತಿಸುವಂತೆ ಮಂಡಳಿಗೆ ಕೋರ್ಟ್ ಸೂಚಿಸಿತ್ತು. ಆದರೆ, ಮಂಡಳಿಯು 2018ರವರೆಗೆ ಗುತ್ತಿಗೆದಾರರ ಬಿಲ್ ಪಾವತಿಸಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬಾಕಿ ಉಳಿಸಿಕೊಂಡ 43 ಲಕ್ಷ ರೂ. ಹಾಗೂ 8 ವರ್ಷಗಳ ಬಡ್ಡಿ ಸೇರಿ 50 ಲಕ್ಷ ರೂ. ಪಾವತಿಸಲು ಕೋರ್ಟ್ ಮತ್ತೆ ಸೂಚಿಸಿತು. ಆದರೂ ಮಂಡಳಿಯು ಪಾವತಿಸದ ಹಿನ್ನೆಲೆಯಲ್ಲಿ ವಕೀಲರ ನೇತೃತ್ವದಲ್ಲಿ ಗುತ್ತಿಗೆದಾರರು ಕಚೇರಿಗೆ ಆಗಮಿಸಿ ಪೀಠೋಪಕರಣ ಜಪ್ತಿ ಮಾಡಿದರು. ಕಕ್ಷಿಗಾರರ ಪರ ಆರ್.ಕೆ. ಶಾಂತಗಿರಿ, ಎಸ್.ಆರ್. ಶಾಂತಗಿರಿ ವಾದ ಮಂಡಿಸಿದ್ದರು.