ಕಗ್ಗ ಪ್ರೋತ್ಸಾಹಿಸಲು ವಿಶ್ವ ಬ್ಯಾಂಕ್ ನೆರವು

ಕಾರವಾರ: ಅಳಿವಿನಂಚಿನಲ್ಲಿರುವ ಕುಮಟಾ ಕಗ್ಗ ಭತ್ತ ಬೆಳೆಗೆ ಪ್ರೋತ್ಸಾಹ ನೀಡಲು ವಿಶ್ವ ಬ್ಯಾಂಕ್ ನೆರವು ದೊರೆಯಲಿದೆ. ಕಗ್ಗ ಭತ್ತವನ್ನು ಸಂಘಟಿತವಾಗಿ ಬೆಳೆಯುತ್ತಿರುವ ಕುಮಟಾ ತಾಲೂಕಿನ ಕಾಗಾಲ್ ಗ್ರಾಪಂ ವ್ಯಾಪ್ತಿಯ ಮಣಿಕಟ್ಟಾದಲ್ಲಿ ಬೃಹತ್ ಬ್ಯಾರೇಜ್ ನಿರ್ಮಾಣ ಮಾಡಿ ನೀರಿನ ಹರಿವು ನಿಯಂತ್ರಿಸುವ ಯೋಜನೆ ಸಿದ್ಧವಾಗಿದೆ.

ವಿಶ್ವ ಬ್ಯಾಂಕ್​ನಿಂದ ನೆರವು ಪಡೆದು ಕೇಂದ್ರ ಸರ್ಕಾರದ ರಾಷ್ಟ್ರೀಯ ಚಂಡಮಾರುತ ಅಪಾಯ ಉಪಶಮನ ಯೋಜನೆ (ಎನ್​ಸಿಆರ್​ಎಂಪಿ) ಅಡಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಒಟ್ಟು 34.14 ಕೋಟಿ ರೂ. ವೆಚ್ಚದ ಈ ಬ್ಯಾರೇಜ್ ನಿರ್ವಣಕ್ಕೆ ವಿಸ್ತ್ರತ ಯೋಜನಾ ವರದಿಗೆ ಅನುಮೋದನೆ ದೊರೆತಿದೆ. ಟೆಂಡರ್ ಕರೆದು ಕಾಮಗಾರಿ ಒಪ್ಪಿಸುವ ಪ್ರಕ್ರಿಯೆ ಬಾಕಿ ಇದೆ.

ಮಣಿಕಟ್ಟಾ, ಹೊರೆ ಉಳಿ, ತುಂಬ್ರಿಕಟ್ಟಾ, ಕಲ್ ಕಟ್ಟಾ, ಕಾಗಾಲ್ ಭಾಗ 1 ಮತ್ತು ಭಾಗ 2 ಗ್ರಾಮಗಳ ಸುಮಾರು 600 ಹೆಕ್ಟೇರ್ ಜಮೀನು ಹಾಗೂ 600 ರೈತರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ಅಘನಾಶಿನಿ ಹಿನ್ನೀರಿನ ಪ್ರದೇಶದಲ್ಲಿ ಗದ್ದೆಗಳಿಗೆ ಅಭಿಮುಖವಾಗಿ 3.8 ಮೀಟರ್ ಎತ್ತರದ ಹಾಗೂ 4 ಮೀಟರ್ ಅಗಲದ ಬಂಡ್ ನಿರ್ಮಾಣ ಮಾಡಲಾಗುತ್ತದೆ. ಉಪ್ಪು ನೀರು ಗದ್ದೆಗೆ ನುಗ್ಗದಂತೆ ತಡೆಯಲು ಹಾಗೂ ಬೇಕಾದಷ್ಟು ಬಾರಿ ಬಿಡುವಂತೆ ಮಾಡಲು ತಲಾ ಎರಡು ಕಿಂಡಿಗಳಿರುವ ಏಳು ಗೇಟ್​ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.

ಎರಡು ಅನುಕೂಲ: ವಿಶೇಷ ಔಷಧಿ ಗುಣಗಳಿರುವ ಉಪ್ಪು ನೀರು ಹಾಗೂ ನೆರೆಯನ್ನು ತಾಳಿಕೊಂಡು ಬೆಳೆಯಬಲ್ಲ ದೇಶೀಯ ಭತ್ತದ ತಳಿ ಕಗ್ಗ. ಯೋಜನೆ ಜಾರಿಯಿಂದ ಕಗ್ಗ ಭತ್ತ ಬೆಳೆಯಲು ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ, ಇದೇ ಭಾಗದಲ್ಲಿ ಸಮುದ್ರ ಮತ್ಸ್ಯ ಸಂಪತ್ತಾದ ಚಿಪ್ಪೆಕಲ್ಲು, ಏಡಿ, ಕಲಗಾ ಮುಂತಾದವುಗಳನ್ನು ಹಿಡಿದು ಜೀವನ ಸಾಗಿಸುವವರಿಗೂ ಇದು ಅನುಕೂಲವಾಗಲಿದೆ.

ಅಧಿಕಾರಿಗಳ ಭೇಟಿ: ಯೋಜನೆಯ ಸಾಧಕ ಬಾಧಕಗಳ ಕುರಿತು ಪರಿಶೀಲನೆ ನಡೆಸಲು ಎನ್​ಸಿಆರ್​ಎಂಪಿ ಟೀಮ್ ಲೀಡರ್ ಹರ್ಷ ಹಾಗೂ ವಿಶ್ವ ಬ್ಯಾಂಕ್​ನ ಪರಿಸರ ಅಧಿಕಾರಿ ವೆಂಕಟರಾವ್ ಮಂಗಳವಾರ ಕುಮಟಾದ ಕಾಗಾಲ ಭಾಗಕ್ಕೆ ಭೇಟಿ ನೀಡಿ ರೈತರ ಜೊತೆ ಸಂವಾದ ನಡೆಸಿದರು. ಸಣ್ಣ ನೀರಾವರಿ ಇಲಾಖೆ ಉತ್ತರ ಕನ್ನಡ ಜಿಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಲ್. ಕಟ್ಟಿಮನಿ ಇದ್ದರು. ಕಗ್ಗ ಭತ್ತ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ಆರ್. ನಾಯ್ಕ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *