ಗದಗ: ನಗರದ ಗಂಗಿಮಡಿ ಪ್ರದೇಶದ ಬಳಿ 75 ಎಕರೆ ಭೂಮಿಯಲ್ಲಿ ‘ಸರ್ವರಿಗೂ ಸೂರು’ ಯೋಜನೆಯಡಿ ನಿರ್ವಿುಸಿದ 3,630 ಗುಂಪು ಮನೆಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಮನೆಗಳ ಹಂಚಿಕೆ ವಿಷಯದಲ್ಲಿ ಗೊಂದಲ ಸೃಷ್ಟಿಯಾಗಿದ್ದು ಕಗ್ಗಂಟಾಗಿ ಪರಿಣಮಿಸಿದೆ.
ಈ ಗುಂಪು ಮನೆಗಳ ನಿರ್ವಣದ ಭೂಮಿ ಪೂಜೆ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಸ್ಥಳೀಯ ಜನಪ್ರತಿನಿಧಿಗಳು ಭರವಸೆ ನೀಡಿದ್ದರು ಎಂಬ ಮಾತಿದೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ವಣಗೊಂಡ ಮನೆಗಳನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಬೇಕೆ? ಅಥವಾ ಮನೆಗೆ ಖರ್ಚಾಗಿರುವ ಒಟ್ಟು ಹಣದಲ್ಲಿ ಅರ್ಧದಷ್ಟು ಫಲಾನುಭವಿಗಳಿಂದ ವಸೂಲಿ ಮಾಡಬೇಕೆ ಎಂಬ ಕುರಿತು ಚಿಂತನೆ ನಡೆದಿದೆ. ಈ ಮಧ್ಯ ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಅವರು ಫಲಾನುಭವಿಗಳಿಗೆ ‘ವಾರದೊಳಗೆ 50 ಸಾವಿರ ರೂಪಾಯಿಗಳನ್ನು ನಗರಸಭೆಗೆ ಪಾವತಿಸಬೇಕು’ ಎಂದು ನೋಟಿಸ್ ಜಾರಿಗೊಳಿಸಿರುವುದು ಜನಪ್ರತಿನಿಧಿಗಳ ಕಣ್ಣು ಕೆಂಪಾಗಿಸಿದೆ. ಇದನ್ನು ವಿರೋಧಿಸಿ ಅನೇಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಬವರಿಗೆ ಉಚಿತವಾಗಿ ಮನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
243.68 ಕೋಟಿ ರೂ. ವೆಚ್ಚದ ಯೋಜನೆ: ನಗರದ ಗಂಗಿಮಡಿ ಪ್ರದೇಶದ ಬಳಿ 75 ಎಕರೆ ಪ್ರದೇಶದಲ್ಲಿ 3,630 ಗುಂಪು ಮನೆಗಳಿಗೆ 243.68 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಬೆಂಗಳೂರು ಮೂಲದ ಜಂಪಾನಾ ಕನ್ಸ್ಟ್ರಕ್ಷನ್ ಎಂಬ ಕಂಪನಿ ಗುತ್ತಿಗೆ ಪಡೆದುಕೊಂಡಿದೆ. 2018ರ ಮಾರ್ಚ್ನಲ್ಲಿ ಕಾಮಗಾರಿ ಆರಂಭವಾಗಿದ್ದು, 2020ರ ಮಾರ್ಚ್ನಲ್ಲಿ ಪೂರ್ಣಗೊಳಿಸಲು ಅವಧಿ ನಿಗದಿಪಡಿಸಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಈ ಮನೆಗಳನ್ನು ನಿರ್ವಿುಸಲಾಗಿದ್ದು, ನಗರಸಭೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಈ ಕುರಿತು ನಗರಸಭೆಯಿಂದ ಅರ್ಜಿ ಆಹ್ವಾನಿಸಲಾಗಿತ್ತು. 5 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 3,630 ಜನರನ್ನು ಆಯ್ಕೆ ಮಾಡಿ ತಿಳಿವಳಿಕೆ ಪತ್ರವನ್ನೂ ನೀಡಲಾಗಿದೆ. ಸದ್ಯ 1008 ಮನೆಗಳು ಪೂರ್ಣಗೊಂಡಿವೆ. ಈ ಮನೆಗಳಿಗೆ ರಸ್ತೆ, ವಿದ್ಯುತ್, ಚರಂಡಿ, ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾರ್ಯ ನಡೆದಿದೆ.
ಬದಲಾದ ನಗರಸಭೆ, ಜನಪ್ರತಿನಿಧಿಗಳ ವರಸೆ
ಕಡುಬಡವರು ನಿತ್ಯ ದುಡಿದರೆ ಹೊಟ್ಟೆ ತುಂಬುತ್ತದೆ. ಅಂಥ ಕುಟುಂಬಗಳಿಗೆ 3-4 ಲಕ್ಷ ರೂ. ಕೊಟ್ಟು ಮನೆ ಪಡೆಯಿರಿ ಎಂದರೆ ಹೇಗೆ? ವಸತಿ ರಹಿತರು, ಬಡವರಿಗೆ ಉಚಿತವಾಗಿ ಮನೆ ಕೊಡುತ್ತೇವೆಂದು ಅಂದಿನ ಕಾಂಗ್ರೆಸ್ ಭರವಸೆ ನೀಡಿತ್ತು. ಈಗ ಹಣ ಪಾವತಿಸಿ ಎಂದು ನಗರಸಭೆಯು ನೋಟಿಸ್ ನೀಡಿದ್ದರಿಂದ ಫಲಾನುಭವಿಗಳು ಕಂಗಲಾಗಿದ್ದಾರೆ. ನಗರಸಭೆ, ಜನಪ್ರತಿನಿಧಿಗಳ ಬದಲಾದ ವರಸೆಯಿಂದ ವಸತಿಹೀನರಿಗೆ ಬರಸಿಡಿಲು ಬಡಿದಂತಾರುವುದು ಸುಳ್ಳಲ್ಲ.
ಪ್ರತಿ ಮನೆಗೆ 6.75 ಲಕ್ಷ ರೂ. ಖರ್ಚು
ಗಂಗಮಡಿ ಪ್ರದೇಶದಲ್ಲಿ ಅಪಾರ್ಟ್ವೆುಂಟ್ ಮಾದರಿಯಲ್ಲಿ ನಿರ್ವಿುಸಿರುವ ಪ್ರತಿ ಮನೆಗೆ 6.72 ಲಕ್ಷ ರೂ. ಖರ್ಚಾಗಿದೆ. ಸರ್ಕಾರದಿಂದ ಎಸ್.ಸಿ, ಎಸ್.ಟಿ. ಫಲಾನುಭವಿಗೆ (ಕೇಂದ್ರ, ರಾಜ್ಯ ಸರ್ಕಾರ ಮತ್ತು ನಗರಸಭೆ ವಂತಿಕೆ ಸೇರಿ) 3.55 ಲಕ್ಷ ರೂ. ಸಹಾಯ ಧನವಿದೆ. ಉಳಿದ 3.17 ಲಕ್ಷ ರೂ. ಗಳನ್ನು ಸ್ವಂತ ಅಥವಾ ಬ್ಯಾಂಕ್ನಿಂದ ಸಾಲ ಮಾಡಿಸಿ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ಕಟ್ಟಬೇಕು. ಸಾಮಾನ್ಯ ವರ್ಗದವರಿಗೆ 2.25 ಲಕ್ಷ ರೂ. ಸಹಾಯಧನ ನೀಡಲಿದ್ದು, ಉಳಿದ 4.47 ಲಕ್ಷ ರೂ. ಗಳನ್ನು ಫಲಾನುಭವಿಗಳು ತುಂಬಬೇಕು. ಎಸ್ಸಿ, ಎಸ್ಟಿ ಸಮುದಾಯದ ಫಲಾನುಭವಿಗಳಿಗೆ ಹೊರೆ ಕಡಿಮೆ ಮಾಡಲು ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆಗಳಿಗೆ ಅನುದಾನ ನೀಡಲು ಮನವಿ ಮಾಡಲಾಗಿದೆ. ಸಾಧ್ಯವಾದಷ್ಟು ಫಲಾನುಭವಿಗಳಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.
ಗಂಗಿಮಡಿ ಪ್ರದೇಶದಲ್ಲಿ ರಾಜೀವ್ ಗಾಂಧಿ ನಿಗಮದಿಂದ ನಿರ್ವಿುಸಿದ ಮನೆಗಳನ್ನು ನಿಗಮದ ನಿಯಮಾವಳಿ ಆಧರಿಸಿ ಕಾನೂನಿನಡಿ ಹಂಚಲಾಗುವುದು. ಮನೆಗಳನ್ನು ಉಚಿತವಾಗಿ ನೀಡಲು ಸಾಧ್ಯವಿಲ್ಲ. ನಾವಂತೂ ಮನೆಗಳನ್ನು ಉಚಿತವಾಗಿ ನೀಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ, ಹೇಳುವ ಪ್ರಶ್ನೆಯೂ ಉದ್ಭವಿಸಲ್ಲ.
| ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ, ಗದಗ
ಗಂಗಿಮಡಿ ಬಳಿ ನಿರ್ವಿುಸಿದ ಗುಂಪು ಮನೆಗಳಿಗೆ ಆರಂಭಿಕ ಹಂತದ ಕಂತಿನ ಹಣ ಪಾವತಿಸಬೇಕೆಂದು ಫಲಾನುಭವಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ವಾರದೊಳಗೆ ಹಣ ಪಾವತಿಸಬೇಕೆಂದು ಸೂಚಿಸಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.
| ಮನ್ಸೂರ್ ಅಲಿ, ಪೌರಾಯುಕ್ತ, ಗದಗ-ಬೆಟಗೇರಿ ನಗರಸಭೆ