ಕಂಬಿನಿ ಮಿಡಿದ ಭಕ್ತ ಸಮುದಾಯ

ಚಿಕ್ಕಬಳ್ಳಾಪುರ:  ನಡೆದಾಡುವ ದೇವರು, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಭಕ್ತ ಸಮುದಾಯ ಕಂಬಿನಿ ಮಿಡಿದಿದ್ದು, ಜಿಲ್ಲೆಯ ಹಲವರು ಶ್ರೀಗಳ ದರ್ಶನದ ಹಿಂದಿನ ಅನುಭವವನ್ನು ಮೆಲುಕು ಹಾಕಿದ್ದಾರೆ.

ಭಕ್ತರ ಆಹ್ವಾನಕ್ಕೆ ಓಗೊಟ್ಟು ಅನೇಕ ಬಾರಿ ಸಿದ್ಧಗಂಗಾ ಶ್ರೀಗಳು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದಾರೆ. ಈ ಹಿಂದೆ 2004 ಮತ್ತು 2011ರಲ್ಲಿ ಸಿವಿವಿ ಕ್ಯಾಂಪಸ್​ನಲ್ಲಿ ಕೆ.ವಿ.ಶಿಕ್ಷಣ ಮಹಾವಿದ್ಯಾಲಯಕ್ಕೆ ಆಗಮಿಸಿ ಆಶೀರ್ವಚನ ನೀಡಿದ್ದರು.

ಕಣ್ಣು ತೆರೆಸುವ ನಿಜವಾದ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಸನ್ಮಾರ್ಗದಲ್ಲಿ ನಡೆಸಬೇಕು. ಅನ್ನ, ವಿದ್ಯಾದಾನಕ್ಕೆ ಹೆಚ್ಚಿನ ಒತ್ತು ನೀಡಬೇಕೆಂಬ ಸಲಹೆ ನೀಡಿದ್ದರು. ಕೆ.ವಿ.ಶಿಕ್ಷಣ ದತ್ತಿಯು ಗ್ರಾಮೀಣ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಶ್ರಮಿಸುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿಕ್ಕಬಳ್ಳಾಪುರದ ಈರುಳ್ಳಿ ವ್ಯಾಪಾರಿ ಮಹೇಶ್ ಮತ್ತು ಸ್ಥಳೀಯ ಸತೀಶ್ ಎಂಬುವರು ಶ್ರೀಗಳನ್ನು ಮನೆಗೆ ಆಹ್ವಾನಿಸಿ ಪಾದಪೂಜೆ ನೆರವೇರಿಸಿದ್ದರು. ಇದನ್ನು ಕಣ್ಣು ತುಂಬಿಕೊಳ್ಳಲು ಸುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಆಶೀರ್ವಾದ ಪಡೆಯುತ್ತಿದ್ದ ದೃಶ್ಯವನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಸಾಹಿತಿ ನಾಗೇಂದ್ರ ಬಾಬು.

ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿ ಹೊಸದಾಗಿ ಆರಂಭವಾದ ಭವಾನಿ ವಿಜಯಾನಂದ್ ಆಟೋ ಮೊಬೈಲ್ಸ್ ಅಂಗಡಿ ಉದ್ಘಾಟನೆಗೆ ಶ್ರೀಗಳು ಬಂದು ಶುಭ ಕೋರಿದ್ದರು. ರಂಗಸ್ಥಳದಲ್ಲಿ ಡಾ.ಮಧುಕರ್ ನೇತೃತ್ವದ ಮಾನಸ ಅನಾಥಾಶ್ರಮ ಕಟ್ಟಡ ನಿರ್ವಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಇನ್ನೂ ಇಳಿ ವಯಸ್ಸಿನಲ್ಲಿ ಬೆನ್ನು ನೋವಿನಿಂದ ಬರಲಾಗದಿದ್ದರೂ ಆಹ್ವಾನಿತರಿಗೆ ಶುಭ ಸಂದೇಶ ಕಳುಹಿಸಲು ಮಾತ್ರ ಮರೆಯುತ್ತಿರಲಿಲ್ಲ ಎಂದು ನಾಗೇಂದ್ರ ಬಾಬು ಸ್ಮರಿಸಿದ್ದಾರೆ.

ಮಠದ ಸೇವೆಯಲ್ಲಿ ಭಕ್ತರು: ಎಲ್ಲೆಡೆಯಂತೆ ಇಲ್ಲಿನ ಅನೇಕ ಭಕ್ತರು ಸಿದ್ಧಗಂಗಾ ಮಠದ ಸೇವೆ ಮಾಡುತ್ತಿದ್ದು, ಸ್ಥಳೀಯ ಹೂವು ಮತ್ತು ಹಣ್ಣು ವ್ಯಾಪಾರಿ ಮಲ್ಲಿಕಾರ್ಜುನ್, ನಿರಂಜನ ಜತೆಗೆ ಅನೇಕರು ಮಠಕ್ಕೆ ಹಣ್ಣು ತರಕಾರಿ, ಅಕ್ಕಿ, ಬೇಳೆ ಸೇರಿ ಆಹಾರ ಪದಾರ್ಥ ಕಳುಹಿಸುತ್ತಿದ್ದಾರೆ. ಪ್ರತಿವರ್ಷ ಶ್ರೀಗಳ ಹುಟ್ಟುಹಬ್ಬದ ದಿನದಂದು ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆಯ ಜತೆಗೆ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಚಿಕ್ಕಬಳ್ಳಾಪುರದ ಪಾಲಾಕ್ಷಯ್ಯ ಮತ್ತು ಪಾರ್ವತಮ್ಮ ಎಂಬುವವರು ಸಿದ್ಧಗಂಗಾ ಮಠಕ್ಕೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾನ ಮಾಡುವ ಮೂಲಕ ಗುರುವಿನ ಸೇವೆ ಗೈದಿದ್ದಾರೆ.