ಕಂದಿಕೆರೆ ಗವಿ ಶ್ರೀ ಶಾಂತವೀರ ಅವಧೂತರು

ತುಮಕೂರು ಜಿಲ್ಲೆಯ ಸಿದ್ಧಗಂಗೆ, ಗೂಳೂರು, ಗುಬ್ಬಿ ಮುಂತಾದ ಕ್ಷೇತ್ರಗಳು ಸಿದ್ಧರ ಆಡುಂಬೊಲವೇ ಆಗಿತ್ತು. ಅಂಥವರಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆಯನ್ನು ಕ್ಷೇತ್ರವನ್ನಾಗಿಸಿಕೊಂಡ ಶ್ರೀ ಶಾಂತವೀರ ಅವಧೂತರು ಒಬ್ಬರು. ಇವರು ಶಾಂತಾವಧೂತರೆಂದೇ ಪ್ರಸಿದ್ಧಿಯಾದರು.

ಜನನ: ಶಾಂತವೀರರು ಶಿವನ ವರಪ್ರಸಾದಿಯಾಗಿ ಅವತರಿಸಿದರೆಂಬುದು ನಂಬಿಕೆ. ಮೂವರು ಗುರುಗಳಲ್ಲಿ ಉಪಾಸನೆ ಮಾಡಿ ಸಿದ್ಧಪುರುಷರಾದ ಇವರು ಜನಿಸಿದ್ದು 1921ರ ಶ್ರಾವಣಶುದ್ಧ ಶುಕ್ರವಾರದಂದು. ಹುಟ್ಟಿದೂರು ಕುರಿಹಳ್ಳಿ. ತಂದೆ ರೇವಣಸಿದ್ದಪ್ಪ, ತಾಯಿ ಗಂಗಮ್ಮ. ಶಿವನು ಈ ದಂಪತಿಯ ಕನಸಿನಲ್ಲಿ ಕಾಣಿಸಿಕೊಂಡು ತಾನು ಕಾರಣಜನ್ಮ ಪಡೆಯುತ್ತೇನೆಂದು ಹೇಳಿದನಂತೆ. ಗಂಡು ಮಗುವನ್ನು ಹೆತ್ತ ಗಂಗಮ್ಮನಿಗೆ ಹೆರಿಗೆಯ ನೋವು ಸ್ವಲ್ಪವೂ ಕಾಣಲಿಲ್ಲ. ಇದನ್ನು ಕಂಡ ರೇವಣಸಿದ್ದಪ್ಪ ಆಕಾಶದತ್ತ ಮುಖಚಾಚಿ, ‘ಶಿವನೇ ನೀನು ಕೊಡುಗೈದಾನಿ; ನಾನು ನಿನಗೆ ಕೃತಜ್ಞ’ ಎಂದು ಹೇಳಿ ತೋಟಕ್ಕೆ ತೆರಳಿದ. 9 ತಿಂಗಳ ನಂತರ ಅಜ್ಞಾತ ಯತಿಯೋರ್ವರು ಬಂದು ‘ನಾನು ಶಿವದೂತ. ಈ ಮಗುವಿಗೆ ನಾಮಕರಣ ಮಾಡಬೇಕಾಗಿದೆ’ ಎಂದು ಹೇಳಿ ಮಗುವಿನ ಕಿವಿಯಲ್ಲಿ ‘ಶಿವರುದ್ರ’ ಎಂದು 3 ಬಾರಿ ಉಚ್ಚರಿಸಿದರು.

ಕೆಲ ವರ್ಷದ ನಂತರ, ಶಿವರುದ್ರನನ್ನು ಕೂಲಿಮಠಕ್ಕೆ ಕಳುಹಿಸಲು ತಂದೆ ತಾಯಿ ಬಯಸಿದರು. ಆದರೆ, ಆತ ಒಂದೆಡೆ ನಿಲ್ಲದೆ ಒಂಟಿಯಾಗಿ, ಯಾವುದೋ ಲಹರಿಯಲ್ಲಿರುವಂತೆ ಕಾಣುತ್ತಿದ್ದ. ಒಮ್ಮೊಮ್ಮೆ ಕಲ್ಲೊಂದನ್ನು ಎಸೆದು ಹಿಂದೆಯೇ ಅದಕ್ಕೆ ಗುರಿಯಿಟ್ಟು ಮತ್ತೊಂದನ್ನು ಎಸೆದು ಪುಡಿಮಾಡುತ್ತಿದ್ದ. ಕೆಲವು ಬಾರಿ ಗುರಿತಪ್ಪುತ್ತಿತ್ತು. ಆಗ ತಾಯಿಯಲ್ಲಿ ‘ಗುರಿ ತಪ್ಪದಂತೆ ಗುರಿಯಿಡುವುದು ಹೇಗಮ್ಮ?’ ಎಂದು ಒಗಟಾಗಿ ಪ್ರಶ್ನಿಸುತ್ತಿದ್ದ. ಈ ಮಾತಿನ ಒಡಪು ಬಿಡಿಸಲಾಗದೆ ತಾಯಿ ಅಚ್ಚರಿಗೊಳ್ಳುತ್ತಿದ್ದಳು. ಅಂದುಕೊಂಡಂತೆ ಅವನನ್ನು ಕೂಲಿಮಠಕ್ಕೆ ಸೇರಿಸಲಾಯಿತು. ಕೂಲಿಮಠದಲ್ಲಿ ಮಧ್ಯಾಹ್ನದ ನಂತರ ಯಾರೂ ಇಲ್ಲದ ವೇಳೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ. ಈ ನಡುವೆ ರೇವಣಸಿದ್ದಪ್ಪ ಇಹಲೋಕಯಾತ್ರೆ ಮುಗಿಸಿದ. ಈ ಆಘಾತ ಅರಗಿಸಿಕೊಳ್ಳಲಾಗದೆ ನೆಲಕಚ್ಚಿ ಮಲಗಿದ ಗಂಗಮ್ಮ ಶಿವನ ಪಾದ ಸೇರಿದಳು. ಅನಾಥ ಶಿವರುದ್ರ ಊರುಬಿಟ್ಟು ಗೊತ್ತುಗುರಿಯಿಲ್ಲದೆ ಹೊರಟ. ಒಮ್ಮೆ ಯಾವುದೋ ಊರಿನ ಕಟ್ಟೆಯ ಮೇಲೆ ಕುಳಿತಿದ್ದಾಗ ನಾಯಕನಹಟ್ಟಿ ಎಂಬ ಹೆಸರು ಕೇಳಿಬಂತು. ಅವರಿವರನ್ನು ವಿಚಾರಿಸಿ ನಾಯಕನಹಟ್ಟಿಗೆ ತೆರಳಿ ಅಲ್ಲಿನ ತಿಪ್ಪೇರುದ್ರಸ್ವಾಮಿ ಗುಡಿಯ ಮುಂದೆ ಕುಳಿತ. ‘ಭಕ್ತಿಯಿಂದ ಧ್ಯಾನಿಸಿದರೆ ತಿಪ್ಪೇಸ್ವಾಮಿ ಕಾಣಿಸುತ್ತಾನೆ’ ಎಂಬ ಹಿರಿಯರೊಬ್ಬರ ಮಾತು ಅವನಿಗೆ ನೆನಪಾಯಿತು.

ಪ್ರಸ್ಥಾನ: ಧ್ಯಾನಸ್ಥ ಶಿವರುದ್ರನಿಗೆ ಗೋಚರಿಸಿದ ಹುಡುಗನೊಬ್ಬ, ಅವನನ್ನು ಗರ್ಭಗುಡಿಗೆ ಕರೆದೊಯ್ದು ದೇವರಿಗೆ ನೈವೇದ್ಯ ಮಾಡಿದ್ದ ಪದಾರ್ಥವನ್ನು ತಿನ್ನಲು ಕೊಟ್ಟ. ಕೆರೆಯಲ್ಲಿ ಮಿಂದು ಗುಡಿಯ ಸಮೀಪ ಧ್ಯಾನಿಸುವುದು ಶಿವರುದ್ರನ ನಿತ್ಯಾಚರಣೆಯಾಯಿತು. ಕೆಲ ತಿಂಗಳ ಬಳಿಕ, ಉತ್ತರಾಭಿಮುಖವಾಗಿ ಹೊರಟೇಬಿಟ್ಟ. ದಾರಿಯಲ್ಲಿ ಅನೇಕ ಪುಣ್ಯಕ್ಷೇತ್ರಗಳು ಸಿಕ್ಕವು. ಕೇದಾರನಾಥದ ಪ್ರಕೃತಿಸೌಂದರ್ಯಕ್ಕೆ ಮಂತ್ರಮುಗ್ಧನಾಗಿ, ಹೆಬ್ಬಂಡೆಯೊಂದರ ಮೇಲೆ ಕುಳಿತು ಧ್ಯಾನಿಸತೊಡಗಿದ. ಸಂನ್ಯಾಸಿಯೊಬ್ಬ ಇವನನ್ನು ಗವಿಯೊಳಕ್ಕೆ ಕರೆತಂದು ತಿನ್ನಲು ಪ್ರಸಾದ ಕೊಟ್ಟ. ತನಗೆ ತಿಳಿದಷ್ಟು ವಿದ್ಯೆ ಹೇಳಿಕೊಟ್ಟು ಯೋಗಾಭ್ಯಾಸವನ್ನೂ ಕಲಿಸಿದ. ಅಲ್ಲಿ 2 ವರ್ಷ ಕಳೆದುಹೋದವು. ಆಗ ಸಂನ್ಯಾಸಿ ‘ನೀನು ದಕ್ಷಿಣಾಭಿಮುಖವಾಗಿ ಹೊರಡು, ಶಿವ ದಾರಿತೋರುತ್ತಾನೆ’ ಎಂದ. ಕೇದಾರವನ್ನು ಬಿಟ್ಟು ಕಾಶಿ ಮುಂತಾದ ಸ್ಥಳಗಳನ್ನು ನೋಡುತ್ತ ಶ್ರೀಶೈಲ ತಲುಪಿದ ಶಿವರುದ್ರ, ಅಲ್ಲಿದ್ದ ಪಾತಾಳಗಂಗೆಯಲ್ಲಿ ಮಿಂದು ದೇವಸ್ಥಾನದ ಸುತ್ತಲಿನ ಕಸಗುಡಿಸಿ ಚೊಕ್ಕಟಮಾಡಿಕೊಂಡು ಇರತೊಡಗಿದ. ಮಲ್ಲಿಕಾರ್ಜುನನ ದರ್ಶನ ಮಾಡುತ್ತ ಅಲ್ಲೇ ಇದ್ದುಬಿಟ್ಟ. ಒಮ್ಮೆ ವೃದ್ಧ ಸಂನ್ಯಾಸಿಯೊಬ್ಬ ‘ಇದ್ದವರನ್ನೆಲ್ಲ ಬಿಟ್ಟು ಏನು ಸಾಧಿಸಬೇಕು ಅಂತ ಬಂದ್ಯೋ?’ ಎಂದು ಕೇಳಿದ್ದಕ್ಕೆ ಶಿವರುದ್ರ ಮೂಕನಂತೆ ನಿಂತಾಗ, ‘ಕಾಲವ್ಯಯ ಮಾಡದೆ ಪಶ್ಚಿಮದ ಕಡೆ ಹೋಗು, ಗುರು ದೊರಕುತ್ತಾನೆ’ ಎಂದ. ಹೊರಟುನಿಂತ ಶಿವರುದ್ರ ಚೇಳಗುರಕಿ ಎಂಬ ಊರು ಸೇರಿ, ಎರ್ರಿತಾತನ ಸಮಾಧಿ ಸ್ಥಳದಲ್ಲಿ ಇಡೀರಾತ್ರಿ ಧ್ಯಾನಿಸುತ್ತ ಕುಳಿತ. ಬೆಳಗಿನ 4 ಗಂಟೆ ಹೊತ್ತಿಗೆ ತೇಜೋಮಯ ಬೆಳಕೊಂದು ಕಾಣಿಸಿ ‘ಎಲ್ಲಕ್ಕೂ ಕಾಲಕೂಡಿ ಬರಬೇಕು; ಮುಂದೆ ಹೋಗು, ದಾರಿತೋರುವ ಗುರು ನಿನ್ನನ್ನೇ ಹುಡುಕಿಕೊಂಡು ಬರುತ್ತಾನೆ. ಚಿಂತಿಸ ಬೇಡ’ ಎಂದಿತು. ಆ ನುಡಿಯ ಆಣತಿಯಂತೆ ಚೇಳಗುರ್ಕಿಯಿಂದ ಹೊರಟು ಕೂಡ್ಲಿಗಿ ತಾಲೂಕಿನ ಯರ್ಮಾನಳ್ಳಿ ಗ್ರಾಮಕ್ಕೆ ಬಂದು ಅರಳೀಕಟ್ಟೆಯ ಮೇಲೆ ಕುಳಿತ. ಅಲ್ಲಿಗೆ ಬಂದ ಊರಗೌಡನು ಶಿವರುದ್ರನ ಪೂರ್ವಾಪರ ವಿಚಾರಿಸಿ ಮನೆಗೆ ಕರೆತಂದು ಆಶ್ರಯವಿತ್ತ.

ಸಾಧನೆ: ಗೌಡನು ಶಿವರುದ್ರನಿಗೆ ದನಮೇಯಿಸುವ ನಿತ್ಯಕಾಯಕ ಮಾಡಿಕೊಟ್ಟ. ಒಮ್ಮೆ ಗೌಡನನ್ನು ಉದ್ದೇಶಿಸಿ ‘ನಿಮ್ಮ ಮಗಳು ಸಂಜೆಗೆ ಬರುತ್ತಾಳೆ’ ಎಂದು ಸ್ವಗತದಲ್ಲಿ ಹೇಳಿಕೊಂಡಿದ್ದು ಗೌಡನಿಗೆ ಅಚ್ಚರಿ ತಂದಿತು. ಅಂತೆಯೇ ಮಗಳು ಮನೆಗೆ ಬಂದಾಗ, ಗೌಡನಿಗೆ ಶಿವರುದ್ರನ ಬಗೆಗಿನ ಗೌರವ ಹೆಚ್ಚಾಯಿತು. ಅಂದಿನಿಂದ ದನಕಾಯುವಿಕೆ ಬಿಡಿಸಿ ದೇವರಪೂಜೆ ಮಾಡಿಕೊಂಡಿರಲು ತಿಳಿಸಿದ. ಅದೇ ವೇಳೆಗೆ ಮಸ್ಟೂರಿನ ಮಠದ ಉಚ್ಚನಾಗಲಿಂಗಸ್ವಾಮಿಗಳು ಗೌಡರ ಮನೆಗೆ ದಯಮಾಡಿಸಿದ್ದರು. ಶಿವರುದ್ರ ಅವರ ಕಣ್ಣಿಗೆ ಬಿದ್ದ. ಈತ ವರಪುತ್ರನೇ ಎಂಬುದು ಅವರಿಗೆ ಮನವರಿಕೆಯಾಗಿ ‘ನನ್ನೊಂದಿಗೆ ಬರುವೆಯಾ?’ ಎಂದು ಕೇಳಿದರು. ಗುರುವನ್ನು ಅರಸುತ್ತಿದ್ದ ಶಿವರುದ್ರ ಅವರೊಡನೆ ಹೊರಟ. ಆಗ ಅವನಿಗೆ ಸುಮಾರು 18 ವರ್ಷ. ಪ್ರತಿನಿತ್ಯ ದನಗಳನ್ನು ಕಾಡಿಗೆ ಅಟ್ಟಿಕೊಂಡು ಹೋಗಿ ಒಂದೆಡೆ ಬಿಟ್ಟು ಶಿವಧ್ಯಾನದಲ್ಲಿ ಮುಳುಗಿರುತ್ತಿದ್ದ. ಸಾಧನೆ ಬಲವಾಗತೊಡಗಿತು. ಇದನ್ನು ಯೋಗಸಿದ್ಧಿಯ ಮೂಲಕ ಕಂಡುಕೊಂಡ ಗುರುಗಳು, ತಮ್ಮಲ್ಲಿದ್ದ ಎಲ್ಲ ವಿದ್ಯೆಯನ್ನೂ ಅವನಿಗೆ ಧಾರೆಯೆರೆದರು. ನಂತರ ಉತ್ತರದ ಕಡೆಯಿಂದ ಬಂದ ತಾಂತ್ರಿಕ ಸಿದ್ಧರಾದ ಶಿವರಾಮಾವಧೂತರಿಗೆ ಶಿವರುದ್ರನನ್ನು ಒಪ್ಪಿಸಿ ಮುಂದಿನ ಸಾಧನೆಗೆ ದಾರಿತೋರಿಸಿದರು. ಶಿವರುದ್ರ ಅವರ ಜತೆಯಿದ್ದು ನಾನಾ ಸಾಧನೆಗಳನ್ನು ಮಾಡತೊಡಗಿದ. ಗುರು-ಶಿಷ್ಯರಿಬ್ಬರೂ ವಿವಿಧೆಡೆ ಸಂಚರಿಸಿ ಕೊನೆಗೆ ಹಂಪಿಯ ಗವಿಯೊಂದರಲ್ಲಿ ನೆಲೆಸಿದರು. ಅಲ್ಲಿ ಶಿವರಾಮಾವಧೂತರು 4 ವರ್ಷಗಳ ಕಾಲ ಅವನಿಗೆ 64 ವಿದ್ಯೆಗಳನ್ನೂ, ಅದರ ಸಾಧನಾಕ್ರಮಗಳನ್ನೂ ತಿಳಿಸಿಕೊಟ್ಟರು. ನಂತರ ಶಿವರಾಮಾವಧೂತರು ‘ನಿನಗೆ ಎಲ್ಲ ವಿದ್ಯೆಗಳ ಪರಿಚಯವಾಗಿದೆ; ಆದರೆ, ಅವನ್ನು ಸಿದ್ಧಿಸಿಕೊಳ್ಳುವ ಪ್ರಯತ್ನ ನಿನ್ನದು ಮಾತ್ರ. ಮಸ್ಟೂರಿಗೆ ಹೋಗಿ ಅಲ್ಲಿ ಸಾಧಿಸಿಕೋ’ ಎಂದರು. ಅವನು ಉಚ್ಚನಾಗಲಿಂಗ ಸ್ವಾಮಿಗಳ ಬಳಿಬಂದು ತನ್ನ ಸಾಧನೆಯ ಕುರಿತು ಹೇಳಿಕೊಂಡಾಗ ಅವರು ‘ನೀನಿನ್ನೂ ಸಾಧಿಸುವುದು ಬೇಕಾದಷ್ಟಿದೆ’ ಎಂದು ಅವನನ್ನು ಕರೆದುಕೊಂಡು ಸಿದ್ಧಸ್ಥಳಕ್ಕೆ ಹೊರಟರು.

ಅದು ಶಾಂತವೀರರೆಂಬ ಯೋಗಿಗಳು ಅನೇಕ ಸಿದ್ಧಿ ಪಡೆದು ಜೀವಸಮಾಧಿಯಾಗಿದ್ದ ಪುಣ್ಯಸ್ಥಳ. ಶಿವರುದ್ರನನ್ನು ಆ ಗವಿಯ ಬಳಿ ಬಿಟ್ಟ ನಾಗಲಿಂಗಸ್ವಾಮಿಗಳು, ‘ಇಲ್ಲಿ ಗುರಿಸಾಧಿಸು’ ಎಂದು ಹೇಳಿ ಹಿಂದಿರುಗಿದರು. ಕಸಬರಿಗೆಯಿಂದ ಗವಿಯನ್ನು ಸ್ವಚ್ಛಗೊಳಿಸಿ ಪದ್ಮಾಸನ ಹಾಕಿ ಕುಳಿತ ಶಿವರುದ್ರ, ಸರ್ಪಯೋಗ ಧ್ಯಾನದಲ್ಲಿ ಧ್ಯಾನಸ್ಥನಾಗಿಬಿಟ್ಟ. ಹಸಿವು-ನೀರಡಿಕೆ ಇಲ್ಲವಾದವು, ಆರೇಳು ತಿಂಗಳು ಕಳೆದುಹೋದವು. ಒಮ್ಮೆ, ಸಮಾಧಿಸ್ಥರಾಗಿದ್ದ ಶಾಂತವೀರರು ಅವನಿಗೆ ದರ್ಶನವಿತ್ತು ತಮ್ಮೆಲ್ಲ ಸಿದ್ಧಿ-ಸಾಧನೆಗಳನ್ನು ಧಾರೆಯೆರೆದು ‘ಶಾಂತವೀರ’ ಎಂಬ ಅವಧೂತ ದೀಕ್ಷೆ ನೀಡಿದರು. ನಂತರ ಅವಧೂತ ಗವಿ ಶಾಂತವೀರರು ಬರ್ಹಿಮುಖರಾದರು. ಸಮೀಪದ ಜಗಳೂರಿಗೆ ಹೋಗಿ ಕಂತೆಭಿಕ್ಷೆ ಬೇಡಿ ಗುರುವಿನ ಗದ್ದಿಗೆಗೂ ಶಿವಲಿಂಗಕ್ಕೂ ಎಡೆಯಿಟ್ಟು ಸೇವಿಸುತ್ತಿದ್ದರು. ಇದು ದಿನಚರಿಯಾಯಿತು. ಸುತ್ತಮುತ್ತಲ ಊರಿನ ಜನ ಗವಿಮಠಕ್ಕೆ ಬರತೊಡಗಿದರು. ಅಲ್ಲಿ ಪ್ರತಿನಿತ್ಯ ಭಜನೆ-ಸತ್ಸಂಗ ನಡೆಯತೊಡಗಿತು. ಒಮ್ಮೆ, ಹೊರಗಿನ ಕಸ ಗುಡಿಸುತ್ತಿದ್ದ ಹೆಣ್ಣುಮಕ್ಕಳ ಬಳಿ ನಿಂತು ‘ನೋಡಿ ತಾಯಾರ, ಹೊರಗಿನ ಕಸ ಹೊರಮೈಗೆ ಮೆತ್ತಿದ ಕೊಳೆ ಯಾರು ಬೇಕಾದರೂ ಚೊಕ್ಕಮಾಡಬಹುದು; ಒಳಗಿಂದು ಮಾತ್ರ ಅವನೊಬ್ಬ ತೊಳೆಯಬಲ್ಲ’ ಎಂದು ಉಪದೇಶಿಸಿದರು. ಅಲ್ಲಿ ಕೆಲ ದಿನಗಳಿದ್ದು ಜಗದಂಬೆಯ ಆಣತಿಯಂತೆ ಕಣ್ವಕುಪ್ಪೆಗೆ ಹೋಗಿ ನೆಲೆಸತೊಡಗಿದರು. ಅಲ್ಲಿನ ಭಕ್ತರು ಶಾಂತವೀರರು ತಿಳಿಸಿದ ಕಡೆ ಗಿಡಗಳನ್ನು ಕಡಿದು ಚೊಕ್ಕಮಾಡಿದರು. ಅಲ್ಲಿ ಗವಿಯ ಬಾಗಿಲೊಂದು ಸ್ಪಷ್ಟವಾಗಿ ಕಾಣಿಸಿಕೊಂಡಿತು. ಅಂದು ರಾತ್ರಿ ಭಜನೆ ಮಾಡುತ್ತ ಶಾಂತಾವಧೂತರು ಬಯಲಿನಲ್ಲಿಯೇ ಕುಳಿತರು. ಆ ಗವಿ ಮುಂದೆ ಅವರ ಸಾಧನಾಸ್ಥಳವಾಗಿ ಮಾರ್ಪಟ್ಟಿತು. ಒಮ್ಮೆ ‘ಭಕ್ತರಿಗೆ ಬೆಳಕಾಗು ಸಮಾಜಕ್ಕೆ ದೀಪವಾಗು’ ಎಂಬ ಆಣತಿ ಕೇಳಿಸಿ, ಅವರ ಒಳಮುಖ ಚಲನೆಯನ್ನು ಹೊರಮುಖ ಚಲನೆಯಾಗಿ ರೂಪಾಂತರಿಸಿತು. ಅದರಂತೆ ಬಂದ ಭಕ್ತರಿಗೆ ಅಡುಗೆ ಮಾಡಿ ಸ್ವತಃ ಉಣಬಡಿಸತೊಡಗಿದರು. ಸುತ್ತಮುತ್ತಲ ಜನ ಮಠಕ್ಕೆ ಬಂದು ಸ್ವಾಮಿಗಳಿಂದ ಉಪದೇಶದ ಜತೆಗೆ ಔಷಧವನ್ನೂ ಪಡೆಯುತ್ತಿದ್ದರು.

ಶಾಂತವೀರರು ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಯೋಗದ ನೆಲೆಯಲ್ಲಿ ನಿಲ್ಲುತ್ತಿದ್ದರು. ನಂತರ ಸ್ನಾನಾಹ್ನಿಕ ಮುಗಿಸಿ ದೇವಿ ಪಾರಾಯಣ ಮಾಡಿ ಮುಂದಿನ ಕಾರ್ಯ ಕಲಾಪಗಳಿಗೆ ಸಜ್ಜಾಗುತ್ತಿದ್ದರು. ರಾಮಚಂದ್ರರಾಯ ಎಂಬ ಸಾಧಕರಿಗೆೆ ದೀಕ್ಷೆಯಿತ್ತು, ‘ರಾಮತೀರ್ಥ’ ಎಂಬ ಅಭಿದಾನ ನೀಡಿ ಕಣ್ವಕುಪ್ಪೆಯ ಗವಿಮಠಕ್ಕೆ ಉತ್ತರಾಧಿಕಾರಿಯಾಗಿ ಮಾಡಿದರು. ಶಾಂತವೀರರು 16 ವರ್ಷ ಕಣ್ವಕುಪ್ಪೆಯಲ್ಲಿದ್ದರು. ಅಂದು ನವರಾತ್ರಿ. ‘ಇದು ಕೊನೆಯ ನವರಾತ್ರಿ’ ಎಂದು ಭಕ್ತರಿಗೆ ಒಗಟಾಗಿ ಹೇಳಿ ‘ಸಂನ್ಯಾಸಿಗೆ ಒಂದು ಊರಲ್ಲ, ಕೊಕ್ಕರೆಗೆ ಒಂದು ಕೆರೆಯಲ್ಲ’ ಎಂದು ಮುಗುಮ್ಮಾಗಿ ಹೇಳಿ ಗವಿಮಠದಿಂದ ಅದೃಶ್ಯರಾದರು. ನಂತರ ಎಳಗೋಡಿನ ಭೋಗೇಶನ ಗುಡಿ ಸೇರಿಕೊಂಡರು. ಅಲ್ಲಿ ಕೆಲದಿನವಿದ್ದು ಸತ್ಸಂಗ ಆಚರಣೆಯಿಂದ ಇಡೀ ಗ್ರಾಮವನ್ನೇ ಶಿವಮಯಗೊಳಿಸಿದರು. ಈ ನಡುವೆ ಶಾಂತವೀರರು ಹತ್ತಾರು ಪವಾಡ ಮಾಡಿ, ಲೋಕೋಪಕಾರವನ್ನು ಉಂಟುಮಾಡಿದರು. ಒಮ್ಮೆ ಯೋಗಧ್ಯಾನದಲ್ಲಿದ್ದಾಗ ‘ಎಳಗೋಡು ತೊರೆದು ಕಂದಿಕೆರೆಗೆ ನಡೆ’ ಎಂಬ ಜಡೆಸಿದ್ಧನ ಆದೇಶ ಬಂದಿತು. ಶಾಂತವೀರರು ಅಲ್ಲಿಂದ ಹೊರಟು ಹುಟ್ಟೂರು ಕುರಿಹಳ್ಳಿಗೆ ಪಯಣಿಸಿ ಕಂದಿಕೆರೆಯ ಜಡೆಸಿದ್ಧ ಗದ್ದಿಗೆಗೆ ಬಂದು ಸೇರಿಕೊಂಡರು.

ಶಾಂತವೀರರು ಪ್ರತಿನಿತ್ಯ ಊರಲ್ಲಿ ಕಂತೆಭಿಕ್ಷೆ ಬೇಡುತ್ತಿದ್ದರು. ಕಾಲಕ್ರಮೇಣ ಅವರ ಮಹಿಮೆ ವ್ಯಾಪಕವಾಯಿತು. ಒಮ್ಮೆ, ಮುಜರಾಯಿ ಮಂತ್ರಿಯಾಗಿದ್ದ ಹಿರಿಯೂರಿನ ಮಸಿಯಪ್ಪ ಎಂಬುವರು ಶಾಂತವೀರರನ್ನು ಅರಸಿ ಬಂದರು. ಹುತ್ತದ ಹಿಂದಿದ್ದ ಶಾಂತವೀರರು ಹೊರಬಂದು ‘ಏಕೆ ಬಂದೆ?’ ಎಂಬಂತೆ ಸನ್ನೆ ಮಾಡಿದರು. ‘ಸರಿ ನೀನು ಬಂದದ್ದಾಯಿತು. ಯಾರನ್ನೂ ಕರೆತರಬೇಡ’ ಎಂದು ಹೇಳಿ ನಿಂತ ಜಾಗದಿಂದ ಓಡಿಹೋದರು. ಅವಧೂತರ ಅಧ್ಯಾತ್ಮಸಾಮರ್ಥ್ಯ ಕಂದಿಕೆರೆಯ ಜನಕ್ಕೆ ಮನವರಿಕೆಯಾಯಿತು. ಕೃಷ್ಣಪ್ಪ ಎಂಬ ಸಂಸಾರವೊಂದಿಗನ ಗುಡಿಸಿಲಿನಲ್ಲಿ ಅವರು ಇರತೊಡಗಿದರು. ಆ ಗುಡಿಸಲೇ ಅವರ ಸಾಧನಾ ಕ್ಷೇತ್ರವಾಯಿತು. ಶಾಂತವೀರರು ಒಮ್ಮೆ ಕೃಷ್ಣಪ್ಪನ ಗುಡಿಸಿಲಿನಲ್ಲಿ ಮಗದೊಮ್ಮೆ ಜಡೆಸಿದ್ಧನ ಸನ್ನಿಧಿಯಲ್ಲಿ ಇರತೊಡಗಿದರು. ಒಮ್ಮೆ, ಗಂಗಾಧರಯ್ಯ ಎಂಬ ಓರ್ವ ಇಂಜಿನಿಯರ್ ಬೆನ್ನುಫಣಿಯಿಂದ ನರಳುತ್ತಿದ್ದರು. ಶಾಂತವೀರರು ತಮ್ಮ ಕೈಯಲ್ಲಿದ್ದ ಸೇಂದಿ ಬಾಟಲಿಯಿಂದ ಅವರ ಬೆನ್ನಿಗೆ ಜೋರಾಗಿ ಗುದ್ದಿದರು. ಬೆನ್ನುಫಣಿ ಗುಣವಾಗಿತ್ತು! ಈ ಸುದ್ದಿ ಊರತುಂಬ ಹರಡಿ, ಜನರೆಲ್ಲ ಇವರ ಬಳಿಬಂದು ರೋಗ ಪರಿಹರಿಸಿಕೊಂಡು ಹೋಗುತ್ತಿದ್ದರು.

ಅವಧೂತರು ಅನೇಕ ಬಾರಿ ಯಾರಾದರೊಬ್ಬ ಭಕ್ತರ ಮನೆಗೆ ಹೋಗಿ ತಟ್ಟೆಯಲ್ಲಿ ಅನ್ನ-ಹುಳಿ ಸುರಿದುಕೊಂಡು, ಖಾರದಪುಡಿ, ಅರಿಶಿನ ಕುಂಕುಮ ಎಲ್ಲವನ್ನೂ ಬೆರೆಸಿ ಕಿವುಚಿ ಉಂಡೆಮಾಡಿ ಭಕ್ತರಿಗೆ ಕೊಡುತ್ತಿದ್ದರು. ಭಕ್ತರಿಗೆ ಅದು ಅಪೂರ್ವ ಪ್ರಸಾದ ಎನಿಸುತ್ತಿತ್ತು. ಒಂದು ಬೆಳಗ್ಗೆ ‘ಢಮ್ ಢಮ್ ಹಕ್ಕಿ ಹಾರಿಹೋಯಿತು’ ಎಂದಾಗ ಭಕ್ತರಿಗೆಲ್ಲ ಅಚ್ಚರಿಯಾಗಿ ಅರ್ಥ ಕೇಳಲು ‘ದೇಶದ ಪಕ್ಷಿಯೊಂದು ಪ್ರಾಣಬಿಟ್ಟಿತು’ ಎಂದರು. ಸಂಜೆ ಇಂದಿರಾ ಗಾಂಧಿಯವರ ಮರಣವಾರ್ತೆ ರೇಡಿಯೋದಲ್ಲಿ ಪ್ರಸಾರವಾಯಿತು!

ದೇಹತ್ಯಾಗ: ಒಂದು ಸಂಜೆ ಶಿಷ್ಯನೊಬ್ಬನನ್ನು ಕರೆದು ಭಕ್ತರನ್ನೆಲ್ಲ ಬರುವಂತೆ ಹೇಳಿಕಳುಹಿಸಿದರು. ಬಂದ ಭಕ್ತರಿಗೆ 3 ದಿನ ಅಖಂಡ ಭಜನೆ ಮಾಡುತ್ತಿರಬೇಕೆಂದು ಸೂಚಿಸಿ, ತಮ್ಮನ್ನು ಧ್ಯಾನದಿಂದ ಯಾರೂ ಎಚ್ಚರಿಸಬಾರದು ಎಂದೂ ಎಚ್ಚರಿಸಿ, ಧ್ಯಾನಕ್ಕೆ ಕುಳಿತರು. ರಾತ್ರಿಯೆಲ್ಲ ಭಜನೆ. ಪದ್ಮಾಸನದಲ್ಲಿ ಪ್ರಶಾಂತ ಯೋಗಮುದ್ರೆಯಲ್ಲಿದ್ದ ಶಾಂತ ವೀರರು, ಎರಡು ರಾತ್ರಿಗಳಾದರೂ ಮಿಸುಕಲಿಲ್ಲ. ಭಕ್ತರು ಅವರ ಮೂಗಿನ ಬಳಿ ಕೈಯಿಟ್ಟು ನೋಡಿದಾಗ ಉಸಿರು ತನಗೆ ತಾನೇ ನಿಂತಿತ್ತು. ಆದರೆ, ಕುಳಿತ ಭಂಗಿ ವ್ಯತ್ಯಯವಾಗಿರಲಿಲ್ಲ. ಅಂದು 1989ರ ಆಗಸ್ಟ್ 3ರ ಗುರುವಾರ; ಕೃಷ್ಣಪ್ಪನ ಗುಡಿಸಿಲಿನಲ್ಲಿ ಅವಧೂತರ ದೇಹತ್ಯಾಗವಾಗಿತ್ತು. ಕಳೇಬರವನ್ನು ಜಡೆಸಿದ್ಧನ ಗದ್ದಿಗೆಯ ಪಕ್ಕ ಸಮಾಧಿ ಮಾಡಲಾಯಿತು. ಶ್ರೀ ಶಾಂತವೀರ ಅವಧೂತರು ಸಹಜಸಿದ್ಧರಾಗಿ ಮೂವರು ಗುರುಗಳಿಂದ ಸಿದ್ಧಿಪಡೆದು ಮುಕ್ತರಾದ ಮಹಾಯೋಗಿಗಳು. ಲೋಕವ್ಯಾಪಾರವನ್ನೂ ಅಧ್ಯಾತ್ಮಲೋಕವನ್ನೂ ಒಂದುಗೂಡಿಸುತ್ತ ಎಲೆಮರೆಯ ಕಾಯಂತೆ ಇದ್ದು, ಇಹದ ವ್ಯಾಪಾರವನ್ನು ಮುಗಿಸಿದ ಪರಮಸಿದ್ಧರು.

(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು)