More

    ಕಂದಾಯ ಗ್ರಾಮ ರಚನೆ ಚುರುಕು 204 ಹಳ್ಳಿಗಳ ಗುರುತು 102 ಗ್ರಾಮಗಳಿಗೆ ಅಂತಿಮ ಅಧಿಸೂಚನೆ

    ಚಿಕ್ಕಬಳ್ಳಾಪುರ : ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಮತ್ತು ಅಧಿಕೃತ ಗ್ರಾಮ ಎಂದು ಗುರುತಿಸಿಕೊಳ್ಳುವ ಸಲುವಾಗಿ ಜಿಲ್ಲೆಯಲ್ಲಿ ಹೊಸ ಕಂದಾಯ ಗ್ರಾಮಗಳ ರಚನೆ ಪ್ರಕ್ರಿಯೆ ತ್ವರಿತಗತಿಯಲ್ಲಿ ಸಾಗಬೇಕೆಂಬ ಒತ್ತಾಯ ಕೇಳಿ ಬಂದಿದೆ.
    ಪ್ರಸ್ತುತ ಕಂದಾಯ ಗ್ರಾಮ ರಚನೆಗೆ 204 ಹಳ್ಳಿಗಳನ್ನು ಗುರುತಿಸಿದ್ದು ಈ ಪೈಕಿ 102 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
    2007ನೇ ಸಾಲಿನ ಆಗಸ್ಟ್ 23 ರಂದು ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾದ ಚಿಕ್ಕಬಳ್ಳಾಪುರದಲ್ಲಿ 1526 ಗ್ರಾಮಗಳಿವೆ. ಜಿಲ್ಲಾ ಸ್ಥಾನಮಾನ ಪಡೆದಿರುವುದಕ್ಕೆ 12 ವರ್ಷ ಕಳೆದರೂ ಇಲ್ಲಿನ ಅನೇಕ ಗ್ರಾಮಗಳು ಅನಧಿಕೃತವಾಗಿಯೇ ಉಳಿದುಕೊಂಡಿವೆ. ಹೊಸ ಹೆಸರಿನಿಂದ ಗುರುತಿಸುತ್ತಿದ್ದರೂ ಸರ್ಕಾರಿ ದಾಖಲೆಯಲ್ಲಿ ಸಮೀಪದ ಹಳೇ ಗ್ರಾಮದೊಂದಿಗೆ ಇವೆ. ಇದಕ್ಕೆ ನಿಯಮಾನುಸಾರ ನಾನಾ ಸಮೀಕ್ಷೆಗಳನ್ನು ಮುಗಿಸಿ, ಸರ್ಕಾರದಿಂದ ಅಧಿಕೃತ ಗ್ರಾಮ ಎಂಬುದಾಗಿ ಗುರುತಿಸಬೇಕೆಂಬ ಬೇಡಿಕೆ ಹಿಂದಿನಿಂದಲೂ ಕೇಳಿ ಬರುತ್ತಿದೆ.
    ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದಲ್ಲಿರುವುದರಿಂದ ಈ ಭಾಗದಲ್ಲಿ ಭೂಮಿ ಬೆಲೆ ದುಬಾರಿಯಾಗಿದೆ. ವ್ಯಾಪಕ ಭೂ ಪರಿವರ್ತನೆಯಿಂದ ಹೈಟೆಕ್ ಕಟ್ಟಡಗಳು, ಮನೆಗಳು ತ್ವರಿಗತಿಯಲ್ಲಿ ನಿರ್ಮಾಣವಾಗುತ್ತಿವೆ. ಜನಸಂಖ್ಯೆ ಏರಿಕೆಯಿಂದ ಗ್ರಾಮಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವುಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿದಾಗ ಸರ್ಕಾರದಿಂದ ಹೆಚ್ಚಿನ ಅನುದಾನ ಮತ್ತು ಅಗತ್ಯ ಸೇವೆ ಪಡೆಯಲು ಸಹಕಾರಿಯಾಗುತ್ತದೆ.
    ಅಧಿಸೂಚನೆಯಲ್ಲಿ ಬೆಳವಣಿಗೆ : ಸರ್ಕಾರಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದ 181 ಗ್ರಾಮಗಳ ಪೈಕಿ 148ಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಅಂತಿಮ ಅಧಿಸೂಚನೆ ಪ್ರಸ್ತಾವನೆಗೆ ಸಂಬಂಧಿಸಿದಂತೆ 113 ಗ್ರಾಮಗಳ ಪೈಕಿ 102 ಗ್ರಾಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪ್ರಾಥಮಿಕ ಅಧಿಸೂಚನೆಗೆ 23 ಮತ್ತು ಅಂತಿಮ ಅಧಿಸೂಚನೆಗೆ 35 ಗ್ರಾಮಗಳು ಬಾಕಿ ಇವೆ. ರಚಿಸಬೇಕಾಗಿರುವ ಕಂದಾಯ ಗ್ರಾಮಗಳ ಸಂಖ್ಯೆಯ ಲೆಕ್ಕಾಚಾರದಲ್ಲಿ 6 ತಾಲೂಕುಗಳ ಪೈಕಿ ಚಿಕ್ಕಬಳ್ಳಾಪುರ ಪ್ರಥಮ (52 ಗ್ರಾಮ) ಮತ್ತು ಶಿಡ್ಲಘಟ್ಟ (16 ಗ್ರಾಮ) ಕೊನೇ ಸ್ಥಾನದಲ್ಲಿದೆ.

    ಈಗಾಗಲೇ ರಾಜ್ಯ ಸರ್ಕಾರವು ಜಿಲ್ಲೆಯ 102 ಕಂದಾಯ ಗ್ರಾಮಗಳ ರಚನೆಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು ಉಳಿದ ಗ್ರಾಮಗಳ ತ್ವರಿತ ಘೋಷಣೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
    ಆರತಿ ಆನಂದ್, ಅಪರ ಜಿಲ್ಲಾಧಿಕಾರಿ

    ಜಿಲ್ಲೆಯಲ್ಲಿ ಹೊಸದಾಗಿ ಎರಡು ತಾಲೂಕುಗಳ ರಚನೆಯಾಗಿವೆ. ಇದರ ನಡುವೆ ಬಾಕಿ ಉಳಿದ ಗ್ರಾಮಗಳನ್ನು ತ್ವರಿತವಾಗಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
    ಮೋಹನ್, ಸ್ಥಳೀಯ ನಿವಾಸಿ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts