ಔಷಧಗಳಿಲ್ಲದ ಜನರಿಕ್ ಮಳಿಗೆ!

ನರಗುಂದ: ಆಯುಷ್ಮಾನ ಭಾರತ ಯೊಜನೆಯಡಿ ಇಲ್ಲಿನ ತಾಲೂಕು ಆಸ್ಪತ್ರೆ ಆವರಣದಲ್ಲಿ ನಿರ್ವಿುಸಲಾಗಿರುವ ಜನರಿಕ್ ಔಷಧ ಮಳಿಗೆ ಔಷಧಗಳ ಕೊರತೆಯಿಂದಾಗಿ ಕಳೆದ ಐದು ದಿನಗಳಿಂದ ಬಂದ್ ಆಗಿದೆ. ಇದರಿಂದ ಬಡ ರೋಗಿಗಳು ಪರದಾಡುವಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧ ದೊರೆಯಲಿ ಎಂಬ ಸದುದ್ದೇಶದಿಂದ ಆಯುಷ್ಮಾನ ಭಾರತ ಯೋಜನೆಯಡಿ ದೇಶದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ದೇಶದ ಕೋಟ್ಯಂತರ ಜನರು ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಖರೀದಿಸಿ ಲಾಭ ಪಡೆದಿದ್ದಾರೆ. ಆದರೆ, ನರಗುಂದ ಪಟ್ಟಣದಲ್ಲಿರುವ ಜನರಿಕ್ ಔಷಧ ಮಳಿಗೆ ಕಳೆದ ಐದಾರು ದಿನಗಳಿಂದ ಬಂದ್ ಆಗಿದ್ದು, ರೋಗಿಗಳು ಹೆಚ್ಚು ದುಡ್ಡು ಕೊಟ್ಟು ಬೇರೆಡೆ ಖರೀದಿಸಬೇಕಾಗಿದೆ.

ಈ ಕುರಿತು ತಾಲೂಕು ಆಸ್ಪತ್ರೆ ಆಡಳಿತಾಧಿಕಾರಿ ಡಾ. ವರುಣ ಸವದಿ ಅವರನ್ನು ವಿಚಾರಿಸಿದರೆ, ‘ಒಂದು ವರ್ಷದ ಹಿಂದೆ ಜನರಿಕ್ ಮಳಿಗೆ ಆರಂಭಿಸಲಾಗಿದೆ. ಆದರೆ, ಮಳಿಗೆಯಲ್ಲಿ ಬೇಕಾದ ಔಷಧ ಇರುವುದಿಲ್ಲ. ಸರಿಯಾಗಿ ಬಾಗಿಲು ತೆರೆಯುವುದಿಲ್ಲ ಎಂಬ ದೂರುಗಳು ಜನರಿಂದ ಬಂದಿವೆ. ಮಳಿಗೆ ಹೊಣೆಗಾರಿಕೆ ಹೊತ್ತಿರುವ ಶಾಂತವೀರಯ್ಯ ಹಿರೇಮಠ ಎಂಬುವರಿಗೆ ಸಾರ್ವಜನಿಕರು ನೀಡಿರುವ ದೂರುಗಳ ಬಗ್ಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಶಾಂತವೀರಯ್ಯ ಅವರಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಈ ಕುರಿತು ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಸರಿಪಡಿಸಲಾಗುವುದು’ ಎಂದು ತಿಳಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಜನರಿಕ್ ಮಳಿಗೆಯಲ್ಲಿ ಸಾರ್ವಜನಿಕರಿಗೆ ಔಷಧ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಕಾಶಪ್ಪ ಮಾನೆ, ಲಕ್ಷ್ಮಪ್ಪ ಘಾಟಗೆ, ಯಲ್ಲಪ್ಪ ಹುಣಸ್ಯಾಳ, ತಿಮ್ಮಮ್ಮ ಕಾಶಪ್ಪನವರ, ಲಕ್ಷ್ಮೀ ತೋಂಡ್ಲೆ, ಸಾವಿತ್ರಿ ಕೀಲಿಕೈ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *