ಔಪಚಾರಿಕ ಬಜೆಟ್​ಗೆ ತಯಾರಿ

ಹುಬ್ಬಳ್ಳಿ: ಫೆ. 23ರಂದು 2019-20ನೇ ಸಾಲಿನ ಬಜೆಟ್ ಮಂಡನೆಗೆ ಹು-ಧಾ ಮಹಾನಗರ ಪಾಲಿಕೆ ತಯಾರಿ ನಡೆಸಿದೆ. ಪಾಲಿಕೆಯಲ್ಲಿ ಬಿಜೆಪಿ ಆಡಳಿತದ 2ನೇ ಅವಧಿಯ ಕೊನೆಯ ಬಜೆಟ್ ಇದಾಗಿದೆ. ಮುಂದಿನ ತಿಂಗಳಲ್ಲಿ ಪಾಲಿಕೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದೆ. ತಪ್ಪಿದಲ್ಲಿ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗುವುದು ಖಚಿತ. ಈ ಕಾರಣಕ್ಕೆ ಹಾಗೂ ವಾಡಿಕೆಯಂತೆ ಫೆಬ್ರವರಿಯಲ್ಲಿ ಪಾಲಿಕೆ ಬಜೆಟ್ ಮಂಡನೆ ಮಾಡಲಾಗುತ್ತದೆ.

ಈ ಬಾರಿಯದ್ದು ಔಪಚಾರಿಕ ಬಜೆಟ್. ಯಾಕೆಂದರೆ ಹಾಲಿ ಮೇಯರ್- ಉಪ ಮೇಯರ್ ಆವಧಿ ಮಾರ್ಚ್ 7ಕ್ಕೆ ಕೊನೆಗೊಳ್ಳಲಿದೆ. ಮುಂದೆ ಚುನಾವಣೆ ನಡೆದು ಹೊಸ ಆಡಳಿತ ಅಧಿಕಾರಕ್ಕೆ ಬರ ಲಿದೆ. ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಜೂನ್-ಜುಲೈ ತಿಂಗಳಲ್ಲಿ ಪರಿಷ್ಕೃತ ಬಜೆಟ್ ಮಂಡಿಸಬೇಕು. ಬೇರೆ ಪಕ್ಷ ಅಧಿಕಾರ ಹಿಡಿದರೆ ಹೊಸದಾಗಿ ಬಜೆಟ್ ಮಂಡಿಸುವುದು ಖಚಿತ. ಹಾಗಾಗಿ ಫೆ. 23ರ ಪಾಲಿಕೆ ಬಜೆಟ್​ಗೆ ಅಷ್ಟೇನೂ ಮಹತ್ವ ಇಲ್ಲ. ಆದರೂ, ಪಾಲಿಕೆಯ ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಔಪಚಾರಿಕ ಬಜೆಟ್ ಮಂಡನೆಗೆ ತಯಾರಿ ನಡೆಸಿದೆ. ‘ಫೆ. 23ರಂದು ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಬಜೆಟ್ ಪ್ರತಿಯನ್ನು ಇಂದು ಮುದ್ರಣಕ್ಕೆ ಕಳುಹಿಸುತ್ತಿದ್ದೇವೆ. ಮುಂಬರುವ ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕೊಳವೆ ಬಾವಿ ಕೊರೆಯಿಸಲು ಹಾಗೂ ಅವಳಿ ನಗರ ಸ್ವಚ್ಛತೆಗೆ ಬಜೆಟ್​ನಲ್ಲಿ ಆದ್ಯತೆ ನೀಡಿದ್ದೇವೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಬಡಿಗೇರ ವಿಜಯವಾಣಿಗೆ ತಿಳಿಸಿದ್ದಾರೆ.

ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಸೇರಿದಂತೆ ಬಹು ತೇಕ ಅಧಿಕಾರಿ, ಸಿಬ್ಬಂದಿಯನ್ನು ಚುನಾವಣೆ ಕೆಲಸ (ಮತದಾರರ ಪಟ್ಟಿ ಪರಿಷ್ಕರಣೆ, ಮತಗಟ್ಟೆ ಭೇಟಿ)ಕ್ಕೆ ನಿಯುಕ್ತಿಗೊಳಿಸಿರುವುದರಿಂದ ಬಜೆಟ್ ಸಿದ್ಧತೆಗೆ ತೊಂದರೆ ಯಾಗಿದೆ ಎಂಬ ಆಕ್ಷೇಪವೂ ಕೇಳಿ ಬಂದಿದ್ದವು.

ಹೆಚ್ಚಿನ ಮಹತ್ವ ಇಲ್ಲ

ಇತ್ತೀಚಿನ ವರ್ಷಗಳಲ್ಲಿ ಹು-ಧಾ ಮಹಾನಗರ ಪಾಲಿಕೆಯ ಬಜೆಟ್ ಮಹತ್ವ ಕಳೆದುಕೊಂಡಿದೆ. ತಿಂಗಳ ಹಿಂದೆ ಹುಬ್ಬಳ್ಳಿಯಲ್ಲಿ ಕರೆದಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಲಹೆ ನೀಡಲು ಸಾರ್ವಜನಿಕರ ನಾತೆಯಿಂದ ಕೇವಲ ನಾಲ್ವರು ಮಾತ್ರ ಪಾಲ್ಗೊಂಡಿದ್ದರು. ಈ ದುಸ್ಥಿತಿಗೆ ಕಾರಣವೂ ಉಂಟು. ಬಜೆಟ್​ನಲ್ಲಿ ಘೊಷಿಸುವ ಯಾವುದೂ ಜಾರಿಗೆ ಬರುವುದಿಲ್ಲ. ಆಡಳಿತ ಯಂತ್ರ ವೊಂದು ನಡೆಸುವ ವರ್ಷಾಂತ್ಯದ ಸರ್ಕಸ್ ಆಗಿದೆ. ಪಾಲಿಕೆ ಬಜೆಟ್​ನ ದುರಂತ ಏನೂ ಗೊತ್ತ್ತಾ? ಮೇಯರ್ ಅವರ ಅವಧಿಯ ಕೊನೆಯ ತಿಂಗಳಲ್ಲಿ ಹಾಗೂ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರು ತಮ್ಮ ಅವಧಿ ಮುಗಿಯುವ ಒಂದೆರಡು ತಿಂಗಳು ಮೊದಲು ಬಜೆಟ್ ಮಂಡಿಸಿರುತ್ತಾರೆ. ಹಾಗಾಗಿ ನಂತರ ಬಂದವರು ಬಜೆಟ್​ನ ಭರವಸೆಗಳು, ಆಶೋತ್ತರಗಳು ತಮಗೆ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಾರೆ. ಅಧಿಕಾರಿಗಳ ಗಮನ ಆದಾಯ ಸಂಗ್ರಹ ಮೇಲೆ ಕೇಂದ್ರೀಕೃತವಾಗಿರುತ್ತದೆ. ಅವರು ಸಹ ಆದಾಯ ಗುರಿ ಮುಟ್ಟಲು ಡಿಸೆಂಬರ್ ಕಳೆದ ಮೇಲೆಯೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುವುದು. ಈ ನಡುವೆ ಜನೋಪಯೋಗಿ ಕಾರ್ಯಕ್ರಮಗಳು ಸತ್ತು ಹೋಗಿರುತ್ತವೆ. ಜನೋಪಯೋಗಿ ಕೆಲಸಗಳ ಮೂಲಕ ಅವಳಿ ನಗರದ ಜನತೆಗೆ ಹತ್ತಿರವಾಗಬೇಕಾದ ಸ್ಥಳೀಯ ಆಡಳಿತವೊಂದು ಬಜೆಟ್ ಅನ್ನು ವರ್ಷಾಂತ್ಯದ ಸರ್ಕಸ್ ಎಂದು ಭಾವಿಸಿದರೆ ಅದಕ್ಕೆ ಅರ್ಥ ಇರುವುದಿಲ್ಲ.