ಓಮ್ನಿ ಪಲ್ಟಿ, ಇಬ್ಬರ ದುರ್ಮರಣ

ಅಕ್ಕಿಆಲೂರ: ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರು ಪಲ್ಟಿಯಾಗಿ ಕಂದಕಕ್ಕೆ ಉರುಳಿ ಇಬ್ಬರು ಸಾವನ್ನಪ್ಪಿ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಪಟ್ಟಣದ ಎಪಿಎಂಸಿ ಎದುರು ಭಾನುವಾರ ಸಂಭವಿಸಿದೆ.

ಶಿಗ್ಗಾಂವಿ ನಿವಾಸಿ ನೀಲಕಂಠಪ್ಪ ಶಿವಪ್ಪ ಎಲಿಗಾರ (55) ಹಾಗೂ ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದ ನೀಲವ್ವ ಶಂಕ್ರಪ್ಪ ಎಲಿಗಾರ (85) ಮೃತಪಟ್ಟವರು. ಓಮ್ನಿಯಲ್ಲಿದ್ದ ಇನ್ನುಳಿದ 6 ಜನರ ಪೈಕಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೂವರೆ ಮತ್ತು ಎರಡು ವರ್ಷದ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿಗ್ಗಾಂವಿಯಿಂದ ಹೊರಟು ಯಳವಟ್ಟಿ ಗ್ರಾಮದಲ್ಲಿನ ಸಂಬಂಧಿಕರನ್ನು ಕರೆದುಕೊಂಡು ಅಕ್ಕಿಆಲೂರ ಮಾರ್ಗವಾಗಿ ಸೋಮಾಪುರ ಗ್ರಾಮಕ್ಕೆ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದಾಗ ಪಟ್ಟಣದ ಎಪಿಎಂಸಿ ಎದುರು ಓಮ್ನಿ ಕಂದಕಕ್ಕೆ ಉರುಳಿದೆ.ಗಾಯಾಳುಗಳನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಪಿಎಸ್​ಐ ವೀರೇಶ ಹಾಗೂ ಸಿಬ್ಬಂದಿ ಸ್ಥಳಕ್ಕಾಮಿಸಿ ಪರಿಶೀಲಿಸಿದ್ದಾರೆ. ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.