ಓದುವ ಹವ್ಯಾಸ ನಿರಂತರವಾಗಿರಲಿ: ಆರ್.ರಂಗಸ್ವಾಮಿ ಸಲಹೆ

ಮೈಸೂರು: ಸಮಯ ಯಾರಿಗೂ ಕಾಯುವುದಿಲ್ಲ ಮತ್ತು ಅದು ಕಳೆದು ಹೋದರೆ ಮತ್ತೆ ಸಿಗುವುದಿಲ್ಲ. ಆದ್ದರಿಂದ ಸಮಯ ವ್ಯರ್ಥ ಮಾಡದೆ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಮೈಸೂರು ನಗರಪಾಲಿಕೆ ಕೌನ್ಸಿಲ್ ಕಾರ್ಯದರ್ಶಿ ಆರ್.ರಂಗಸ್ವಾಮಿ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಕೆರಿಯರ್ ಹಬ್ ವೃತ್ತಿ ಅಧ್ಯಯನ ಕೇಂದ್ರ, ನೇಗಿಲ ಯೋಗಿ ವಿದ್ಯಾವರ್ಧಕ ಸ್ಪರ್ಧಾ ಕೇಂದ್ರದಿಂದ ವಿಜಯನಗರದ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ನಿರಂತರ ವೃತ್ತಿ ಮಾರ್ಗದರ್ಶನ, ಯಶಸ್ವಿ ಸ್ಪರ್ಧಾ ಪಯಣ ಮತ್ತು ಕಲಿಕೆ ಜತೆ ಕೌಶಲ’ ವಿಷಯ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ನಿರಂತರ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸ್ವಾಭಿಮಾನಿಗಳಾಗಿ ಬಾಳಬೇಕು. ಓದು ಅನಿವಾರ್ಯ ಎನ್ನುವುದನ್ನು ಮನಗಂಡು, ಯುವಕರು ಭ್ರಮೆಯಲ್ಲಿ ಸಿಲುಕಬಾರದು. ಆಕರ್ಷಣೆ ತಾತ್ಕಾಲಿಕ. ಅದಕ್ಕೆ ಮಾರು ಹೋಗಬಾರದು. ಶಿಸ್ತಿನಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಏನನ್ನಾದರೂ ಸಾಧಿಸುವ ಗುರಿ ಇಟ್ಟುಕೊಳ್ಳಬೇಕು. ಅದನ್ನು ಸಾಧಿಸಲು ಸರಿಯಾದ ದಾರಿ ಆಯ್ಕೆ ಮಾಡಿಕೊಳ್ಳಬೇಕು. ಗುರಿ ಮತ್ತು ದಾರಿ ಎರಡೂ ಮುಖ್ಯ. ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಅವಶ್ಯಕ. ಮೊಬೈಲ್ ಗೀಳು ಬಿಟ್ಟು ಅನಿವಾರ್ಯತೆ ಇದ್ದಾಗ ಮಾತ್ರ ಉಪಯೋಗಿಸಬೇಕು. ಇಲ್ಲವಾದರೆ ಅದು ನಿಮ್ಮ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಸಿದರು.
ಮೈಸೂರು ವಿಶ್ವವಿದ್ಯಾಲಯದ ಕೆರಿಯರ್ ಹಬ್‌ನ ಸಲಹೆಗಾರರಾದ ಎಂ.ಜೆ.ಜಯಶ್ರೀ ಮಾತನಾಡಿ, ಮಾತೃಭಾಷೆ ಎಷ್ಟು ಪ್ರಮುಖ ಹಾಗೂ ಅವಶ್ಯಕತೆ ಇದೆಯೋ ಅದೇ ರೀತಿ ಇಂಗ್ಲಿಷ್ ಭಾಷೆಯೂ ಅವಶ್ಯಕ. ಇಂಗ್ಲಿಷ್ ಜಾಗತಿಕ ಭಾಷೆ ಆಗಿರುವುದರಿಂದ ಅದನ್ನು ಕಲಿಯುವುದು ತುಂಬ ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಇಂಗ್ಲಿಷ್ ಒಂದು ಪೂರಕ ಭಾಷೆಯಾಗಿರುತ್ತದೆ ಎಂದರು.
ಪ್ರತಿದಿನ ಕನಿಷ್ಠ 5 ಪದಗಳನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಆ ಪದಗಳಿಗೆ ವಾಕ್ಯವನ್ನು ರಚಿಸುವುದರಿಂದ ಇಂಗ್ಲಿಷ್ ಕಲಿಯಲು ಸಾಧ್ಯವಾಗುತ್ತದೆ. ಪತ್ರಿಕೆ, ಪುಸ್ತಕ ಓದುವುದು, ಗೆಳೆಯರೊಂದಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವ ಮೂಲಕ ಭಾಷೆ ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಲಹೆಗಾರ ಡಿ.ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊದಲಿಗೆ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸಬೇಕು. ನಿಮ್ಮ ಆಸಕ್ತಿ ಹಾಗೂ ಮುಂದೆ ಆ ವೃತ್ತಿಗೆ ಬೇಡಿಕೆ ಇರುತ್ತದೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಬೇಕು. ಈಗಾಗಲೇ ತೊಡಗಿರುವವರಲ್ಲಿ ಚರ್ಚಿಸಬೇಕು ಎಂದು ಹೇಳಿದರು.
ಈಗ ಎಲ್ಲೆಡೆ ಸ್ಪರ್ಧೆ ಇರುವುದರಿಂದ ವಿದ್ಯಾರ್ಥಿ ದಿಸೆಯಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮೈಸೂರು ವಿಶ್ವವಿದ್ಯಾಲಯ ನಿರಂತರ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಮೂಲಕ ಸಹಕಾರ ನೀಡುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಪ್ರೊ.ಮಹೇಶ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ನಿರಾಸೆ ಜಾಸ್ತಿಯಾಗಿದೆ. ಯುವಕರು ಅಭ್ಯಾಸ ನಿಲ್ಲಿಸಿದರೆ ವೃದ್ಧರಾಗುತ್ತಾರೆ. ವೃದ್ಧರು ಅಭ್ಯಾಸ ಮಾಡುತ್ತಿದ್ದರೆ ಯುವಕರಾಗುತ್ತಾರೆ. ಆದ್ದರಿಂದ ಅಭ್ಯಾಸ ನಿಲ್ಲಿಸಬಾರದು. ವಿದ್ಯಾರ್ಥಿಗಳು ಏಕಾಗ್ರತೆ, ಅರ್ಥಮಾಡಿಕೊಳ್ಳುವ ನೈಪುಣ್ಯತೆ ಮತ್ತು ಅಭ್ಯಾಸ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

Share This Article

ದೀರ್ಘ ಕಾಲದ ಬೆನ್ನು ನೋವು ನಿಯಂತ್ರಣಕ್ಕೆ ಮಾರ್ಜಾಲಾಸನ | Back Pain

ಪ್ರ: ಮಾರ್ಜಾಲಾಸನದ ಬಗ್ಗೆ ಮಾಹಿತಿ, ಅಭ್ಯಾಸದ ಕ್ರಮ ತಿಳಿಸಿ (Back Pain). ಉ: ಈ ಆಸನಕ್ಕೆ…

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ…

Weight Loss: ಊಟ ಬಿಟ್ಟರೆ ತೂಕ ಕಡಿಮೆಯಾಗುತ್ತಾ? ಈ ವಿಷಯಗಳನ್ನು ನಂಬಬೇಡಿ!

ಬೆಂಗಳೂರು: ಹೆಚ್ಚಿನವರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ತೂಕ ಇಳಿಸಿಕೊಳ್ಳಲು (Weight Loss) ಹಲವು…