ಓದುಗ ಬಳಗ ಸೃಷ್ಟಿಸಿದ ರಂಗನಾಥ್

ಹುಣಸೂರು: ಸಾರ್ವಜನಿಕ ಗ್ರಂಥಾಲಯ ಸ್ಥಾಪನೆಯ ಪರಿಕಲ್ಪನೆ ನೀಡುವ ಮೂಲಕ ಓದುವ ಹವ್ಯಾಸ ಮತ್ತು ಓದುಗರನ್ನು ಸೃಷ್ಟಿಸಿದ ಕೀರ್ತಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥ್ ಅವರಿಗೆ ಸಲ್ಲುತ್ತದೆ ಎಂದು ತಲಕಾಡು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಿರಿಯ ಗ್ರಂಥಪಾಲಕ ಡಾ.ಎನ್. ವಸಂತರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಬುಧವಾರ ಆಯೋಜಿಸಿದ್ದ ಗ್ರಂಥಾಲಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.

ಗ್ರಂಥಾಲಯದ ಪರಿಕಲ್ಪನೆ ಇಂದು ಮಹತ್ತರ ಬದಲಾವಣೆ ಕಂಡಿದೆ. ಅಂತರ್ಜಾಲ, ಗೂಗಲ್ ಎಲ್ಲವೂ ಬಳಕೆಯಾಗುವ ಮೂಲಕ ಮಾಹಿತಿ ಬೆರಳ ತುದಿಯಲ್ಲಿಯೇ ಸಿಗುತ್ತದೆ. ಆದರೆ, ಎಸ್.ಆರ್.ರಂಗನಾಥ್ 20ನೇ ಶತಮಾನದ ಅವಧಿಯಲ್ಲಿ ಪುಸ್ತಕಗಳು, ಗ್ರಂಥಾಲಯ ಕುರಿತಾಗಿ ಸಂಶೋಧನೆ ನಡೆಸಿ ಗ್ರಂಥಾಲಯ ಜನಸಾಮಾನ್ಯರ ಬಳಿಗೆ ಹೋಗಬೇಕೆನ್ನುವ ಸದುದ್ದೇಶದಿಂದ ಸಾರ್ವಜನಿಕ ಗ್ರಂಥಾಲಯದ ಯೋಜನೆ ರೂಪಿಸಿದರು. ಅದೃಷ್ಟವಶಾತ್ ದೇಶದ ಎಲ್ಲ ರಾಜ್ಯಗಳೂ ಇದನ್ನು ಜಾರಿಗೊಳಿಸಿದವು. ರಂಗನಾಥ್‌ರ ಗ್ರಂಥಾಲಯದ ಕುರಿತಾದ 5 ಸೂತ್ರಗಳು ಇಂದಿಗೂ ವಿಶ್ವಾದ್ಯಂತ ಮಾಹಿತಿ ತಂತ್ರಜ್ಞಾನ ಬಳಕೆದಾರರ ಮೂಲ ಅಡಿಪಾಯದ ಸೂತ್ರಗಳಾಗಿವೆ ಎನ್ನುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಧರ್ಮಾಪುರ ನಾರಾಯಣ , ಪ್ರಾಂಶುಪಾಲ ಡಾ.ವೆಂಕಟೇಶಯ್ಯ ಮಾತನಾಡಿದರು. ಕಾಲೇಜಿನ ಗ್ರಂಥಪಾಲಕ ಡಾ.ಜಗದೀಶ್, ಪ್ರಾಧ್ಯಾಪಕರಾದ ಡಾ.ಎ. ಆನಂದ್, ವಿಜಯಲಕ್ಷ್ಮೀ ಇದ್ದರು.

Leave a Reply

Your email address will not be published. Required fields are marked *