ಒಳ ಹೊಡೆತವೋ ಒಪ್ಪಂದವೋ?

ಕೋಲಾರ: ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದ 8ಕ್ಕೂ ಹೆಚ್ಚು ಆಕಾಂಕ್ಷಿಗಳ ಪೈಕಿ ಬಿಬಿಎಂಪಿ ಸದಸ್ಯ ಎಸ್.ಮುನಿಸ್ವಾಮಿಗೆ ಬಿ.ಫಾರಂ ಸಿಕ್ಕಿರುವುದು ಬಿಜೆಪಿಯೊಳಗೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ನಮ್ಮ ಅಭ್ಯರ್ಥಿ ಒಳೇಟು ತಿನ್ನುತ್ತಾರೋ ಅಥವಾ ಒಳ ಒಪ್ಪಂದಕ್ಕೆ ಕರಗುತ್ತಾರೋ ಎಂಬ ಲೆಕ್ಕಾಚಾರಗಳನ್ನು ಬಿಜೆಪಿ ನಿಷ್ಠಾವಂತ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳೇ ಹಾಕತೊಡಗಿದ್ದಾರೆ.

ಟಿಕೆಟ್​ಗಾಗಿ ಪ್ರಯತ್ನಿಸಿ ವಿಫಲರಾಗಿರುವ ಪ.ಜಾತಿ(ಬಲಗೈ)ಗೆ ಸೇರಿದ ಆಕಾಂಕ್ಷಿಗಳಲ್ಲಿ ಕೆಲವರು ಮುನಿಸ್ವಾಮಿಗೆ ಟಿಕೆಟ್ ಘೊಷಣೆ ನಂತರ ತಟಸ್ಥರಾಗಲು ನಿರ್ಧರಿಸಿದ್ದಾರೆಂಬ ಸುದ್ದಿ ಕೇಳಿಯೇ ಕಾಂಗ್ರೆಸ್ಸಿನ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿಗರಲ್ಲಿ ಗೆಲುವಿನ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ.

ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಛಲವಾದಿ ನಾರಾಯಣಸ್ವಾಮಿ, ಇನ್ನು ಮುಂದೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ, ಪಕ್ಷದ ವಿರುದ್ಧ ಕೆಲಸ ಮಾಡಲ್ಲ ಎಂದು ಹೇಳಿಕೊಂಡಿದ್ದರೂ ಅವರ ಮುಂದಿನ ನಡೆಯ ಬಗ್ಗೆ ಕುತೂಹಲವಿದೆ. ಬಿಜೆಪಿ ಹಿರಿಯ ಮುಖಂಡ ಡಿ.ಎಸ್.ವೀರಯ್ಯ ಟಿಕೆಟ್ ಸಿಗದೆ ಬೇಸತ್ತಿದ್ದಾರೆ, ಇವರ ಬೆಂಬಲಿಗರು ತಟಸ್ಥರಾಗಿರಲು ನಿರ್ಧರಿಸಿದ್ದಾರೆ. ಟಿಕೆಟ್ ನಿರೀಕ್ಷೆಯಲ್ಲಿ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದ ಜಿಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಮೋದಿ ಆಶಯ ಈಡೇರಬೇಕಾಗಿದ್ದರೆ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಾಗಿತ್ತು. ಕಾಲ ಇನ್ನೂ ಮಿಂಚಿಲ್ಲ, ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದು ಕೋರಿದ್ದಾರೆ.

ಇವರಲ್ಲದೆ ಇನ್ನೂ ಕೆಲವರು ಅಸಮಾಧಾನಗೊಂಡಿದ್ದು ಯೂ ಟರ್ನ್ ಹೊಡೆಯುವ ಸಾಧ್ಯತೆಗಳಿರುವುದರಿಂದ ಇದರ ಲಾಭ ಮುನಿಯಪ್ಪಗೆ ಆಗಬಹುದೆಂಬ ಆತಂಕ ಕಾರ್ಯಕರ್ತರದ್ದು.

ಕಳೆದ ಐದಾರು ಚುನಾವಣೆಗಳಿಂದಲೂ ತನ್ನ ವಿರುದ್ಧ ಬುಸುಗುಟ್ಟುತ್ತಿರುವ ವಿರೋಧಿಗಳನ್ನು ತಂತ್ರಗಾರಿಕೆ ಮೂಲಕ ಕಟ್ಟಿಹಾಕಿ ಗುರಿ ಸಾಧಿಸುತ್ತ ಬಂದಿರುವ ಮುನಿಯಪ್ಪ ಈ ಬಾರಿ ಸ್ವಪಕ್ಷೀಯರಿಂದ ಗೆಲುವಿಗೆ ಅಡ್ಡಗಾಲು ಆಗಬಹುದೆಂಬ ಭಯದಿಂದ ಬಿಜೆಪಿ ಇನ್ನಿತರ ಪಕ್ಷಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರಬಹುದು. ಇದು ನಿಜವೇ ಆದಲ್ಲಿ ಬಿಜೆಪಿಗೆ ಮತ್ತೊಮ್ಮೆ ಮುಖಭಂಗ ಆಗಲಿದೆ ಎಂದು ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರ ಅಳಲು: ಕೆ.ಎಚ್.ಮುನಿಯಪ್ಪ ಅಂದರಿಕಿ ಮಂಚಿವಾಡು… ಒಂದು ರೀತಿಯಲ್ಲಿ ಆಲ್ ಪಾರ್ಟಿ ಲೀಡರ್. ತನ್ನ ಗೆಲುವಿಗೆ ಏನು ಬೇಕಾದರೂ ಮಾಡಬಲ್ಲ ರಾಜಕಾರಣಿ. ಬಿಜೆಪಿ ಮನಸ್ಸು ಮಾಡಿದ್ದರೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದಾಗಿತ್ತು. ಬಿಜೆಪಿಗೆ ಓಟ್ ಹಾಕಲು ಜನ ಇದ್ದಾರೆ, ಕೆಲಸ ಮಾಡೋಕೆ ನಾವಿದ್ದೇವೆ. ಆದರೆ ಮುಖಂಡರಿಗೇ ಬೇಡವಾಗಿರುವಾಗ ನಾವೇನು ಮಾಡಲು ಸಾಧ್ಯ? ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಬಿಜೆಪಿ ಮುಖಂಡರು ಅಳಲು ತೋಡಿಕೊಂಡರು. ಜೆಡಿಎಸ್ ಈಗ ಮುನಿಯಪ್ಪ ಪರ ಇದೆ. ಈ ಪಕ್ಷದ ಬೆರಳೆಣಿಕೆಯಷ್ಟು ಜನ ವಿರೋಧವಾಗಿ ಕೆಲಸ ಮಾಡಬಹುದು. ಇದಕ್ಕಾಗಿಯೇ ಮುನಿಯಪ್ಪ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡು ತನ್ನ ವಿರುದ್ಧ ವೀಕ್ ಕ್ಯಾಂಡಿಡೇಟ್ ಹಾಕಿಸಿಕೊಂಡಿರಬಹುದೆಂದು ಗೊಣಗುಟ್ಟುತ್ತಿದ್ದಾರೆ.

ವರಿಷ್ಠರಿಗೆ ಸಂಕಟ: ಕೋಲಾರ ಕ್ಷೇತ್ರಕ್ಕೆ ಎಸ್.ಮುನಿಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಘೊಷಣೆ ಮಾಡಿದ ನಂತರ ಇವರ ವಿರುದ್ಧ ಮಹಿಳೆ ಮೇಲಿನ ದೌರ್ಜನ್ಯ ಆರೋಪ ಕೇಳಿ ಬಂದಿರುವುದು ವರಿಷ್ಠರಿಗೆ ಸಂಕಟ ಉಂಟು ಮಾಡಿದೆ. ವಿರೋಧಿಗಳು ಈ ವಿಚಾರವನ್ನು ಅಸ್ತ್ರ ಮಾಡಿಕೊಂಡಲ್ಲಿ ಮುಜುಗರ ಅನುಭವಿಸಬೇಕಾಗಬಹುದೆಂಬ ಕಾರಣಕ್ಕೆ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ. ಕ್ಷೇತ್ರದ ಉಸ್ತುವಾರಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆಸಿಕೊಂಡು ಮಾಹಿತಿ ಸಂಗ್ರಹಿಸಿದ್ದಾರೆ. ಜತೆಗೆ ಅಭ್ಯರ್ಥಿ ಮುನಿಸ್ವಾಮಿ ಸಹ ಪಕ್ಷದ ಅಧ್ಯಕ್ಷರ ಮನೆಗೆ ತೆರಳಿ ತನ್ನ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ.

ಬಂಡಾಯ ಅಭ್ಯರ್ಥಿ?: ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸಲು ಪಣತೊಟ್ಟಿರುವ ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿ ಪ್ರಬಲ ಪ್ರತಿಸ್ಪರ್ಧಿ ಅಲ್ಲವೆಂಬ ನಿರ್ಧಾರಕ್ಕೆ ಬಂದಿದ್ದು, ಬಿಜೆಪಿ ಟಿಕೆಟ್ ಸಿಗದೆ ಅತೃಪ್ತರಾಗಿರುವವರ ಪೈಕಿ ಅಥವಾ ಭೋವಿ ಸಮಾಜಕ್ಕೆ ಸೇರಿದ ಸೂಕ್ತ ವ್ಯಕ್ತಿಯನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿದ್ದಾರೆ. ಒಂದು ವೇಳೆ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ರ ಜಾತಿ ಪ್ರಮಾಣಪತ್ರದ ವಿವಾದ ಸೋಮವಾರ ಸುಪ್ರೀಂ ಕೋರ್ಟ್​ನಲ್ಲಿ ಇತ್ಯರ್ಥವಾದಲ್ಲಿ ಮಂಗಳವಾರ ನಾಮಪತ್ರ ಸಲ್ಲಿಬಹುದೆನ್ನಲಾಗಿದೆ. ಇದು ನಿಜವೇ ಆದಲ್ಲಿ ಕೋಲಾರ ಮತ್ತೊಂದು ಹೈವೋಲ್ಟೇಜ್ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ.