ಚಿತ್ರದುರ್ಗ: ಎಸ್ಸಿಯೊಳಗೆ ಮೀಸಲಾತಿಯಿಂದ ವಂಚಿತರಾಗಿರುವ ಸಮುದಾಯಕ್ಕೆ ಒಳಮೀಸಲು ಕೊಡಿಸುವ ಕುರಿತು ಕಾಂಗ್ರೆಸ್ಸಿಗರು, ಅದರಲ್ಲೂ ಸಿಎಂ ಸಿದ್ದರಾಮಯ್ಯ ಚಕಾರ ಎತ್ತುತ್ತಿಲ್ಲ ಎಂದು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹನುಮಂತಪ್ಪ ಬಳ್ಳಾರಿ ಕಿಡಿಕಾರಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೇ 80ರಷ್ಟು ಮಾದಿಗ ಸಮುದಾಯ ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದೆ. ಈ ಸಮುದಾಯದವರ ಕುರಿತು ಸಿದ್ದರಾಮಯ್ಯ ಅವರಿಗೆ ಯಾವ ಕಾಳಜಿಯೂ ಇಲ್ಲ ಎಂದರು.
ರಾಜ್ಯದ 5 ಮೀಸಲು ಕ್ಷೇತ್ರಗಳ ಪೈಕಿ ಒಂದಕ್ಕೂ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಿಲ್ಲ. ಆದರೆ, ಬಿಜೆಪಿ ಎರಡು ಕಡೆ ಟಿಕೆಟ್ ನೀಡಿದೆ. ಎನ್‌ಡಿಎ ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲುವು ಸಾಧಿಸಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಹೀಗಾಗಿ ಸಮುದಾಯದವರು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸಿಕೊಳ್ಳಲು ಮುಂದಾಗೋಣ ಎಂದು ಮನವಿ ಮಾಡಿದರು.
ಮಾಯಕೊಂಡ ಮಾಜಿ ಶಾಸಕ ಪ್ರೊ.ಎನ್.ಲಿಂಗಣ್ಣ ಮಾತನಾಡಿ, ದೇಶದ ಮತ್ತು ಚಿತ್ರದುರ್ಗದ ಸುಂದರ ಭವಿಷ್ಯ ಮೋದಿ ಕೈಯಲ್ಲಿದೆ. ಹೀಗಾಗಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸಲು ಶ್ರಮಿಸೋಣ. ಕ್ಷೇತ್ರದಲ್ಲಿ ಎಸ್‌ಸಿ, ಎಸ್ಟಿ ಸಮುದಾಯದವರ ಮತಗಳು ಹೆಚ್ಚಿದ್ದು, ಯೋಚಿಸಿ ಮತ ಚಲಾಯಿಸಿ ಎಂದು ಕೋರಿದರು.
ಮಾಜಿ ಶಾಸಕ ರಾಮಯ್ಯ, ಜಿಪಂ ಮಾಜಿ ಸದಸ್ಯ ಎಂ.ಜಗದೀಶ್, ನಿವೃತ್ತ ಕೆಎಎಸ್ ಅಧಿಕಾರಿ ಬಿ.ಎಸ್.ಪುರುಷೋತ್ತಮ್ ಇತರರಿದ್ದರು.