ಹಳಿಯಾಳ: ಒಳಚರಂಡಿ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿರುವ ಸಂದೇಹ ಗಳನ್ನು ಬಗೆಹರಿಸುವ ಬದಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರವಾರ ಉಪವಿಭಾಗದವರು ತರಾತುರಿಯಲ್ಲಿ ಆರಂಭಿಸಿದ ಒಳಚರಂಡಿ ಯೋಜನೆ ಕಾಮಗಾರಿಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಕಾಮಗಾರಿಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿರುವ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ತನ್ನ ಬೆಂಬಲಿ ಗರೊಂದಿಗೆ ಬಂದ ವಿ.ಪ. ಸದಸ್ಯ ಎಸ್.ಎಲ್. ಘೊಟ್ನೇಕರ ಹಾಗೂ ಪುರಸಭೆ ಸದಸ್ಯ ಶಂಕರ ಬೆಳಗಾಂವಕರ ಸ್ಥಳೀಯರನ್ನು ಮನವೊಲಿಸಲು ಪ್ರಯತ್ನಿಸಿದರು. ಘೊಟ್ನೇಕರ ಸಲಹೆ ಗಳನ್ನು ತಿರಸ್ಕರಿಸಿದ ಆಶ್ರಯ ನಿವಾಸಿಗಳು ಯೋಜನೆಯ ಬಗ್ಗೆ ಎದ್ದಿರುವ ಸಂದೇಹ ಪರಿಹರಿಸಲು ತಾಲೂಕು ಆಡಳಿತ ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ತದನಂತರ ಸ್ಥಳಕ್ಕೆ ಬಂದ ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ಮುಖ್ಯಾಧಿಕಾರಿ ಕೇಶವ ಚೌಗಲೆ, ಇಂಜಿನಿಯರ್ ಹರೀಶ ಸರ್ಕಾರದ ಯೋಜನೆಗಳಿಗೆ ಅಡ್ಡಿಪಡಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ತಾಲೂಕು ಆಡಳಿತದ ಎಚ್ಚರಿಕೆಗೆ ಕೆರಳಿದ ಆಶ್ರಯ ನಿವಾಸಿಗಳು ಹಾಗೂ ಮಹಿಳೆಯರು ಒಳಚರಂಡಿಗಾಗಿ ತೆಗೆದಿರುವ ಚರಂಡಿಯಲ್ಲಿ ಇಳಿದು ಪ್ರತಿಭಟಿಸಿದರು. ಆಶ್ರಯ ನಿವಾಸಿಗಳ ಪರ ಮಾತನಾಡಿದ ಸ್ಥಳೀಯ ಮುಖಂಡ ಹನುಮಂತ ಹರಿಜನ, ಜ. 6ರಂದು ನಡೆದ ಒಳಚರಂಡಿ ಅಹವಾಲು ಸಾರ್ವಜನಿಕ ಸಭೆಯಲ್ಲಿ ಮಾಡಿದ ನಿರ್ಧಾರಗಳು ಹಾಗೂ ಸಾರ್ವಜನಿಕರಿಗೆ ಒಳಚರಂಡಿ ಇಲಾಖೆ ಮತ್ತು ಪುರಸಭೆ ಅವರು ನೀಡಿದ ಭರವಸೆಗಳನ್ನು ಕಾರ್ಯರೂಪಕ್ಕೆ ತನ್ನಿ ಎಂದು ವಾದಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಚೌಗುಲೆ, ಸಾರ್ವಜನಿಕರ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನ ತಾಲೂಕು ಆಡಳಿತ ನಡೆಸುತ್ತಿದೆ. ಆರ್ಥಿಕವಾಗಿ ದುರ್ಬಲರಾದವರ ಸಮೀಕ್ಷೆಯನ್ನು, ಪ್ರತಿ ಮನೆಗೆ ತಗಲುವ ಖರ್ಚನ್ನು ಪಟ್ಟಿ ಮಾಡುವ ಕಾರ್ಯ ಸಧ್ಯದಲ್ಲಿಯೇ ಆರಂಭಿಸುತ್ತೇವೆ ಎಂದರು.
ವಾತಾವರಣದ ಸೂಕ್ಷ್ಮತೆ ಅರಿತ ತಾಲೂಕು ಆಡಳಿತ ಪೊಲೀಸರನ್ನು ಕರೆಸಿ ಅವರ ಬಂದೋಬಸ್ತ್ನಲ್ಲಿ ಕಾಮಗಾರಿ ಮುಂದುವರೆಸಿದರು. ಒಳಚರಂಡಿ ಇಲಾಖೆ ಇಂಜಿನಿಯರ್ ತಾನಾಜಿ ಕಾಳಗಿಣಕರ, ಗುತ್ತಿಗೆದಾರರು ಕಾಮಗಾರಿ ಆರಂಭಿಸಿದರು.