ಒಳಚರಂಡಿ ಕಾಮಗಾರಿಗೆ ವಿರೋಧ

ಕುಮಟಾ: ಬಗ್ಗೋಣದಲ್ಲಿ ಸ್ಥಳೀಯರು ಗುರುವಾರ ಬೆಳಗ್ಗೆ ಒಳಚರಂಡಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕಾಮಗಾರಿ ತಡೆದು ತಿಭಟಿಸಿದ್ದಾರೆ.

ಬಗ್ಗೋಣ ಮಿಲ್ ಬಳಿ ಒಳಚರಂಡಿ ಯೋಜನೆಯಡಿ ಕಾಲುವೆ ತೋಡಲು ಆರಂಭಿಸಿದಾಗ ಸ್ಥಳೀಯರು ಜಮಾಯಿಸಿ ಕೆಲಸ ನಿಲ್ಲಿಸುವಂತೆ ತಿಳಿಸಿದ್ದಾರೆ.

ನಮಗೆ ಒಳಚರಂಡಿ ಕಾಮಗಾರಿ ಬೇಡ, ನಮ್ಮ ಊರಿನ ಗದ್ದೆಯಲ್ಲಿ ಹಳ್ಳದಂಚಿಗೆ ಒಳಚರಂಡಿ ಯೋಜನೆಯ ಶುದ್ಧೀಕರಣ ಘಟಕ ನಿರ್ವಣಕ್ಕೆ ನಮ್ಮ ವಿರೋಧವಿದೆ. ಸುತ್ತಲೂ ಜನವಸತಿ ಪ್ರದೇಶವಿದ್ದು ಪರಿಸರ ಹಾಳು ಮಾಡುವ ಇಂಥ ಯೋಜನೆಗಳು ನಮಗೆ ಬೇಡ ಎಂದು ವಿರೋಧಿಸಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಬಗ್ಗೋಣ ಗಣೇಶ ಭಟ್ಟ, ಬುಧವಾರವೂ ಇಲ್ಲಿ ಪೊಲೀಸ್ ಬಲದೊಂದಿಗೆ ಒಳಚರಂಡಿ ಕಾಲುವೆ ಹಾಗೂ ಚೇಂಬರ್ ನಿರ್ಮಾಣ ಮಾಡಲು ಬಂದಿದ್ದರು. ಕೆಲವರು ವಿರೋಧಿಸಿದರೂ ಗುತ್ತಿಗೆದಾರರು ಕಾಮಗಾರಿ ನಡೆಸಿದ್ದಾರೆ. ಆದರೆ, ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿ ತೀವ್ರ ಪ್ರತಿಭಟನೆ ಮಾಡಿದ್ದೇವೆ. ಕಾಮಗಾರಿ ಮಾಡದಂತೆ ತಡೆಯುವಲ್ಲಿ ಸಫಲರಾಗಿದ್ದೇವೆ. ಕಾಮಗಾರಿ ನಡೆಸುತ್ತಿದ್ದವರನ್ನು ಮರಳಿ ಕಳಿಸಿದ್ದೇವೆ. ಮೊದಲಿನಿಂದಲೂ ನಾವು ಇಲ್ಲಿ ಒಳಚರಂಡಿ ಯೋಜನೆ ಬೇಡವೆಂದು ವಿರೋಧಿಸುತ್ತಲೇ ಬಂದಿದ್ದೇವೆ. ನಮಗೆ ಒಳಚರಂಡಿ ಯೋಜನೆಯ ಅಗತ್ಯವಿಲ್ಲ. ಶುದ್ಧೀಕರಣ ಘಟಕದಿಂದ ಸಮಸ್ಯೆ ಸೃಷ್ಟಿಯಾಗಲಿದೆ. ಮತ್ತೆ ಇಲ್ಲಿ ಕಾಮಗಾರಿ ನಡೆಸಲು ಬಂದರೆ ಹೋರಾಟ ತೀವ್ರವಾಗಲಿದೆ ಎಂದು ಎಚ್ಚರಿಸಿದ್ದಾರೆ.

ಬಗ್ಗೋಣ ರಸ್ತೆ ಕೆಲವೆಡೆ ಇಕ್ಕಟ್ಟಾಗಿದ್ದು ತಿರುವಿನಿಂದ ಕೂಡಿದೆ. ಇಂಥ ಜಾಗದಲ್ಲಿ ಗುತ್ತಿಗೆದಾರರು ಒಳಚರಂಡಿ ಕಾಮಗಾರಿಗೆ ಕಾಲುವೆ ತೋಡಿ ಚೇಂಬರ್ ನಿರ್ವಿುಸಿ ಸಮರ್ಪಕ ಮಣ್ಣು ತುಂಬದೇ ಹೋಗಿದ್ದಾರೆ. ಕಾಲುವೆ ಮುಚ್ಚಿದ ಜಾಗದಲ್ಲಿ ಬಸ್, ಲಾರಿ ಇನ್ನಿತರ ವಾಹನಗಳ ಚಕ್ರ ಸಿಲುಕಿಕೊಳ್ಳುತ್ತಿದೆ. ಇದನ್ನೆಲ್ಲಾ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.